ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಆಗ್ರಹ

ಶಿರಸಿ: ರ‍್ಯಾಲಿ ನಡೆಸಿ ಹಕ್ಕೊತ್ತಾಯ ಮಂಡಿಸಿದ ಸರ್ಕಾರಿ ನೌಕರರು
Last Updated 3 ಡಿಸೆಂಬರ್ 2022, 12:46 IST
ಅಕ್ಷರ ಗಾತ್ರ

ಶಿರಸಿ: ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್.) ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ (ಒ.ಪಿ.ಎಸ್.) ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಎನ್.ಪಿ.ಎಸ್‌. ನೌಕರರ ಸಂಘದ ತಾಲ್ಲೂಕು ಘಟಕದ ಸದಸ್ಯರು ಶನಿವಾರ ರ‍್ಯಾಲಿ ನಡೆಸಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮೊದಲು ಎನ್.ಪಿ.ಎಸ್. ಜಾರಿಯಿಂದ ನೌಕರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಕಾರ್ಯಾಗಾರ ನಡೆಯಿತು. ನಿವೃತ್ತ ನೌಕರರು ಎನ್.ಪಿ.ಎಸ್.ನ ಬಾಧಕಗಳ ಕುರಿತು ನೌಕರರಿಗೆ ವಿವರಿಸಿದರು.

ಬಳಿಕ ಪ್ರತಿಭಟನಾ ರ‍್ಯಾಲಿ ನಡೆಸಿದ ನೌಕರರು ವಿಧಾನಸಭಾಧ್ಯಕ್ಷರ ಕಚೇರಿ, ಉಪವಿಭಾಗಾಧಿಕಾರಿಗೆ ತೆರಳಿ ಮನವಿ ಸಲ್ಲಿಸಿದರು. ಈ ವೇಳೆ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೆ ತರಲು ಘೋಷಣೆ ಕೂಗಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ನೌಕರ ಪಿ.ಎಂ.ಹೆಗಡೆ, ‘ಎನ್.ಪಿ.ಎಸ್. ಜಾರಿಯಿಂದಾಗಿ ನಿವೃತ್ತಿಯ ಬಳಿಕ ನೌಕರರ ಜೀವನ ಕಷ್ಟವಾಗುತ್ತಿದೆ. ಅತಿ ಕಡಿಮೆ ಪಿಂಚಣಿ ಮೊತ್ತದಲ್ಲಿ ಜೀವನ ಸಾಗಿಸುವ ಅನಿವಾರ್ಯತೆ ಉಂಟಾಗುತ್ತಿದೆ’ ಎಂದರು.

‘ಎನ್.ಪಿ.ಎಸ್. ಜಗತ್ತಿನ ಹಲವು ದೇಶಗಳಲ್ಲಿ ವಿಫಲಗೊಂಡಿರುವ ಉದಾಹರಣೆ ಇದೆ. ಇದು ಷೇರು ಮಾರುಕಟ್ಟೆ ಆಧರಿಸಿರುವುದರಿಂದ ನಿವೃತ್ತ ನೌಕರರಿಗೆ ನಿಗದಿತ ಪಿಂಚಣಿ ಸಿಗುವ ಭರವಸೆ ಇಲ್ಲ. ನೌಕರರು ಮರಣ ಹೊಂದಿದರೆ ಅವರ ಅವಲಂಭಿತ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುವ ಯಾವುದೇ ಅಂಶವನ್ನು ಕಾಯ್ದೆ ಒಳಗೊಂಡಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಗೆ ಈ ಯೋಜನೆ ವಿರುದ್ಧವಾಗಿದೆ’ ಎಂದು ನೌಕರರು ದೂರಿದರು.

‘ಎನ್.ಪಿ.ಎಸ್. ನೌಕರರಿಗೆ ಸಾಮಾನ್ಯ ಭವಿಷ್ಯ ನಿಧಿಯಲ್ಲಿ ಉಳಿತಾಯ ಮಾಡಲು ಅವಕಾಶ ಒದಗಿಸಿಲ್ಲ. ಪಿಂಚಣಿ ಪರಿಷ್ಕರಣೆಗೆ ಅವಕಾಶ ಇಲ್ಲ. ಹೀಗಾಗಿ ಕೂಡಲೆ ಯೋಜನೆ ಕೈಬಿಟ್ಟು ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಧರ್ಮಾನಂದ ಭಟ್ಟ, ಕಾರ್ಯದರ್ಶಿ ದೀಪಕ ಗೋಕರ್ಣ, ಖಜಾಂಚಿ ಗಣೇಶ ಹೆಗಡೆ, ಕೃಷಿ ಇಲಾಖೆ ಉಪನಿರ್ದೇಶಕ ಟಿ.ಎಚ್.ನಟರಾಜ್, ಸರ್ಕಾರಿ ನೌಕರರ ಸಂಘದ ಮನೋಜ್ ಪಾಟೀಲ್, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT