ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಕೊಠಡಿ ದುರಸ್ತಿಗೆ ಸಿಗದ ಅನುದಾನ: ಸುರಕ್ಷತಾ ಕ್ರಮವಹಿಸಲು ನಿರ್ಲಕ್ಷ್ಯ

Published 20 ಮೇ 2024, 6:02 IST
Last Updated 20 ಮೇ 2024, 6:02 IST
ಅಕ್ಷರ ಗಾತ್ರ

ಕಾರವಾರ: ಇನ್ನೊಂದು ವಾರ ಕಳೆಯುವಷ್ಟರಲ್ಲಿ ಬೇಸಿಗೆ ರಜೆ ಕಳೆದು ಶಾಲೆಗಳು ಪುನರಾರಂಭಗೊಳ್ಳಲಿವೆ. ಶಾಲಾ ಆರಂಭಕ್ಕೆ ಮುನ್ನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಶಿಕ್ಷಣ ಇಲಾಖೆ ಹಿಂದೇಟು ಹಾಕುತ್ತಿರುವುದು ಹಲವೆಡೆ ಕಂಡುಬರುತ್ತಿದೆ.

ಕೊಠಡಿಗಳ ದುರಸ್ತಿಗೆ ಕಳೆದ ವರ್ಷ ಸಲ್ಲಿಕೆಯಾಗಿದ್ದ ಪ್ರಸ್ತಾವಕ್ಕೆ ಅನುದಾನ ಸಿಗದಿರುವುದು ಇದಕ್ಕೊಂದು ಕಾರಣ. ಕಾರವಾರ ಶೈಕ್ಷಣಿಕ ಜಿಲ್ಲೆಯಿಂದ ಕಳೆದ ವರ್ಷ 262 ಕೊಠಡಿಗಳ ದುರಸ್ತಿಗೆ ₹4.43 ಕೋಟಿ ಅನುದಾನ ಕೋರಿ ಪ್ರಸ್ತಾವ ಕಳಿಸಲಾಗಿತ್ತು. ಈವರೆಗೂ ಬಿಡಿಗಾಸು ಅನುದಾನ ಸಿಕ್ಕಿಲ್ಲ. ಶಿರಸಿ ಜಿಲ್ಲೆಯಿಂದಲೂ 360 ಕೊಠಡಿಗಳ ಮರು ನಿರ್ಮಾಣಕ್ಕೆ ಸಲ್ಲಿಕೆಯಾಗಿದ್ದ ಪ್ರಸ್ತಾವಕ್ಕೆ ಅನುದಾನ ಬಿಡುಗಡೆಯಾಗಿಲ್ಲ.

ಮಣ್ಣಿನ ಕೊಠಡಿಗಳ ಶಾಲೆಗಳು, ಚಾವಣಿ ಮುರಿದು ಬೀಳವ ಹಂತದ ಶಾಲೆಗಳಲ್ಲಿ ಆತಂಕದಲ್ಲೇ ಮಕ್ಕಳು ಪಾಠ ಕೇಳುವ ಸ್ಥಿತಿ ಎದುರಾಗಿದೆ.

ಶಿರಸಿ ತಾಲ್ಲೂಕಿನ ವಿವಿಧ ಭಾಗದ ಶಾಲೆಗಳ 66 ಕೊಠಡಿಗಳ ದುರಸ್ತಿಗೆ ವರ್ಷದ ಹಿಂದೆ ಪ್ರಸ್ತಾವ ಸಲ್ಲಿಸಿದ್ದರೂ ಈವರೆಗೆ ಅನುದಾನ ಬಿಡುಗಡೆಯಾಗಿಲ್ಲ. ಶಿಥಿಲಾವಸ್ಥೆ ಕೊಠಡಿಗಳಲ್ಲಿ ತರಗತಿ ನಡೆಸಲು ಸಮಸ್ಯೆಯಾಗಿದೆ.

‘66 ಕೊಠಡಿಗಳ ದುರಸ್ತಿಗೆ ₹1 ಕೋಟಿ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಸಿಕ್ಕ ನಂತರ ದುರಸ್ತಿ ಮಾಡಿಸಲಾಗುವುದು’ ಎಂದು ಶಿರಸಿ ಬಿಇಒ ನಾಗರಾಜ ನಾಯ್ಕ ಮಾಹಿತಿ ನೀಡಿದರು.

ಮುಂಡಗೋಡ ತಾಲ್ಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಕೊಠಡಿಗಳ ಕೊರತೆ ಇದೆ. ಕೆಲವೊಂದು ಶಿಥಿಲಾವಸ್ಥೆ ತಲುಪಿದ್ದರಿಂದ, ಅವುಗಳನ್ನು ನೆಲಸಮಗೊಳಿಸಲಾಗಿದೆ.

ಮಲವಳ್ಳಿ, ತಮ್ಯಾನಕೊಪ್ಪ, ಮುಡಸಾಲಿ, ಕುಸೂರ, ಸುಳ್ಳಳ್ಳಿ ಸೇರಿದಂತೆ ಕೆಲವೆಡೆ ಶಾಲೆಗಳ ಹೆಂಚು ದುರಸ್ತಿ, ಬಿರುಕು ಬಿಟ್ಟ ಗೋಡೆಗಳ ದುರಸ್ತಿ ಕಾರ್ಯವನ್ನು ಮಾಡಬೇಕಿದೆ. ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಆವರಣ ಗೋಡೆ ಪೂರ್ಣ ಪ್ರಮಾಣದಲ್ಲಿ ಇಲ್ಲದಿರುವುದರಿಂದ, ಶಾಲಾ ಪರಿಸರ ಹಾಳಾಗುತ್ತಿದೆ ಎಂಬುದು ಪಾಲಕರ ದೂರು.

‘ಮಲವಳ್ಳಿ, ನಂದಿಕಟ್ಟಾ ಶಾಲೆಗಳ ಅಡುಗೆ ಕೋಣೆ ಹಾನಿಯಾಗಿರುವುದನ್ನು ಸದ್ಯಕ್ಕೆ ದುರಸ್ತಿ ಪಡಿಸಲಾಗಿದೆ. ಸದ್ಯಕ್ಕೆ ಪ್ರಾಥಮಿಕ ಶಾಲೆಗಳಿಗೆ 25-30 ಕೊಠಡಿಗಳ ಬೇಡಿಕೆ ಇದೆ. ಶಾಲಾ ಕೊಠಡಿಗಳ ದುರಸ್ತಿ ಬಗ್ಗೆ ಶಿಕ್ಷಕರಿಂದ ಸದ್ಯಕ್ಕೆ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಬಿಆರ್‌ಸಿ ಅಧಿಕಾರಿ ಪಾಂಡುರಂಗ ಟಿಕ್ಕೋಜಿ ಹೇಳಿದರು.

ಗೋಕರ್ಣದ ತಾರಮಕ್ಕಿ ಹಿರಿಯ ಪ್ರಾಥಮಿಕ ಶಾಲೆ ಸುಸಜ್ಜಿತ ಕಟ್ಟಡ, ದೊಡ್ಡದಾದ ಕ್ರೀಡಾಂಗಣವಿದ್ದರೂ ವಿದ್ಯಾರ್ಥಿಗಳ ಕೊರತೆ ಇದೆ. ಗೋಕರ್ಣದ ಪರಿವರ್ತನಾ ಟ್ರಸ್ಟ್ ಈ ಶಾಲೆಯನ್ನು ದತ್ತಕಕ್ಕೆ ಪಡೆದು ಹೆಚ್ಚಿನ ಅಭಿವೃದ್ಧಿ ಮಾಡಿದೆ.

‘ಇಂಗ್ಲಿಷ್ ಶಿಕ್ಷಣದ ವ್ಯಾಮೋಹದಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಲಿದೆ’ ಎನ್ನುತ್ತಾರೆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಗೇಶ ಗೌಡ.

ಯಲ್ಲಾಪುರ ತಾಲ್ಲೂಕಿನಲ್ಲಿ 25ಕ್ಕೂ ಹೆಚ್ಚು ಶಾಲಾ ಕೊಠಡಿಗಳು ಶಿಥಿಲಗೊಂಡಿವೆ ಎಂಬ ದೂರುಗಳಿವೆ. 21 ಹೊಸ ಕೊಠಡಿಗೆ ಬೇಡಿಕೆ ಇದೆ. 54 ಮಕ್ಕಳು ಓದುತ್ತಿರುವ ಹಿರಿಯ ಪ್ರಾಥಮಿಕ ಶಾಲೆ ಸವಣಗೇರಿಯ ಕೊಠಡಿಯ ಗೋಡೆ ಕುಸಿಯುವ ಹಂತದಲ್ಲಿದ್ದು ಶಾಲೆ ಆರಂಭವಾಗುವುದರೊಳಗೆ ಸರಿಪಡಿಸದಿದ್ದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಕೊಂಕಣಕೊಪ್ಪ ತಿಳಿಸಿದ್ದಾರೆ.

‘ಶಾಲಾ ಕೊಠಡಿಗಳ ದುರಸ್ತಿಗೆ ₹47.75 ಲಕ್ಷ ಪ್ರಸ್ತಾವ ಸಲ್ಲಿಸಲಾಗಿದ್ದು ಅನುದಾನ ಬಂದ ತಕ್ಷಣ ಸರಿಪಡಿಸಲಾಗುವುದು’ ಎಂದು ಬಿಇಒ ಎನ್.ಆರ್.ಹೆಗಡೆ ಹೇಳುತ್ತಾರೆ.

ಹಳಿಯಾಳ ತಾಲ್ಲೂಕಿನಲ್ಲಿ 26 ಶಾಲೆಗಳ 41 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. 2023–24ನೇ ಸಾಲಿನಲ್ಲಿ ವಿಪತ್ತು ನಿರ್ವಹಣಾ ನಿಧಿ ಅಡಿಯಲ್ಲಿ 25 ಶಾಲೆಗಳ ಕೊಠಡಿ ದುರಸ್ತಿಗಳಾಗಿದೆ. ಸುಮಾರು 18 ಶಾಲೆಗಳಲ್ಲಿ 26 ಹೆಚ್ಚುವರಿ ಕೊಠಡಿಯ ಅವಶ್ಯಕತೆ ಇದೆ.

‘ಮುಖ್ಯ ಶಿಕ್ಷಕರ ಸಭೆ ಕರೆದು ಕೊಠಡಿ ಮತ್ತು ಮೂಲ ಸೌಕರ್ಯಗಳನ್ನು ಸುಸ್ಥಿತಿಯಲ್ಲಿ ಇಡಲು ತಿಳಿಸಲಾಗಿದೆ’ ಎಂದು ಬಿಇಒ ಪ್ರಮೋದ ಮಹಾಲೆ ಹೇಳುತ್ತಾರೆ.

ಅಂಕೋಲಾ ತಾಲ್ಲೂಕಿನಲ್ಲಿ 23 ಶಾಲೆಗಳು ಶಿಥಿಲಾವಸ್ಥೆಯಲ್ಲಿ ಇದೆ. ಕೇಣಿಯ ಪ್ರಾಥಮಿಕ ಶಾಲೆಯ ಕಟ್ಟಡದ ಕಟ್ಟಿಗೆಗಳು ಹಳೆಯದಾಗಿ ಮುರಿದು ಚಾವಣಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದರೂ ದುರಸ್ತಿ ಕೆಲಸ ನಡೆದಿಲ್ಲ ಎಂಬುದು ಸ್ಥಳೀಯರ ಆರೋಪ.

‘ಶಿಥಿಲಗೊಂಡ ಕೊಠಡಿಗಳ ಮಾಹಿತಿ ಪಡೆಯಲಾಗಿದ್ದು, ಮಳೆಗಾಲಕ್ಕೆ ಮುನ್ನ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಬಿಇಒ ಮಂಗಳಲಕ್ಷ್ಮಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಹೊನ್ನಾವರ ತಾಲ್ಲೂಕಿನ ಶಾಲೆಗಳಲ್ಲಿ ಆವರಣಗೋಡೆ ಹಾಗೂ ಆಟದ ಮೈದಾನದ ಅಗತ್ಯತೆ ಕಂಡುಬಂದಿದೆ. 25 ಶಾಲೆಗಳಿಗೆ ಚಾವಣಿ ದುರಸ್ತಿ ಕಾರ್ಯಕ್ಕೆ ₹66 ಲಕ್ಷ ಪ್ರಸ್ತಾವ ಸಲ್ಲಿಸಲಾಗಿದೆ. ಕಂದಾರ, ತಾಳಮಕ್ಕೆ, ಮೇಲಿನ ಅಸಿಕೇರಿ, ಹಾಲಳ್ಳಿ, ಜಲವಳಕರ್ಕಿ, ಹೆರಾಳಿ, ಹಾಡಗೇರಿ, ಹೈಗುಂದ ಹಾಗೂ ಜಿಕ್ರಿಯಾ ಮೊಹಲ್ಲಾ ಶಾಲೆಗಳ ಮರು ನಿರ್ಮಾಣ ಹೆಚ್ಚುವರಿ ಕೊಠಡಿಗಳಿಗಾಗಿ ₹ 166 ಲಕ್ಷ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಬಿಇಒ ಜಿ.ಎಸ್.ನಾಯ್ಕ ಮಾಹಿತಿ ನೀಡಿದರು.

ಸಿದ್ದಾಪುರ ತಾಲ್ಲೂಕಿನ ಲಂಬಾಪುರ, ಮಾಸ್ತಿಹಕ್ಲು, ಕೊಂಡ್ಲಿ ಮತ್ತು ಕೊಪ್ಪದಲ್ಲಿರುವ ಪ್ರಾಥಮಿಕ ಶಾಲೆಗಳು ಶಿಥಿಲಗೊಂಡಿದ್ದು ಅವುಗಳ ದುರಸ್ತಿಗಾಗಿ ತಾಲ್ಲೂಕು ಪಂಚಾಯಿತಿಗೆ ಮನವಿ ಮಾಡಲಾಗಿದೆ. ಉಳಿದ ಶಾಲೆಗಳಲ್ಲಿ ಒಟ್ಟೂ 118 ಕೊಠಡಿಗಳಿಗೆ ಚಿಕ್ಕ ಪುಟ್ಟ ದುರಸ್ತಿಯ ಅಗತ್ಯ ಇದ್ದು ಅವುಗಳ ದುರಸ್ತಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

‘ಶಾಲೆಯ ಆರಂಭಕ್ಕೂ ಮುನ್ನ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರಿನ ಶುದ್ಧತೆ ದೃಢಪಡಿಸಿಕೊಳ್ಳಲು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಶಿಥಿಲಗೊಂಡ ನಾಲ್ಕು ಶಾಲೆಗಳಲ್ಲಿ ಕೊಠಡಿಯ ಸಮಸ್ಯೆ ಎದುರಾಗಲಿದ್ದು ತಾತ್ಕಾಲಿಕವಾಗಿ ಬದಲಿ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಇಒ ಎಚ್.ಎಂ. ನಾಯ್ಕ ಮಾಹಿತಿ ನೀಡಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ. ಹೆಗಡೆ, ರವಿ ಸೂರಿ, ಸುಜಯ ಭಟ್, ವಿಶ್ವೇಶ್ವರ ಗಾಂವ್ಕರ, ಜ್ಞಾನೇಶ್ವರ ದೇಸಾಯಿ, ಮೋಹನ ದುರ್ಗೇಕರ.

ಅಂಕಿ–ಅಂಶ

ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳ ಮಾಹಿತಿ

ತಾಲ್ಲೂಕು; ಶಿಥಿಲಾವಸ್ಥೆಯ ಕೊಠಡಿಗಳ ಸಂಖ್ಯೆ

ಕಾರವಾರ; 06

ಅಂಕೋಲಾ; 11

ಕುಮಟಾ; 77

ಹೊನ್ನಾವರ; 33

ಭಟ್ಕಳ; 05

ಶಿರಸಿ; 66

ಸಿದ್ದಾಪುರ;60

ಯಲ್ಲಾಪುರ; 57

ಮುಂಡಗೋಡ; 56

ಹಳಿಯಾಳ; 50

ಜೊಯಿಡಾ; 49

ಹಳಿಯಾಳ ತಾಲ್ಲೂಕಿನ ಬಾಣಸಗೇರಿ ಗ್ರಾಮದ ಶಾಲಾ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿ ಇರುವುದು.
ಹಳಿಯಾಳ ತಾಲ್ಲೂಕಿನ ಬಾಣಸಗೇರಿ ಗ್ರಾಮದ ಶಾಲಾ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿ ಇರುವುದು.
ಶಾಲೆಗಳ ದುರಸ್ತಿಗೆ ಅಗತ್ಯ ಅನುದಾನಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅನಿರ್ಬಂಧಿತ ಅನುದಾನ ಬಳಸಿ ಚಿಕ್ಕಪುಟ್ಟ ದುರಸ್ತಿಗೆ ಕ್ರಮ ವಹಿಸಲಾಗುವುದು.
ಲತಾ ನಾಯಕ ಡಿಡಿಪಿಐ ಕಾರವಾರ ಶೈಕ್ಷಣಿಕ ಜಿಲ್ಲೆ
ಹಲವು ವರ್ಷಗಳಿಂದ ದೇವರಕೇರಿ ಶಾಲೆ ಕೊಠಡಿ ದುರಸ್ತಿ ಕಾರ್ಯ ಆಗಿಲ್ಲ. ಮಳೆಗಾಲದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯಿದ್ದು ಈಗಲೇ ದುರಸ್ತಿ ಕಾರ್ಯ ಮಾಡಿದರೆ ಅನುಕೂಲ ಆಗುತ್ತದೆ
ಮಂಜುನಾಥ ಹೆಗಡೆ ಪಾಲಕ
ಎರಡು ಹಳೆಯ ಶಾಲಾ ಕೊಠಡಿಗಳು ಮಳೆಗಾಲದಲ್ಲಿ ಸೋರುವ ಸ್ಥಿತಿಯಲ್ಲಿದ್ದು ಹೊಸ ಚಾವಣಿ ಅಳವಡಿಸಲು ಆಗ್ರಹಿಸಲಾಗಿದ್ದು ಇನ್ನೂ ಇಲಾಖೆ ಕ್ರಮ ಕೈಗೊಂಡಿಲ್ಲ.
ಉಲ್ಲಾಸ ವೇಳಿಪ ಬಾಡಪೋಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ
ಶಾಲೆ ಪುನರಾರಂಭಕ್ಕೆ ಮುನ್ನ ಅಡುಗೆ ಕೋಣೆಯ ಸ್ವಚ್ಛತೆಗೆ ಆದ್ಯತೆ ನೀಡುವ ಜತೆಗೆ ಸುರಕ್ಷತೆಯ ದೃಷ್ಟಿಯಿಂದ ಶಾಲೆಯ ಸುತ್ತಲೂ ಆವರಣಗೋಡೆ ನಿರ್ಮಿಸಬೇಕು
ಬಸವಣ್ಣಪ್ಪ ಉಪ್ಪಿನ ಹಳಿಯಾಳ ಪಾಲಕ
ಅಧಿಕಾರಿಗಳಿಗೇ ಮಾಹಿತಿ ಇಲ್ಲ!
ಜೊಯಿಡಾ ತಾಲ್ಲೂಕಿನ ಶಾಲೆಗಳ ಸ್ಥಿತಿಗತಿ ಅಲ್ಲಿನ ಮೂಲ ಸೌಕರ್ಯಗಳ ಕುರಿತು ಸಮರ್ಪಕವಾದ ಮಾಹಿತಿ ತಾಲ್ಲೂಕಿನ ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಇಲ್ಲ! ಹತ್ತು ಶಾಲೆಗಳ ಕೊಠಡಿಗಳನ್ನು ದುರಸ್ತಿ ಮಾಡುವಂತೆ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವ ಸಲ್ಲಿಸಲಾಗಿದ್ದು ಇವುಗಳಲ್ಲಿ ಎಷ್ಟು ಶಾಲಾ ಕೊಠಡಿಗಳು ದುರಸ್ತಿ ಆಗಿವೆ ಎಂಬುದು ಶಾಲೆ ಪ್ರಾರಂಭವಾದ ಮೇಲೆ ಗೊತ್ತಾಗಲಿದೆ ಎನ್ನುತ್ತಾರೆ ಬಿಇಒ ಕಚೇರಿಯ ಅಧಿಕಾರಿಯೊಬ್ಬರು. ಬಜಾರಕುಣಂಗ ಶಿರೋಳಿ ಬೋರೆಗಾಳಿ ಸಿದೋಲಿ ಗುಂಡಾಳಿ ಕುಂಬಗಾಳಿ ಕರಂಜೆ ಸೋಲಿಯೆ ಶಿವಪುರ ದುದಮಳಾ ಶಾಲಾ ಕೊಠಡಿಗಳಿಗೆ ಚಾವಣಿ ಅಳವಡಿಕೆಗೆ ಅಲ್ಲಿನ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಮನವಿ ಮಾಡಿದ್ದರು. ‘ಶಿಥಿಲಗೊಂಡ ಪ್ರಧಾನಿ ಚಾಪೋಲಿ ಪಣಸೋಲಿ ಬೊಂಡೇಲಿ ದುರ್ಗಿ ಮುಂತಾದ ಕಡೆಗಳಲ್ಲಿ ಕಳೆದ ವರ್ಷ ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದೆ’ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕರು. ಮಾಹಿತಿ ಪಡೆಯಲು ಬಿಇಒ ಬಸಿರ್ ಅಹಮ್ಮದ್ ಶೇಖ್ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಪ್ರತಿಕ್ರಿಯಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT