ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ ಬಿಸಿಲಿಗೆ ಕಂಗಾಲಾದ ಜನ

ಸಮುದ್ರದ ಮೇಲ್ಮೈಯಲ್ಲಿ ಹೆಚ್ಚಿದ ಉಷ್ಣಾಂಶ; ಭೂ ಪ್ರದೇಶದಲ್ಲೂ ಪರಿಣಾಮ
Last Updated 25 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಕಾರವಾರ:ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚುತ್ತಿದ್ದು,ಸಾರ್ವಜನಿಕರು ಮಧ್ಯಾಹ್ನದ ವೇಳೆ ಸಂಚರಿಸಲು ಹಿಂದೇಟು ಹಾಕುವಂತಾಗಿದೆ.ಕಾರವಾರದಲ್ಲಿಈ ತಿಂಗಳ 24ರಂದು ಅತ್ಯಧಿಕ 37.8 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಅರಬ್ಬಿ ಸಮುದ್ರದ ಮೇಲ್ಮೈಯ ಉಷ್ಣಾಂಶದಲ್ಲಿ ಏರುಪೇರಾಗಿದ್ದೇ ಇದಕ್ಕೆ ಕಾರಣ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಊಹಿಸಿದ್ದಾರೆ.ಇನ್ನೊಂದೆರಡುದಿನಗಳ ಮಟ್ಟಿಗೆ ಈ ರೀತಿ ಅತಿಯಾದ ಉಷ್ಣಾಂಶ ಇರುವ ಸಾಧ್ಯತೆಯಿದೆ. ಬಳಿಕ ವಾಡಿಕೆಯ ಉಷ್ಣಾಂಶ ಕಂಡುಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳಿಂದ ಸಮು‌ದ್ರದ ನೀರಿನ ಮಟ್ಟ ಸ್ವಲ್ಪಹೆಚ್ಚಿತ್ತು. ಅಲ್ಲದೇ ಭೂಮಿಯಲ್ಲಿ ಒತ್ತಡವೂ ಏರಿಕೆಯಾಗಿತ್ತು. ಇದು ನಗರದ ಹವಾಮಾನ ಇಲಾಖೆಯ ಪರಿಮಾಪಕಗಳಲ್ಲಿ ದಾಖಲಾಗಿದೆ.

ಮೋಡಗಳ ಪಯಣ: ದೇಶದ ಪೂರ್ವಭಾಗದಿಂದ ಬೃಹತ್ ಮೋಡಗಳು ಪಶ್ಚಿಮದತ್ತ ಸಾಗುತ್ತಿವೆ. ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವ ಮಾಹಿತಿಯಿದೆ. ಅದೇರೀತಿ, ಹಿಮಾಲಯ ಪರ್ವತ ಶ್ರೇಣಿಯಲ್ಲೂ ಮೋಡಗಳು ದಟ್ಟವಾಗಿ ಕಾಣಿಸಿಕೊಂಡಿವೆ.ಇವೆಲ್ಲದರ ಕ್ರೋಡೀಕೃತ ಪರಿಣಾಮವಾಗಿ ಉಷ್ಣಾಂಶದಲ್ಲಿ ಹೆಚ್ಚಳವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಮಲೆನಾಡಿನಲ್ಲೂ ಸೆಕೆ: ಸದಾ ತಣ್ಣಗಿರುವ ಮಲೆನಾಡಿನಲ್ಲೂಬಿಸಿಲು ನೆತ್ತಿ ಸುಡುತ್ತಿದೆ.ಶಿರಸಿಯಲ್ಲಿ ಶನಿವಾರ ಗರಿಷ್ಠ 36 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿತ್ತು. ಮಧ್ಯಾಹ್ನ ಒಂದರಿಂದ ಮೂರು ಗಂಟೆಯ ಅವಧಿಯಲ್ಲಿ ಮನೆಗಳಿಂದ ಹೊರಬರಲು ಸಾಧ್ಯವಾಗದಷ್ಟು ಸೆಕೆಯ ಅನುಭವವಾಗಿತ್ತು.

ತಂಪು ಪಾನೀಯಗಳಿಗೆ ಮೊರೆ:ಸೆಕೆ, ಬಾಯಾರಿಕೆಯಿಂದ ಬಳಲಿದ ಸಾರ್ವಜನಿಕರು ರಸ್ತೆಯಂಚಿನ ಎಳನೀರು, ಲಿಂಬು ಸೋಡಾ ಶರಬತ್ತುಗಳ ಅಂಗಡಿಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ನಗರದ ಐಸ್‌ಕ್ರೀಂ ಪಾರ್ಲರ್‌ಗಳಲ್ಲೂಗ್ರಾಹಕರ ಸಂಖ್ಯೆ ಹೆಚ್ಚಿದೆ. ಸದ್ಯ ನಗರದಲ್ಲಿ ಎಳನೀರು ₹ 35ರಂತೆ ಮಾರಾಟವಾಗುತ್ತಿದ್ದು, ಮುಂದಿನ ದಿನಗಳಲ್ಲಿ ದರ ಏರಿಕೆಯಾಗುವ ಸಾಧ್ಯತೆಯಿದೆ.

‘ಶಿವರಾತ್ರಿಗೂ ಮೊದಲೇಇಷ್ಟೊಂದುಬಿಸಿಲಿನಿಂದ ಕಂಗೆಟ್ಟಿದ್ದೇವೆ. ಮನೆಯಿಂದ ಹೊರಬರುವುದೇ ಕಷ್ಟವಾಗುತ್ತಿದೆ. ಆದರೆ,ಚರ್ಮವೆಲ್ಲ ಸುಟ್ಟರೂಹೊಟ್ಟೆಪಾಡಿಗಾಗಿ ಕೆಲಸ ಮಾಡಲೇಬೇಕಾಗಿದೆ. ಮೈಗೆ ಒದ್ದೆಬಟ್ಟೆ ಸುತ್ತಿಕೊಂಡರೆ ಕೆಲವು ನಿಮಿಷಗಳಲ್ಲೇ ಒಣಗುತ್ತಿದೆ. ಉಂಡಿದ್ದು ರುಚಿಸುತ್ತಿಲ್ಲ, ಕೇವಲ ನೀರು ಕುಡಿದ್ರೆ ಸಾಕಾಗಿದೆ’ ಎಂದು ಕೂಲಿಕಾರ್ಮಿಕ ಮಹಾಂತೇಶ ಹೇಳಿದರು.

ಫೆ.20ರಿಂದ ದಾಖಲಾದ ಉಷ್ಣಾಂಶ (ಕಾರವಾರ)
ದಿನಾಂಕ ಕನಿಷ್ಠ ಗರಿಷ್ಠ
20 20.3 32.6
21 21.3 34.2
22 20.7 35.6
23 21.5 37.2
24 20.9 37.8
25 21.7 35.6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT