ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನಕ್ಕೆ ಪ್ರೇರೇಪಿಸುವ ವೈದ್ಯ

60 ಬಾರಿ ಜೀವದ್ರವ್ಯ ನೀಡಿರುವ ಮಕ್ಕಳ ತಜ್ಞ ಡಾ.ದಿನೇಶ್ ಹೆಗಡೆ
Last Updated 24 ಡಿಸೆಂಬರ್ 2022, 13:19 IST
ಅಕ್ಷರ ಗಾತ್ರ

ಶಿರಸಿ: ರಕ್ತದಾನದ ಮೂಲಕ ಜೀವ ಉಳಿಸಿ ಎಂದು ಸಲಹೆ ನೀಡುವ ವೈದ್ಯರ ಪೈಕಿ ಎಷ್ಟು ಮಂದಿ ತಾವು ಖುದ್ದು ರಕ್ತದಾನ ಮಾಡುತ್ತಾರೆ? ಎಂಬುದು ಬಹುತೇಕ ಜನರ ಸಹಜ ಪ್ರಶ್ನೆ. 60 ಬಾರಿ ರಕ್ತದಾನ ಮಾಡುವ ಮೂಲಕ ದಾನಿಗಳಿಗೆ ಪ್ರೇರೇಪಣೆ ನೀಡುವ ಇಲ್ಲಿನ ಮಕ್ಕಳ ತಜ್ಞ ಡಾ.ದಿನೇಶ್ ಹೆಗಡೆ ಇಂತಹ ಪ್ರಶ್ನೆಗೆ ಒಂದು ಉತ್ತರವಾಗುತ್ತಾರೆ.

52ರ ಹರೆಯದ ಡಾ.ದಿನೇಶ್ ಈವರೆಗೆ 60 ಬಾರಿ ರಕ್ತದಾನ ಮಾಡಿದ್ದಾರೆ. ಶಿಬಿರಗಳಲ್ಲಿ ರಕ್ತ ನೀಡುವ ಜತೆಗೆ ಬಹುತೇಕ ಬಾರಿ ತುರ್ತು ಸಂದರ್ಭದಲ್ಲಿ ರಕ್ತ ನೀಡಿ ರೋಗಿಗಳಿಗೆ ನೆರವಾಗಿದ್ದಾರೆ. ವರ್ಷಕ್ಕೆ ನಾಲ್ಕು ಬಾರಿ ರಕ್ತ ನೀಡುವುದು ಅವರಿಗೆ ರೂಢಿಗತವಾಗಿದೆ.

ಶಿರಸಿಯಲ್ಲಿ ರಕ್ತದಾನಿಗಳ ಹಲವು ಗುಂಪುಗಳಿವೆ. ಅಂತಹ ಗುಂಪುಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಜತೆಗೆ ರಕ್ತ ನೀಡಲು ಯುವಕರನ್ನು ಪ್ರೇರೇಪಿಸುವ ಕೆಲಸಕ್ಕೂ ವೈದ್ಯರ ತಂಡದೊಂದಿಗೆ ಕೆಲಸ ಮಾಡುತ್ತಿದ್ದಾರೆ.

‘ಬೆಂಗಳೂರಿನ ನ್ಯಾಶನಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುವಾಗ ಮೊದಲ ಬಾರಿಗೆ ರಕ್ತದಾನ ಮಾಡಿದ್ದೆ. ಆಗಿನ್ನು ನನಗೆ 17 ವರ್ಷ ವಯಸ್ಸಾಗಿತ್ತು. ನಂತರ ಕೆ.ಎಂ.ಸಿ.ಯಲ್ಲಿ ಎಂ.ಬಿ.ಬಿ.ಎಸ್. ಓದುವಾಗ ಸ್ನೇಹಿತರೆಲ್ಲ ಸೇರಿ ಲೈಫ್ ಲೈನ್ ಬ್ಲಡ್ ಡೋನರ್ಸ್ ಗುಂಪು ರಚಿಸಿಕೊಂಡಿದ್ದೆವು. ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ರಕ್ತ ಕೊಡುತ್ತಿದ್ದೆವು’ ಎಂದು ರಕ್ತದಾನದ ಹಿನ್ನೆಲೆಯನ್ನು ಡಾ.ದಿನೇಶ್ ವಿವರಿಸಿದರು.

‘ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ವೇಳೆ ರೋಗಿಗಳ ಸಂಬಂಧಿಕರು ರಕ್ತಕ್ಕಾಗಿ ನಮ್ಮನ್ನು ಹುಡುಕಿಕೊಂಡು ಹಾಸ್ಟೆಲ್‍ಗೆ ಬರುತ್ತಿದ್ದರು. ರಕ್ತದ ಅಗತ್ಯತೆಯ ಅರಿವು ಆಗಲೇ ಅರ್ಥವಾಗಿತ್ತು. ಇಂಟರ್ನ್‍ಶಿಪ್ ವೇಳೆ ಚಿಕಿತ್ಸೆ ನೀಡಬೇಕಿದ್ದ ರೋಗಿಗಳಿಗೆ ರಕ್ತ ಅಗತ್ಯವಿದ್ದರೆ ನಾನೇ ಖುದ್ದು ನೀಡುತ್ತಿದ್ದೆ’ ಎಂದರು.

‘ರಕ್ತದಾನಕ್ಕೆ ಜನರು ಹಿಂದೇಟು ಹಾಕುವದು ನೋಡಿ ಬೇಸರವಾಗುತ್ತಿತ್ತು. ಶಿರಸಿಯಲ್ಲಿ ರಕ್ತದ ಬೇಡಿಕೆ ವ್ಯಾಪಕವಾಗಿದ್ದರೂ ಲಭ್ಯತೆ ಇರಲಿಲ್ಲ. ನೆರೆಯ ಜಿಲ್ಲೆಗೆ ತೆರಳಬೇಕಾಗಿತ್ತು. ಇಂತಹ ಸಮಸ್ಯೆ ಎದುರಾಗದಿರಲಿ ಎಂಬ ಕಾರಣಕ್ಕೆ ರಕ್ತನಿಧಿ ಕೇಂದ್ರ ಸ್ಥಾಪನೆಗೆ ಸಮಾನ ಮನಸ್ಕರ ವೈದ್ಯರೊಂದಿಗೆ ಸೇರಿ ಪ್ರಯತ್ನಿಸಿ ಕೇಂದ್ರ ಸ್ಥಾಪಿಸಿಕೊಂಡಿದ್ದೇವೆ’ ಎಂದರು.

-------------

ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ವ್ಯಕ್ತಿಯ ದೇಹದ ತೂಕ ಸಮತೋಲನ, ಬೊಜ್ಜು ನಿಯಂತ್ರಣ ಸಾಧ್ಯವಿದೆ ಎಂಬ ಅನುಭವವನ್ನು ಪಡೆದುಕೊಂಡಿದ್ದೇನೆ.

ಡಾ.ದಿನೇಶ್ ಹೆಗಡೆ

ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT