ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲ್ಲಾಪುರ: ಸಂಪರ್ಕ ರಸ್ತೆಗಳ ದುಸ್ಥಿತಿ

ಚಂದಗುಳಿ ಗ್ರಾ.ಪಂ: 9 ವರ್ಷ ಕಳೆದರೂ ಸೌಕರ್ಯಗಳಿಲ್ಲದ ಕೊರಗು
ವಿಶ್ವೇಶ್ವರ ಗಾಂವ್ಕರ
Published 15 ಮೇ 2024, 7:25 IST
Last Updated 15 ಮೇ 2024, 7:25 IST
ಅಕ್ಷರ ಗಾತ್ರ

ಯಲ್ಲಾಪುರ: ಒಂಬತ್ತು ವರ್ಷಗಳ ಹಿಂದೆ ರಚನೆಯಾದ ತಾಲ್ಲೂಕಿನ ಚಂದಗುಳಿ (ಉಪಳೇಶ್ವರ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲೆ, ರಸ್ತೆ, ಪಶು ಚಿಕಿತ್ಸಾಲಯ ಸೇರಿ ಸೌಕರ್ಯಗಳ ಬರವಿದೆ.

2015ಕ್ಕೆ ಮೊದಲು ನಂದೊಳ್ಳಿ ಗ್ರಾಮ ಪಂಚಾಯಿತಿ ಭಾಗವಾಗಿದ್ದ ಚಂದಗುಳಿ, ಹುತ್ಕಂಡ, ಮಳಲಗಾಂವ ಗ್ರಾಮಗಳನ್ನು ಬೇರ್ಪಡಿಸಿ ರಚಿಸಲಾದ ಚಂದಗುಳಿ ಗ್ರಾಮ ಪಂಚಾಯಿತಿಗೆ 2018ರಲ್ಲಿ ಪಟ್ಟಣ ಪಂಚಾಯ್ತಿಯ ಭಾಗವಾಗಿದ್ದ ಸಹಸ್ರಳ್ಳಿ ಮತ್ತು ಕೊಂಡೆಮನೆ ಗ್ರಾಮವನ್ನೂ ಸೇರಿಸಲಾಗಿದೆ.

ಐದು ಗ್ರಾಮಗಳನ್ನು ಹೊಂದಿರುವ ಚಂದಗುಳಿ ಗ್ರಾಮ ಪಂಚಾಯಿತಿಗೆ ಉಪಳೇಶ್ವರ ಕೇಂದ್ರ ಸ್ಥಳ. ಯಲ್ಲಾಪುರ–ಶಿರಸಿ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹರಡಿಕೊಂಡಿರುವ ಈ ಪಂಚಾಯಿತಿಯ ಒಂದು ಕಡೆ ನಂದೊಳ್ಳಿ, ಇನ್ನೊಂದು ಕಡೆ ಮದನೂರು ಗ್ರಾಮ ಪಂಚಾಯಿತಿ ಜತೆ ಗಡಿ ಹಂಚಿಕೊಂಡಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರೌಢಶಾಲೆ, ಪಶು ಚಿಕಿತ್ಸಾಲಯ ಇಲ್ಲ. ಚಿಕ್ಕಪುಟ್ಟ ಚಿಕಿತ್ಸೆಗೂ ಜನರು ಯಲ್ಲಾಪುರ ಅಥವಾ ಮಂಚಿಕೇರಿಯ ಆಸ್ಪತ್ರೆಗೆ ಹೋಗುತ್ತಾರೆ. ಉಬೆಗಾಳಿ, ಪಟ್ಟಿಗದ್ದೆ ಭಾಗದ ವಿದ್ಯಾರ್ಥಿಗಳು ಪ್ರೌಢಶಿಕ್ಷಣ, ಕಾಲೇಜು ಶಿಕ್ಷಣಕ್ಕೆ ನಾಲ್ಕಾರು ಕಿ.ಮೀ ನಡೆದು ಬಸ್‌ ಹತ್ತಿ ಯಲ್ಲಾಪುರಕ್ಕೆ ಹೋಗಬೇಕಿದೆ.

‘ಗ್ರಾಮದ ಒಳ ಭಾಗದ ರಸ್ತೆಗಳು ಸರಿಯಾಗಿಲ್ಲ. ಹುತ್ಕಂಡ ಕ್ರಾಸ್‍ನಿಂದ ಕಬ್ಬಿನಗದ್ದೆ, ಕೋಲಿಬೇಣ, ಕುಂಬಾರಮತ್ತಿ, ಜೂಜಿನಬೈಲಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ, ಕಂಚನಳ್ಳಿ, ಕುಂಟೆಜಡ್ಡಿ, ಕುದುರೆಬೇಣ, ಸೊರಟಗಾಳಿ ಸಂಪರ್ಕ ರಸ್ತೆ, ಮಳಲಗಾಂವದಿಂದ ಮಣ್ಕುಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಉಪಳೇಶ್ವರದಿಂದ ದೇಸಾಯಿಮನೆ–ತಾರೀಮಕ್ಕಿ ರಸ್ತೆಗಳು ಮುಖ್ಯವಾಗಿ ಸರ್ವಋತು ರಸ್ತೆ ಆಗಬೇಕಿದೆ. ಕಬ್ಬಿನಗದ್ದೆ ರಸ್ತೆಯನ್ನು ಕಾಂಕ್ರೀಟ್‌ ರಸ್ತೆ ಮಾಡುವಂತೆ ಈ ಹಿಂದೆ ಪ್ರತಿಭಟನೆ ನಡೆದಿತ್ತಾದರೂ ಅದು ಈಡೇರಿಲ್ಲ’ ಎನ್ನುತ್ತಾರೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿ.ಎಸ್.‌ ಭಟ್‌ ಉಪಳೇಶ್ವರ.

‘ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿದ್ದರೂ ಈಚಿನ ವರ್ಷಗಳಲ್ಲಿ ಈ ಭಾಗದ ಯಾವುದೇ ರಸ್ತೆಗೆ ಹೇಳಿಕೊಳ್ಳುವಂತ ದೊಡ್ಡ ಪ್ರಮಾಣದ ಅನುದಾನ ಬಂದಿಲ್ಲ’ ಎನ್ನುತ್ತಾರೆ ಅವರು.

‘ಉಪಳೇಶ್ವರದಿಂದ ಮಳಲಗಾಂ-ಚಂದಗುಳಿ ರಸ್ತೆಯನ್ನು ಕೂಡಿಸುವ ದೇಸಾಯಿಮನೆ (ಬುಗಡಿಪಾಲ್)‌ ಹಳ್ಳಕ್ಕೆ ಕಾಲು ಸೇತುವೆ ನಿರ್ಮಿಸಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಮಳೆ ಆರಂಭವಾಗುವುದರ ಒಳಗೆ ಇಲ್ಲಿ ತಡೆಗೋಡೆ ನಿರ್ಮಿಸದಿದ್ದಲ್ಲಿ ಹಾಕಲಾದ ಮಣ್ಣು ಕೊಚ್ಚಿ ಹೋಗಿ ಸಂಚಾರ ಕಷ್ಟಕರವಾಗಲಿದೆ’ ಎಂದರು.

ಸಹಸ್ರಳ್ಳಿ ಹೊರತು ಪಡಿಸಿ ಉಳಿದ ಕಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ. ಬೇಡಿಕೆಯನ್ನು ಗಮನಿಸಿ ಸಹಸ್ರಳ್ಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ.

-ರಾಜೇಶ ಪಿ.ಶೇಟ್‌ ಚಂದಗುಳಿ ಗ್ರಾಮ ಪಂಚಾಯಿತಿ ಪಿಡಿಒ

ಬಾರದ ಬಸ್: ಕಾಲ್ನಡಿಗೆ ಅನಿವಾರ್ಯ

‘ಚಂದಗುಳಿಯ ಗಂಟೆ ಗಣಪತಿ ದೇವಸ್ಥಾನಕ್ಕೆ ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಜನ ಬರುತ್ತಾರೆ. ಇಲ್ಲಿಗೆ ಬರುತ್ತಿದ್ದ ಬಸ್‌ ಕೋವಿಡ್‌ ಸಮಯದಲ್ಲಿ ಸ್ಥಗಿತಗೊಂಡಿದೆ. ಶಿರಸಿಯಿಂದ ಬರುವವರು ಮಳಲಗಾಂವನಲ್ಲಿ ಇಳಿದು 3 ಕಿ.ಮೀ. ಮಾಗೋಡ ಬಸ್ಸಿಗೆ ಬರುವವರು 2 ಕಿ.ಮೀ. ನಡೆದು ಚಂದಗುಳಿ ದೇವಸ್ಥಾನ ತಲುಪಬೇಕಿದೆ. ಇದರಿಂದ ಪ್ರವಾಸಿಗರು ಪರದಾಡುತ್ತಿದ್ದಾರೆ’ ಎನ್ನುತ್ತಾರೆ ಮಾ.ವಿ. ಭಟ್‌ ಚಂದಗುಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT