ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮಿಸರಿ ಹುಳು ರಕ್ಷಣೆಗೆ 90 ಕಿ.ಮೀ. ಪ್ರಯಾಣ

ರಸ್ತೆ ವಿಸ್ತರಣೆಗಾಗಿ ಮರ ಕಡಿತ;ಆವಾಸ ಕಳೆದುಕೊಂಡಿದ್ದ ಹುಳುಗಳು
Last Updated 1 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಶಿರಸಿ: ಕುಮಟಾ–ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕಡಿತಗೊಳ್ಳುತ್ತಿರುವ ಮರಗಳಲ್ಲಿ ಇದ್ದ ಮಿಸರಿ ಹುಳುಗಳು (ಸ್ಟಿಂಗ್‍ಲೆಸ್ ಬೀ) ಆವಾಸ ಕಳೆದುಕೊಳ್ಳುತ್ತಿವೆ. ಇವುಗಳಿಗೆ ಸುರಕ್ಷಿತ ನೆಲೆ ಕಲ್ಪಿಸಲು ಸುಮಾರು 90 ಕಿ.ಮೀ. ಪ್ರಯಾಣ ನಡೆಸಿ ಬಂದ ವ್ಯಕ್ತಿಯೊಬ್ಬರು ಉದ್ದೇಶ ಈಡೇರಿಸಿದರು.

ಸಾಗರ ತಾಲ್ಲೂಕು ಕಾನಲೆ ಗ್ರಾಮದ ಗುರುಪ್ರಸಾದ ಅಳಿವಿನಂಚಿನಲ್ಲಿದ್ದ ಮಿಸರಿಗೆ ನೆಲೆ ಕಲ್ಪಿಸಿದ ಸಂರಕ್ಷಕ. ಇದಕ್ಕಾಗಿ ಅವರು ಕಾನಲೆಯಿಂದ ಶಿರಸಿ ತಾಲ್ಲೂಕಿನ ಬಂಡಲ ಸಮೀಪದವರೆಗೆ ಎರಡು ತಾಸಿನಲ್ಲಿ ಪ್ರಯಾಣ ಬೆಳೆಸಿದ್ದರು. ಅವರು ಜೇನು ಮತ್ತು ಮಿಸರಿ ಹುಳು (ಸಾಗರ ಭಾಗದಲ್ಲಿ ನಿಸರಿ ಎನ್ನುತ್ತಾರೆ) ಸಂರಕ್ಷಣೆಯಲ್ಲಿ ತೊಡಗಿದವರು. ಗಣೇಶ ಹೊಸ್ಮನೆ ಎಂಬುವವರ ಫೇಸ್‍ಬುಕ್‍ ಪೋಸ್ಟ್ ಹುಳುಗಳ ರಕ್ಷಣೆಗೆ ಕಾರಣವಾಯಿತು.

ಹೆದ್ದಾರಿ ವಿಸ್ತರಣೆಗಾಗಿ ಗುರುವಾರ ಹಲವು ಮರಗಳಿಗೆ ಕೊಡಲಿ ಏಟು ಬಿದ್ದಿತ್ತು. ಈ ಪೈಕಿ ನಾಲ್ಕಾರು ಮರಗಳಲ್ಲಿ ವಾಸವಿದ್ದ ಮಿಸರಿ ಹುಳುಗಳು ನೆಲೆ ಕಳೆದುಕೊಂಡಿದ್ದರಿಂದ ಚೆಲ್ಲಾಪಿಲ್ಲಿಯಾಗಿ ಹಾರಲಾರಂಭಿಸಿದ್ದವು. ನೂರಾರು ಮರಿಗಳು ಸತ್ತಿದ್ದವು. ಮೊಟ್ಟೆಗಳು ಇರುವೆ, ಓತಿಕ್ಯಾತದ ಪಾಲಾಗುತ್ತಿದ್ದವು. ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಮಿಸರಿಗಳಿಗೆ ಗುರುಪ್ರಸಾದ ಆಸರೆಯಾದರು.

‘ಫೇಸ್‍ಬುಕ್ ಪೋಸ್ಟ್ ಗಮನಿಸಿದಾಗ ಚಡಪಡಿಕೆ ಉಂಟಾಯಿತು. ಹುಳುಗಳನ್ನು ಸಮೀಪವಿದ್ದವರು ಸಂರಕ್ಷಿಸುವಂತೆ ವಾಟ್ಸ್‌ಆ್ಯಪ್, ಫೇಸ್‍ಬುಕ್ ಮುಖಾಂತರ ಮನವಿ ಮಾಡಿಕೊಂಡೆ. ಸ್ಪಂದನೆ ಸಿಗದಿದ್ದಾಗ ನಾನೇ ಹೊರಟೆ. ಮರಗಳಿದ್ದ ಜಾಗ ಹುಡುಕುತ್ತ ಸಂಜೆ ಹೊತ್ತಿಗೆ ತಲುಪಿದೆ’ ಎಂದು ಗುರುಪ್ರಸಾದ ಹೇಳಿದರು.

‘ಸ್ವಲ್ಪ ತಡವಾಗಿದ್ದರೂ ಹುಳುಗಳು ಸಾಯುತ್ತಿದ್ದವು. ಕತ್ತಲಾದ ಬಳಿಕವೆ ಹುಳುಗಳು ಪೆಟ್ಟಿಗೆ ಸೇರುವ ಕಾರಣ ರಾತ್ರಿಯವರೆಗೂ ಅಲ್ಲಿಯೆ ಕಾದೆ. ಹತ್ತು ಗಂಟೆ ಸುಮಾರಿಗೆ ಸಾಗರಕ್ಕೆ ಮರಳಿದೆ’ ಎಂದು ವಿವರಿಸಿದರು.

‘ಸಂರಕ್ಷಿಸಲಾದ ಹುಳುಗಳಲ್ಲಿ ಬಹುತೇಕ ಬದುಕಬಹುದು. ಆದರೆ ಮೊಟ್ಟೆಗಳು ಮರಿಯಾಗುವ ಸಂಭವ ಕಡಿಮೆ. ಬೇರೊಂದು ಪೆಟ್ಟಿಗೆಯಿಂದ ಮುಷ್ಟಿ ಎಳೆ ಮೊಟ್ಟೆ ನೀಡಿ ಗೂಡು ಕಾಪಾಡಬೇಕಿದೆ’ ಎಂದಿದ್ದಾರೆ.

ಏನಿದು ಮಿಸರಿ ಹುಳು?
ಮಿಸರಿ ಹುಳುಗಳು ಜೇನು ಜಾತಿಗೆ ಸೇರಿದ ಹುಳುಗಳಾಗಿದ್ದು ಮರಗಳ ಪೊಟರೆಗಳಲ್ಲಿ ಗೂಡು ಕಟ್ಟಿ ಜೇನು ಮಾದರಿಯಲ್ಲಿ ಸಿಹಿಯಾದ ತುಪ್ಪ ಸಿದ್ಧಪಡಿಸುತ್ತವೆ. ಜೇನುತುಪ್ಪದಂತೆ ಇರುವ ಇವು ಔಷಧಗಳಿಗೆ ಬಳಕೆಯಾಗುತ್ತವೆ. ರಟ್ಟು ಹಿಂಡಿ ತುಪ್ಪದ ತೆಗೆದ ಬಳಿಕ ಅವುಗಳಿಂದ ಸಿದ್ಧಪಡಿಸುವ ಅಂಟು ಹೆಚ್ಚು ಬಳಕೆಯಾಗುತ್ತದೆ.

‘ಪಶ್ಚಿಮ ಘಟ್ಟದಲ್ಲಿ ವ್ಯಾಪಕವಾಗಿದ್ದ ಮಿಸರಿ ಹುಳು ಈಚಿನ ವರ್ಷದಲ್ಲಿ ಹವಾಮಾನ ವೈಪರಿತ್ಯ, ಪರಿಸರನಾಶದಿಂದ ಇಳಿಮುಖಗೊಳ್ಳುತ್ತಿವೆ’ ಎನ್ನುತ್ತಾರೆ ಪ್ರಾಣಿತಜ್ಞ ಅಮಿತ್ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT