ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ 8ರಿಂದ ಯಕ್ಷೋತ್ಸವ

7
ಮಕ್ಕಳ ತಾಳಮದ್ದಳೆ ಸ್ಪರ್ಧೆ, ಯಕ್ಷಗಾನ ಪ್ರದರ್ಶನ

ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ 8ರಿಂದ ಯಕ್ಷೋತ್ಸವ

Published:
Updated:

ಶಿರಸಿ: ತಾಲ್ಲೂಕಿನ ಸ್ವರ್ಣವಲ್ಲಿ ಮಠದ ಯಕ್ಷ ಶಾಲ್ಮಲಾ ಸಂಘಟನೆ ನೇತೃತ್ವದಲ್ಲಿ ಯಕ್ಷೋತ್ಸವ ಕಾರ್ಯಕ್ರಮ ಸೆ.8, 9 ಹಾಗೂ 10ರಂದು ಸ್ವರ್ಣವಲ್ಲಿಯ ಸುಧರ್ಮಾ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಮಂಗಳವಾರ ಇಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ, ಯಕ್ಷ ಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ ಅವರು,‘ಸತತ 15 ವರ್ಷಗಳಿಂದ ಯಕ್ಷ ಶಾಲ್ಮಲಾ ಯಕ್ಷಗಾನ ಕಾರ್ಯಕ್ರಮ ಆಯೋಜಿಸುತ್ತಿದೆ. ಈ ಬಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ತಾಳಮದ್ದಲೆ ಸ್ಪರ್ಧೆ ಯಕ್ಷಗಾನ ಪ್ರದರ್ಶನ ಮತ್ತು ಸಮ್ಮಾನ ಹಮ್ಮಿಕೊಳ್ಳಲಾಗಿದೆ’ ಎಂದರು.

ಸೆ.8ರ ಬೆಳಿಗ್ಗೆ 10.30ಕ್ಕೆ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ ಎಂ.ಎ.ಹೆಗಡೆ ದಂಟ್ಕಲ್, ಶಾಸಕ ಶಿವರಾಮ ಹೆಬ್ಬಾರ ಭಾಗವಹಿಸುವರು. ಮದ್ದಳೆ ವಾದಕ ಮಂಜುನಾಥ ಭಂಡಾರಿ ಅವರನ್ನು ಸನ್ಮಾನಿಸಲಾಗುವುದು. ಪ್ರತಿದಿನ ಬೆಳಿಗ್ಗೆ 10ರಿಂದ ತಾಳಮದ್ದಳೆ ಸ್ಪರ್ಧೆ ನಡೆಯುತ್ತದೆ ಎಂದು ಹೇಳಿದರು.

‌8ರ ಸಂಜೆ 5ರಿಂದ ಬೆಂಗಳೂರಿನ ಯಕ್ಷಸಿರಿ ಕಲಾವಿದರಿಂದ ‘ಭೀಷ್ಮ ವಿಜಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ರಚಿಸಿದ ಪ್ರಸಂಗದ ಹಿಮ್ಮೇಳದಲ್ಲಿ ಗಜಾನನ ಭಟ್ಟ ತುಳಗೇರಿ ಹಾಗೂ ಶ್ರೀಪಾದ ಭಟ್ಟ ಮೂಡಗಾರ, ಪ್ರಮೋದ ಕಬ್ಬಿನಗದ್ದೆ, ಮುಮ್ಮೇಳದಲ್ಲಿ ಮಯೂರಿ ಉಪಾಧ್ಯಾಯ, ಗೀತಾ ಹೆಗಡೆ, ನಿರ್ಮಲಾ ಹೆಗಡೆ, ವೀಣಾ ಪ್ರಸನ್ನ ಸಾಗರ, ಅನ್ನಪೂರ್ಣಾ ಭಟ್ಟ ಹಾಗೂ ಶ್ರೀಧರ ಕಾಸರಗೋಡ ಕಾಣಿಸಿಕೊಳ್ಳುವರು.

ಸೆ. 9ರಂದು ಸಂಜೆ ಉಮ್ಮಚಗಿಯ ಸುದರ್ಶನ ಯಕ್ಷಕಲಾ ಬಳಗದ ಕಲಾವಿದರಿಂದ ‘ವೀರವರ್ಮ ವಿಜಯ’ ಯಕ್ಷಗಾನ ನಡೆಯಲಿದೆ. ಹೋಸ್ತೋಟ ಮಂಜುನಾಥ ಭಾಗವತ ಬರೆದ ಪ್ರಸಂಗದ ಹಿಮ್ಮೇಳದಲ್ಲಿ ಅನಂತ ಹೆಗಡೆ, ನಾರಾಯಣ ಹೆಗಡೆ, ಶ್ರೀಪಾದ ಭಟ್ಟ ಹಾಗೂ ಪ್ರಮೋದ ಹೆಗಡೆ ಮತ್ತು ಮುಮ್ಮೇಳದಲ್ಲಿ ಪ್ರೀತಿ ಹೆಗಡೆ ಜಾಲಿಮನೆ, ಸುಚೇತಾ ಹೆಗಡೆ, ಪ್ರೀತಿ ಹೆಗಡೆ, ನಯನಾ ಹೆಗಡೆ, ಸ್ವಾತಿ ಹೆಗಡೆ, ಗಾಯತ್ರಿ ಹೆಗಡೆ, ಪ್ರೇಮಾ ಹೆಗಡೆ ಹಾಗೂ ವರುಣ ಹೆಗಡೆ ಕಾಣಿಸಿಕೊಳ್ಳಲಿದ್ದಾರೆ. ಸೆ.10 ರ ಸಂಜೆ 6ಕ್ಕೆ ‘ಶ್ರೀರಾಮ ನಿರ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ, ಮದ್ದಲೆ ನರಸಿಂಹ ಭಟ್ಟ, ಚಂಡೆ ವಿಘ್ನೇಶ್ವರ ಕೆಸರಕೊಪ್ಪ ಹಾಗೂ ಮುಮ್ಮೇಳದಲ್ಲಿ ಕೆ.ಜಿ.ಹೆಗಡೆ, ತಿಮ್ಮಪ್ಪ ಹೆಗಡೆ, ಪ್ರಭಾಕರ ಹೆಗಡೆ, ಗಣಪತಿ ಹೆಗಡೆ ಹಾಗೂ ನಿರಂಜನ ಜಾಗನಳ್ಳಿ ಕಾಣಿಸಿಕೊಳ್ಳುವರು ಎಂದು ತಿಳಿಸಿದರು.

ಸಮಾರೋಪ 
ಸೆ.10ರಂದು ನಡೆಯುವ ಸಮಾರೋಪದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಮಂಜುನಾಥ ಭಾಗವತ, ಯಕ್ಷಗಾನ ವಿದ್ವಾಂಸ ಡಾ.ಆನಂದರಾಮ್ ಉಪಾಧ್ಯಾಯ ಪಾಲ್ಗೊಳ್ಳುವರು. ಹಿರಿಯ ಕಲಾವಿದ ರಾಮಚಂದ್ರ ಗಾಂವ್ಕರ್ ಹಾಗೂ ಹಿರಿಯ ಅರ್ಥಧಾರಿ ಡಾ.ಶಾಂತಾರಾಮ ಪ್ರಭು ಅವರನ್ನು ಸನ್ಮಾನಿಸಲಾಗುವುದು ಎಂದರು. ಪ್ರಮುಖರಾದ ನಾಗರಾಜ ಜೋಶಿ, ಜಿ.ಜಿ.ಹೆಗಡೆ ಕನೇನಳ್ಳಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !