ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಂದೊಳ್ಳಿ:ಸುಧಾರಣೆ ಕಾಣದ ಒಳ ರಸ್ತೆ

ಪ್ರವಾಸಿ ತಾಣಗಳನ್ನೊಳಗೊಂಡ ಪ್ರದೇಶದಲ್ಲಿ ಸೌಕರ್ಯ ಕೊರತೆ
Published 3 ಜುಲೈ 2024, 5:18 IST
Last Updated 3 ಜುಲೈ 2024, 5:18 IST
ಅಕ್ಷರ ಗಾತ್ರ

ಯಲ್ಲಾಪುರ: ಮಾಗೋಡು ಜಲಪಾತ, ಜೇನುಕಲ್ಲು ಗುಡ್ಡ, ಕವಡಿಕೆರೆ ಮುಂತಾದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ನಂದೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ.

ಮಾಗೋಡಿಗೆ ಹೋಗುವ ಮುಖ್ಯರಸ್ತೆ ಸರಿ ಇದೆಯಾದರೂ ಮಾಗೋಡು ಕಾಲೊನಿಯಿಂದ ಜೇನುಕಲ್ಲು ಗುಡ್ಡಕ್ಕೆ ಹೋಗುವ ಅಂದಾಜು 5 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ. ಸೂರ್ಯಾಸ್ತದ ವೀಕ್ಷಣೆಗೆ ಜೇನುಕಲ್ಲು ಗುಡ್ಡಕ್ಕೆ ಹೋಗುವ ಪ್ರವಾಸಿಗರಿಗೆ ರಸ್ತೆ ಸರಿ ಇಲ್ಲದಿರುವುದು ಸಮಸ್ಯೆಯಾಗಿದೆ.

ಸೋದೆ ಅರಸರ ಕಾಲದಲ್ಲಿ ನಿರ್ಮಿಸಲಾದ ಈ ಭಾಗದ ಪ್ರಮುಖ ಶ್ರದ್ಧಾಕೇಂದ್ರ ಅಣಲಗಾರದ ಗೋಪಾಲಕೃಷ್ಣ ದೇವಸ್ಥಾನಕ್ಕೆ ಸಾಗುವ ನಂದೊಳ್ಳಿ-ಅಣಲಗಾರ ರಸ್ತೆ ಅಸಮರ್ಪಕ ಕಾಮಗಾರಿಯಿಂದಾಗಿ ನಿರ್ಮಿಸಿದ ಕೆಲ ತಿಂಗಳಲ್ಲೇ ಕಿತ್ತುಹೋಗಿದೆ.

‘ಹೊಂಡಮಯವಾಗಿರುವ ಈ ಅಣಲಗಾರ ರಸ್ತೆಯನ್ನು ಹೊಸದಾಗಿ ಮಾಡಬೇಕು, ಕಾಮಗಾರಿಯ ಬಿಲ್‌ ಪಾಸ್‌ ಮಾಡಬಾರದು’ ಎಂದು ಗ್ರಾಮಸ್ಥರು ಕಳೆದ ಮಳೆಗಾಲದ ಅವಧಿಯಲ್ಲಿಯೇ ಶಾಸಕರಿಗೆ ಮನವಿ ಮಾಡಿದ್ದರು. ಈವರೆಗೆ ರಸ್ತೆಯ ಸ್ಥಿತಿ ಸುಧಾರಿಸಿಲ್ಲ ಎಂದು ಗ್ರಾಮಸ್ಥರು ಬೇಸರಿಸುತ್ತಿದ್ದಾರೆ.

‘ನಾಳಶೇರು ರಸ್ತೆಯಲ್ಲಿ ಸಂಚಾರ ಕಷ್ಟಸಾಧ್ಯವಾಗಿದೆ. ಹುಲಗಾನ ರಸ್ತೆ 3 ಕಿ.ಮೀ ಹಾಗೂ ಸೂಳಗಾರ ರಸ್ತೆ 2 ಕಿ.ಮೀ ನಿರ್ಮಾಣ ಆಗಬೇಕಿದೆ. ನಾಳಶೇರು ರಸ್ತೆಯಿಂದ ಮಾಗೋಡು ಕಾಲೊನಿ ವರೆಗಿನ 5 ಕಿ.ಮೀ ಕೂಡು ರಸ್ತೆ ಬಹಳ ಜನ ಸಂಚರಿಸುವ ರಸ್ತೆಯಾಗಿದ್ದು, ಇದನ್ನು ಶೀಘ್ರವಾಗಿ ಅಭಿವೃದ್ಧಿಪಡಿಸಬೇಕು. ಮೊಟ್ಟೆಗದ್ದೆ ಕತ್ರಿಯಿಂದ ಮಾಗೋಡು ಜಲಪಾತದವರೆಗಿನ ರಸ್ತೆ ಸರಿಪಡಿಸಬೇಕು’ ಎನ್ನುತ್ತಾರೆ ಮಾಗೋಡು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್‌.

‘ನಂದೊಳ್ಳಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಹಕಾರ ಸಂಘದ ಕಚೇರಿ ಇದೆ. ಆದರೆ ಈಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಕರಡಿಪಾಲ, ದಾಸನಜಡ್ಡಿ, ಕಂಚಿನಮನೆ, ಕುಳಿಮಾಗೋಡು, ಪಣತಗೇರಿ ಶಾಲೆ ಸ್ಥಗಿತಗೊಂಡಿದೆ. ಸೂಳಗಾರದ ಅಂಗನವಾಡಿ ಕಟ್ಟಡ ಶಿಥಿಲವಾಗಿದ್ದು ಶೀಘ್ರ ನವೀಕರಣ ಅಥವಾ ಹೊಸ ಕಟ್ಟಡ ಆಗಬೇಕಿದೆ’ ಎನ್ನುತ್ತಾರೆ ಸ್ಥಳೀಯರಾದ ಮಾಚಣ್ಣ ಬೆಳಸೇರು.

ತಾಲ್ಲೂಕು ಕೇಂದ್ರದಿಂದ 8 ಕಿ.ಮೀ. ದೂರದಲ್ಲಿರುವ ನಂದೊಳ್ಳಿ ಗ್ರಾಮ ಪಂಚಾಯ್ತಿ ಮಾಗೋಡು, ಹೆಗ್ಗುಂಬಳಿ, ಹೊಳೆಮಡು, ದೇವರಗದ್ದೆ, ನಂದೊಳ್ಳಿ,ಬೆಳಖಂಡ, ಅಣಲಗಾರ, ಸುಳಗಾರ,ಬಲೇಕಣಿ, ಹುಲಗಾನ, ಕವಡಿಕೆರೆ, ಹಸ್ತಕಾರಗದ್ದೆ, ಹಿತ್ಲಕಾರಗದ್ದೆ ಎಂಬ 13 ಗ್ರಾಮಗಳನ್ನು ಹೊಂದಿದೆ.

ಭವಾನಿ ಸಿದ್ದಿ
ಭವಾನಿ ಸಿದ್ದಿ

ಅಂಕಿ ಅಂಶ 13 ಗ್ರಾಮಗಳ ಸಂಖ್ಯೆ 2,800 ಜನಸಂಖ್ಯೆ 850 ಕುಟುಂಬಗಳ ಸಂಖ್ಯೆ

- ಕವಡಿಕೆರೆಯಲ್ಲಿ ಬಿರುಕು! ‘60 ಎರಕೆಗಳಷ್ಟು ವಿಸ್ತಾರವಾದ ಕವಡಿಕೆರೆ ಏರಿಯ ಒಡ್ಡಿನಲ್ಲಿ ಕಳೆದ ಎರಡು ವರ್ಷದ ಹಿಂದೆ ಸಣ್ಣ ಪ್ರಮಾಣದ ಬಿರುಕು ಬಿಟ್ಟಿದ್ದು ಒಡೆಯುವ ಆತಂಕ ಸೃಷ್ಟಿಸಿದೆ. ಒಡ್ಡು ಬಿರುಕುಬಿಟ್ಟ ಭಾಗದಲ್ಲಿ ತಡೆಗೋಡೆ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕವಡಿಕೆರೆಯಲ್ಲಿ ಬೋಟಿಂಗ್‌ ಅನುಕೂಲ ಕಲ್ಪಿಸಿ ಪ್ರವಾಸೋದ್ಯಮ ದೃಷ್ಟಿಯಿಂದ ಬೆಳೆಸುವ ಅವಕಾಶ ಇದೆ’ ಎನ್ನುತ್ತಾರೆ ಗ್ರಾಮಸ್ಥ ರಾಮಕೃಷ್ಣ ಕವಡಿಕೆರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT