ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ: ಖಾಸಗಿ ಶಾಲೆ ಮೀರಿಸುವ ಬಾಲಿಕೊಪ್ಪ ಸರ್ಕಾರಿ ಶಾಲೆ

ಮೂಲಸೌಕರ್ಯಗಳ ಜತೆಗೆ ಅತ್ಯಾಧುನಿಕ ಸೌಲಭ್ಯ: ವಿದ್ಯಾರ್ಥಿಗಳ ಸಂಖ್ಯೆ ಏರಿಕೆ
ಸುಜಯ್ ಭಟ್
Published 23 ಜೂನ್ 2024, 4:37 IST
Last Updated 23 ಜೂನ್ 2024, 4:37 IST
ಅಕ್ಷರ ಗಾತ್ರ

ಸಿದ್ದಾಪುರ: ಖಾಸಗಿ ಶಾಲೆಗಳ ಭರಾಟೆ ನಡುವೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಆತಂಕದ ನಡುವೆಯೂ ಪಟ್ಟಣದ ಬಾಲಿಕೊಪ್ಪ ಸರ್ಕಾರಿ ಶಾಲೆಗೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.

ವಿಶೇಷ ಎಂದರೆ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿದ್ದ ಪಾಲಕರು ಕೂಡ ಆ ಶಾಲೆಗಳನ್ನು ತೊರೆದು ಬಾಲಿಕೊಪ್ಪ ಸರ್ಕಾರಿ ಶಾಲೆಗೆ ದಾಖಲಿಸುತ್ತಿದ್ದಾರೆ.

ಶಾಲೆಯಲ್ಲಿ ಪ್ರಸ್ತುತ 330 ವಿದ್ಯಾರ್ಥಿಗಳು ಓದುತ್ತಿದ್ದು, ತಾಲ್ಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಸರ್ಕಾರಿ ಶಾಲೆಯಾಗಿದೆ. ಸರ್ಕಾರದ ನಲಿ- ಕಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ತಾಲ್ಲೂಕಿನಲ್ಲಿಯೇ ಅತ್ಯುತ್ತಮ ಶಾಲೆ ಎನಿಸಿದೆ. 1 ರಿಂದ 7 ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ನೀಡಲಾಗುತ್ತಿದೆ.

ಸುಸಜ್ಜಿತ ಅಡುಗೆ ಕೋಣೆಯ ಜತೆಗೆ ಅನ್ನ ಮಾಡಲು ಬಾಯ್ಲರ್ ವ್ಯವಸ್ಥೆ ಮಾಡಲಾಗಿದೆ. ಶಾಲೆಗೆ ಪ್ರತ್ಯೇಕ ಕ್ರೀಡಾಂಗಣದ ವ್ಯವಸ್ಥೆ ಇಲ್ಲದಿರುವುದರಿಂದ ಶಾಲೆಯ ಮಧ್ಯ ಲಭ್ಯವಿರುವ ಸ್ಥಳದಲ್ಲಿಯೇ ವಿದ್ಯಾರ್ಥಿಗಳು ಆಟವಾಡಬೇಕಾದ ಅನಿವಾರ್ಯತೆ ಇದೆ. ತರಗತಿಗಳಿಗೆ ಧೂಳು ಬಾರದಿರಲು ಮೈದಾನಕ್ಕೆ ನೆಲಹಾಸನ್ನು ಅಳವಡಿಸಲಾಗಿದೆ.

‘ಶಾಲೆಯಲ್ಲಿ ಶುದ್ಧ ಕುಡಿಯುವ ನೀರು, ಆಕರ್ಷಕ ಕೊಠಡಿಗಳು, ಅನುಭವಿ ಶಿಕ್ಷಕರು ಸೇರಿದಂತೆ ಅತ್ಯುತ್ತಮ ಸೌಕರ್ಯಗಳು ಇವೆ. ನನ್ನ ಮಗಳನ್ನು ಸಮೀಪದ ಖಾಸಗಿ ಶಾಲೆಗೆ ಸೇರಿಸಿದ್ದೆ. 2 ವರ್ಷಗಳ ನಂತರ ಬಾಲಿಕೊಪ್ಪ ಶಾಲೆಯ ಕುರಿತು ಹಲವರಿಂದ ಕೇಳಲ್ಪಟ್ಟೆ. ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಶಿಕ್ಷಣದಲ್ಲಿ ಮತ್ತು ವ್ಯವಸ್ಥೆಯಲ್ಲಿ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂದು ಖಾತ್ರಿಯಾಯಿತು. ಮಗಳನ್ನು ಇದೇ ಶಾಲೆಗೆ ದಾಖಲಿಸಿದೆ’ ಎನ್ನುತ್ತಾರೆ ಪಾಲಕರಾದ ಮಂಜುನಾಥ ನಾಯ್ಕ.

‘ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪಾಲಕರು ಹಿಂದೇಟು ಹಾಕುತ್ತಾರೆ. ಆದರೆ, ಬಾಲಿಕೊಪ್ಪ ಶಾಲೆಗೆ ಮಕ್ಕಳನ್ನು ಸೇರಿಸುವುದು ಪ್ರತಿಷ್ಠೆಯ ವಿಷಯವಾಗಿದೆ’ ಎನುತ್ತಾರೆ ಪಟ್ಟಣದ ನಿವಾಸಿ ರೇಖಾ ಹೆಗಡೆ.

‘ನುರಿತ ಶಿಕ್ಷಕರು ಇರುವುದರಿಂದ ಶಾಲೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ನಾಲ್ಕು ವರ್ಷಗಳ ಹಿಂದೆ ಶಾಲೆಯ ಎದುರಿನ ಕಾಂಪೌಂಡ್ ಭಾಗಶಃ ಹಾನಿಗೊಂಡಿದ್ದು ಮಕ್ಕಳ ಹಿತ ದೃಷ್ಟಿಯಿಂದ ಕೂಡಲೇ ಸರಿಪಡಿಸುವ ಕಾರ್ಯ ಆಗಬೇಕಿದೆ. ಶಾಲೆಯ ಮಧ್ಯವಿರುವ ಸ್ಥಳಕ್ಕೆ ಮೇಲ್ಛಾವಣಿಯ ವ್ಯವಸ್ಥೆಯಾದರೆ ಮಕ್ಕಳಿಗೆ ಆಡಲು ಸಹಾಯವಾಗುತ್ತದೆ’ ಎಂದು ಮುಖ್ಯ ಶಿಕ್ಷಕಿ ಸುಜಾತಾ ಶಾನಭಾಗ ಹೇಳುತ್ತಾರೆ.

ಸಾರ್ವಜನಿಕ ಸಹಭಾಗಿತ್ವ ಅಗತ್ಯ

ಸರ್ಕಾರಿ ಶಾಲೆಗಳ ಸುಧಾರಣೆಗೆ ಸಾರ್ವಜನಿಕ ಸಹಭಾಗಿತ್ವ ಅಗತ್ಯ. ಉತ್ತಮ ಶಿಕ್ಷಕ ವೃಂದ ಅಧಿಕಾರಿಗಳು ಜನಪ್ರತಿನಿಧಿಗಳ ಸಹಕಾರ ಇದ್ದರೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯ ಎನ್ನುವುದಕ್ಕೆ ಬಾಲಿಕೊಪ್ಪ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ನಿದರ್ಶನ. ಕನ್ನೇಶ ಕೋಲಸಿರ್ಸಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ

ಸಿದ್ದಾಪುರ ಪಟ್ಟಣದ ಬಾಲಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊರಾಂಗಣ ನೋಟ.
ಸಿದ್ದಾಪುರ ಪಟ್ಟಣದ ಬಾಲಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊರಾಂಗಣ ನೋಟ.
ಸಿದ್ದಾಪುರ ಪಟ್ಟಣದ ಬಾಲಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಬಿಸಿಯೂಟ ಮಾಡುತ್ತಿರುವುದು.
ಸಿದ್ದಾಪುರ ಪಟ್ಟಣದ ಬಾಲಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಬಿಸಿಯೂಟ ಮಾಡುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT