ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಭೂಕುಸಿತ ತಡೆಗೆ ಸಿಗದ ಪರಿಹಾರ

ಮಳೆಗಾಲದಲ್ಲಿ ಹೆದ್ದಾರಿ ಸಂಪರ್ಕ ಕಡಿತಗೊಳ್ಳುವ ಆತಂಕ: ಸ್ಥಳಾಂತರವೇ ಮಾರ್ಗ
Published 3 ಜುಲೈ 2023, 6:14 IST
Last Updated 3 ಜುಲೈ 2023, 6:14 IST
ಅಕ್ಷರ ಗಾತ್ರ

ಕಾರವಾರ: ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶವನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದ ವೇಳೆ ಭೂಕುಸಿತದ ಸಮಸ್ಯೆ ಸಾಮಾನ್ಯವಾಗಿದೆ. ಗಣಿಗಾರಿಕೆ, ಹೆದ್ದಾರಿಗೆ ಗುಡ್ಡಗಳ ನಾಶ ಭೂಕುಸಿತಕ್ಕೆ ಪ್ರಮುಖ ಕಾರಣ ಎಂಬುದು ಅರಿವಿದ್ದರೂ ಅವುಗಳಿಗೆ ಕಡಿವಾಣ ಹಾಕುವ ಕೆಲಸ ನಡೆಯುತ್ತಿಲ್ಲ ಎಂಬುದು ಜನರ ಆರೋಪ.

ಕಾರವಾರದ ಮಾಜಾಳಿಯಿಂದ ಭಟ್ಕಳ ತಾಲ್ಲೂಕಿನ ಶಿರೂರುವರೆಗೆ ಚತುಷ್ಪಥ ಹೆದ್ದಾರಿಗೆ ಭೂಸ್ವಾಧೀನಕ್ಕೆ ದೊಡ್ಡ ಗುಡ್ಡಗಳನ್ನು ಅಗೆಯಲಾಗಿದೆ. ಬಂಡೆಕಲ್ಲುಗಳನ್ನು ತೆರವು ಮಾಡಲಾಗಿದೆ. ಕಾಮಗಾರಿಯ ಪರಿಣಾಮ ಕರಾವಳಿ ಭಾಗದಲ್ಲಿ ಪ್ರತಿ ಬಾರಿ ಮಳೆಗಾಲದಲ್ಲಿ ಭೂಕುಸಿತ ಸಂಭವಿಸುತ್ತಿದೆ.

ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಅಣಶಿಯಲ್ಲಿಯೂ ಭಾರಿ ಪ್ರಮಾದ ಭೂಕುಸಿತ ಎರಡು ವರ್ಷಗಳ ಹಿಂದೆ ಸಂಭವಿಸಿತ್ತು. ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿಯ ಸಂಪರ್ಕ ಕಡಿತಗೊಳ್ಳುವ ಆತಂಕ ಈಗಲೂ ಮುಂದುವರೆದಿದೆ. ಕುಸಿತ ತಡೆಗೆ ಹೆದ್ದಾರಿಯಂಚಿನ ಧರೆಗೆ ಬಲೆಯ ಮಾದರಿಯ ಮೆಶ್ ಅಳವಡಿಕೆ ಮಾಡಲಾಗಿದೆ.

ಮಳೆಗಾಲದ ಆರಂಭದಲ್ಲೇ ತಾಲ್ಲೂಕಿನ ಸಂಕ್ರುಬಾಗ ಬಳಿ ಗುಡ್ಡದಿಂದ ಬಂಡೆಕಲ್ಲು ಕುಸಿದು ಬೀಳುತ್ತಿದೆ. ಹೀಗಾಗಿ ಸುಮಾರು ಅರ್ಧ ಕಿ.ಮೀ ಪ್ರದೇಶದಲ್ಲಿ ಒಂದು ಪಥದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ನಗರದ ಬಳಿ ನಿರ್ಮಿಸಲಾದ ಸುರಂಗ ಮಾರ್ಗದಲ್ಲೂ ಕುಸಿತದ ಅಪಾಯ ಉಂಟಾಗಿದೆ.

ನಿವಾಸಿಗಳ ಸ್ಥಳಾಂತರ

ಭಟ್ಕಳ ತಾಲ್ಲೂಕಿನಲ್ಲಿ ಕಳೆದ ವರ್ಷ ಸುರಿದ ಬಾರಿ ಮಳೆಗೆ ಮುಟ್ಟಳ್ಳಿ ಭಾಗದಲ್ಲಿ ಗುಡ್ಡ ಕುಸಿದು ನಾಲ್ವರು ಮೃತಪಟ್ಟ ಹಿನ್ನೆಲೆಯಲ್ಲಿ ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನ ಗುಡ್ಡದಂಚಿನ ನಿವಾಸಿಗಳು ಜಾಗ್ರತರಾಗಿ ಅಪಾಯದ ಸ್ಥಳದಿಂದ ಸ್ಥಳಾಂತರಗೊಂಡಿದ್ದಾರೆ.

ತಾಲ್ಲೂಕಿನಲ್ಲಿ ನಡೆಯುತ್ತಿರುವ ಕೆಂಪುಕ್ವಾರಿ ಗಣಿಗಾರಿಕೆಯಿಂದ ಮಳೆಗಾಲದಲ್ಲಿ ಅಲ್ಲಲ್ಲಿ ಗುಡ್ಡಕುಸಿತ ಸಾಮಾನ್ಯವಾಗಿದೆ. ಕಳೆದ ಬಾರಿ ಸರ್ಪನಕಟ್ಟೆ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಈ ಬಾರಿ ಕುಸಿತ ಸಂಭವಿಸಬಹುದಾದ ಗುಡ್ಡಗಳನ್ನು ಒಡೆಯಲಾಗಿದೆ. ಮಳೆಗಾಲದಲ್ಲಿ ಶಿರಾಲಿ, ಶಂಶುದ್ದೀನ್ ವೃತ್ತ ಹಾಗೂ ಸರ್ಪನಕಟ್ಟೆ ಭಾಗಗಳಲ್ಲಿ ಹೆದ್ದಾರಿಯಲ್ಲಿ ನೀರು ನಿಲ್ಲುತ್ತಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ.

ಮಣ್ಣು ಗಣಿಗಾರಿಕೆಯಿಂದ ಅಪಾಯ

ಹೊನ್ನಾವರದಲ್ಲಿ ಮಳೆಗಾಲದ ವೇಳೆ ಹೆದ್ದಾರಿ ಹಾಗೂ ಇತರ ರಸ್ತೆಗಳ ಪಕ್ಕ ಗುಡ್ಡ ಕುಸಿತ ಸಾಮಾನ್ಯ ದೃಶ್ಯವಾಗಿದೆ. ಜೆಸಿಬಿ ಬಳಸಿ ಅಕ್ರಮವಾಗಿ ಗುಡ್ಡ ಕೊರೆದು ಮಣ್ಣು ಮಾರಾಟ ಮಾಡುತ್ತಿರುವುದು ಹೆಚ್ಚಿನ ಭೂಕುಸಿತಗಳಿಗೆ ಕಾರಣ ಎನ್ನುವ ದೂರಿದೆ.

ಮುಗ್ವಾ, ಆರೋಳ್ಳಿ ಪಕ್ಕದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಅಗೆಯಲಾಗಿದೆ. ಆರೋಳ್ಳಿಯಲ್ಲಿ ಗುಡ್ಡ ಅಗೆದ ಮಣ್ಣು ಕೆಳ ಭಾಗದ ಹಳ್ಳದ ಪಾತ್ರವನ್ನು ಕಿರಿದಾಗಿಸಿದ್ದು ನೆರೆ, ಭೂಕುಸಿತದ ಭಯ ಸೃಷ್ಟಿಸಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ. ಗುಡ್ಡೆಬಾಳ ತಿರುವು, ಹೊಸಾಡ ಸಮೀಪ ರಸ್ತೆ ಪಕ್ಕದಲ್ಲಿ ಕಳೆದ ಮಳೆಗಾಲದಲ್ಲಿ ಗುಡ್ಡ ಕುಸಿದಿತ್ತು.

‘ಬಾಳೆಮೆಟ್ಟು ಹಾಗೂ ಅಪ್ಸರಕೊಂಡದಲ್ಲಿ ಗುಡ್ಡ ಕುಸಿಯುವ ಅಪಾಯಕಾರಿ ಸ್ಥಳ ಗುರುತಿಸಲಾಗಿದ್ದು ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ತಹಶೀಲ್ದಾರ್ ರವಿರಾಜ ದೀಕ್ಷಿತ್ ತಿಳಿಸಿದ್ದಾರೆ.

ಸಂಚಾರಿ ತಂಡ ನೇಮಕ

ಕೆಲ ವರ್ಷಗಳ ಹಿಂದೆ ಮಳೆಗಾಲದಲ್ಲಿ ಕುಮಟಾ ತಾಲ್ಲೂಕಿನ ತಂಡ್ರಕುಳಿಕುಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ಗುಡ್ಡ ಕುಸಿದು ಜನವಸತಿ ಮೇಲೆ ಬಿದ್ದು ಸಾವು-ನೋವು ಸಂಭವಿಸಿತ್ತು. ಬರ್ಗಿ ಬಳಿ ಹೆದ್ದಾರಿ ಬದಿಯ ಗುಡ್ಡ ಕುಸಿದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಸಮೀಪದ ಅಳ್ವೆಕೋಡಿ ಬಳಿ ಹೆದ್ದಾರಿ ಮೇಲೆ ನೂರು ಮೀಟರ್ ಉದ್ದಕ್ಕೆ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ.

‘ಅಳ್ವೆಕೋಡಿಯಲ್ಲಿ ಪ್ರತಿ ಬಾರಿ ಮಳೆಗಾಲದಲ್ಲಿ ಹೆದ್ದಾರಿ ಜಲಾವೃತವಾಗುತ್ತದೆ. ನೀರು ಹರಿದು ಹೋಗಲು ತೋಡುವ ತತ್ಕಾಲಿಕ ಕಾಲುವೆ ಆಗಾಗ ಮುಚ್ಚಿಹೋಗಿ ಸಮಸ್ಯೆ ಹಾಗೇ ಉಳಿದಿದೆ. ಇದರಿಂದ ಪ್ರತೀ ವರ್ಷ ಅಪಘಾತ ಉಂಟಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಗಜು ನಾಯ್ಕ ಹೇಳಿದರು.

‘ಗುಡ್ಡ ಕುಸಿತವಾದರೆ ಕ್ರಮ ಕೈಕೊಳ್ಳಲು ಅಗತ್ಯ ವಾಹನಗಳನ್ನೊಳಗೊಂಡ ಒಂದು ಸಂಚಾರಿ ತಂಡ ಇಡಲಾಗಿದೆ’ ಎಂದು ಐ.ಆರ್.ಬಿ ಕಂಪನಿ ಹಿರಿಯ ಎಂಜಿನಿಯರ್ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿದರು.

ಮುನ್ನೆಚ್ಚರಿಕೆಗೆ ಸೂಚನೆ

ಶಿರಸಿ ತಾಲ್ಲೂಕಿನ ಮತ್ತಿಘಟ್ಟ, ಜಾಜಿಗುಡ್ಡೆ, ಕುಂಕಿಕೋಟೆ, ಮಂಜುಗುಣಿ ಸಮೀಪದ ಕಲ್ಲಳ್ಳಿ, ಕಕ್ಕಳ್ಳಿ ಭಾಗದಲ್ಲಿ ಕಳೆದ ವರ್ಷಗಳಲ್ಲಿ ಭೂಕುಸಿತ ಸಂಭವಿಸಿತ್ತು.

‘ಜಾಜಿಗುಡ್ಡೆಯಲ್ಲಿ ಈ ಹಿಂದೆಯೇ ಗುಡ್ಡಕ್ಕೆ ಅಡ್ಡ ಕಾಲುವೆ ತೆಗೆದು ನೀರು ಬೇರೆಡೆ ಹರಿಯುವಂತೆ ಮಾಡಲಾಗಿದೆ. ಮತ್ತಿಘಟ್ಟದ ಕೆಳಗಿನಕೇರಿಯಲ್ಲಿ ಭೂಕುಸಿತಕ್ಕೆ ಕಾರಣವಾಗಿದ್ದ ನೀರಿನ ಕಾಲುವೆ ದುರಸ್ತಿ ಮಾಡಲಾಗಿದೆ. ಕುಂಕಿಕೋಟೆ ಅರಣ್ಯದಲ್ಲಿ ಭೂಕುಸಿತವಾದ ಕಡೆ ಡ್ರೋನ್ ಮೂಲಕ ಬೀಜ ಬಿತ್ತಲಾಗಿದೆ. ಸಂಭಾವ್ಯ ಭೂ ಕುಸಿತ  ಪ್ರದೇಶಗಳ ಸ್ಥಳೀಯ ನಿವಾಸಿಗಳಿಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಲಾಗಿದೆ’ ಎಂದು ತಹಶೀಲ್ದಾರ್ ಸುಮಂತ ಹೇಳಿದರು.

ಯಲ್ಲಾಪುರ ತಾಲ್ಲೂಕಿನ ಕಳಚೆ, ತಳಕೆಬೈಲ್, ಕೋಮಾರಕುಂಬ್ರಿ, ಡಬ್ಗುಳಿ, ಕೊಡ್ಲಗದ್ದೆ ಮತ್ತು ಅರಬೈಲ್ ಘಟ್ಟದಲ್ಲಿ ಭೂಕುಸಿತ ಸಂಭವಿಸುತ್ತಿದೆ.

ನಿರಂತರ ಮಳೆಯಿಂದಾಗಿ ಕಾರವಾರ ತಾಲ್ಲೂಕಿನ ಸಂಕ್ರುಬಾಗ ಬಳಿ ಬೃಹತ್ ಗಾತ್ರದ ಬಂಡೆಕಲ್ಲು ರಸ್ತೆಗೆ ಉರುಳಿ ಬಿದ್ದಿರುವುದು
ನಿರಂತರ ಮಳೆಯಿಂದಾಗಿ ಕಾರವಾರ ತಾಲ್ಲೂಕಿನ ಸಂಕ್ರುಬಾಗ ಬಳಿ ಬೃಹತ್ ಗಾತ್ರದ ಬಂಡೆಕಲ್ಲು ರಸ್ತೆಗೆ ಉರುಳಿ ಬಿದ್ದಿರುವುದು

ಭೂಕುಸಿತ: ನಗರಕ್ಕೆ ವಲಸೆ

ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದ ಐದಾರು ಕಡೆ ಮಳೆಗಾಲದಲ್ಲಿ ಗುಡ್ಡ ಕುಸಿತ ಸಂಭವಿಸಿ ರಸ್ತೆಯಲ್ಲಿ ಮಣ್ಣು ತುಂಬಿ ಸಂಚಾರ ಕೆಲಹೊತ್ತು ಸ್ಥಗಿತಗೊಳ್ಳುವುದು ಸಾಮಾನ್ಯ. ಭೂಕುಸಿತವಾದ ರಸ್ತೆಯ ಕೆಳಭಾಗದಲ್ಲಿ ಮತ್ತೆ ಕುಸಿಯದಂತೆ ಕಲ್ಲು, ಟಾರ್‌ಪಾಲಿನ್ ಹಾಕಲಾಗಿದೆ. ಮಲವಳ್ಳಿ ರಸ್ತೆಯ ತಳಕೆಬೈಲ್‌ನಲ್ಲಿ ಭೂಕುಸಿತದ ಪರಿಣಾಮ ರಸ್ತೆಯ ಕೆಲ ಭಾಗ ಕುಸಿದು ಹೋಗಿತ್ತು. ಹುಟ್ಟುರ್ತೆಯಲ್ಲಿ ಭೂ ಕುಸಿತ ಸಂಭವಿಸಿತ್ತು. ಅಲ್ಲಿ ಮತ್ತೆ ಕುಸಿಯದಂತೆ ತಡೆಗೋಡೆ ನಿರ್ಮಿಸಲಾಗಿಲ್ಲ.

ಭೂಕುಸಿತದ ನಂತರ ಕಳಚೆಯ ಬಹಳಷ್ಟು ಜನ ನಗರದತ್ತ ಮುಖ ಮಾಡಿದ್ದಾರೆ. 15–20 ಕುಟುಂಬಗಳು ಈಗಾಗಲೇ ಊರಿನಿಂದ ಸ್ಥಳಾಂತರಗೊಂಡು ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಪಟ್ಟಣದ ವಿಶ್ವದರ್ಶನ ಶಾಲೆಯ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೋರು ಮಳೆಯಲ್ಲಿ ರಸ್ತೆಯಲ್ಲಿ ನೀರು ತುಂಬುತ್ತದೆ ಇಲ್ಲಿ ಸರಾಗವಾಗಿ ನೀರು ಹರಿದು ಹೋಗುವಂತೆ ಸೂಕ್ತ ಗಟಾರದ ವ್ಯವಸ್ಥೆ ಕಲ್ಪಿಸಬೇಕಿದೆ.

ಸಿದ್ದಾಪುರ ತಾಲ್ಲೂಕಿನ ಕಾನಸೂರು, ತ್ಯಾಗಲಿ, ಹೆಗ್ಗನೂರು ಕಟ್ಟೆ, ಮಾಣಿಹೊಳೆ, ಹೇರೂರು, ಶಿರಗೋಡುಬೈಲು ಮುಂತಾದ ಕಡೆ ಗುಡ್ಡ ಕುಸಿಯುವ ಸಾಧ್ಯತೆ ಇದೆ.

ಜೊಯಿಡಾ ತಾಲ್ಲೂಕಿನ ಅಣಶಿ ಬಳಿ ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಭೂಕುಸಿತ ಉಂಟಾಗಿದ್ದನ್ನು ನಿಯಂತ್ರಿಸಲು ಮೆಶ್ ಅಳವಡಿಕೆ ಮಾಡಲಾಗಿದೆ
ಜೊಯಿಡಾ ತಾಲ್ಲೂಕಿನ ಅಣಶಿ ಬಳಿ ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಭೂಕುಸಿತ ಉಂಟಾಗಿದ್ದನ್ನು ನಿಯಂತ್ರಿಸಲು ಮೆಶ್ ಅಳವಡಿಕೆ ಮಾಡಲಾಗಿದೆ

ಗುಡ್ಡ ಕುಸಿತದ ಆತಂಕ

‘ಕುಸಿತ ಸಂಭವಿಸಬಹುದಾದ ಆಯ್ದ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣದ ಅವಶ್ಯಕತೆ ಇದೆ. ಸರ್ಕಾರದಿಂದ ಅನುದಾನ ಬಂದಲ್ಲಿ ಮುಂದಿನ ದಿನಗಳಲ್ಲಿ ತಡೆಗೋಡೆ ನಿರ್ಮಿಸಲಾಗುವುದು’ ಎಂದು ಪಿಡಬ್ಲ್ಯೂಡಿ ಎಇಇ ಶಿವಪ್ರಕಾಶ ಹೇಳಿದರು.

‘ಮಳೆಗಾಲದಲ್ಲಿ ರಸ್ತೆಗೆ ಗುಡ್ಡ ಕುಸಿದರೆ ಕೇವಲ ರಸ್ತೆ ಮೇಲಿನ ಮಣ್ಣನ್ನು ತೆರವುಗೊಳಿಸುತ್ತಾರೆ. ಚರಂಡಿಯನ್ನು ಸಹ ಸರಿಪಡಿಸುವತ್ತ ಗಮನ ಹರಿಸುವುದಿಲ್ಲ’ ಎಂದು ತ್ಯಾಗಲಿ ಗ್ರಾಮಸ್ಥ ರವೀಂದ್ರ ನಾಯ್ಕ ದೂರಿದರು.

ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ಹೆದ್ದಾರಿ ಅಂಚಿನಲ್ಲಿರುವ ಗುಡ್ಡದಲ್ಲಿ ಮಣ್ಣು ಕುಸಿದಿರುವುದು
ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ಹೆದ್ದಾರಿ ಅಂಚಿನಲ್ಲಿರುವ ಗುಡ್ಡದಲ್ಲಿ ಮಣ್ಣು ಕುಸಿದಿರುವುದು
ಹೆದ್ದಾರಿಯಲ್ಲಿ ಮಳೆ ಅವಾಂತರ
ಅಂಕೋಲಾ: ಕಳೆದ ವರ್ಷ ಸುರಿದ ಮಳೆಗೆ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ಭೂಕುಸಿತ ಉಂಟಾಗಿ ಮನೆಗಳಿಗೆ  ನೀರು ತುಂಬಿದ್ದರಿಂದ ಶಿರೂರಿನಲ್ಲಿ 30 ಕುಟುಂಬಗಳು ಗ್ರಾಮ ತೊರೆದಿದ್ದ ಪ್ರಸಂಗ ಜನರ ಕಣ್ಣಮುಂದೆ ಇನ್ನು ಹಾಗೆಯೇ ಇದೆ. ಈ ಬಾರಿ ಮುಂಜಾಗೃತೆಗೆ ಕ್ರಮವಹಿಸಿಲ್ಲದ ದೂರುಗಳು ವ್ಯಕ್ತವಾಗಿದೆ. ಶಿರೂರಿನಿಂದ ಹಾರವಾಡದವರೆಗೂ ಮಳೆಗೆ ಭೂಕುಸಿತ ಉಂಟಾಗಿ  ಅಲ್ಲಲಿ ನೀರು ರಸ್ತೆಯಲ್ಲಿಯೇ ತುಂಬಿ ಕೊಂಡಿರುತ್ತಿದೆ. ‘ಗುಡ್ಡ ಕೊರೆದು ರಸ್ತೆ ನಿರ್ಮಾಣ ಮಾಡಿದ್ದಕ್ಕೆ ಭೂಕುಸಿತದ ಸಮಸ್ಯೆಯ ಜತೆಗೆ ಜಲಾವೃತ ಸಮಸ್ಯೆಯೂ ಉಂಟಾಗುತ್ತಿದೆ’ ಎಂದು ಶಿರೂರು ನಿವಾಸಿ ಪುರುಷೋತ್ತಮ ನಾಯ್ಕ ಹೇಳುತ್ತಾರೆ. ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿ ರಸ್ತೆಯಲ್ಲಿ ನೀರು ನಿಂತು ಪ್ರಯಾಣಿಕರಿಗೆ ಹಾಗು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ತೊಂದರೆ ಆಗದಂತೆ ಸುರಕ್ಷತಾ ಕ್ರಮ ಅನುಸರಿಸಲು ಸಿದ್ಧರಿದ್ದೇವೆ’ ಎಂದು ಐ.ಆರ್.ಬಿ. ಅಧಿಕಾರಿ ಹೇಳಿದರು.
ಮಳೆಗಾಲದಲ್ಲಿ ಭೂಕುಸಿತ ಉಂಟಾದರೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ
- ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವ
ಕನಿಷ್ಠ 20 ಮನೆಗಳ ಮೇಲೆ ಗುಡ್ಡದ ಕಲ್ಲು ಉರುಳಿ ಬೀಳುವ ಸಂಭವ ಇದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ನೋಟೀಸ್ ನೀಡಿದ್ದಾರೆ. ಶಾಶ್ವತ ಪರಿಹಾರ ಮರೀಚಿಕೆಯಾಗಿದೆ
- ಮಂಜುನಾಥ ಗೌಡ ಅಪ್ಸರಕೊಂಡ ನಿವಾಸಿ
ಮಳೆಗಾಲದಲ್ಲಿ ಕಳಚೆಯಲ್ಲಿ ವಾಸಿಸಲು ಭಯವಾಗುತ್ತದೆ. ಹೀಗಾಗಿ ಯಲ್ಲಾಪುರ ಪಟ್ಟಣದಲ್ಲಿ ವಾಸವಿದ್ದೇವೆ. ವಾರಕ್ಕೆ ಒಮ್ಮೆ ಹೋಗಿ ತೋಟ ನೋಡಿಕೊಂಡು ಬರುತ್ತೇನೆ
- ರಾಮಚಂದ್ರ ಹೆಬ್ಬಾರ ಕಳಚೆ ಗ್ರಾಮಸ್ಥ
ಭೂಕುಸಿತ ಸಂಭವಿಸಬಹುದಾದ ಸ್ಥಳಗಳ ಪಟ್ಟಿ ಮಾಡಿಕೊಳ್ಳಲಾಗಿದ್ದು ಅಲ್ಲಿ ಸುರಕ್ಷತೆ ಕ್ರಮಕ್ಕೆ ಆದ್ಯತೆ ನೀಡಲಾಗಿದೆ. ಅಗತ್ಯವಿದ್ದ ಕಡೆಗೆ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ
- ಪ್ರಭುಲಿಂಗ ಕವಳಿಕಟ್ಟಿ ಜಿಲ್ಲಾಧಿಕಾರಿ

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ್, ಮೋಹನ ನಾಯ್ಕ, ಮೋಹನ ದುರ್ಗೇಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT