ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ | ವೈದ್ಯರ ಕೊರತೆಗೆ ಸಿಗದ ಉತ್ತರ

ಕಡ್ಡಾಯ ಸೇವೆ ಅವಧಿ ಮುಗಿಯುತ್ತಿದ್ದಂತೆ ವರ್ಗಾವಣೆ
Published 12 ಜೂನ್ 2024, 5:35 IST
Last Updated 12 ಜೂನ್ 2024, 5:35 IST
ಅಕ್ಷರ ಗಾತ್ರ

ಕಾರವಾರ: ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಜಿಲ್ಲೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಣೆಗೆ ವೈದ್ಯರು ಹಿಂದೇಟು ಹಾಕುತ್ತಿರುವ ದೂರು ಹೆಚ್ಚಿದೆ. ಗ್ರಾಮೀಣ ಭಾಗದಲ್ಲಿ ‘ಕಡ್ಡಾಯ ಸೇವೆ’ ನಿಯಮ ಜಾರಿಗೆ ಬಂದ ಬಳಿಕ ಕಾರ್ಯನಿರ್ವಹಿಸುತ್ತಿದ್ದಾರಾದರೂ ಅವಧಿ ಮುಗಿಯುತ್ತಿದ್ದಂತೆ ವರ್ಗಾವಣೆ ಮಾಡಿಸಿಕೊಂಡು ತೆರಳುತ್ತಿದ್ದಾರೆ.

ಜಿಲ್ಲೆಯ 83 ಪ್ರಾಥಮಿಕ ಆರೋಗ್ಯ ಕೆಂದ್ರಗಳ ಪೈಕಿ ಸದ್ಯ 8 ಕಡೆಗಳಲ್ಲಿ ವೈದ್ಯರ ಲಭ್ಯತೆ ಇಲ್ಲದಂತಾಗಿದೆ. ಅವುಗಳ ಪೈಕಿ ಹೆಚ್ಚು ಗ್ರಾಮ ವ್ಯಾಪ್ತಿಯನ್ನು ಒಳಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ವೈದ್ಯರ ಸೇವೆ ಲಭ್ಯ ಇಲ್ಲದಿರುವುದು ಗ್ರಾಮೀಣ ಭಾಗದ ಜನರನ್ನು ಸಮಸ್ಯೆಗೆ ದೂಡಿದೆ.

ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ, ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ, ಸಿದ್ದಾಪುರ ತಾಲ್ಲೂಕಿನ ದೊಡ್ಮನೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯ ಸೇವೆ ಕಾರಣಕ್ಕೆ ನಿಯುಕ್ತಿಗೊಂಡಿದ್ದ ವೈದ್ಯರು ಅವಧಿ ಮುಗಿದಿದ್ದರಿಂದ ನಿರ್ಗಮಿಸಿದ್ದಾರೆ.

ಹೊನ್ನಾವರ ತಾಲ್ಲೂಕಿನ ಕಡತೋಕಾ, ಶಿರಸಿ ತಾಲ್ಲೂಕಿನ ದಾಸನಕೊಪ್ಪ, ಹಳಿಯಾಳ ತಾಲ್ಲೂಕಿನ ತೇರಗಾಂವ, ಸಿದ್ದಾಪುರ ತಾಲ್ಲೂಕಿನ ಕ್ಯಾದಗಿ, ಜೊಯಿಡಾ ತಾಲ್ಲೂಕಿನ ಕುಂಬಾರವಾಡಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಬರುತ್ತಿಲ್ಲ ಎಂಬ ದೂರುಗಳಿವೆ.

ಶಿರಸಿ, ದಾಂಡೇಲಿ, ಯಲ್ಲಾಪುರ, ಮುಂಡಗೋಡ, ಹಳಿಯಾಳದ ತಾಲ್ಲೂಕು ಆಸ್ಪತ್ರೆಯಲ್ಲಿ ಫಿಸಿಷಿಯನ್, ಯಲ್ಲಾಪುರ, ಮುಂಡಗೋಡ, ಜೊಯಿಡಾ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್. ಅಂಕೋಲಾ, ಜೊಯಿಡಾ, ಪಾಳಾದಲ್ಲಿ ಸ್ತ್ರೀರೋಗ ತಜ್ಞರು, ಹಳಿಯಾಳ, ಜೊಯಿಡಾ, ಹೊನ್ನಾವರ, ದಾಂಡೇಲಿ, ಪಾಳಾ ಮತ್ತು ಶಿರಾಲಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು, ಜೊಯಿಡಾ, ದಾಂಡೇಲಿ, ಯಲ್ಲಾಪುರ, ಮುಂಡಗೋಡ, ಪಾಳಾದಲ್ಲಿ ಅನಸ್ತೇಶಿಯಾ ತಜ್ಞರು, ಹೊನ್ನಾವರ, ಕುಮಟಾ, ಯಲ್ಲಾಪುರ, ಜೊಯಿಡಾ ಆಸ್ಪತ್ರೆಯಲ್ಲಿ ಕಿವಿ, ಗಂಟಲು ಮತ್ತು ಮೂಗು ತಜ್ಞರಿಲ್ಲ.

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಉಳಿದ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ವೈದ್ಯರ ಹುದ್ದೆ ಭರ್ತಿ ಸವಾಲಾಗಿದ.
ಡಾ.ನೀರಜ್ ಬಿ.ವಿ, ಜಿಲ್ಲಾ ಆರೋಗ್ಯಾಧಿಕಾರಿ

ಕುಮಟಾ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಅಂಕೋಲಾ, ಮುಂಡಗೋಡ, ಶಿರಸಿಯಲ್ಲಿ ಕಣ್ಣು ತಜ್ಞರು, ಜೊಯಿಡಾ ಮತ್ತು ಮುಂಡಗೋಡದಲ್ಲಿ ಮೂಳೆ ತಜ್ಞರು ಹಾಗೂ ಅಂಕೋಲಾ, ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ಜೊಯಿಡಾ, ಭಟ್ಕಳದಲ್ಲಿ ಚರ್ಮರೋಗ ತಜ್ಞರ ಲಭ್ಯತೆ ಇಲ್ಲದಂತಾಗಿದೆ.

‘ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುವ ವೇತನ ತಜ್ಞ ವೈದ್ಯರಿಗೆ ಸಾಲದು. ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮುಗಿದ ಬಳಿಕ ಖಾಸಗಿ ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ವೈದ್ಯರು ಕಾರ್ಯನಿರ್ವಹಿಸಿ ಅಲ್ಲಿಯೂ ಹೆಚ್ಚಿನ ವೇತನ ಪಡೆಯುತ್ತಾರೆ. ಇದು ಮಹಾನಗರಗಳಲ್ಲಿ ಸಾಧ್ಯವಾಗಬಲ್ಲದು. ಉತ್ತರ ಕನ್ನಡದಂತಹ ಜಿಲ್ಲೆಯಲ್ಲಿ ಆ ವಾತಾವರಣವಿಲ್ಲ. ಹೀಗಾಗಿ ತಜ್ಞ ವೈದ್ಯರ ಹುದ್ದೆ ಇಲ್ಲಿ ಖಾಲಿಯೇ ಉಳಿದುಕೊಳ್ಳುತ್ತಿದೆ’ ಎಂದು ವೈದ್ಯಾಧಿಕಾರಿಯೊಬ್ಬರು ಹೇಳಿದರು.

ಅಂಕಿ–ಅಂಶ

83 - ಪ್ರಾಥಮಿಕ ಆರೋಗ್ಯ ಕೇಂದ್ರಗಳು

12 -ತಾಲ್ಲೂಕು ಆಸ್ಪತ್ರೆಗಳು

6 - ಸಮುದಾಯ ಆರೋಗ್ಯ ಕೇಂದ್ರ

2 - ತಾಯಿ–ಮಕ್ಕಳ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT