ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ವಾರದಿಂದ ನೀರು ಪೂರೈಕೆ ಸ್ಥಗಿತ: ನಳಗಳೆದರು ಖಾಲಿ ಕೊಡಗಳ ಸರತಿ!

Published 10 ಮೇ 2024, 5:52 IST
Last Updated 10 ಮೇ 2024, 5:52 IST
ಅಕ್ಷರ ಗಾತ್ರ

ಶಿರಸಿ: ‘ಕಳೆದೊಂದು ವಾರದಿಂದ ನಗರಸಭೆ ನೀರು ಪೂರೈಕೆ ಸ್ಥಗಿತವಾಗಿದೆ. ಟ್ಯಾಂಕರ್ ನೀರು ಸಮರ್ಪಕ ವಿತರಣೆಯಿಲ್ಲ. ಕುಡಿಯುವ ನೀರಿಗೆ ಊರು ಅಲೆಯುವ ಸಂದರ್ಭ ಎದುರಾಗಿದೆ. ಇದೇ ರೀತಿಯಾದರೆ ಊರು ಬಿಡಬೇಕಾಗುತ್ತದೆ’ ಎಂಬುದು ನಗರ ವ್ಯಾಪ್ತಿಯ ಗಣೇಶನಗರದ ನಿವಾಸಿಗಳ ಆತಂಕದ ಮಾತಾಗಿದೆ. 

‘ಗಣೇಶನಗರ ಸೇರಿದಂತೆ ವಿವಿಧ ವಾರ್ಡ್‍ಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ತಿಂಗಳ ಹಿಂದೆಯೇ ನಗರಕ್ಕೆ ನೀರಿನ ಮೂಲವಾದ ಕೆಂಗ್ರೆ ಹಾಗೂ ಮಾರಿಗದ್ದೆ ಜಾಕ್‌ವೆಲ್‌ಗಳು ನೀರಿನ ಕೊರತೆ ಅನುಭವಿಸುತ್ತಿದ್ದವು. ಪ್ರಸ್ತುತ ಜಾಕ್‌ವೆಲ್ ಬಳಿ ನೀರಿನ ತುಟಾಗ್ರತೆ ಮಿತಿಮೀರಿದೆ. ಹೀಗಾಗಿ ನಗರಕ್ಕೆ ನೀರು ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ. ಇದರಿಂದ ನೀರು ವಿತರಣೆಯಲ್ಲಿ ವ್ಯತ್ಯಯವಾಗಿದೆ. ಟ್ಯಾಂಕರ್ ನೀರು ನೀಡುವ ಜವಾಬ್ದಾರಿಯಿರುವ ನಗರಾಡಳಿತ ಮೌನಕ್ಕೆ ಜಾರಿದೆ’ ಎಂದು ಸ್ಥಳಿಕರು ಆಕ್ರೋಶ ಹೊರಹಾಕಿದರು.

‘ನಗರಸಭೆ ನೀರು ಬರುತ್ತದೆ ಎಂದು ಬಿಂದಿಗೆಯನ್ನು ನಿತ್ಯ ಬೆಳಿಗ್ಗೆ ನಳದ ಬಳಿ ಸಾಲಾಗಿ ಇಟ್ಟು ಬರುವುದೇ ಬಂತು, ಆದರೆ ಹನಿ ನೀರು ಬರುತ್ತಿಲ್ಲ. ವಾರದಿಂದ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ನಗರಸಭೆಯಿಂದ ಟ್ಯಾಂಕರ್ ನೀರು ಪೂರೈಸುತ್ತಾರಾದರೂ ಮತದಾನದ ದಿನ ನೀರು ನೀಡಲಾಗಿತ್ತು. ಒಂದು ಟ್ಯಾಂಕರ್ ನೀರು ನೂರಾರು ಜನರಿಗೆ ಸಾಲುತ್ತಿಲ್ಲ. ಮನೆಮಂದಿಗೆಲ್ಲ ಕುಡಿಯಲು ಸಾಲುತ್ತಿಲ್ಲ. ನಿತ್ಯವೂ ಕುಡಿಯುವ ನೀರಿಗೆ ಏನು ಮಾಡುವುದು ಎಂಬ ಯೋಚನೆ ಕಾಡುತ್ತದೆ’ ಎಂಬುದು ಗಣೇಶನಗರದ ನಿವಾಸಿ ಸಾವಿತ್ರಿ ಭೋವಿವಡ್ಡರ್ ಆತಂಕದ ಮಾತನಾಡಿದರು.

‘ನಗರದ ಹಲವೆಡೆ ನೀರಿನ ಸಮಸ್ಯೆ ತೀವ್ರವಾಗಿದೆ. ಕೆಲವೆಡೆ 3–4 ದಿನಕ್ಕೊಮ್ಮೆ ನೀರು ನೀಡಿದರೆ ಇನ್ನೂ ಕೆಲವೆಡೆ ವಾರ ಕಳೆದರೂ ನೀರು ಬರುತ್ತಿಲ್ಲ. ನಗರ ವ್ಯಾಪ್ತಿಯಲ್ಲಿ ಇರುವ 13 ಕೊಳವೆ ಬಾವಿಗಳನ್ನು ಬರಗಾಲದ ಸಿದ್ಧತೆ ಹಿನ್ನೆಲೆಯಲ್ಲಿ ದುರಸ್ತಿ ಮಾಡಲಾಗಿತ್ತು. ಆದರೆ ಯಾವುದೇ ಕೊಳವೆ ಬಾವಿಯಿಂದ ನೀರು ಪಡೆಯುತ್ತಿರುವ ಬಗ್ಗೆ ಮಾಹಿತಿಯಿಲ್ಲ. ಕೇವಲ 2ರಿಂದ 3 ಗಂಟೆ ನೀರೆತ್ತುವ ಕೆಂಗ್ರೆ ಹಾಗೂ ಮಾರಿಗದ್ದೆ ಜಾಕ್‌ವೆಲ್ ನೀರು 80 ಸಾವಿರ ಜನಸಂಖ್ಯೆ ಇರುವ ಶಿರಸಿ ನಗರಕ್ಕೆ ಪೂರೈಸಲು ಸಾಧ್ಯವೇ? ಪರ್ಯಾಯ ವ್ಯವಸ್ಥೆ ಮಾಡಲು ನಗರಾಡಳಿತ ಮೀನಾಮೇಷ ಎಣಿಸುತ್ತಿರುವುದೇಕೆ?’ ಎಂದು ನಗರ ನಿವಾಸಿ ರಾಮಕೃಷ್ಣ ಹೆಗಡೆ ಪ್ರಶ್ನಿಸುತ್ತಾರೆ.

ಈಗಾಗಲೇ ಗಣೇಶನಗರ ಭಾಗದ ನೀರಿನ ಸಮಸ್ಯೆ ಗಮನಕ್ಕೆ ಬಂದಿದ್ದು ಎರಡು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು. 
-ಕಾಂತರಾಜ್, ಪೌರಾಯುಕ್ತ ಶಿರಸಿ ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT