ಯಕ್ಷಗಾನದಲ್ಲಿ ನೈತಿಕತೆಯ ಆಶಯ ಬಿಂಬಿತ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

7
ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅಭಿಮತ

ಯಕ್ಷಗಾನದಲ್ಲಿ ನೈತಿಕತೆಯ ಆಶಯ ಬಿಂಬಿತ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Published:
Updated:
Deccan Herald

ಶಿರಸಿ: ಉಪನಿಷತ್‌ ಪ್ರತಿಪಾದಿಸುವ ನೈತಿಕತೆಯ ಆಶಯಗಳೇ ಯಕ್ಷಗಾನದ ಆಖ್ಯಾನದಲ್ಲಿ ಪ್ರತಿಬಿಂಬಿತಗೊಳ್ಳುತ್ತವೆ ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.

ಯಕ್ಷ ಶಾಲ್ಮಲಾ ಸಂಘಟನೆಯು ತಾಲ್ಲೂಕಿನ ಸ್ವರ್ಣವಲ್ಲಿ ಮಠದಲ್ಲಿ ಶನಿವಾರದಿಂದ ಮೂರು ದಿನ ಆಯೋಜಿಸಿರುವ ಯಕ್ಷೋತ್ಸವಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಸಾಮಾಜಿಕ ಮೌಲ್ಯ, ನೈತಿಕತೆ ಉಳಿಯಬೇಕೆಂಬ ಆಶಯದೊಂದಿಗೆ ಹುಟ್ಟಿರುವ ಯಕ್ಷಗಾನದ ವ್ಯಾಪ್ತಿ ವಿಸ್ತಾರವಾಗಿದೆ. ಈ ಕಲೆಯ ನೈಜ ಸತ್ವ ಉಳಿಸಿಕೊಂಡು, ಸಮಾಜದಲ್ಲಿ ನೈತಿಕತೆ ಬೆಳೆಸುವ ಕಾರ್ಯ ಆಗಬೇಕು ಎಂದರು.

ದೇಶಗಳ ಇತಿಹಾಸ ಆಧರಿಸಿ, ಅಲ್ಲಿನ ನೈತಿಕತೆ ನಿಂತಿರುತ್ತದೆ. ಭಾರತದ ನೈತಿಕತೆ ಭೋಗದ ಬದಲಾಗಿ ತ್ಯಾಗದ ಮೇಲೆ ನಿಂತಿದೆ. ಇಂತಹ ನೈತಿಕತೆಯನ್ನು ಜನರ ಎದುರು ಆಗಾಗ ತಂದರೆ ಅದು ಜನಮಾನಸದಲ್ಲಿ ನೆಲೆಯಾಗುತ್ತದೆ. ಈ ಕೆಲಸವನ್ನು ಯಕ್ಷಗಾನ ಮಾಡುತ್ತದೆ ಎಂದು ಹೇಳಿದರು.

ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಪರಿಪೂರ್ಣ ಕಲೆಯಾದ ಯಕ್ಷಗಾನ ಉಳಿಯಲು ಅಕಾಡೆಮಿಯ ಸಹಕಾರ ಅಗತ್ಯ ಎಂದರು. ಮದ್ದಳೆ ವಾದಕ ಮಂಜುನಾಥ ಭಂಡಾರಿ ಕರ್ಕಿ ಅವರಿಗೆ 'ಯಕ್ಷ ಸ್ಮರಣ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಲ್ಲಾಪುರ ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ದಂಟ್ಕಲ್, ಯಕ್ಷ ಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ, ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ಇದ್ದರು. ನಾಗರಾಜ ಜೋಶಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ಯಕ್ಷಸಿರಿ ಕಲಾವಿದರಿಂದ ‘ಭೀಷ್ಮ ವಿಜಯ’ ಯಕ್ಷಗಾನ ಆಖ್ಯಾನ ಪ್ರದರ್ಶನಗೊಂಡಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !