ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಗುತ್ತಿಗೆದಾರರು ಅತಂತ್ರ: ಯಂತ್ರ ಮಾರುವ ಸ್ಥಿತಿ

Published 12 ಅಕ್ಟೋಬರ್ 2023, 5:11 IST
Last Updated 12 ಅಕ್ಟೋಬರ್ 2023, 5:11 IST
ಅಕ್ಷರ ಗಾತ್ರ

ಶಿರಸಿ: ಸರ್ಕಾರದ ವಿವಿಧ ಕಾಮಗಾರಿ ಕೈಗೊಂಡ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಗುತ್ತಿಗೆದಾರರಿಗೆ ಕೆಲಸ ಪೂರ್ಣಗೊಂಡಿದ್ದರೂ ಬಿಲ್ ಪಾವತಿಯಾಗದೇ ಕಂಗಾಲಾಗಿದ್ದಾರೆ. ಕೆಲ ಗುತ್ತಿಗೆದಾರರು ಜೀವನ ನಿರ್ವಹಣೆಗೆ ತಮ್ಮ ಬಳಿಯ ಜೆಸಿಬಿ, ವಾಹನ, ಲಾರಿಗಳನ್ನು ಮಾರುವ ಸ್ಥಿತಿಗೆ ಬಂದಿದ್ದಾಗಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಉತ್ತರ ಕನ್ನಡದ ಒಟ್ಟು 12 ತಾಲ್ಲೂಕುಗಳಲ್ಲಿ 500ಕ್ಕೂ ಹೆಚ್ಚು ಗುತ್ತಿಗೆದಾರರಿಗೆ ಸುಮಾರು ₹400 ಕೋಟಿ ಬಾಕಿ ಹಣ ಸರ್ಕಾರದಿಂದ ಬರಬೇಕಾಗಿದೆ.

ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ಕಾರವಾರ ವಿಭಾಗದಲ್ಲಿ ಒಟ್ಟೂ ₹57.58 ಕೋಟಿ ಮತ್ತು ಶಿರಸಿ ವಿಭಾಗದಲ್ಲಿ ₹105.03 ಕೋಟಿ ಮತ್ತು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿ ಇತರ ಇಲಾಖೆಗಳ ಸುಮಾರು ₹250 ಕೋಟಿಗಳಿಗಿಂತಲೂ ಹೆಚ್ಚು ಹಣ ಗುತ್ತಿಗೆದಾರರಿಗೆ ಕಾಮಗಾರಿಗಳಿಗೆ ಸಂಬಂಧಿಸಿ ಪಾವತಿ ಬಾಕಿಯಿದೆ. 

ಸಾಲ ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಬಿಲ್ ಪಾವತಿಯಾಗದ ಕಾರಣ ಸಾಲದ ಬಡ್ಡಿ ತೀರಿಸಲು ಕಷ್ಟವಾಗಿದೆ. ಬೇರೆ ಕಾಮಗಾರಿ ಮಾಡಲು ಹಣದ ಕೊರತೆಯಿದೆ.
ಜಿ.ಎಸ್.ಹಿರೇಮಠ, ಸಿವಿಲ್ ಗುತ್ತಿಗೆದಾರರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ

‘ಸಾಲ ಮಾಡಿ ಕಾಮಗಾರಿ ಮಾಡಿದ್ದು, ಬಿಲ್ ಪಾವತಿಯಾಗದೆ ವರ್ಷ ಕಳೆದಿದೆ. ಈಗ ಬಡ್ಡಿ ಕಟ್ಟಲು ನಮ್ಮ ಬಳಿ ಇರುವ ಜೆಸಿಬಿ, ಲಾರಿ, ಯಂತ್ರೋಪಕರಣಗಳನ್ನು ಮಾರುವ ಸ್ಥಿತಿ ಬಂದೊದಗಿದೆ. ಜೀವನ ನಿರ್ವಹಣೆ ತೀರಾ ಕಷ್ಟವಾಗಿದೆ' ಎನ್ನುತ್ತಾರೆ ಗುತ್ತಿಗೆದಾರರು. 

‘ಜಿಲ್ಲೆಯಲ್ಲಿ ಸಣ್ಣ ಗುತ್ತಿಗೆದಾರರು ಹೆಚ್ಚಿದ್ದಾರೆ. ಸರ್ಕಾರವು ಕಾಮಗಾರಿ ಬಿಲ್ಲನ್ನು ನೀಡುತ್ತದೆ ಎಂಬ ವಿಶ್ವಾಸದಿಂದ ಸಾಲ ಮಾಡಿ ಕಾಮಗಾರಿಗಳನ್ನು ಪೂರ್ತಿಗೊಳಿಸಿದ್ದೇವೆ. ಆದರೆ ಬಿಲ್ ಪಾವತಿಯಾಗದಂತೆ ತಡೆಹಿಡಿಯಲಾಗಿದೆ. ಸರ್ಕಾರ ಗುತ್ತಿಗೆದಾರರ ಜೀವನದ ಜತೆ ಚೆಲ್ಲಾಟವಾಡುತ್ತಿದೆ’ ಎಂಬುದು ಹಲವು ಗುತ್ತಿಗೆದಾರರ ದೂರಾಗಿದೆ.  

ಈಗಾಗಲೇ ಗುತ್ತಿಗೆದಾರರು ಮನವಿ ಸಲ್ಲಿಸಿದ್ದಾರೆ. ಆದಷ್ಟು ಬೇಗ ಬಿಲ್ ಪಾವತಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕಿದೆ.
ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವ 

'ಈಗಾಗಲೇ ಗುತ್ತಿಗೆದಾರರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಸಾಲ ಪಡೆದ ಬ್ಯಾಂಕ್'ಗಳಲ್ಲಿ ಕಟಬಾಕಿದಾರರಾಗಿದ್ದಾರೆ. ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲು ಬಂಡವಾಳವಿಲ್ಲ. ಬ್ಯಾಂಕ್'ಗಳಲ್ಲಿ ಸಾಲ ಸಿಗುತ್ತಿಲ್ಲ. ಈ ಪರಿಸ್ಥಿತಿ ಇನ್ನೂ ಮುಂದುವರಿದಲ್ಲಿ ಗುತ್ತಿಗೆದಾರರು ಮತ್ತು ಅವಲಂಬಿತರು ಆತ್ಮಹತ್ಯೆಗೆ ಶರಣಾಗುವ ಪ್ರಮೇಯ ಒದಗಬಹುದು' ಎಂದು ಗುತ್ತಿಗೆದಾರರೊಬ್ಬರು ಅಸಹಾಯಕರಾಗಿ ಹೇಳಿದರು. 

ಸಾಲ ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಬಿಲ್ ಪಾವತಿಯಾಗದ ಕಾರಣ ಸಾಲದ ಬಡ್ಡಿ ತೀರಿಸಲು ಕಷ್ಟವಾಗಿದೆ. ಬೇರೆ ಕಾಮಗಾರಿ ಮಾಡಲು ಹಣದ ಕೊರತೆಯಿದೆ. - ಜಿ.ಎಸ್.ಹಿರೇಮಠ ಸಿವಿಲ್ ಗುತ್ತಿಗೆದಾರರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT