ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡಗೋಡ: ತೈವಾನ್‌ ರೆಡ್‌ ಲೇಡಿ ಪಪ್ಪಾಯ; ಭರಪೂರ ಆದಾಯ

Published 17 ಮೇ 2024, 6:17 IST
Last Updated 17 ಮೇ 2024, 6:17 IST
ಅಕ್ಷರ ಗಾತ್ರ

ಮುಂಡಗೋಡ: ಅಡಿಕೆ ತೋಟದಲ್ಲಿ ಬಾಳೆಯ ಬದಲು, ಮಳೆಯಾಶ್ರಿತ ಪ್ರದೇಶದಲ್ಲಿಯೂ ಪಪ್ಪಾಯ ಬೆಳೆದು ಲಾಭ ಗಳಿಸಿದ್ದಾರೆ ತಾಲ್ಲೂಕಿನ ಹುಲಿಹೊಂಡ ಗ್ರಾಮದ ಪ್ರಗತಿಪರ ಕೃಷಿಕ ಬಸವರಾಜ ಈರಯ್ಯ ನಡುವಿನಮನಿ.

ಇವರು ಬೆಳೆಯುವ ಪಪ್ಪಾಯ, ಯುರೋಪ್‌ ಹಾಗೂ ಅರಬ್‌ ದೇಶಗಳಿಗೆ ರಫ್ತಾಗುತ್ತದೆ. ದೆಹಲಿ, ಉತ್ತರಾಖಂಡ, ರಾಜಸ್ಥಾನ, ಹೈದ್ರಾಬಾದ್‌ ಸೇರಿದಂತೆ ದೇಶದ ವಿವಿಧೆಡೆ ಇವರ ತೋಟದ ಪಪ್ಪಾಯ ಸರಬರಾಜಾಗುತ್ತಿದೆ. ಕಳೆದ ವರ್ಷದ ಲಾಭದಿಂದ ಮತ್ತೆ ಹೊಸದಾಗಿ 3,000 ಗಿಡಗಳನ್ನು ಬೆಳೆಸಲು ಪ್ರೇರಣೆ ನೀಡಿದೆ.

ಸಮಗ್ರ ಕೃಷಿ ಪದ್ಧತಿಯಲ್ಲಿ ಬೆಳೆದಿರುವ ‘ತೈವಾನ್‌ ರೆಡ್‌ ಲೇಡಿ– 786ʼ ತಳಿಯ ಪಪ್ಪಾಯ, ಮುಖ್ಯಬೆಳೆಯಷ್ಟೇ ಲಾಭ ಗಳಿಸಿಕೊಟ್ಟಿದೆ. ಅಡಿಕೆಗೆ ಉಪಬೆಳೆಯಾಗಿ ಬಾಳೆಯನ್ನು ಹೆಚ್ಚಾಗಿ ಬೆಳೆಯುವ ರೈತರ ಮಧ್ಯೆ, ಪಪ್ಪಾಯ ಬೆಳೆದು ಹೊಸದಾಗಿ ಪ್ರಯೋಗ ಮಾಡಿರುವ ಇವರು ಅದರಲ್ಲಿ ಸೈ ಎನಿಸಿಕೊಂಡಿದ್ದಾರೆ.

ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಪಪ್ಪಾಯ ಅಷ್ಟಾಗಿ ಕೈ ಹಿಡಿಯುವುದಿಲ್ಲ ಎಂಬ ಅನೇಕರ ಸಲಹೆಯನ್ನು ಧಿಕ್ಕರಿಸಿ, ಯೂಟ್ಯೂಬ್‌ನಲ್ಲಿ ಹಾಗೂ ಸಂಪನ್ಮೂಲ ವ್ಯಕ್ತಿಗಳ ಸಲಹೆಗಳನ್ನು ಕೇಳಿ ಬೆಳೆದ ಬೆಳೆಯೊಂದು ಇವರನ್ನು ಆರ್ಥಿಕವಾಗಿ ಸುಧಾರಿಸುವಂತೆ ಮಾಡಿದೆ.

‘ಅಡಿಕೆ ತೋಟದಲ್ಲಿದ್ದ ಬಾಳೆ ತೆಗೆದ ನಂತರ, ಉಪಬೆಳೆಯಾಗಿ ಏಲಕ್ಕಿ ಬೆಳೆಯಲು ನಿರ್ಧರಿಸಿದ್ದೆ. ಆದರೆ, ಇಲ್ಲಿಯ ವಾತಾವರಣಕ್ಕೆ ಪೂರಕವಾಗುವುದಿಲ್ಲ ಎಂದು ತಜ್ಞರು ಹೇಳಿದರು. ನಂತರ ಯೂಟ್ಯೂಬ್‌ನಲ್ಲಿ ರೆಡ್‌ ಲೇಡಿ ತಳಿಯ ಬಗ್ಗೆ ವೀಕ್ಷಿಸಿದೆ. ಈ ಕುರಿತು ಸಂಪನ್ಮೂಲ ವ್ಯಕ್ತಿಗಳ ಹತ್ತಿರ ಸಲಹೆ ಪಡೆದುಕೊಂಡೆ. ಬೆಂಗಳೂರಿನ ಏಕಲವ್ಯ ನರ್ಸರಿಯನ್ನು ಸಂಪರ್ಕಿಸಿ ಈ ತಳಿಯ ಪಪ್ಪಾಯ ಬೆಳೆಯಲು ಮುಂದಾದೆ. ಎರಡು ವರ್ಷಗಳಿಂದ ಬೆಳೆಯುತ್ತಿರುವ ಪಪ್ಪಾಯ ಲಕ್ಷಾಂತರ ರೂಪಾಯಿ ಆದಾಯ ತಂದುಕೊಟ್ಟಿದೆ. ಕಬ್ಬು, ಗೋವಿನಜೋಳ, ಬಾಳೆಗಿಂತಲೂ ಹೆಚ್ಚಿನ ಲಾಭ ಪಡೆಯಬಹುದುʼ ಎನ್ನುತ್ತಾರೆ ಬಸವರಾಜ.

‘ಕೇವಲ ಪಪ್ಪಾಯ ತೋಟ ಮಾಡುವುದಾದರೆ ಗಿಡದಿಂದ ಗಿಡಕ್ಕೆ ಆರು ಅಡಿ, ಸಾಲಿನಿಂದ ಸಾಲಿಗೆ ಎಂಟು ಅಡಿ ಹಚ್ಚಿದರೆ ಒಂದು ಎಕರೆ ಪ್ರದೇಶದಲ್ಲಿ ಒಂದು ಸಾವಿರ ಗಿಡಗಳನ್ನು ಬೆಳೆಯಬಹುದು. ಆದರೆ ಅಡಿಕೆಗೆ ಪರ್ಯಾಯವಾಗಿ ಉಪಬೆಳೆಯಾಗಿ ಮಾಡಿದರೆ, ಒಂದು ಎಕರೆ ಪ್ರದೇಶದಲ್ಲಿ 530 ಗಿಡಗಳನ್ನು ಬೆಳೆಸಬಹುದು. ಈ ತಳಿಗೆ ವಿಶೇಷ ಆರೈಕೆ ಮಾಡಬೇಕು. ಕೊಯ್ಲು ಮಾಡುವುದರಿಂದ ಹಿಡಿದು ಪ್ಯಾಕಿಂಗ್‌ ಮಾಡಲು ನುರಿತ ಕೆಲಸಗಾರರು ಇರುತ್ತಾರೆ. ಒಂದು ಗಿಡದಲ್ಲಿ ಒಂದೂವರೆ ಕ್ವಿಂಟಲ್‌ಗಳಷ್ಟು ಕಾಯಿ ಬರುತ್ತವೆ. ಕನಿಷ್ಠವೆಂದರೂ ಪ್ರತಿ ಕೆಜಿಗೆ ₹ 10 ಹಾಗೂ ಗರಿಷ್ಠವೆಂದರೂ ಪ್ರತಿ ಕೆಜಿಗೆ ₹ 32 ರಂತೆ ಮಾರಾಟ ಆಗಿದೆ. ಕಳೆದ ವರ್ಷ ಒಟ್ಟು 1,800 ಗಿಡಗಳಿಂದ ₹ 30 ಲಕ್ಷ ಆದಾಯ ಬಂದಿದೆʼ ಎಂದರು.

ಸಮಗ್ರ ಕೃಷಿ ವೀಕ್ಷಣೆಗೆ ಬಂದಿರುವ ತಂಡದ ಜೊತೆ ಪ್ರಗತಿಪರ ಕೃಷಿಕ ಬಸವರಾಜ ಈರಯ್ಯ ನಡುವಿನಮನಿ ನಿಂತಿರುವುದು(ಕೆಂಪು ಟೀ ಶರ್ಟ್‌ ಧರಿಸಿರುವ)
ಸಮಗ್ರ ಕೃಷಿ ವೀಕ್ಷಣೆಗೆ ಬಂದಿರುವ ತಂಡದ ಜೊತೆ ಪ್ರಗತಿಪರ ಕೃಷಿಕ ಬಸವರಾಜ ಈರಯ್ಯ ನಡುವಿನಮನಿ ನಿಂತಿರುವುದು(ಕೆಂಪು ಟೀ ಶರ್ಟ್‌ ಧರಿಸಿರುವ)

ಸಮಗ್ರ ಕೃಷಿ ವೀಕ್ಷಣೆಗೆ ನಿತ್ಯವೂ ಜನ

ಒಟ್ಟು 63 ಎಕರೆ ಪ್ರದೇಶದಲ್ಲಿ ಅರಣ್ಯ ಕೃಷಿ ಸಾವಯವ ಕೃಷಿ ಹಾಗೂ ಸಮಗ್ರ ಕೃಷಿ ಮಾಡಿರುವ ಬಸವರಾಜ ನಡುವಿನಮನಿ ಅವರ ಕೃಷಿ ಸಾಧನೆ ವೀಕ್ಷಿಸಲು ತೋಟಗಾರಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು ಹಾಗೂ ರೈತರು ಒಂದು ದಿನದ ಪ್ರವಾಸಕ್ಕಾಗಿ ಬರುತ್ತಾರೆ. ಇಲ್ಲಿಯವರೆಗೆ 200ಕ್ಕಿಂತ ಹೆಚ್ಚು ತಂಡಗಳು ಭೇಟಿ ನೀಡಿ ಇವರ ಸಮಗ್ರ ಕೃಷಿ ವೀಕ್ಷಿಸಿದ್ದಾರೆ. 135 ಕ್ಕಿಂತ ಹೆಚ್ಚು ಕೃಷಿ ಸಂಬಂಧಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಇತರ ರೈತರಿಗೆ ಸ್ಫೂರ್ತಿಯ ಮಾರ್ಗದರ್ಶಕರಾಗಿ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ಕೃಷಿ ವಿಶ್ವವಿದ್ಯಾಲಯದ ಶ್ರೇಷ್ಠ ಕೃಷಿಕ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT