ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ನಿತ್ಯ ರಾತ್ರಿ ಕೈಕೊಡುವ ವಿದ್ಯುತ್: ಅಧಿಕಾರಿಗಳಿಗೆ ನಾಗರಿಕರ ದೂರು

Published 15 ಜೂನ್ 2024, 14:28 IST
Last Updated 15 ಜೂನ್ 2024, 14:28 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ. ದೂರದ ಕೊಡ್ನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡ್ಡಿಗದ್ದೆ ಭಾಗದಲ್ಲಿ ನಿತ್ಯ ರಾತ್ರಿ ವಿದ್ಯುತ್ ಕೈಕೊಡುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಈ ಭಾಗದ ನಾಗರಿಕರು ಹೆಸ್ಕಾಂ ಅಧಿಕಾರಿಗಳ ಬಳಿ ದೂರಿದರು. 

ನಗರದ ಹೆಸ್ಕಾಂ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿದ್ಯುತ್ ಗ್ರಾಹಕರ ಸಭೆಗೆ ಬಂದಿದ್ದ ಜಡ್ಡಿಗದ್ದೆ, ಗಣೇಶಪಾಲ ಸುತ್ತಲಿನ 20ಕ್ಕೂ ಅಧಿಕ ವಿದ್ಯುತ್ ಗ್ರಾಹಕರು ತಮ್ಮ ಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಕುಗ್ರಾಮಗಳೇ ಅಧಿಕ ಸಂಖ್ಯೆಯಲ್ಲಿ ಇರುವ ಜಡ್ಡಿಗದ್ದೆಯಲ್ಲಿ ಪ್ರತಿ ದಿನ ರಾತ್ರಿ ವಿದ್ಯುತ್ ಹೋಗಿ ಬೆಳಿಗ್ಗೆ ಬರುತ್ತಿದೆ. ಮಳೆಗಾಲದ ಈ ದಿನಗಳಲ್ಲಿ ಗ್ರಾಮದ ಸಮಸ್ಯೆ ಕೇಳುವವರೇ ಇಲ್ಲದಾಗಿದೆ ಎಂದು ದೂರಿದರು. 

ಕೊಡ್ನಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಹೆಗಡೆ ಮಾತನಾಡಿ, ‘ಜಡ್ಡಿಗದ್ದೆ ಭಾಗಕ್ಕೆ ಈಗ ಹೊಸ ಲೈನ್‍ಮನ್ ನೇಮಕ ಮಾಡಲಾಗಿದೆ. ಪ್ರತಿ ದಿನ ರಾತ್ರಿಯ ವೇಳೆ ಹೆಸ್ಕಾಂ ಅಧಿಕಾರಿಗಳೇ ವಾನಳ್ಳಿಯಲ್ಲಿರುವ ಜಂಕ್ಷನ್‌ನಲ್ಲಿ ಜಡ್ಡಿಗದ್ದೆ ಭಾಗದ ಸಂಪರ್ಕ ತಪ್ಪಿಸುತ್ತಿದ್ದಾರೇನೋ ಎಂಬ ಸಂಶಯ ಮೂಡುವಂತಹ ಸ್ಥಿತಿ ಉಂಟಾಗಿದೆ. ಮಾರನೆ ದಿನ ಬೆಳಿಗ್ಗೆ 8 ಗಂಟೆಗೆ ಮತ್ತೆ ವಿದ್ಯುತ್ ಬರುತ್ತದೆಯಾದರೂ ಒಂದು ತಾಸಿನಲ್ಲಿಯೇ ನಾಲ್ಕಾರು ಬಾರಿ ವಿದ್ಯುತ್ ಕಣ್ಣಾ ಮುಚ್ಚಾಲೆ ಮಾಡುತ್ತಿದೆ. ವಿದ್ಯುತ್ ಹೋದ ತಕ್ಷಣ ಇಲ್ಲಿಯ ಮೊಬೈಲ್ ಟಾವರ್‌ಗಳೂ  ಕಾರ್ಯ ನಿಲ್ಲಿಸುತ್ತಿವೆ. ಹೀಗಾಗಿ, ರಾತ್ರಿಯ ವೇಳೆ ಜಡ್ಡಿಗದ್ದೆ ಭಾಗದ ಜನತೆಯ ಸಂಪರ್ಕವೇ ತಪ್ಪಿಹೋಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಸ್ಥ ರಾಜಾರಾಮ ಭಟ್ ಮಾತನಾಡಿ, ‘ಜಡ್ಡಿಗದ್ದೆ ಭಾಗದಲ್ಲಿ 500ಕ್ಕೂ ಅಧಿಕ ಮನೆಗಳಿದ್ದು, ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ನಾವು ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದೆವು. ಗ್ರಾಹಕರ ಕುಂದುಕೊರತೆ ಸಮಾಲೋಚನಾ ಸಭೆಯಲ್ಲಿ ಗಮನಕ್ಕೆ ಸಮಸ್ಯೆ ತಂದಿದ್ದು, ಇನ್ನೂ ಇದೇ ರೀತಿ ವಿದ್ಯುತ್ ಕಣ್ಣಾ ಮುಚ್ಚಾಲೆ ನಡೆದಿದ್ದರೆ ಹೋರಾಟ ಅನಿವಾರ್ಯವಾಗಲಿದೆ. ಮಳೆಗಾಲದ ಈ ದಿನಗಳಲ್ಲಿ ಇಲ್ಲಿ ವಿದ್ಯುತ್ ತಂತಿಗೆ ತಾಗುವ ಮರಗಳ ರೆಂಬೆ ಕತ್ತರಿಸಬೇಕಿದ್ದು, ಹೆಸ್ಕಾಂ ಸಿಬ್ಬಂದಿ ಬಂದರೆ ನಾವೂ ಸಹಕಾರ ನೀಡುತ್ತೇವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಸಹಾಯಕ ಎಂಜಿನಿಯರ್ ನಾರಾಯಣ ಕರ್ಕಿ, ಮಳೆಗಾಲದ ದಿನಗಳಲ್ಲಿ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತಿವೆ. ಸಮಸ್ಯೆ ಬಗೆಹರಿಸಿ ನಿರಂತರ ವಿದ್ಯುತ್ ಒದಗಿಸಲು ನಾವು ಶಕ್ತಿ ಮೀರಿ ಯತ್ನ ನಡೆಸುತ್ತಿದ್ದೇವೆ ಎಂದರು. 

ಗ್ರಾಹಕರಾದ ಶ್ರೀಪತಿ ಭಟ್, ಶ್ರೀಪಾದ ಭಟ್, ಗಣಪತಿ ಹೆಗಡೆ, ವೆಂಕಟ್ರಮಣ ಹೆಗಡೆ, ರವಿ ಹೆಗಡೆ, ಸತ್ಯನಾರಾಯಣ ಹೆಗಡೆ, ಗಣೇಶ ಹೆಗಡೆ ಇತರರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT