ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಕುರಿಗಳ ಕಳೇಬರ

ಸಾರ್ವಜನಿಕರು, ಕಾಡುಪ್ರಾಣಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮದ ಆತಂಕ
Last Updated 7 ಫೆಬ್ರುವರಿ 2021, 1:14 IST
ಅಕ್ಷರ ಗಾತ್ರ

ಕಾರವಾರ: ಯಲ್ಲಾಪುರ ತಾಲ್ಲೂಕಿನ ಅರಬೈಲ್ ಘಟ್ಟದಲ್ಲಿ ಕೆಲವು ದಿನಗಳಿಂದ ಸತ್ತ ಕುರಿಗಳನ್ನು ಬೇಕಾಬಿಟ್ಟಿಯಾಗಿ ಎಸೆಯಲಾಗುತ್ತಿದೆ. ಇದು ಕಾಡುಪ್ರಾಣಿಗಳನ್ನು ಹಾಗೂ ಸಾರ್ವಜನಿಕರನ್ನು ಅಪಾಯಕ್ಕೆ ದೂಡಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಮುಂತಾದ ಊರುಗಳಿಂದ ಮಂಗಳೂರು ಸೇರಿದಂತೆ ಕರಾವಳಿಯ ವಿವಿಧ ಭಾಗಗಳಿಗೆ ಲಾರಿಗಳಲ್ಲಿ ಕುರಿಗಳನ್ನು ಸಾಗಿಸಲಾಗುತ್ತದೆ. ಅವುಗಳ ಸಾಗಣೆಗೆ ಸುರಕ್ಷಿತ ರೀತಿಯಲ್ಲಿ ವ್ಯವಸ್ಥೆ ಮಾಡದೇ ಒತ್ತೊತ್ತಾಗಿ ತುಂಬಲಾಗುತ್ತದೆ. ನೂರಾರು ಕುರಿಗಳ ಪೈಕಿ ಒಂದೆರಡು ಕುರಿಗಳು ದಾರಿ ಮಧ್ಯೆ ಸಾಯುತ್ತವೆ. ಅಂಥ ಕುರಿಗಳನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಲಾಗುತ್ತಿದೆ.

‘ಕುರಿಗಳನ್ನು ಸಾಗಿಸುವವರು ಅವುಗಳ ಕಳೇಬರಗಳನ್ನು ಸೂಕ್ತ ವಿಧಾನದಲ್ಲಿ ವಿಲೇವಾರಿ ಮಾಡುವುದಿಲ್ಲ. ಅರಬೈಲ್ ಘಟ್ಟ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 63ರ ಅಂಚಿನಲ್ಲೇ ಎಸೆದು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಘಟ್ಟದ ದೊಡ್ಡ ತಿರುವಿನ ಬದಿಯಲ್ಲಿ ಎರಡು ದಿನಗಳಿಂದ ಕುರಿಯೊಂದರ ಕಳೇಬರವಿದೆ. ಈ ಹಿಂದೆಯೂ ಹಲವು ಬಾರಿ ಇದೇ ರೀತಿ ಮಾಡಿದ್ದಾರೆ. ಇದು ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ’ ಎನ್ನುತ್ತಾರೆ ಕಾರು ಚಾಲಕ ಮಹೇಶ.

‘ಅರಬೈಲ್ ಘಟ್ಟವು ಚಿರತೆಗಳಂತಹ ಕಾಡುಪ್ರಾಣಿಗಳಿರುವ ಪ್ರದೇಶ. ಇಲ್ಲಿ ಎಸೆದ ಕುರಿಗಳತ್ತ ಅವು ಆಕರ್ಷಿತವಾಗಿ ಹೆದ್ದಾರಿಗೆ ಬರುವ ಸಾಧ್ಯತೆಯಿದೆ. ಅವುಗಳನ್ನು ಕಂಡು ವಾಹನ ಸವಾರರು ಗಲಿಬಿಲಿಯಾದರೆ ಅಪಘಾತಗಳಾಗಬಹುದು. ಘಟ್ಟದಲ್ಲಿ ಈಗಾಗಲೇ ಸಾಕಷ್ಟು ಅಪಘಾತಗಳಾಗುತ್ತಿವೆ. ಅವುಗಳ ನಡುವೆ ಈ ರೀತಿ ಕುರಿಗಳನ್ನು ಎಸೆಯುವುದು ಇನ್ನಷ್ಟು ಅಪಾಯಕಾರಿ ಆಗಬಹುದು’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಈ ಹಿಂದೆ ಕುರಿ ಮತ್ತು ಆಡುಗಳ ಮೃತದೇಹಗಳನ್ನು ಘಟ್ಟದ ಮೇಲಿನಿಂದ ಕಣಿವೆಯ ಭಾಗಕ್ಕೆ ಎಸೆದಿರುವುದನ್ನೂ ಗಮನಿಸಿದ್ದೇನೆ. ಬೆಳಗಿನ ಜಾವ ಅಥವಾ ರಾತ್ರಿ ವಾಹನ ಸಂಚಾರ ಕಡಿಮೆ ಇರುವಾಗ ಕುರಿ ಸಾಗಿಸುವವರು ಈ ರೀತಿ ಮಾಡಿರಬಹುದು. ಅವು ಕೆಲವು ದಿನಗಳಲ್ಲಿ ಕೊಳೆತ ಬಳಿಕ ಸುತ್ತಮುತ್ತ ದುರ್ನಾತ ಹರಡುತ್ತದೆ. ಇದು ಪ್ರಯಾಣಿಕರಿಗೂ ಅಸಹನೀಯವಾಗಿರುತ್ತದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ವನ್ಯಜೀವಿಗೂ ಒಳ್ಳೆಯದಲ್ಲ:

‘ಸತ್ತ ಕುರಿಗಳನ್ನು ಕಂಡಕಂಡಲ್ಲಿ ಎಸೆಯುವುದು ಮಾನವ ಮತ್ತು ವನ್ಯಜೀವಿಗಳ ಆರೋಗ್ಯಕ್ಕೂ ಅಪಾಯಕಾರಿ ಆಗಬಹುದು. ಒಂದು ವೇಳೆ, ಸತ್ತ ಕುರಿಗೆ ಅಥವಾ ಆಡಿಗೆ ಯಾವುದಾದರೂ ಸಾಂಕ್ರಾಮಿಕ ಕಾಯಿಲೆಯಿದ್ದರೆ ಅದು ಕಾಡುಪ್ರಾಣಿಗಳಿಗೂ ಹರಡುವ ಸಾಧ್ಯತೆಯಿರುತ್ತದೆ’ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

‘ಮಂಗನಕಾಯಿಲೆಯಿಂದ ಕಂಗೆಟ್ಟಿರುವ ಮಲೆನಾಡಿನಲ್ಲಿ ಹೊಸ ರೀತಿಯ ಆರೋಗ್ಯ ಸಮಸ್ಯೆ ಕಾಡಬಹುದು. ಹಾಗಾಗಿ ಪೊಲೀಸರು ಮತ್ತು ಅರಣ್ಯ ಇಲಾಖೆಯವರು ಇದನ್ನು ತಡೆಯಲು ಗಂಭೀರವಾಗಿ ಪ್ರಯತ್ನಿಸಬೇಕು. ಈ ರೀತಿ ಕಂಡಕಂಡಲ್ಲಿ ಎಸೆಯುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT