ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿಗಳ ಸಂಖ್ಯೆ ಕುಸಿತ: ಗಡಿ ಕನ್ನಡ ಶಾಲೆಗಳಿಗೆ ನೋಟಿಸ್

ಗೋವಾ ರಾಜ್ಯದ ಶಾಲೆಗೆ ವಿದ್ಯಾರ್ಥಿಗಳ ವಲಸೆ:ಅನುದಾನಿತ ಶಾಲೆಗಳಿಗೆ ಆತಂಕ
Published : 15 ಆಗಸ್ಟ್ 2024, 1:42 IST
Last Updated : 15 ಆಗಸ್ಟ್ 2024, 1:42 IST
ಫಾಲೋ ಮಾಡಿ
Comments

ಕಾರವಾರ: ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗದ 19 ಕನ್ನಡ ಮಾಧ್ಯಮ ಅನುದಾನಿತ ಪ್ರೌಢಶಾಲೆಗಳ ಮಾನ್ಯತೆ ರದ್ದುಪಡಿಸುವ ಎಚ್ಚರಿಕೆ ನೀಡಿ, ಶಿಕ್ಷಣ ಇಲಾಖೆ ನೊಟೀಸ್ ಜಾರಿಗೊಳಿಸಿದೆ.

ಕಾರವಾರ ತಾಲ್ಲೂಕಿನ ಮಾಜಾಳಿ, ಮುಡಗೇರಿ, ಸದಾಶಿವಗಡ, ಅಸ್ನೋಟಿ ಸೇರಿ ಹಲವು ಗ್ರಾಮಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಕ್ಕದ ಗೋವಾ ರಾಜ್ಯದ ಮಾಶೇಮ್‍ನ ಇಂಗ್ಲಿಷ್ ಮಾಧ್ಯಮ ಶಾಲೆಗೆ ದಾಖಲಾಗಿದ್ದಾರೆ. ಹೀಗಾಗಿ ಗ್ರಾಮಗಳ ವ್ಯಾಪ್ತಿಯ ಐದಕ್ಕೂ ಹೆಚ್ಚು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ.

‘ಸರ್ಕಾರದ ನಿಯಮದಂತೆ ಅನುದಾನಿತ ಪ್ರೌಢಶಾಲೆಗಳ ಪ್ರತಿ ತರಗತಿಯಲ್ಲಿ ಕನಿಷ್ಠ 30 ವಿದ್ಯಾರ್ಥಿಗಳ ದಾಖಲಾತಿ ಮತ್ತು 25 ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ. ಆಯಾ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ಶೈಕ್ಷಣಿಕ ಸಾಲಿನಿಂದ ಶಾಲೆಗಳ ಮಾನ್ಯತೆ ರದ್ದುಪಡಿಸಬಹುದು. ವೇತನಾನುದಾನ ಸ್ಥಗಿತಗೊಳಿಸಬಹುದು’ ಎಂಬ ನೋಟಿಸ್‌ನ್ನು ಶಿಕ್ಷಣ ಇಲಾಖೆಯು ಶಾಲೆಯ ಆಡಳಿತ ಮಂಡಳಿಗೆ ನೀಡಿದೆ.

‘ಗ್ರಾಮೀಣ ಪ್ರದೇಶದ ಜನರು ನಗರಕ್ಕೆ ವಲಸೆ ಹೋಗುತ್ತಿರುವ ಕಾರಣ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. 8 ದಶಕಗಳ ಇತಿಹಾಸವುಳ್ಳ ಕಾರವಾರದ ಪ್ರೌಢಶಾಲೆಗಳನ್ನು ಉಳಿಸಿಕೊಳ್ಳಲು ಜೊಯಿಡಾದ ಕುಗ್ರಾಮಗಳ ಮಕ್ಕಳಿಗೆ ಉಚಿತ ಶಿಕ್ಷಣ, ಶೈಕ್ಷಣಿಕ ಸೌಲಭ್ಯ ನೀಡಿ ಶಾಲೆಗಳಿಗೆ ದಾಖಲಿಸುತ್ತಿದ್ದೇವೆ. ಈ ಸಲ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕುಸಿದಿದೆ’ ಎಂದು ಹಳಗಾದ ಮಾಡರ್ನ್ ಶಿಕ್ಷಣ ಸಮಿತಿಯ ಅಧ್ಯಕ್ಷ ದಿಗಂಬರ ಶೇಟ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನುದಾನಿತ ಪ್ರೌಢಶಾಲೆಗಳು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿಗೆ ಕಾರಣವಾದವು. ಅವುಗಳನ್ನೇ ಮುಚ್ಚಿದರೆ ಬಡ ಕುಟುಂಬದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆ ಆಗಬಹುದು. ಗಡಿಭಾಗದ ಶಾಲೆಗಳಲ್ಲಿ ಸರ್ಕಾರವು ವಿದ್ಯಾರ್ಥಿಗಳ ಕನಿಷ್ಠ ಮಿತಿಯನ್ನು ಪ್ರತಿ ತರಗತಿಗೆ 25ರ ಬದಲು 15ಕ್ಕೆ ಇಳಿಕೆ ಮಾಡುವುದು ಸೂಕ್ತ’ ಎಂದು ಅಭಿಪ್ರಾಯ ಪಟ್ಟರು.

ಅನುದಾನಿತ ಪ್ರೌಢಶಾಲೆಗಳಲ್ಲಿ ನಿಗದಿತ ಸಂಖ್ಯೆಗಿಂತ ವಿದ್ಯಾರ್ಥಿಗಳು ಕಡಿಮೆ ಇರುವುದಕ್ಕೆ ನೋಟಿಸ್ ನೀಡಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಶಾಲೆ ಮಾನ್ಯತೆ ನವೀಕರಣವಾಗಲಿದೆ.
ಲತಾ ನಾಯಕ ಉಪನಿರ್ದೇಶಕರುಕಾರವಾರ ಶೈಕ್ಷಣಿಕಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT