ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಮನಸೆಳೆಯುವ ‘ಜಾಂಬಾ ಜಲಪಾತ’

Published 29 ಜುಲೈ 2023, 14:33 IST
Last Updated 29 ಜುಲೈ 2023, 14:33 IST
ಅಕ್ಷರ ಗಾತ್ರ

ಕಾರವಾರ: ಒಂದೆಡೆ ಹಚ್ಚಹಸಿರಿನಿಂದ ಕಂಗೊಳಿಸುವ ಪರ್ವತದ ಸಾಲು. ಅದರ ಮಧ್ಯೆ ಕಪ್ಪುಬಣ್ಣದ ಬಂಡೆಕಲ್ಲಿನಿಂದ ಧುಮ್ಮಿಕ್ಕುವ ಹಾಲ್ನೊರೆಯ ಝರಿ. ಇದನ್ನು ಕಂಡವರಿಗೆ ಭೂಲೋಕದಲ್ಲಿ ಸ್ವರ್ಗ ಧರೆಗಿಳಿದ ಅನುಭವ.

ತಾಲ್ಲೂಕಿನ ಶಿರವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಜಾಂಬಾ ಅರಣ್ಯ ಪ್ರದೇಶದಲ್ಲಿನ ಜಲಪಾತ ಕಣ್ತುಂಬಿಕೊಳ್ಳಲು ಬರುವವರಿಗೆ ಕಣ್ಣಿಗೆ ಗೋಚರಿಸುವ ದೃಶ್ಯವಿದು. ಕಡಿದಾದ ರಸ್ತೆಯಲ್ಲಿ ವಾಹನದ ಮೂಲಕ ಬಂದು ಅಲ್ಲಿಂದ ಕಾಲ್ನಡಿಗೆಯಲ್ಲಿ ಕಾಡಿನ ದಾರಿಯಲ್ಲಿ ಕ್ರಮಿಸಿ ಬರುವವರ ಆಯಾಸವನ್ನೆಲ್ಲ ಧುಮ್ಮಿಕ್ಕುವ ಜಲಪಾತ ಕಳೆದುಬಿಡುತ್ತದೆ.

ಜಿಲ್ಲಾಕೇಂದ್ರ ಕಾರವಾರ ನಗರದಿಂದ ಕೇವಲ ಆರು ಕಿ.ಮೀ. ದೂರದಲ್ಲಿ ‘ಜಾಂಬಾ ಜಲಪಾತ’ ಇದೆ. ಇದಕ್ಕೆ ಸ್ಥಳೀಯರು ‘ಬಾಹು ಜಲಪಾತ’ ಎಂತಲೂ ಕರೆಯುತ್ತಾರೆ. ಅಷ್ಟೇನೂ ಅಪಾಯವಿಲ್ಲದ ಸ್ಥಳ ಇದು ಎಂಬುದು ಸ್ಥಳೀಯರ ಅಭಿಪ್ರಾಯ. ಅಂದ ಹಾಗೆ ಈ ಜಲಪಾತ ಪ್ರಸಿದ್ಧಿಗೆ ಬಂದಿದ್ದು ತೀರಾ ಈಚಿನ ವರ್ಷದಲ್ಲಿ.

‘ಜಲಪಾತದ ಬಳಿ ಹೆಚ್ಚು ಆಳವಿಲ್ಲ. ಮಳೆಗಾಲದಲ್ಲಿ ಮಾತ್ರ ಧುಮ್ಮಿಕ್ಕುವ ನೀರಿನ ಝರಿ ಸೃಷ್ಟಿಸುವ ಜಲಪಾತ ನೋಡಲು ಬಲುಸೊಗಸು. ಮಕ್ಕಳಿಂದ ವೃದ್ಧರವರೆಗೆ ಈ ಸ್ಥಳದಲ್ಲಿ ಮೋಜು ಮಾಡಲು ಅನುಕೂಲವಿದೆ. ನೀರು ಧುಮ್ಮಿಕ್ಕುವ ಸ್ಥಳದ ಸಮೀಪದಲ್ಲೇ ನಿಂತು ನೋಡಲು ಅವಕಾಶ ಆಗುತ್ತದೆ’ ಎನ್ನುತ್ತಾರೆ ಸ್ಥಳೀಯ ಆರ್ಯನ್ ಗೌಡ.

ಜಾಂಬಾ ಅರಣ್ಯದಲ್ಲಿ ಈ ಹಿಂದೆ ನಡೆಸಲಾಗುತ್ತಿದ್ದ ಕ್ವಾರಿ ಸ್ಥಗಿತಗೊಂಡಿತ್ತು. ಅದೇ ಜಾಗದಲ್ಲಿ ಹರಿಯುವ ಹಳ್ಳ ಸುಂದರ ಜಲಪಾತ ಸೃಷ್ಟಿಸಿದ್ದು ಅದನ್ನು ನೋಡಲು ಹೊರ ಜಿಲ್ಲೆಗಳಿಂದಲೂ ಬರುವವರಿದ್ದಾರೆ
ರವಿ ಗೌಡ, ಸ್ಥಳೀಯ ನಿವಾಸಿ

ಕಾರವಾರ–ಕೈಗಾ ರಸ್ತೆಯಲ್ಲಿ ಸಾಗಿ ಬಂದರೆ ಶಿರವಾಡ ಬಳಿ ಜಾಂಬಾ ರಸ್ತೆಯಲ್ಲಿ ಸಾಗಬೇಕು. ಬಂಗಾರಪ್ಪ ನಗರದಿಂದ ಸುಮಾರು ಒಂದೂವರೆ ಕಿ.ಮೀ. ಒಳಕ್ಕೆ ಸಾಗಿದರೆ ಜಲಪಾತವಿರುವ ತಾಣ ತಲುಪಬಹುದು. ಜಲಪಾತದ ಕೆಳಭಾಗದ ಹಳ್ಳದಲ್ಲಿ ಈಜಲು ಬರುವವರ ಸಂಖ್ಯೆಯೂ ಸಾಕಷ್ಟಿದೆ. ಆದರೆ ನೀರಿನ ಸೆಳೆತಕ್ಕೆ ಸಿಲುಕಿದರೆ ಅಪಾಯವೂ ಕಟ್ಟಿಟ್ಟಬುತ್ತಿ.

‘ಜಾಂಬಾ ಜಲಪಾತ ವೀಕ್ಷಣೆಗೆ ರಜಾ ದಿನ, ವಾರಾಂತ್ಯದಲ್ಲಿ ನೂರಾರು ಜನರು ಬರುತ್ತಾರೆ. ಕುಟುಂಬ ಸಮೇತ ಇಲ್ಲಿಗೆ ಭೇಟಿ ನೀಡಿ ಪಿಕ್‍ನಿಕ್ ಮಾಡುವವರ ಸಂಖ್ಯೆಯೂ ಸಾಕಷ್ಟಿದೆ. ಜಲಪಾತ ವೀಕ್ಷಣೆ ಮಾಡಲಷ್ಟೆ ಬಂದರೆ ಉತ್ತಮ. ಇಲ್ಲಿನ ಹಳ್ಳದಲ್ಲಿ ಹಲವೆಡೆ ಆಳದ ಸ್ಥಳವಿದ್ದು ಅಪಾಯಕಾರಿಯೂ ಹೌದು. ಹೀಗಾಗಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು’ ಎನ್ನುತ್ತಾರೆ ಸ್ಥಳಿಯರಾದ ಗಜಾನನ ಬಾಂದೇಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT