ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರ್ಡೇಶ್ವರ ಕಡಲತೀರದಲ್ಲಿ ‘ತಿಮಿಂಗಿಲದ ವಾಂತಿ’ ಪತ್ತೆ!

ಅತ್ಯಂತ ಅಪರೂಪದ, ಮೇಣದಂಥ ವಸ್ತು: ಅರಣ್ಯ ಇಲಾಖೆಗೆ ಹಸ್ತಾಂತರ
Last Updated 24 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಕಾರವಾರ: ಅತ್ಯಂತ ವಿರಳವಾಗಿ ಸಿಗುವ ‘ತಿಮಿಂಗಿಲದ ವಾಂತಿ’ಯ (ಅಂಬೆರ್ಗ್ರಿಸ್) ಸುಮಾರು ಒಂದು ಕೆ.ಜಿ ತೂಕದ ತುಣುಕು ಭಟ್ಕಳ ತಾಲ್ಲೂಕಿನ ಮುರ್ಡೇಶ್ವರ ಕಡಲತೀರದಲ್ಲಿ ಪತ್ತೆಯಾಗಿದೆ. ಅದನ್ನು ಮೀನುಗಾರರು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಪುನುಗು ಬೆಕ್ಕಿನ ಮಲದ ರೀತಿಯಲ್ಲೇ ತಿಮಿಂಗಿಲದ ವಾಂತಿಯೂ ಸುಗಂಧ ಬೀರುತ್ತದೆ. ಹಾಗಾಗಿ ಇದಕ್ಕೆ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ನಮ್ಮ ದೇಶದಲ್ಲಿ ತಿಮಿಂಗಿಲಗಳನ್ನು ಅರಣ್ಯ ಕಾಯ್ದೆಯಡಿ ಸಂರಕ್ಷಿಸಲಾಗುತ್ತಿದೆ. ಅವುಗಳ ಯಾವುದೇ ಉತ್ಪನ್ನಗಳು, ಭಾಗಗಳನ್ನೂ ಬಳಸುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ಅಂಬೆರ್ಗ್ರಿಸ್ ಮಾರಾಟ, ಬಳಕೆಯೂ ಶಿಕ್ಷಾರ್ಹ ಅಪರಾಧವಾಗಿದೆ.

ಹೇಗೆ ಉತ್ಪತ್ತಿಯಾಗುತ್ತದೆ?:

ತಿಮಿಂಗಿಲಗಳ ಜೀರ್ಣಾಂಗದಲ್ಲಿ ಈ ಉತ್ಪನ್ನ ರಚನೆಯಾಗುವ ಬಗ್ಗೆ ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸ್ಪೆರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳಿಂದ ಮಾತ್ರ ಅಂಬೆರ್ಗ್ರಿಸ್ ಹೊರ ಬರುತ್ತದೆ. ದೇಶದ ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲೇ ಇದ್ದು, ಪಶ್ಚಿಮ ಭಾಗದಿಂದಲೇ ವಲಸೆ ಹೋಗುತ್ತವೆ. ಅವು ಮಣಕಿ (ಸ್ಕ್ವಿಡ್), ಕಪ್ಪೆ ಬೊಂಡಾಸ್ (ಕಟಲ್ ಫಿಶ್) ಮೀನುಗಳನ್ನು ಬೇಟೆಯಾಡಿ ತಿನ್ನುತ್ತವೆ. ಕೆಲವೊಮ್ಮೆ ಈ ಮೀನುಗಳ ಗಟ್ಟಿಯಾದ ಎಲುಬು ತಿಮಿಂಗಿಲದಲ್ಲಿ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಅದು ಜೀರ್ಣಾಂಗದಲ್ಲೇ ತಿಂಗಳು, ವರ್ಷಗಟ್ಟಲೆ ಉಳಿಯುತ್ತದೆ. ಇದರಿಂದ ತಿಮಿಂಗಿಲ ಕಿರಿಕಿರಿ ಅನುಭವಿಸುತ್ತದೆ. ಕೊನೆಗೆ ವಾಂತಿ ಮಾಡಿ ಹೊರಹಾಕುತ್ತದೆ. ಕೆಲವೊಮ್ಮೆ ಮಲದಲ್ಲೂ ಸೇರಿರುತ್ತದೆ’ ಎಂದು ವಿವರಿಸಿದರು.

‘ತಿಮಿಂಗಿಲದ ಹೊಟ್ಟೆಯಲ್ಲಿ ತಿಂಗಳುಗಟ್ಟಲೆ ಸಂಗ್ರಹವಾಗಿದ್ದಾಗ ಹಲವು ರಾಸಾಯನಿಕ ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಅದು ಮೇಣದಂಥ ರಚನೆಯಾಗಿ ಪರಿವರ್ತನೆಯಾಗುತ್ತದೆ. ಈ ಹಂತದಲ್ಲಿ ಆ ವಸ್ತು ಸುಗಂಧ ಪಡೆದುಕೊಂಡಿರುತ್ತದೆ. ಪ್ರಖರ ಬಿಸಿಲಿಗೆ ಹಿಡಿದರೂ ಅದು ಕರಗುವ ಸಾಧ್ಯತೆಯಿರುತ್ತದೆ’ ಎಂದು ತಿಳಿಸಿದರು.

‘ಒಂದುವೇಳೆ, ತಿಮಿಂಗಿಲವು ಮೀನುಗಳನ್ನು ತಿಂದ ಒಂದೆರಡು ವಾರಗಳಲ್ಲೇ ಎಲುಬುಗಳನ್ನು ಹೊರ ಹಾಕಿದರೆ ಅದು ಅಸಹನೀಯ ವಾಸನೆಯಿಂದ ಕೂಡಿರುತ್ತದೆ. ಅಂಬೆರ್ಗ್ರಿಸ್ ಅನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ ಮೀನುಗಾರರ ಕ್ರಮ ಶ್ಲಾಘನೀಯ’ ಎಂದೂ ಹೇಳಿದರು.

‘ಬಳಕೆ ನಿಷೇಧಿಸಲಾಗಿದೆ’:

‘ಅಂಬೆರ್ಗ್ರಿಸ್ ಹಗುರವಾಗಿರುವ ಕಾರಣ ಸಮುದ್ರದಲ್ಲಿ ತೇಲುತ್ತಿರುತ್ತದೆ. ಕಾನೂನಿನ ಪ್ರಕಾರ ಅದನ್ನು ಮಾರಾಟ, ಸಾಗಣೆ ಅಥವಾ ಬಳಕೆ ಮಾಡುವಂತಿಲ್ಲ. ಸಂಶೋಧನೆ ಸಲುವಾಗಿ ಮಾತ್ರ ಉಪಯೋಗಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ನಿರ್ಧರಿಸಲಾಗುವುದು’ ಎಂದು ಮುರ್ಡೇಶ್ವರದ ವಲಯ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT