ಭಾನುವಾರ, ನವೆಂಬರ್ 29, 2020
25 °C
ಭಟ್ಕಳ, ಅಂಕೋಲಾ, ಕಾರವಾರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ

ಕಾರವಾರ| ಪದವೀಧರರ ಸಮಸ್ಯೆ ಪರಿಹರಿಸಲು ಕಟಿಬದ್ಧ: ಬಿಜೆಪಿ ಅಭ್ಯರ್ಥಿ ಸಂಕನೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ನನ್ನ ಅಧಿಕಾರಾವಧಿಯಲ್ಲಿ ಪದವೀಧರರ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಆದರೆ, ನಾನು ಎಲ್ಲದಕ್ಕೂ ಪರಿಹಾರ ಕೊಡಿಸಿದ್ದೇನೆ ಎಂದು ಹೇಳುವುದಿಲ್ಲ. ಈ ಬಾರಿ ಮತ್ತೊಮ್ಮೆ ಅವಕಾಶ ನೀಡಿದಲ್ಲಿ ಪದವೀಧರರ ಮತ್ತಷ್ಟು ಸಮಸ್ಯೆಗಳನ್ನು ಬಗೆಹರಿಸಲು ಕಟಿಬದ್ಧನಾಗಿದ್ದೇನೆ’ ಎಂದು ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಎಸ್.ವಿ.ಸಂಕನೂರ ಹೇಳಿದರು.

ಭಟ್ಕಳ ಹಾಗೂ ಕಾರವಾರದ ವಿವಿಧೆಡೆ ಬುಧವಾರ ಪ್ರಚಾರ ನಡೆಸಿದ ಬಳಿಕ ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್.ಪಿ.ಎಸ್) ಹಲವು ವರ್ಷಗಳಿಂದ ವಿರೋಧಿಸುತ್ತ ಬಂದಿದ್ದಾರೆ. ಈ ಬಗ್ಗೆ ನಾನು ವಿಧಾನ ಪರಿಷತ್‍ನಲ್ಲಿ ಗಮನ ಸೆಳೆದ ಕಾರಣ, ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿ ಮಾಡುವ ಸಂಬಂಧ ಸಮಿತಿ ಯೊಂದನ್ನು ರಚಿಸಿದ್ದರು. ಅದರ ವರದಿಯನ್ನು ಮಂಡಿಸುವಂತೆ ಒತ್ತಾಯಿಸಲಾಗುವುದು’ ಎಂದು ಭರವಸೆ ನೀಡಿದರು.

‘ನಾನು ಉಪನ್ಯಾಸಕನಾಗಿದ್ದೆ. ಹಾಗಾಗಿ ಶಿಕ್ಷಕರು, ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವಿದೆ. ಅವರೊಂದಿಗೆ ಸಂಪರ್ಕದಲ್ಲೂ ಇದ್ದೇನೆ. ಆದರೆ, ನಾನು ಶಿಕ್ಷಕರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೇ ರಾಜ್ಯದ 36 ಇಲಾಖೆಗಳ ನೌಕರರ ಸಮಸ್ಯೆಗಳ ಬಗ್ಗೆಯೂ ವಿಧಾನಪರಿಷತ್‍ನಲ್ಲಿ ಮಾತನಾಡಿದ್ದೇನೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ನಾನು ಮಾಡಿದ ಕಾರ್ಯಗಳು, ಬಿ.ಜೆ.ಪಿ ಸರ್ಕಾರದ ಸಾಧನೆಗಳನ್ನು ಪದವೀಧರರು ಪರಿಗಣಿಸಬೇಕು. ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು’ ಎಂದು ಮನವಿ ಮಾಡಿದರು.

ಶಾಸಕಿ ರೂಪಾಲಿ ನಾಯ್ಕ, ಮುಖಂಡರಾದ ಗಂಗಾಧರ ಭಟ್, ಬಿ.ಜೆ.ಪಿ ರಾಜ್ಯ ಮೀನುಗಾರರ ಮೋರ್ಚಾದ ಉಪಾಧ್ಯಕ್ಷ ಗಣಪತಿ ಉಳ್ವೇಕರ್, ಜಿಲ್ಲಾ ಘಟಕದ ವಕ್ತಾರ ನಾಗರಾಜ ನಾಯಕ, ಸಂಚಾಲಕ ರಾಜೇಶ ನಾಯ್ಕ ಸಿದ್ದರ ಇದ್ದರು.

ಅಂಕೋಲಾದಲ್ಲಿ ಮತಯಾಚನೆ: ಅಭ್ಯರ್ಥಿ ಎಸ್. ವಿ. ಸಂಕನೂರ ತಾಲ್ಲೂಕಿನಲ್ಲಿ ಬುಧವಾರ ಬಿರುಸಿನ ಪ್ರಚಾರ ನಡೆಸಿದರು. ತಾಲ್ಲೂಕಿನ ಪ್ರಮುಖ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು.

ಜೈಹಿಂದ್ ಪ್ರೌಢಶಾಲೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಈಗಿನ ಚುನಾವಣೆಯಲ್ಲಿ ಆಯ್ಕೆಯಾದರೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಜ್ಯೋತಿ ಸಂಜೀವಿನಿ ಯೋಜನೆ ಜಾರಿ, ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ ಎನ್ ಪಿ ಎಸ್ ಪಿಂಚಣಿ ಯೋಜನೆ ಬದಲಾಗಿ ಓ ಪಿಎಸ್ ಯೋಜನೆಯನ್ನು ಪುನಃ ಜಾರಿಗೆ ತರಲು ಪ್ರಯತ್ನಿಸುವುದು ಸೇರಿದಂತೆ ಹಲವು ಯೋಜನೆಗಳಿದ್ದು ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡರಾದ ಗಣಪತಿ ಉಳ್ವೇಕರ ನಾಗರಾಜ ನಾಯಕ ಭಾಸ್ಕರ ನಾರ್ವೇಕರ, ವೀರೇಶ, ಪದ್ಮನಾಭ ಪ್ರಭು ಬಿಂದೇಶ್ ನಾಯಕ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು