ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಶತಕ ದಾಟಿದ ಡೆಂಗಿ ಸೋಂಕಿತರ ಸಂಖ್ಯೆ: ಆಸ್ಪತ್ರೆಗಳಲ್ಲಿ ಜನ ಜಂಗುಳಿ

Published 1 ಜುಲೈ 2024, 5:59 IST
Last Updated 1 ಜುಲೈ 2024, 5:59 IST
ಅಕ್ಷರ ಗಾತ್ರ

ಕಾರವಾರ: ಮಳೆ ಬಿಸಿಲಿನ ವಾತಾವರಣದಿಂದ ಜನರು ಹೈರಾಣಾಗಿದ್ದು, ಜಿಲ್ಲೆಯಲ್ಲಿ ಜ್ವರ, ನೆಗಡಿಯಂತಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ. ಆಸ್ಪತ್ರೆಗಳಲ್ಲಿ ಜನಜಂಗುಳಿ ಕಾಣಸಿಗುತ್ತಿದೆ.

ಸರ್ಕಾರಿ ಆಸ್ಪತ್ರೆ, ಖಾಸಗಿ ನರ್ಸಿಂಗ್ ಹೋಮ್, ಕ್ಲಿನಿಕ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ರೋಗ ಪೀಡಿತರ ಸಂಖ್ಯೆ ಹೆಚ್ಚೆಚ್ಚು ಕಾಣಸಿಗುತ್ತಿದೆ. ವಾತಾವರಣದಲ್ಲಿನ ಏರುಪೇರಿನ ಪರಿಣಾಮ ಜ್ವರ, ನೆಗಡಿ, ವಾಂತಿ–ಭೇದಿ ಮುಂತಾದ ಕಾಯಿಲೆ ಪೀಡಿತರ ಸಂಖ್ಯೆ ಹೆಚ್ಚಳವಾಗಿದೆ. ಇದರೊಟ್ಟಿಗೆ ಡೆಂಗಿ ಸೋಂಕಿತರೂ ಸಹ ಹೆಚ್ಚುತ್ತಿದ್ದು ಕಳವಳ ಉಂಟುಮಾಡಿದೆ. 

ಜಿಲ್ಲೆಯಲ್ಲಿ ಡೆಂಗಿ ಪೀಡಿತರ ಸಂಖ್ಯೆ ಶತಕ ದಾಟಿದೆ. ಸಕಾಲಕ್ಕೆ ಚಿಕಿತ್ಸೆ ಪಡೆದುಕೊಂಡವರು ಗುಣಮುಖವಾಗುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ನಿರಂತರ ಜಾಗೃತಿ ಕಾರ್ಯವೂ ನಡೆದಿದೆ.

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ ನಿತ್ಯ 1,500 ರಿಂದ 1,800 ಮಂದಿ ದಾಖಲಾಗುತ್ತಿದ್ದಾರೆ. ಇವರಲ್ಲಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯೇ ಹೆಚ್ಚಿದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.

ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು, ಕೆಲವೊಮ್ಮ ರೋಗಿಗಳನ್ನು ಪರೀಕ್ಷಿಸಲೂ ಯಾರೂ ಇಲ್ಲದ ಸ್ಥಿತಿ ಎದುರಾಗುತ್ತಿದೆ. ಸಂಜೆ 6 ಗಂಟೆಯ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಯಲ್ಲಾಪುರ ತಾಲ್ಲೂಕಿನಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಜ್ವರ ಪೀಡಿತರ ಸಂಖ್ಯೆ ವಿಪರೀತ ಹೆಚ್ಚಿದೆ. ಒಂದು ತಿಂಗಳ ಅವಧಿಯಲ್ಲಿ ಪಟ್ಟಣದಲ್ಲಿ ಎರಡು ಹಾಗೂ ಗ್ರಾಮಾಂತರ ಭಾಗದಲ್ಲಿ 3 ಸೇರಿದಂತೆ ಒಟ್ಟು 5 ಡೆಂಗಿ ಪ್ರಕರಣಗಳು ದೃಢಪಟ್ಟಿದೆ.

ಮುಂಡಗೋಡ ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಡೆಂಗಿ ಜ್ವರದ ಲಕ್ಷಣಗಳು ಕಂಡುಬಂದಿವೆ. ‘ತಾಲ್ಲೂಕಿನಲ್ಲಿ ಇಬ್ಬರಿಗೆ ಡೆಂಗಿ ಖಚಿತಪಟ್ಟಿದ್ದು, 29 ಜನರಿಗೆ ಶಂಕಿತ ಜ್ವರದ ಲಕ್ಷಣಗಳು ಕಂಡುಬಂದಿದೆ. ಡೆಂಗಿ ಕಾಣಿಸಿಕೊಂಡ ಗ್ರಾಮಗಳಲ್ಲಿ ಈಗಾಗಲೇ ಆರೋಗ್ಯ ಸಿಬ್ಬಂದಿಯಿಂದ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಸತತ ಜ್ವರ ಕಾಣಿಸಿಕೊಂಡರೆ, ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಸಾರ್ವಜನಿಕರು ಆತಂಕ ಪಡದೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ನರೇಂದ್ರ ಪವಾರ ಹೇಳಿದರು.

‘ಹಳಿಯಾಳ ತಾಲ್ಲೂಕಿನಲ್ಲಿ ಡೆಂಗಿ ಜ್ವರದ ಬಗ್ಗೆ ಮೂರು ಪ್ರಕರಣಗಳು ಪತ್ತೆಯಾಗಿದ್ದು, ರೋಗಿಗಳು ಗುಣಮುಖರಾಗಿದ್ದಾರೆ. ಈಚೆಗೆ ಬಿಸಿಲು ಮಳೆಯಿಂದಾಗಿ ನೆಗಡಿ, ಜ್ವರ, ಕೆಮ್ಮು, ವಾಂತಿ ಭೇದಿ ಮತ್ತಿತರ ಕಾಯಿಲೆಗಳ ಚಿಕಿತ್ಸೆಗಾಗಿ ಪ್ರತಿದಿನ ಸುಮಾರು 10 ರಿಂದ 12 ಜನರು ಆಸ್ಪತ್ರೆಗೆ ಬರುತ್ತಿದ್ದು ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯ ಆಡಳಿತಾಧಿಕಾರಿ ಡಾ.ರಮೇಶ್ ಕದಂ ಹೇಳಿದರು.

ಭಟ್ಕಳ ತಾಲ್ಲೂಕಿನಲ್ಲಿ 9 ಮಂದಿ ಡೆಂಗಿ ಜ್ವರದಿಂದ ಬಳಲುತ್ತಿದ್ದು, ಅದರಲ್ಲಿ 7 ಮಂದಿ ಮಣಿಪಾಲ ಆಸ್ಪತ್ರೆಯಲ್ಲಿ ಹಾಗೂ 2 ಮಂದಿ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಎರಡು ಮಂದಿ ಇಲಿ ಜ್ವರದ ಶಂಕೆಯ ಮೇಲೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.

‘ಭಟ್ಕಳದ ತಾಲ್ಲೂಕು ಆಸ್ಪತ್ರೆಯಲ್ಲಿ ಜ್ವರ, ಕಫದ ಹಿನ್ನೆಲೆಯಲ್ಲಿ 15 ಮಂದಿ ಒಳರೋಗಿಗಳಾಗಿ ದಾಖಲಾಗಿದ್ದಾರೆ. ಆಸ್ಪತ್ರೆಯೂ ಸದಾ ಒಳರೋಗಿಗಳಿಂದ ಭರ್ತಿಯಾಗುತ್ತಿದ್ದು, ಒಮ್ಮೊಮ್ಮೆ ರೋಗಿಗಳು ಆಸ್ಪತ್ರೆಗೆ ದಾಖಲಾಗಲು ಬೆಡ್‍ಗಾಗಿ ಕಾಯಬೇಕಾದ ಸ್ಥಿತಿ ಇದೆ’ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ತಿಳಿಸಿದ್ದಾರೆ.

ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ 493ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ 250ರಷ್ಟು ಮಂದಿ ನೆಗಡಿ, ಜ್ವರ ನೀರಿನಿಂದ ಉಂಟಾದ ಕಾಯಿಲೆಗಳಿಗೆ ಚಿಕಿತ್ಸೆ ಪಡೆದಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ನಗರದ ವಿವಿಧೆಡೆ ಮಳೆಗಾಲದಲ್ಲಿ ಉಂಟಾಗುವ ರೋಗಗಳ ಕುರಿತು ಜಾಗೃತಿ ನೀಡಲಾಗಿದೆ ‌ಮತ್ತು ಲಾರ್ವಾ ಸರ್ವೆ ಮಾಡಲಾಗಿದೆ ಎನ್ನುತ್ತಾರೆ ಗಾಂಧಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯೆ ಡಾ.ತ್ರಿವೇಣಿ.

‘ಸಿದ್ದಾಪುರ ತಾಲ್ಲೂಕಿನಲ್ಲಿ ಜೂನ್ ತಿಂಗಳ ಆರಂಭದಲ್ಲಿ ಜ್ವರದ ಪ್ರಕರಣಗಳು ಹೆಚ್ಚಿದ್ದವು. ಮಳೆಗಾಲದ ಆರಂಭದಲ್ಲಿ ಸಾಮಾನ್ಯವಾಗಿ ಜ್ವರದ ಪ್ರಕರಣಗಳು ಕಂಡುಬರುತ್ತವೆ. ಜೂನ್ ಆರಂಭದಿಂದ ಈವರೆಗೆ ಸುಮಾರು 28 ರಿಂದ 30 ಶಂಕಿತ ಡೆಂಗಿ ಪ್ರಕರಣಗಳು ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದು ಎಲ್ಲಾ ರೋಗಿಗಳು ಗುಣಮುಖರಾಗಿದ್ದಾರೆ’ ಎಂದು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪುರಾಣಿಕ ಮಾಹಿತಿ ನೀಡಿದರು.

ಅಂಕೋಲಾ ತಾಲ್ಲೂಕಿನ ಕೆಲವು ಭಾಗದಲ್ಲಿ ಡೆಂಗಿ ಜ್ವರದಂತ ಸಾಂಕ್ರಾಮಿಕ ರೋಗ ಹರಡುತ್ತಿದ್ದು ರೋಗಿಗಳು ತಪಾಸಣೆಗಾಗಿ ಸರ್ಕಾರಿ ಆಸ್ಪತ್ರೆಗೆ ಧಾವಿಸುತ್ತಿರುವುದು ಕಂಡು ಬರುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ತಿಂಗಳಿನಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ 212ಕ್ಕೂ ಹೆಚ್ಚು ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ ಕ್ರಿಮ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಈವರೆಗೆ ಮೂರು ರೋಗಿಗಳಲ್ಲಿ ಡೆಂಗಿ ಪಾಸಿಟಿವ್ ಕಾಣಿಸಿಕೊಂಡಿದೆ.

‘ಖಾಸಗಿ ಆಸ್ಪತ್ರೆಯಲ್ಲಿ 17 ರೋಗಿಗಳಲ್ಲಿ ಡೆಂಗಿ ಪಾಸಿಟಿವ್ ಕಂಡುಬಂದಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಜಗದೀಶ್ ಮಾಹಿತಿ ನೀಡಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ರವಿ ಸೂರಿ, ಎಂ.ಜಿ.ಹೆಗಡೆ, ಪ್ರವೀಣಕುಮಾರ ಸುಲಾಖೆ, ಮೋಹನ ನಾಯ್ಕ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯ ರೋಗಿಗಳು ತಪಾಸಣೆಗೆ ಬಂದಿರುವುದು 
ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯ ರೋಗಿಗಳು ತಪಾಸಣೆಗೆ ಬಂದಿರುವುದು 
ಜನರು ಮುನ್ನೆಚ್ಚರಿಕೆ ಕ್ರಮದ ಅನುಸಾರವಾಗಿ ನಡೆದುಕೊಂಡರೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಾಧ್ಯ.
ಯುವರಾಜ ನಾಚನೇಕರ ಯಡೋಗಾ ಗ್ರಾಮಸ್ಥ (ಹಳಿಯಾಳ)
ನಗರಸಭೆ ಕೆಲವು ಕಡೆ ಚರಂಡಿ ಸ್ವಚ್ಛತಾ ಕೆಲಸ ಕೈಗೊಂಡಿಲ್ಲ ಮತ್ತು ಸೊಳ್ಳೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ರೇಣುಕಾ ನಾಯ್ಕ ದಾಂಡೇಲಿ ನಿವಾಸಿ
ಅಂಕೋಲಾದ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಬಹಳಷ್ಟು ಇದೆ. ಜ್ವರ ಇಲ್ಲವೇ ಇನ್ನಿತರ ಕಾಯಿಲೆಗಳ ಚಿಕಿತ್ಸೆಗೆ ಆಸ್ಪತ್ರೆಗೆ ಬಂದರೆ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಸಿವಿಲ್ ಆಸ್ಪತ್ರೆಗೆ ಕಳುಹಿಸುತ್ತಾರೆ.
ಲೋಕೇಶ ಅಂಕೋಲಾ ಪಟ್ಟಣ ನಿವಾಸಿ
ಖಾಸಗಿ ಆಸ್ಪತ್ರೆಗೆ ತೆರಳುವ ಅನಿವಾರ್ಯತೆ
ಶಿರಸಿ ತಾಲ್ಲೂಕು ಆಸ್ಪತ್ರೆಯಲ್ಲಿ ಫಿಜಿಷನ್ ಹುದ್ದೆ ಭರ್ತಿಯಾಗದ ಕಾರಣ ಡೆಂಗಿ ಸೇರಿದಂತೆ ಇತರ ಜ್ವರದ ಕಾರಣಕ್ಕೆ ಪ್ಲೇಟ್‌ಲೇಟ್ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ಇರುವವರಿಗೆ ಚಿಕಿತ್ಸೆ ಸಿಗದಂತಾಗಿದೆ. ಇದರಿಂದ ರೋಗಿಗಳು ಆಸ್ಪತ್ರೆವರೆಗೆ ಬಂದು ವಾಪಸ್ ತೆರಳುವಂತಾಗಿದೆ. ‘ಸಾಮಾನ್ಯ ಜ್ವರ 60 ಸಾವಿರ ಮೇಲ್ಪಟ್ಟು ಪ್ಲೇಟ್‌ಲೇಟ್ ಸಂಖ್ಯೆ ಹೊಂದಿದ್ದರೆ ಇಲ್ಲೇ ಚಿಕಿತ್ಸೆ ನೀಡುತ್ತೇವೆ. ಆದರೆ ಅದಕ್ಕಿಂತ ಕಡಿಮೆಯಾದರೆ ಇಲ್ಲಿ ವ್ಯವಸ್ಥೆಯಿಲ್ಲ. ಫಿಜಿಷನ್ ಹುದ್ದೆ ಭರ್ತಿ ಮಾಡುವಂತೆ ಸಾಕಷ್ಟು ಬಾರಿ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಪಂಡಿತ ಸರ್ಕಾರಿ ಆಸ್ಪತ್ರೆ ವೈದ್ಯೆ ನೇತ್ರಾವತಿ ಶಿರ್ಸಿಕರ್ ಹೇಳುತ್ತಾರೆ.
ಗ್ರಾ.ಪಂಗಳಲ್ಲೂ ಫಾಗಿಂಗ್ ಯಂತ್ರ ಅಗತ್ಯ
ಹೊನ್ನಾವರ ತಾಲ್ಲೂಕಿನಲ್ಲಿ ಶೀತ ಜ್ವರ ವ್ಯಾಪಕವಾಗಿ ಕಂಡುಬಂದಿದ್ದು ಡೆಂಗಿ ಪೀಡಿತರ ಸಂಖ್ಯೆ ಕೂಡ ಏರುಗತಿಯಲ್ಲಿ ಸಾಗಿದೆ. ಗೇರುಸೊಪ್ಪ ನಗರಬಸ್ತಿಕೇರಿ ಚಿಕ್ಕನಕೋಡ ಮಂಕಿ ಹಾಗೂ ಗುಣವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ಡೆಂಗಿ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತಿದೆ. 18 ಜನರಿಗೆ ಡೆಂಗಿ ತಗಲಿರುವುದು ದೃಢಪಟ್ಟಿದೆ. ‘ಸೊಳ್ಳೆ ಉತ್ಪಾದನೆ ನಿಯಂತ್ರಿಸಲು ಉಪಯೋಗಿಸುವ ಫಾಗಿಂಗ್ ಯಂತ್ರ ಸದ್ಯ ಬಳ್ಕೂರು ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಲಭ್ಯವಿದೆ. ಸಾಲ್ಕೋಡ ಹಾಗೂ ಖರ್ವ ಗ್ರಾಮ ಪಂಚಾಯಿತಿಗಳಲ್ಲಿನ ಯಂತ್ರಗಳು ಸುಸ್ಥಿತಿಯಲ್ಲಿಲ್ಲ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಒಂದೊಂದು ಫಾಗಿಂಗ್ ಯಂತ್ರ ಖರೀದಿಸಲು ಸಲಹೆ ನೀಡಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಉಷಾ ಹಾಸ್ಯಗಾರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT