ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳಿಯಾಳ | ಅರ್ಧಕ್ಕೆ ನಿಂತ ಪ್ರಯೋಗಾಲಯ ಕಟ್ಟಡ ಕಾಮಗಾರಿ

ಖಾಸಗಿ ಕಾಲೇಜುಗಳಂತೆ ಸೌಕರ್ಯ ಒಳಗೊಂಡ ಹಳಿಯಾಳ ಕಾಲೇಜ್
ಸಂತೋಷಕುಮಾರ ಹಬ್ಬು
Published 26 ಮೇ 2024, 4:22 IST
Last Updated 26 ಮೇ 2024, 4:22 IST
ಅಕ್ಷರ ಗಾತ್ರ

ಹಳಿಯಾಳ: ಜಿಲ್ಲೆಯ ಹಳೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಒಂದೆನಿಸಿದ ಇಲ್ಲಿನ ಕಾಲೇಜು ಉತ್ತಮ ಸೌಲಭ್ಯಗಳನ್ನು ಒಳಗೊಂಡಿದೆ. ಎರಡು ವರ್ಷದಿಂದಲೂ ಕಾಲೇಜಿನ ಪ್ರಯೋಗಾಲಯ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ.

ಆರು ಎಕರೆ ವಿಸ್ತಾರ ಪ್ರದೇಶದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 41 ವರ್ಷಗಳ ಇತಿಹಾಸವಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1,300 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವ್ಯಾಸಂಗದಲ್ಲಿ ತೊಡಗಿದ್ದಾರೆ.

ಬಿ.ಎ, ಬಿ.ಕಾಂ, ಬಿ.ಎಸ್‍ಸಿ, ಬಿ.ಬಿ.ಎ ಕೋರ್ಸ್‍ಗಳ ಜತೆಗೆ ಕಳೆದ ವರ್ಷದಿಂದ ಆರಂಭಗೊಂಡ ಬಿ.ಸಿ.ಎ ವಿಭಾಗವೂ ನಡೆಯುತ್ತಿದೆ. ಬಿ.ಸಿ.ಎ ವಿಭಾಗಕ್ಕೆ ಪ್ರವೇಶಾತಿ ಪಡೆಯಲು ಹೆಚ್ಚು ಪೈಪೋಟಿ ಇದೆ.

ಕಾಲೇಜಿನಲ್ಲಿ 24 ತರಗತಿ ಕೊಠಡಿಗಳಿದ್ದು, ವಿಜ್ಞಾನ ಪ್ರಯೋಗಾಲಯಕ್ಕೆ 5 ಕೊಠಡಿಗಳಿವೆ. 1,200 ಲೀ. ಸಂಗ್ರಹಣಾ ಸಾಮರ್ಥ್ಯದ  ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಲಾಗಿದೆ. ಆದರೆ, ಕಾಲೇಜಿನ ಗ್ರಂಥಾಲಯ ಚಿಕ್ಕದಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಏಕಕಾಲಕ್ಕೆ ಕುಳಿತು ಓದಲಾಗದೆ ಸಮಸ್ಯೆ ಉಂಟಾಗುತ್ತಿದೆ.

30 ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ, 350ಕ್ಕಿಂತ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಲು ಅನುಕೂಲವಾಗಬಲ್ಲ ಪುಸ್ತಕಗಳ ಲಭ್ಯತೆ ಇಲ್ಲಿದೆ.

‘ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನಕ್ಕೆ ಆಯ್ಕೆಯಾದ ರಾಜ್ಯ ನೂರು ಪದವಿ ಕಾಲೇಜುಗಳ ಪೈಕಿ ಹಳಿಯಾಳದ ಕಾಲೇಜು ಸೇರಿದೆ. ಪಠ್ಯಕ್ರಮದ ಜತೆಗೆ ಕೌಶಲ ತರಬೇತಿ, ಕ್ರೀಡಾ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ವಿಶೇಷ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಕಾಲೇಜಿನಲ್ಲಿ ಹೆಣ್ಣು ಮಕ್ಕಳೇ ಹೆಚ್ಚಿನ ದಾಖಲಾತಿ ಸಂಖ್ಯೆಯಲ್ಲಿ ಇರುವುದರಿಂದ ನುರಿತ ತಜ್ಞ ವೈದ್ಯರಿಂದ ಆಗಾಗ ಹೆಣ್ಣು ಮಕ್ಕಳಿಗೆ ವಿಶೇಷ ಸಂವಾದ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಲಮಾಣಿ.

‘ಕಾಲೇಜಿಗೆ ಬೇಡಿಕೆ ಇರುವ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೆ ಜಿಮ್, ಶುದ್ಧ ನೀರಿನ ಘಟಕ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಖಾಸಗಿ ಕಾಲೇಜುಗಳಿಗೆ ಸರಿಸಮನಾದ ಸೌಕರ್ಯಗಳನ್ನು ಹಳಿಯಾಳದ ಸರ್ಕಾರಿ ಪ್ರಥಮ ದರ್ಜೆ ಹೊಂದಿದೆ’ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸುಭಾಷ ಕೊರ್ವೇಕರ್ ಹೇಳಿದರು. 

ಹಳಿಯಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು.
ಹಳಿಯಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು.

ವಾಣಿಜ್ಯ ವಿಭಾಗಕ್ಕೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಕಾಲೇಜಿನಲ್ಲಿ ಕ್ಯಾಂಟೀನ್ ಹಾಗೂ ಸುಸಜ್ಜಿತ ಗ್ರಂಥಾಲಯ ಸೌಲಭ್ಯದ ಬೇಡಿಕೆ ಇದ್ದು ಅದನ್ನು ಈಡೇರಿಸಲು ಪ್ರಯತ್ನ ಸಾಗಿದೆ

-ಚಂದ್ರಶೇಖರ್ ಲಮಾಣಿ ಪ್ರಾಚಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಳಿಯಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT