ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸೇವೆ ವೃದ್ಧಿಗೆ ಸಹಭಾಗಿತ್ವ: ಸಚಿವ ಸುಧಾಕರ್

‘ಕ್ರಿಮ್ಸ್’ ಆಸ್ಪತ್ರೆ ಕಟ್ಟಡ ಕಾಮಗಾರಿ, ಇಲಾಖೆ ಪ್ರಗತಿ ಪರಿಶೀಲನೆ
Last Updated 11 ಅಕ್ಟೋಬರ್ 2022, 15:59 IST
ಅಕ್ಷರ ಗಾತ್ರ

ಕಾರವಾರ: ‘ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ಆರೋಗ್ಯ ಸೇವೆಗಳ ಸೌಲಭ್ಯ ವೃದ್ಧಿಗೆ, ವಿವಿಧ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಯೋಜನೆ (ಹಬ್ ಆ್ಯಂಡ್ ಸ್ಪೋಕ್ ಮಾದರಿ) ರೂಪಿಸಲು ಚಿಂತಿಸಲಾಗಿದೆ. ಬೆಂಗಳೂರಿನ ಜಯದೇವ, ಕಿದ್ವಾಯಿ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗಳ ಸಹಭಾಗಿತ್ವ ಬಳಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ನಗರಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ‘ಕ್ರಿಮ್ಸ್’ ಆವರಣದಲ್ಲಿ ₹ 108 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡದ ಕಾಮಗಾರಿ ವೀಕ್ಷಿಸಿದರು. ಬಳಿಕ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕ್ರಿಮ್ಸ್ ಆವರಣದಲ್ಲಿ ಗಂಭೀರ ಆರೈಕೆ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಶಿರಸಿಯಲ್ಲಿ 250 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು. ಎರಡೂ ಕಾಮಗಾರಿಗಳಿಗೆ ಶೀಘ್ರವೇ ಭೂಮಿಪೂಜೆ ನೆರವೇರಿಸಲಾಗುವುದು. ದಾಂಡೇಲಿ ಆಸ್ಪತ್ರೆಯ ರಕ್ತನಿಧಿಗೆ ಸಿಬ್ಬಂದಿ ಮಂಜೂರು ಮಾಡಲಾಗುವುದು’ ಎಂದರು.

‘ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ 10 ಡಯಾಲಿಸಿಸ್ ಯಂತ್ರಗಳನ್ನು ಕೊಡಲಾಗುವುದು. ವೈದ್ಯಕೀಯ ಸೇವೆಗಳು ಬಡ ಜನರಿಗೆ ಹೆಚ್ಚು ತಲುಪಬೇಕು ಎಂಬ ಬದ್ಧತೆಯೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ. ಆದ್ದರಿಂದ ಇಲಾಖೆಯ ಅಧಿಕಾರಿಗಳು ಸಲ್ಲಿಸಿದ ಬೇಡಿಕೆಯ ಪ್ರಕಾರ ಕೆಲವು ಉಪಕರಣಗಳನ್ನು ಸ್ಥಳದಲ್ಲೇ ಮಂಜೂರು ಮಾಡಲಾಗಿದೆ. ಕ್ರಿಮ್ಸ್‌ಗೆ ಎಂ.ಆರ್.ಐ ಸ್ಕ್ಯಾನರ್, ಡಯಾಲಿಸಿಸ್ ಯಂತ್ರಗಳನ್ನು ನೀಡಲು ಒಪ್ಪಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 36ರಷ್ಟು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇ 41ರಷ್ಟು ಹೆರಿಗೆಗಳು ಶಸ್ತ್ರಕ್ರಿಯೆ ಮೂಲಕ ಆಗುತ್ತಿವೆ. ಇದನ್ನು ಕಡಿಮೆ ಮಾಡಿ ಸಹಜ ಹೆರಿಗೆ ಹೆಚ್ಚು ಮಾಡಲು ಸೂಚನೆ ನೀಡಲಾಗಿದೆ. ಆರೋಗ್ಯ ಬಂಧು ಯೋಜನೆಯಡಿ ಜೊಯಿಡಾ ತಾಲ್ಲೂಕಿನ ಕ್ಯಾಸಲ್ ರಾಕ್‌ ಆರೋಗ್ಯ ಕೇಂದ್ರದಲ್ಲಿ ಸೌಲಭ್ಯ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.

ಹುದ್ದೆ ಭರ್ತಿಗೆ ಕ್ರಮ:

‘ಜಿಲ್ಲೆಯಲ್ಲಿ ಸೂಪರ್ ಸ್ಪೆಷಲೈಸೇಷನ್ ಸೌಲಭ್ಯಗಳಿರುವ ಖಾಸಗಿ ಆಸ್ಪತ್ರೆಗಳಿಲ್ಲ. ಸರ್ಕಾರಿ ಆಸ್ಪತ್ರೆಗೆ ಎಂಟು ಹುದ್ದೆಗಳು ಮಂಜೂರಾಗಿದ್ದರೂ ಒಬ್ಬರು ಮಾತ್ರ ಬಂದಿದ್ದಾರೆ. ಉಳಿದಂತೆ, ಕ್ರಿಮ್ಸ್‌ನ 10 ತಜ್ಞ ವೈದ್ಯರು ಮತ್ತು 82 ಮಂದಿ ಎಂ.ಬಿ.ಬಿ.ಎಸ್ ವೈದ್ಯರು ಸೆಪ್ಟೆಂಬರ್‌ನಿಂದಲೇ ಕೆಲಸ ಆರಂಭಿಸಿದ್ದಾರೆ. ಸದ್ಯ ಜಿಲ್ಲೆಯಲ್ಲಿ 27 ವೈದ್ಯರ ಕೊರತೆಯಿದೆ. ಈ ಬಗ್ಗೆ ಹಣಕಾಸು ಇಲಾಖೆ ಜೊತೆ ಮಾತನಾಡಿ ಭರ್ತಿ ಮಾಡಲಾಗುವುದು’ ಎಂದು ತಿಳಿಸಿದರು.

‌ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ‘ಎಂಡೊಸಲ್ಫಾನ್ ಪೀಡಿತರಿಗೆ ಈ ಹಿಂದಿನಂತೆ ಮನೆ ಮನೆಗೆ ವೈದ್ಯಕೀಯ ಸೌಲಭ್ಯ ಒದಗಿಸುವ ಯೋಜನೆಯನ್ನು ಮುಂದುವರಿಸುವುದು ಸೂಕ್ತ. ಹಗಲು ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡುವುದು ಅಸಾಧ್ಯ’ ಎಂದು ಗಮನ ಸೆಳೆದರು.

‘ಡಿಸೆಂಬರ್ ಅಂತ್ಯದೊಳಗೆ ವಿತರಿಸಿ’:

‘ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ ಗುರುತಿನ ಚೀಟಿ ವಿತರಣೆಯು ಒಂದು ತಿಂಗಳಲ್ಲಿ ಕನಿಷ್ಠ 20 ಸಾವಿರ ಆಗಬೇಕು. ಅಲ್ಲದೇ ಪ್ರಧಾನಮಂತ್ರಿ ಮೋದಿ ಅವರ ನಿರೀಕ್ಷೆಯಂತೆ ಡಿಸೆಂಬರ್ ಅಂತ್ಯದ ಒಳಗಾಗಿ ಎಲ್ಲ ನಾಗರಿಕರಿಗೂ ಈ ಸೌಲಭ್ಯ ನೀಡಬೇಕು. ಉತ್ತರ ಕನ್ನಡವು ಪ್ರಥಮ ಸ್ಥಾನ ಪಡೆದರೆ ಮುಖ್ಯಮಂತ್ರಿ ಮೂಲಕ ವಿಶೇಷ ಪುರಸ್ಕಾರ ಕೊಡಿಸಲಾಗುವುದು’ ಎಂದು ಸಚಿವ ಸುಧಾಕರ್ ತಿಳಿಸಿದರು.

‘ರಾಜ್ಯದಲ್ಲಿ 38.75 ಲಕ್ಷ ಜನರಿಗೆ ಈ ಸೇವೆ ಸಿಕ್ಕಿದೆ. ನಾಲ್ಕು ವರ್ಷಗಳಲ್ಲಿ ₹ 5,133 ಕೋಟಿ ಖರ್ಚು ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರಿಗೆ ಇಷ್ಟು ಹೊರೆಯನ್ನು ಕಡಿಮೆ ಮಾಡಿವೆ’ ಎಂದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ‘ಸದ್ಯ ಜಿಲ್ಲೆಯಲ್ಲಿ 2 ಲಕ್ಷ ಕಾರ್ಡ್‌ಗಳ ವಿತರಣೆ ಮಾಡಲಾಗಿದೆ. ಉಳಿದ 11.50 ಲಕ್ಷ ಕಾರ್ಡ್‌ಗಳನ್ನು ಡಿಸೆಂಬರ್ ಅಂತ್ಯದೊಳಗೆ ವಿತರಿಸಲಾಗುವುದು’ ಎಂದರು.

‘ಚಿಕಿತ್ಸೆ ನಿರಾಕರಿಸಿದರೆ ಕ್ರಮ’:

‘ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ ಯೋಜನೆಯಡಿ ನಿಯಮಾನುಸಾರ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ನಿರಾಕರಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಶೇ 25ರಷ್ಟು ಹಾಸಿಗೆಗಳನ್ನು ಈ ಯೋಜನೆಯಡಿ ನೀಡಲೇಬೇಕು. ಅವರು ಚಿಕಿತ್ಸೆ ಕೊಡಬೇಕು, ಇಲ್ಲದಿದ್ದರೆ ಸೇವೆ ನಿಲ್ಲಿಸಬೇಕು’ ಎಂದು ಸಚಿವ ಸುಧಾಕರ್ ತಿಳಿಸಿದರು.

ಈ ಸಮಸ್ಯೆ ಬಗೆಹರಿಸಲು ಅಗತ್ಯವಿದ್ದರೆ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಒಟ್ಟಾಗಿ ಸಭೆ ಸೇರಿ ಚರ್ಚಿಸಿ’ ಎಂದು ನಿರ್ದೇಶನ ನೀಡಿದರು.

ಇದಕ್ಕೂ ಮೊದಲು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಅಲ್ಲಿ ಹಳೆಯ ಸಿ.ಟಿ ಸ್ಕ್ಯಾನ್ ಯಂತ್ರವನ್ನೇ ಬಳಸುತ್ತಿರುವುದಕ್ಕೆ ವೈದ್ಯಾಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದರು. ಅಲ್ಲದೇ ನೂತನ ಆಸ್ಪತ್ರೆ ಕಟ್ಟಡದ ವಿನ್ಯಾಸದ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಶಾಸಕರಾದ ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಇಲಾಖೆಯ ಆಯುಕ್ತ ಡಿ.ರಂದೀಪ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದ್ರಿನಾಥ, ‘ಕ್ರಿಮ್ಸ್’ ನಿರ್ದೇಶಕ ಡಾ.ಗಜಾನನ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ಇದ್ದರು.

ಜಿಲ್ಲೆಯಲ್ಲಿ ಸದ್ಯ ಎರಡು ಕಡೆ ಮಾತ್ರ ಜನೌಷಧ ಕೇಂದ್ರಗಳಿವೆ. ಡಿಸೆಂಬರ್ ಅಂತ್ಯದೊಳಗೆ ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಜನೌಷಧ ಕೇಂದ್ರ ಆರಂಭವಾಗಬೇಕು.

– ಡಾ.ಕೆ.ಸುಧಾಕರ್, ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT