ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಕ್ರೀಟ್ ಹೊದ್ದು ಮೇಲ್ದರ್ಜೆಗೇರಿದ ರಸ್ತೆ

ಕಾರವಾರ: ನಗರೋತ್ಥಾನ ಯೋಜನೆಯ ಮೂರನೇ ಹಂತದ ಕಾಮಗಾರಿ
Last Updated 16 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಕಾರವಾರ:ಕೆಎಚ್‌ಬಿ ಕಾಲೊನಿಯ ರಸ್ತೆಗಳಲ್ಲಿ ಪ್ರತಿ ಮಳೆಗಾಲದಲ್ಲೂ ಮೊಣಕಾಲುದ್ದ ನೀರು ನಿಂತು ಸಂಚಾರಕ್ಕೆ ಪರದಾಡುತ್ತಿದ್ದುದು ಸಾಮಾನ್ಯವಾಗಿತ್ತು. ಇದೀಗ ನಗರಸಭೆಯು ಅಲ್ಲಿ ನಗರೋತ್ಥಾನ ಯೋಜನೆಯ ಮೂರನೇ ಹಂತದ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ. ಪ್ರಮುಖ ರಸ್ತೆಗಳನ್ನು ಎತ್ತರಿಸಿ ಕಾಂಕ್ರೀಟ್ ಅಳವಡಿಸಲಾಗುತ್ತಿದೆ.

ಹರಿ ಓಂ ವೃತ್ತದ ಸುತ್ತಮುತ್ತ ಕಾಂಕ್ರೀಟ್ ಕಾಮಗಾರಿ ಮುಕ್ತಾಯವಾಗಿದೆ. ರಸ್ತೆಯು ಈಗ ನೆಲಮಟ್ಟದಿಂದ ಸುಮಾರು ಒಂದು ಅಡಿಯಷ್ಟು ಎತ್ತರದಲ್ಲಿದೆ. ಆದ್ದರಿಂದ ಅದರ ಇಕ್ಕೆಲಗಳಲ್ಲಿ ಮಣ್ಣು ಹಾಕಿ ಸಮಗೊಳಿಸುವ ಕೆಲಸ ಮುಂದುವರಿದಿದೆ. ಅದೇರೀತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀಪದಿಂದ ಕೆಡಿಸಿಸಿ ಬ್ಯಾಂಕ್‌ ಮುಂದೆ ಸಾಗಿ ಹಬ್ಬುವಾಡ ಮುಖ್ಯರಸ್ತೆಗೆ ಸಂಪರ್ಕಿಸುವ ಮಾರ್ಗದಲ್ಲಿ ಕಾಂಕ್ರೀಟ್ ಕಾಮಗಾರಿ ಜಾರಿಯಲ್ಲಿದೆ.

ವಾರ್ಡ್ ನಂಬರ್ 19ರಲ್ಲಿರುವ ಗೋಲ್ಡನ್ ಬೇಕರಿಯಿಂದ ಗಾರ್ಡನ್‌ವರೆಗೆ, ಡಿ 10 ಮುಖ್ಯರಸ್ತೆ ಆಲದ ಮರದಿಂದ ಎಲಿಮ್ ಸೆಂಟರ್‌ವರೆಗೆ, ಬಿ 10 ಮುಖ್ಯರಸ್ತೆ ಹೀರಾ ಬಿಲ್ಡಿಂಗ್‌ನಿಂದ ಬಿ 8 ರಸ್ತೆಗೆ ಹಾಗೂ ಸುತ್ತಮುತ್ತಲಿನ ರಸ್ತೆಗಳೂ ಕಾಂಕ್ರೀಟ್ ಹೊದಿಸಿಕೊಂಡು ಮೇಲ್ದರ್ಜೆಗೇರಲು ಸಜ್ಜಾಗಿವೆ.

ನಗರೋತ್ಥಾನ ಯೋಜನೆಯ ಮೂರನೇ ಹಂತದಲ್ಲಿ ವಿವಿಧೆಡೆ ರಸ್ತೆ ಕಾಮಗಾರಿಗಳಿಗಾಗಿ ₹ 16.43 ಕೋಟಿ ನಿಗದಿಯಾಗಿದೆ. ಇದರಲ್ಲಿ ಸಿಮೆಂಟ್ ಚರಂಡಿ ನಿರ್ಮಾಣ, ಕೆಲವು ರಸ್ತೆಗಳ ಮರು ಡಾಂಬರೀಕರಣವೂ ಒಳಗೊಂಡಿದೆ.

‘ಕೊನೆಗೂ ಕಾಂಕ್ರೀಟ್ ರಸ್ತೆಗಳ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ. ಪ್ರತಿ ಮಳೆಗಾಲದಲ್ಲೂ ಇಲ್ಲಿ ವಾಹನ ಸಂಚಾರ ದೊಡ್ಡ ಸವಾಲಾಗಿತ್ತು. ಡಾಂಬರು ರಸ್ತೆಗಳ ಸೂಕ್ತ ನಿರ್ವಹಣೆ ಆಗಿರಲಿಲ್ಲ. ಮಳೆ ನೀರಿನಲ್ಲಿ ಹೊಂಡ ಎಲ್ಲಿದೆ, ಚರಂಡಿ ಎಲ್ಲಿದೆ ಎಂದು ತಿಳಿಯದೇ ಅದೆಷ್ಟೋ ಜನ ಬಿದ್ದು ಪೆಟ್ಟು ಮಾಡಿಕೊಂಡಿರುವ ಉದಾಹರಣೆಗಳೂ ಇವೆ’ ಎನ್ನುತ್ತಾರೆ ಕೆಎಚ್‌ಬಿ ಕಾಲೊನಿ ನಿವಾಸಿ ಸದಾನಂದ.

‘ರಸ್ತೆ ನಿರ್ಮಾಣ ಮಾಡಿದ ಮಾತ್ರಕ್ಕೇ ನಗರಸಭೆಯ ಕೆಲಸ ಮುಗಿದಂತಲ್ಲ. ಈಗ ರಸ್ತೆಯು ಸರಾಸರಿ ಒಂದು ಅಡಿಯಷ್ಟು ಎತ್ತರದಲ್ಲಿದೆ. ಇದರಿಂದ ಎರಡು ದೊಡ್ಡ ವಾಹನಗಳು ಮುಖಾಮುಖಿಯಾದರೆ ಬದಿಗೆ ಸರಿಯಲು ಜಾಗವೇ ಇಲ್ಲದಂತಾಗುತ್ತದೆ. ಆದ್ದರಿಂದ ಇಕ್ಕೆಲಗಳಿಗೆ ಕಲ್ಲು, ಮಣ್ಣು ಹಾಕಿ ಗಟ್ಟಿಗೊಳಿಸಿ ಸಮತಟ್ಟು ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಪ್ರಯೋಜನಕ್ಕಿಂತ ತೊಂದರೆಯೇ ಜಾಸ್ತಿಯಾಗಬಹುದು’ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಕೆಎಚ್‌ಬಿ ಕಾಲೊನಿಯು ನಗರದ ಇತರ ಬಡಾವಣೆಗಳಿಂದ ಹೆಚ್ಚು ತಗ್ಗಿನಲ್ಲಿದೆ. ಹೀಗಾಗಿ ಮಳೆ ನೀರು ಇಲ್ಲಿಂದ ಸುಲಭವಾಗಿ ಹರಿದು ಹೊರಹೋಗುವುದಿಲ್ಲ. ಕಾಂಕ್ರೀಟ್ ರಸ್ತೆಗಳ ಸುತ್ತಮುತ್ತ ಇರುವ ಮನೆಗಳಿಗೆ ಮಳೆ ನೀರು ಹೋಗದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT