ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲುವ ಮನೋವೃತ್ತಿ ಏಕೆ ಬಂದಿದೆ?: ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಆತಂಕ

Last Updated 29 ಫೆಬ್ರುವರಿ 2020, 13:45 IST
ಅಕ್ಷರ ಗಾತ್ರ

ಮಂಗಳೂರು: ‘ದೇಶಕ್ಕೆ ಏನಾಗಿದೆ? ಮನುಷ್ಯ ಮನುಷ್ಯನನ್ನು ಕೊಲ್ಲುವ ಮನೋವೃತ್ತಿ ಏಕೆ ಬಂದಿದೆ? ಅಂದು ಗುಜರಾತ್‌ನಲ್ಲಿ ಕಂಡಿದ್ದ ಪರಿಸ್ಥಿತಿಯು ಈಗ ದೆಹಲಿಗೂ ವ್ಯಾಪಿಸಿದೆ’ ಎಂದು ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಕರಾವಳಿ ಲೇಖಕಿಯರ –ವಾಚಕಿಯರ ಸಂಘದ ‘ಸಾರಾ ಅಬೂಬಕ್ಕರ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೆಹಲಿಯಲ್ಲಿ ಮಕ್ಕಳನ್ನು ಗುಂಡಿಕ್ಕಿ, ಗರ್ಭಿಣಿಯನ್ನು ತುಳಿಯುವುದು, ಕೊಲೆ ಮಾಡಿರುವುದನ್ನು ಕೇಳಿದರೆ ಆತಂಕವಾಗುತ್ತದೆ. ಆದರೆ, ಈ ಬಗ್ಗೆ ಹೆಚ್ಚಿನವರು ಏಕೆ ಸುಮ್ಮನಿದ್ದಾರೆ?’ ಎಂದು ಪ್ರಶ್ನಿಸಿದರು.

‘ನಮ್ಮ ಬಾಲ್ಯದಲ್ಲಿ ಹಿಂದೂ–ಮುಸ್ಲಿಂ ಎಂಬ ಭೇದ ಇರಲಿಲ್ಲ. ಈತ ಮುಸ್ಲಿಂ, ಆತ ಹಿಂದೂ ಎಂದು ಯಾರಾದರೂ ತಮ್ಮ ಹಣೆ ಮೇಲೆ ಬರೆದುಕೊಂಡಿದ್ದಾರೆಯೇ? ಯಾಕಾಗಿ ಕ್ರೌರ್ಯ ಎಸಗುತ್ತಿದ್ದಾರೆ’ ಎಂದರು.

‘ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿರುವುದು ಸಂತೋಷ. ಆದರೆ, ಬುರ್ಖಾದ ಚೌಕಟ್ಟಿನಿಂದ ಹೊರಬರುತ್ತಿಲ್ಲ. ಬುರ್ಖಾ ಇದ್ದರೆ ಇರಲಿ. ಆದರೆ, ಕನಿಷ್ಠ ಇಂತಹ ಸಾಹಿತ್ಯ, ಸಾಮರಸ್ಯ, ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಲ್ಲ. ಹಿಂದೂ– ಮುಸ್ಲಿಂ ಜೊತೆ ಸೇರಬೇಕಲ್ಲವೇ?’ ಎಂದರು.

ಸುಳ್ಯ ಎನ್‌ಎಂಸಿ ಕಾಲೇಜು ಸಹ ಪ್ರಾಧ್ಯಾಪಕ ಡಾ.ಪೂವಪ್ಪ ಕಣಿಯೂರು ಮಾತನಾಡಿ, ‘ಬರೆಯಲು ವಸ್ತುಗಳಿವೆ. ಆದರೆ, ಹೇಗೆ ಬರೆಯಬೇಕು ಎಂಬುದೇ ಇಂದಿನ ಆತಂಕ’ ಎಂದು ವಿಶ್ಲೇಷಿಸಿದರು.

‘ಸಾಂಸ್ಕೃತಿಕ ನೆಲಗಟ್ಟಿನ ಮೂಲಕ ಹೆಣ್ಣನ್ನು ನಿರ್ಬಂಧಿಸಲಾಗುತ್ತಿದೆ. ಇದನ್ನು ಕೆಲವರು ಸಂಪ್ರದಾಯ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ, ಪ್ರಗತಿಪರರು ಪ್ರಶ್ನಿಸುತ್ತಾರೆ. ಹೀಗೆ ಮಹಿಳೆಯರ ಪರ ದನಿ ಎತ್ತುವವರು ಇಂದು ಬೇಕಾಗಿದ್ದಾರೆ. ಸರ್ಕಾರದ ಸೇನೆಯಲ್ಲಿಯೇ ಮಹಿಳೆಯರಿಗೆ ಹುದ್ದೆ ನೀಡಬೇಕಾದರೆ, ಕೋರ್ಟ್‌ ಮಧ್ಯ ಪ್ರವೇಶಿಸಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ಇದೊಂದು ತ್ರಿಶಂಕು ಸ್ಥಿತಿ’ ಎಂದು ವಿವರಿಸಿದರು.

‘ಒಪ್ಪಿದ ತತ್ವಕ್ಕೆ ಬದ್ಧವಾಗಿ ಬದುಕುತ್ತಿರುವವರು ಸಾರಾ. ಅವರು ಅಂದು ಎದುರಿಸಿದ ಆತಂಕ ಇಂದು ದೂರವಾಗಿರಬಹುದು. ಆದರೆ, ಈಗ ಬೇರೆಯೇ ಆತಂಕ ಶುರುವಾಗಿದೆ’ ಎಂದರು.

ಕ.ಲೇ.ವಾ.ಸಂಘಕ್ಕೂ ಗೋವಿಂದದಾಸ ಕಾಲೇಜಿಗೂ ಇರುವ ಅವಿನಾಭಾವ ಸಂಬಂಧಗಳ ಕುರಿತು ಕಾಲೇಜಿನ ಉಪ ಪ್ರಾಂಶುಪಾಲ ಕೃಷ್ಣಮೂರ್ತಿ ಮೆಲುಕು ಹಾಕಿದರು.

ಕ.ಲೇ.ವಾ.ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಭಟ್, ಸುಖಾಲಾಕ್ಷಿ ವೈ ಸುವರ್ಣ, ಅರುಣಾ ನಾಗರಾಜ್, ಶರ್ಮಿಳ ಶೆಟ್ಟಿ, ಸುಧಾ ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT