ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಜಿಲ್ಲೆಯಲ್ಲಿ ಸೊರಗಿದ APMC, ಸೌಕರ್ಯ ಒದಗಿಸಲು ನಿರ್ಲಕ್ಷ್ಯ–ಆರೋಪ

ನೂತನ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ಹೆಚ್ಚಿದ ಸಮಸ್ಯೆ
Published 26 ಫೆಬ್ರುವರಿ 2024, 6:22 IST
Last Updated 26 ಫೆಬ್ರುವರಿ 2024, 6:22 IST
ಅಕ್ಷರ ಗಾತ್ರ

ಕಾರವಾರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ಸೂಕ್ತ ಆದಾಯವಿಲ್ಲದೆ ಜಿಲ್ಲೆಯ ಎ.ಪಿ.ಎಂ.ಸಿಗಳು ಸೊರಗುತ್ತಿವೆ. ಅಗತ್ಯ ಮೂಲಸೌಕರ್ಯ ಕಲ್ಪಿಸಲು ಪರದಾಡಬೇಕಾದ ಸ್ಥಿತಿ ಉಂಟಾಗಿದೆ.

ಜಿಲ್ಲೆಯಲ್ಲಿ ಎಂಟು ಎ.ಪಿ.ಎಂ.ಸಿ ಗಳಿದ್ದು, ಅವುಗಳ ಪೈಕಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ ಸುಸ್ಥಿತಿಯಲ್ಲಿವೆ. ಹಳಿಯಾಳ, ಮುಂಡಗೋಡ ಎ.ಪಿ.ಎಂ.ಸಿಗಳಲ್ಲಿ ತಕ್ಕಮಟ್ಟಿಗೆ ಸೌಲಭ್ಯಗಳಿದ್ದರೆ, ಕಾರವಾರದಲ್ಲಿ ಮಾತ್ರ ಇದ್ದೂ ಇಲ್ಲದ ಸ್ಥಿತಿ ಇದೆ.

ಕಾರವಾರದ ಎಪಿಎಂಸಿ ಪ್ರಾಂಗಣ ಗಿಡಗಂಟಿ ಬೆಳೆದು ಕಾಡಿನಂತಾಗಿದೆ. ತಲಾ 500 ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಉಗ್ರಾಣವಿದ್ದರೂ ಬಳಕೆಗೆ ಬರುತ್ತಿಲ್ಲ. ರಸ್ತೆಯೂ ಇಲ್ಲದ ಪರಿಣಾಮ ವಾಹನಗಳ ಓಡಾಟಕ್ಕೂ ಸಮಸ್ಯೆ ಉಂಟಾಗಿದೆ.

ಶಿರಸಿಯ ಎಪಿಎಂಸಿ ಪ್ರಾಂಗಣಕ್ಕೆ ಬರುವ ರೈತರು, ಸಾರ್ವಜನಿಕರ ಬಳಕೆಗೆ ಶೌಚಾಲಯದ ಕೊರತೆ ಇದೆ. ಇದರ ಜತೆ ಬಾಡಿಗೆ ನೀಡಿರುವ ಕೆಲ ಗೋದಾಮುಗಳು ಶಿಥಿಲವಾಗಿವೆ.

ಗೋದಾಮು ಬಾಡಿಗೆ ಪಡೆದ ವರ್ತಕರಿಗೆ ಲೀಸ್ ಮತ್ತು ಲೈಸೆನ್ಸ್‌ ಆಧಾರದಲ್ಲಿ ಬಾಡಿಗೆ ದರ ಏರಿಸಲು ಸಮಿತಿ ನಿರ್ಧರಿಸಿದ್ದು, ಮೂಲ ಸೌಕರ್ಯಗಳ ಕೊರತೆಯ ನಡುವೆ ಈ ಕ್ರಮ ಸರಿಯಲ್ಲ ಎಂಬುದು ಹಲವು ವರ್ತಕರ ಅಭಿಪ್ರಾಯ.

‘ಹಂತಹಂತವಾಗಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಬಾಡಿಗೆ ದರ ಏರಿಕೆ ಸಂಬಂಧ ಶಾಸಕರ ಜತೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಎಪಿಎಂಸಿ ಕಾರ್ಯದರ್ಶಿ ಜಯಕುಮಾರ್ ಹೇಳುತ್ತಾರೆ.

ಮುಂಡಗೋಡದಲ್ಲಿ ಹತ್ತು ಎಕರೆ ವಿಶಾಲವಾದ ಪ್ರದೇಶದಲ್ಲಿ ಎಪಿಎಂಸಿಯ ಕಚೇರಿ, ಉಗ್ರಾಣಗಳಿವೆ. ಸುಸಜ್ಜಿತವಾದ ರಸ್ತೆ ಇದೆ. ಕಟ್ಟಡಗಳಿವೆ. ಆದರೆ, ಸಿಬ್ಬಂದಿ ಕೊರತೆಯ ಸಮಸ್ಯೆ ಇದೆ. ದಶಕಗಳ ಹಿಂದೆ ಹತ್ತಿ ಟೆಂಡರ್‌ ಪ್ರಕ್ರಿಯೆ ಇಲ್ಲಿ ನಡೆಯುತ್ತಿತ್ತು. ಆಗ, ರೈತರಿಗೆ ಅನುಕೂಲವಾಗಿತ್ತು. ಕೆಲವು ವರ್ಷಗಳ ಹಿಂದೆ ಅಡಿಕೆ ಟೆಂಡರ್‌ ಪ್ರಕ್ರಿಯೆ ನಡೆಸಲಾಗುವುದು ಎಂದು ಹೇಳಿದ್ದರಾದರೂ, ಈವರೆಗೆ ಅಡಿಕೆ ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿಲ್ಲ.

ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವು ನಿರ್ವಹಣೆ ಕೊರತೆಯಿಂದ ವರ್ಷದಿಂದ ಸ್ಥಗಿತೊಂಡಿದೆ. ರೈತರಿಗೆ ಪೂರಕವಾಗಿರುವಂತಹ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂಬ ಆರೋಪವಿದೆ.

ಯಲ್ಲಾಪುರ ಎಪಿಎಂಸಿಯಲ್ಲಿ ವಾರ್ಷಿಕ ₹3 ಕೋಟಿಗಳಷ್ಟು ಮಾರುಕಟ್ಟೆ ಶುಲ್ಕ ವಸೂಲಾಗುತ್ತಿದ್ದು, ಸರಾಸರಿ ವಾರ್ಷಿಕ ₹243 ಕೋಟಿ ವಹಿವಾಟು ನಡೆಯುತ್ತಿದೆ. 1.20ಲಕ್ಷ ಕ್ವಿಂಟಾಲ್ ಅಡಿಕೆ, ಕಿರವತ್ತಿ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ 5,000 ಕ್ವಿಂಟಾಲ್ ಹತ್ತಿ ವಿಕ್ರಿ ಆಗುತ್ತಿದೆ.

ರೈತರ ಕೃಷಿ ಉತ್ಪನ್ನ ಸಂಗ್ರಹಕ್ಕಾಗಿ ಎಪಿಎಂಸಿ ಗ್ರಾಮೀಣ ಭಾಗದಲ್ಲಿ ಗೋದಾಮು ವ್ಯವಸ್ಥೆ ಕಲ್ಪಿಸಿದೆ. ರೈತ ಸಭಾಭವನ ನಿರ್ಮಿಸಲಾಗಿದ್ದು, ಅದನ್ನು ರೈತರಿಗೆ ಕಡಿಮೆ ಶುಲ್ಕ ಪಡೆದು ಒದಗಿಸಲಾಗುತ್ತಿದೆ. ಅಡಿಕೆ ಇತ್ಯಾದಿ ಬೆಳೆಗಳ ವ್ಯಾಪಾರಕ್ಕೆ ತರುವವರ ವಿಶ್ರಾಂತಿಗೆ ರೈತ ಭವನ ನಿರ್ಮಿಸಲಾಗಿದೆ.

‘ಮಾರುಕಟ್ಟೆಯ ದರವನ್ನು ರೈತರ ಮೊಬೈಲ್‍ಗೆ ಎಸ್.ಎಂ.ಎಸ್ ಮೂಲಕ ಕಳಿಸುವುದನ್ನು ಎಪಿಎಂಸಿ ಈಚೆಗೆ ಬಂದ್ ಮಾಡಿದೆ. ಇದರಿಂದ ರೈತರಿಗೆ ಮಾರುಕಟ್ಟೆ ದರದ ಮಾಹಿತಿ ಸಿಗುತ್ತಿಲ್ಲ. ಪುನಃ ಅದನ್ನು ಆರಂಭಿಸಬೇಕು’ ಎನ್ನುತ್ತಾರೆ ಕೃಷಿಕ ಗೋಪಾಲಕೃಷ್ಣ ಭಟ್ಟ ಉಪಳೇಶ್ವರ.

ಕುಮಟಾ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ರಸ್ತೆ ಸಂಪೂರ್ಣ ಹಾಳಾಗಿದೆ. ಪ್ರತಿ ಬುಧವಾರ ಇಲ್ಲಿ ವಾರದ ಸಂತೆ ನಡೆಯುತ್ತಿದ್ದು, ಸಂತೆಯ ಜನ ದಟ್ಟಣೆ ನಡುವೆ ದ್ವಿಚಕ್ರ ವಾಹನ ಸವಾರರು ಪರದಾಡುವಂಥ ಸ್ಥಿತಿ ಇದೆ.

‘ಪ್ರಾಂಗಣದ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಕುಡಿಯುವ ನೀರಿನ ಸೌಲಭ್ಯಕ್ಕೆ ಹೊಸ ಕೊಳವೆಬಾವಿ ಕೊರೆಯಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಕೃಷಿ ಉತ್ಪನ್ನಗಳನ್ನು ತರುವ ರೈತರಿಗೆ ಪ್ರಾಂಗಣದಲ್ಲಿ ವಿಶ್ರಾಂತಿ ಕೋಣೆ ಮುಂತಾದ ಸೌಲಭ್ಯ ಒದಗಿಸಲಾಗಿದೆ’ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರಾಜೇಶ ಮೈದರಗಿ ಹೇಳಿದರು.

ಅಂಕೋಲಾದಲ್ಲಿ ಕಾರವಾರ ಎಪಿಎಂಸಿ ಅಧೀನದಲ್ಲಿರುವ ಒಂದು ಸಾವಿರ ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯದ ಗೋದಾಮು ಇದೆ. ಅದನ್ನು ಬಾಡಿಗೆಗೆ ನೀಡಲಾಗಿದೆ. ಸದ್ಯ ಅಲ್ಲಿ ಪಡಿತರ ಅಕ್ಕಿ ದಾಸ್ತಾನು ಇಡಲಾಗುತ್ತಿದೆ. ಉಳಿದಂತೆ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ.

ಸಿದ್ದಾಪುರ ಎಪಿಎಂಸಿಯಲ್ಲಿ ಅಗತ್ಯ ಮೂಲಸೌಕರ್ಯಗಳಿವೆ. ಮಳೆಯಿಂದಾಗಿ ಪ್ರಾಂಗಣದ ರಸ್ತೆ ಹಾಳಾಗಿದೆ. ಎಪಿಎಂಸಿಗೆ ಬರುವ ಆದಾಯದಲ್ಲಿ ಈ ಬಾರಿ ಶೇ 15 ರಷ್ಟು ಕೊರತೆ ಉಂಟಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಶಿರಸಿ ಎಪಿಎಂಸಿ ವ್ಯಾಪ್ತಿಯಲ್ಲಿ ಬಾಡಿಗೆ ನೀಡಿರುವ ಗೋದಾಮುಗಳು
ಶಿರಸಿ ಎಪಿಎಂಸಿ ವ್ಯಾಪ್ತಿಯಲ್ಲಿ ಬಾಡಿಗೆ ನೀಡಿರುವ ಗೋದಾಮುಗಳು
ಮುಂಡಗೋಡದ ಎಪಿಎಂಸಿ ಕಚೇರಿ
ಮುಂಡಗೋಡದ ಎಪಿಎಂಸಿ ಕಚೇರಿ
ಹಳಿಯಾಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ನಿರ್ಮಿಸಿದ ವೇ ಬ್ರಿಜ್
ಹಳಿಯಾಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ನಿರ್ಮಿಸಿದ ವೇ ಬ್ರಿಜ್

ನಡೆಯದ ವಹಿವಾಟು: ರೈತರಿಗೆ ಆರ್ಥಿಕ ಹೊರೆ

ಹೊನ್ನಾವರ ಮತ್ತು ಭಟ್ಕಳ ತಾಲ್ಲೂಕುಗಳ ವ್ಯಾಪ್ತಿಯನ್ನು ಒಳಗೊಂಡ ಹೊನ್ನಾವರದ ಕೃಷಿ ಉತ್ಪನ್ನ ಮಾರುಕಟ್ಟೆ ಜನರಿಂದ ದೂರವಾಗಿದೆ. ಇಲ್ಲಿ ಕೃಷಿ ಉತ್ಪನ್ನಗಳ ವಹಿವಾಟು ನಡೆಯುತ್ತಿಲ್ಲ. ದಲಾಲರು ಹಾಗೂ ವ್ಯಾಪಾರಸ್ಥರು ಕುಮಟಾ ಎಪಿಎಂಸಿಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಅಡಿಕೆ ಕಾಳುಮೆಣಸು ಮತ್ತಿತರ ರೈತರ ಉತ್ಪನ್ನಗಳು ಮಾರುಕಟ್ಟೆ ಅರಸಿ ಬೇರೆಡೆ ಹೋಗುವಂತಾಗಿದೆ. ಇವುಗಳ ಖರೀದಿಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಲು ತಾಲ್ಲೂಕಿನ ಎಪಿಎಂಸಿ ನಿಷ್ಕ್ರೀಯತೆಯೇ ಕಾರಣ ಎಂಬುದು ರೈತರ ದೂರು. ‘ಅಡಿಕೆ ಖರೀದಿಗೆ ವ್ಯಾಪಾರಸ್ಥರು ಬರುತ್ತಿಲ್ಲ’ ಎನ್ನುವುದು ಎಪಿಎಂಸಿ ಅಧಿಕಾರಿಗಳ ಸಮಜಾಯಿಷಿ. ‘ಅಡಿಕೆ ಮಾರಾಟಕ್ಕೆ ದೂರದ ಮಾರುಕಟ್ಟೆಗಳಿಗೆ ಹೆಚ್ಚಿನ ಸಾರಿಗೆ ವೆಚ್ಚ ಮಾಡಿ ತೆಗೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಎಪಿಎಂಸಿಗೆ ಆಯ್ಕೆಯಾದವರು ಸಂಸ್ಥೆಯನ್ನು ಸಕ್ರಿಯಗೊಳಿಸಲು ಅಗತ್ಯ ಇಚ್ಛಾಶಕ್ತಿ ತೋರುತ್ತಿಲ್ಲ’ ಎಂದು ದೂರುತ್ತಾರೆ ರೈತ ಪ್ರಭಾಕರ ಭಟ್ಟ ಬಡ್ನಕೊಡ್ಲು.

ಸೌಲಭ್ಯವಿದೆ... ಆದಾಯವಿಲ್ಲ

ಹಳಿಯಾಳ ಎ.ಪಿ.ಎಂ.ಸಿ ಹಳಿಯಾಳ ದಾಂಡೇಲಿ ಜೋಯಿಡಾ ತಾಲ್ಲೂಕುಗಳ ವ್ಯಾಪಾರ ವಹಿವಾಟು ಹೊಂದಿದ್ದು ಮಾರುಕಟ್ಟೆಯಲ್ಲಿ ವಿಸ್ತಾರ ಪ್ರಾಂಗಣ ಹೈಟೆಕ್ ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳಿವೆ. ಆದರೆ ನೂತನ ಕೃಷಿ ಕಾಯ್ದೆ ನೀತಿ ಜಾರಿಯಾಗಿದ್ದರಿಂದ ಮಾರುಕಟ್ಟೆ ಶುಲ್ಕ ಕಡಿಮೆಯಾಗಿದ್ದು ಲಾಭಾಂಶದ ಕೊರತೆಯಾಗಿದೆ. ಭತ್ತ ಗೋವಿನ ಜೋಳ ಹತ್ತಿ ಮಾವಿನ ಕಾಯಿಯ ವ್ಯಾಪಾರ ವಹಿವಾಟು ನಡೆಯುತ್ತಿದೆ. 2021–22ನೇ ಸಾಲಿನ ಮುಂಚೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ವಾರ್ಷಿಕ ಸರಾಸರಿ ₹1.5 ಕೋಟಿ ಆದಾಯವಿತ್ತು. ನೂತನ ಎಪಿಎಂಸಿ ಕಾಯ್ದೆ ಜಾರಿಯಾದ ಬಳಿಕ ಅದು ಸರಾಸರಿ ₹5 ಲಕ್ಷಕ್ಕೆ ಇಳಿಕೆಯಾಗಿದೆ. ಎಪಿಎಂಸಿಗೆ ಮಂಜೂರಾದ 14 ಹುದ್ದೆಗಳ ಪೈಕಿ ಕಾರ್ಯದರ್ಶಿ ಹೊರತಾಗಿ ಕಾಯಂ ಹುದ್ದೆಗಳೆಲ್ಲವೂ ಖಾಲಿ ಇವೆ. ‘ನೂತನ ಕೃಷಿ ಕಾಯ್ದೆ ಜಾರಿಯಾಗಿದ್ದರಿಂದ ಬೆಳೆದಂತಹ ಬೆಳೆಯನ್ನು ರೈತರ ಗದ್ದೆಗೆ ಬಂದು ದಲ್ಲಾಳಿಗಳು ನೇರವಾಗಿ ಖರೀದಿಸಲು ಅವಕಾಶವಾಗಿದ್ದರಿಂದ ಸೂಕ್ತ ಬೆಲೆ ಸಿಗುತ್ತಿಲ್ಲ. ಮುಂಚಿನಂತೆ ಎಪಿಎಂಸಿ ಮೂಲಕ ವಹಿವಾಟಿಗೆ ಅವಕಾಶ ಇದ್ದರೆ ಅನುಕೂಲವಾಗುತ್ತಿತ್ತು’ ಎನ್ನುತ್ತಾರೆ ತೇಗನಳ್ಳಿ ಗ್ರಾಮದ ರೈತ ಏಸುರತ್ನಂ ಮಂಡಲ್.

ಮೊದಲು ಎಂಟು ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿದ್ದ ಕಾರವಾರ ಎಪಿಎಂಸಿಗೆ ಈಗ ವಾರ್ಷಿಕ ಸರಾಸರಿ ₹40 ರಿಂದ ₹50 ಸಾವಿರ ಆದಾಯವಷ್ಟೆ ಬರುತ್ತಿದೆ.
- ಅಹ್ಮದ್ ಅಲಿ ಕಾರವಾರ ಎಪಿಎಂಸಿ ಕಾರ್ಯದರ್ಶಿ
ಶಿರಸಿ ಎಪಿಎಂಸಿಯಲ್ಲಿ ಶೌಚಾಲಯ ಮೂತ್ರಾಲಯದ ವ್ಯವಸ್ಥೆ ಸರಿಯಿಲ್ಲ. ಸಾಮಾನ್ಯ ರೈತರಿಗೆ ವಿಶ್ರಾಂತಿ ಗೃಹ ಬಳಕೆಗೆ ಲಭಿಸುತ್ತಿಲ್ಲ.
-ರಮೇಶ ನಾಯ್ಕ ಶಿರಸಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT