ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಅಡಿಕೆ ಬೆಳೆಗಾರರಿಗೆ ಬಿಡುಗಡೆಯಾಗದ ಸಹಾಯಧನ

ಎಲೆಚುಕ್ಕೆ ರೋಗ ಹರಡುವಿಕೆಯಿಂದ ಅಪಾರ ಹಾನಿ
Published 24 ಜೂನ್ 2024, 4:15 IST
Last Updated 24 ಜೂನ್ 2024, 4:15 IST
ಅಕ್ಷರ ಗಾತ್ರ

ಶಿರಸಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಡಿಕೆಗೆ ಹರಡಿರುವ ಎಲೆಚುಕ್ಕಿ ರೋಗದಿಂದ ಕಂಗೆಟ್ಟ ಬೆಳೆಗಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಇನ್ನೂ ಬಿಡುಗಡೆಯಾಗಿಲ್ಲ.

ರಾಜ್ಯದ ಕರಾವಳಿ ಹಾಗೂ ಮಲೆನಾಡಿನ 7 ಜಿಲ್ಲೆಗಳಲ್ಲಿ 2023-24ನೇ ಸಾಲಿನಲ್ಲಿ  53,977.04 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಎಲೆಚುಕ್ಕಿ ರೋಗದ ಬಾಧೆಯಿಂದ ಹಾನಿಯಾಗಿತ್ತು. ರೋಗದ ತೀವ್ರತೆ ಅರಿತ ಬೆಳೆಗಾರರು ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದರು. ಇದರ ಜತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಎಲೆಚುಕ್ಕಿ ರೋಗ ಬಾಧಿತ ಪ್ರದೇಶಗಳಿಗೂ ಭೇಟಿ ನೀಡಿ ಅಧ್ಯಯನ ನಡೆಸಿ, ಸಮಗ್ರ ವರದಿ ಸಿದ್ದಪಡಿಸಿ, ಕಳೆದ ಸೆಪ್ಟೆಂಬರ್‌ನಲ್ಲಿ ಕೇಂದ್ರ ಕೃಷಿ ಸಚಿವಾಲಯ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

‘ಕಳೆದ ವರ್ಷ ಉಲ್ಬಣಗೊಂಡ ರೋಗದಿಂದ ಅಡಿಕೆ ಕಾಯಿಗಳ ಮೇಲೆ ಚುಕ್ಕೆಗಳು ಮೂಡಿ, ಬಾಧಿತ ಕಾಯಿಗಳು ಬಲಿಯುವ ಮೊದಲೇ ಹಳದಿಯಾಗಿ ಬಿದ್ದಿದ್ದವು. ಹಲವು ಭಾಗದ ತೋಟಗಳಲ್ಲಿ ಶೇ 50ರಷ್ಟು ಅಡಿಕೆ ನೆಲಕ್ಕುದುರಿದ್ದವು. ರೋಗ ಬಾಧಿತ ಮರಗಳ ಪತ್ರ ಹರಿತ್ತು ಕಡಿಮೆಯಾಗಿ ಈ ವರ್ಷ ಉತ್ಪಾದನೆ ಕುಂಠಿತವಾಗಿದೆ. ಮರದ ಬೆಳವಣಿಗೆ ಮತ್ತು ಇಳುವರಿ ಮೇಲೆ ದೀರ್ಘ ಕಾಲದ ದುಷ್ಪರಿಣಾಮ ಬೀರುತ್ತದೆ. ಅದಕ್ಕೆ ಸಹಾಯಧನ ಪಡೆದು ತೋಟ ಮರು ನಿರ್ಮಿಸುವ ಉದ್ದೇಶವಿದೆ’ ಎಂದು ಅಡಿಗೆ ಬೆಳೆಗಾರ ಮಹಾಬಲೇಶ್ವರ ಹೆಗಡೆ ಯಡಳ್ಳಿ ತಿಳಿಸಿದರು.

ಸಲ್ಲಿಕೆಯಾದ ಪ್ರಸ್ತಾವದಲ್ಲಿ ಚಿಕ್ಕಮಗಳೂರು 28,788 ಹೆಕ್ಟೆರ್, ಶಿವಮೊಗ್ಗ 11,950 ಹೆ, ಉತ್ತರ ಕನ್ನಡ 8,604 ಹೆ, ಕೊಡಗು 529 ಹೆ, ಉಡುಪಿ 123 ಹೆ, ಪ್ರದೇಶದಲ್ಲಿ ಹೆಚ್ಚಿನ ಹಾನಿ ಸಂಭವಿಸಿರುವ ಬಗ್ಗೆ ಉಲ್ಲೇಖಿಸಲಾಗಿತ್ತು. ಜತೆಗೆ, ಅಡಿಕೆ ಮರಗಳಿಗೆ ರಾಸಾಯನಿಕ ಸಿಂಪಡಣೆ, ರೋಗ ನಿಯಂತ್ರಣ ಕುರಿತು ಪ್ರಚಾರ ಕಾರ್ಯಾಗಾರ, ಮರಗಳಿಗೆ ಪೋಷಕಾಂಶ ನಿರ್ವಹಣೆ ಹಾಗೂ ಮತ್ತಿತರ ಉದ್ದೇಶಗಳಿಗೆ ಹಣ ಒದಗಿಸಲು ಕೋರಲಾಗಿತ್ತು. ಪ್ರಸ್ತಾವ ಕೇಂದ್ರ ಕೃಷಿ ಸಚಿವಾಲಯದಲ್ಲಿ ಎರಡು ವಾರದಲ್ಲಿ ಅನುಮೋದನೆ ಸಿಗಲಿದೆ. ಈಗಾಗಲೇ ರೈತರಿಗೆ ಈ ಕುರಿತು ಮೌಖಿಕವಾಗಿ ಮಾಹಿತಿ ನೀಡಲಾಗಿದೆ’ ಎಂದು ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ವಿಶೇಷ ಸಹಾಯಧನ ಬಿಡುಗಡೆಯಾಗಲಿದೆ. ರೋಗಪೀಡಿತ ಎಲೆ ಕತ್ತರಿಸಿ ಸುಡುವುದಕ್ಕೆ ಪ್ರತಿ ಹೆಕ್ಟೇರ್ ಗೆ ₹8 ಸಾವಿರ, ರೋಗನಾಶಕ ಖರೀದಿಗೆ ₹7 ಸಾವಿರ, ಔಷಧಿ ಸಿಂಪಡಣೆಗೆ ₹9,300, ಗೊಬ್ಬರ ಖರೀದಿಗೆ ₹17 ಸಾವಿರ ಒಟ್ಟೂ ₹41,300 ಸಹಾಯಧನ ರೂಪದಲ್ಲಿ ಬೆಳೆಗಾರರಿಗೆ ಸಿಗಲಿದೆ. ರಾಜ್ಯಕ್ಕೆ ಒಟ್ಟಾರೆ ₹225 ಕೋಟಿ ವಿಶೇಷ ಪ್ಯಾಕೇಜ್ ಸಿಗಲಿದೆ. ಇದೇ ಕಾರಣಕ್ಕೆ ಪ್ರಸಕ್ತ ಸಾಲಿನಲ್ಲಿ ತೋಟಗಾರಿಕಾ ಇಲಾಖೆಯಿಂದ ರೈತರಿಗೆ ತುತ್ತ, ಸುಣ್ಣಕ್ಕೆ ನೀಡುತ್ತಿದ್ದ ಸಹಾಯಧನವನ್ನು ಕೂಡ ಸ್ಥಗಿತ ಮಾಡಲಾಗಿದೆ' ಎಂದರು. 

ಸಹಾಯಧನ ಪ್ಯಾಕೇಜ್ ಬಿಡುಗಡೆ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಹಾಯಧನವು ಎಲೆಚುಕ್ಕೆ ರೋಗದ ಸಾಮೂಹಿಕ ನಿಯಂತ್ರಣಕ್ಕೆ ಸಹಾಯವಾಗಲಿದೆ.
ಸತೀಶ ಹೆಗಡೆ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT