ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದಲ್ಲಿ ಬೆಳೆಗಾರರ ಕೈಹಿಡಿದ ‘ಶುಂಠಿ’

ಹಂಗಾಮಿನ ಆರಂಭದಲ್ಲೇ ಉತ್ತಮ ಧಾರಣೆ, ನಿರೀಕ್ಷೆಗೆ ತಕ್ಕಂತೆ ಫಸಲು
Published 18 ಜನವರಿ 2024, 21:18 IST
Last Updated 18 ಜನವರಿ 2024, 21:18 IST
ಅಕ್ಷರ ಗಾತ್ರ

ಶಿರಸಿ: ಶುಂಠಿಗೆ ಪ್ರಸಕ್ತ ವರ್ಷ ಹಂಗಾಮಿನ ಆರಂಭದಲ್ಲೇ ಉತ್ತಮ ಧಾರಣೆ ಸಿಗುತ್ತಿದೆ. ಖರೀದಿದಾರರು ಸ್ವತಃ ಶುಂಠಿ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಿದ್ದು, ಬರ ಸಂದರ್ಭದಲ್ಲೂ ಬೆಳೆಗಾರರಲ್ಲಿ ಹರ್ಷ ಮೂಡಿದೆ.

ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ, ಮುಂಡಗೋಡ, ಯಲ್ಲಾಪುರ, ಹಳಿಯಾಳ ಭಾಗದಲ್ಲಿ ಶುಂಠಿ ಬೆಳೆಯಲಾಗಿದೆ. ಬಹುತೇಕ ಬೆಳೆಗಾರರು ಹಿಮಾಚಲ ತಳಿಯ ಶುಂಠಿ ನಾಟಿ ಮಾಡಿದ್ದರು.

‘ಕೊಳೆರೋಗ ಬಾಧಿಸಿದ ವರ್ಷಗಳಲ್ಲಿ ಒಂದು ಎಕರೆಗೆ 120 ರಿಂದ 130 ಕ್ವಿಂಟಲ್ ಬರುತ್ತಿದ್ದ ಶುಂಠಿ ಈ ಸಲ ಸರಾಸರಿ 200 ರಿಂದ 250 ಕ್ವಿಂಟಲ್‌ನಷ್ಟು ಲಭ್ಯವಾಗಿದೆ. ಹಲವು ಕಡೆ ಶುಂಠಿ ಕೊಯ್ಲು ಆರಂಭವಾಗಿದೆ. ಆರಂಭದಲ್ಲೇ ₹ 8 ಸಾವಿರಕ್ಕೆ ಕ್ವಿಂಟಲ್ ಶುಂಠಿ ಮಾರಾಟವಾಗುತ್ತಿದೆ. ಖರೀದಿದಾರರೇ ಬೆಳೆಗಾರರ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಇದು ಶುಂಠಿ ಬೆಳೆಗಾರರಲ್ಲಿ ಸಂತೋಷ ಮೂಡಿಸಿದೆ’ ಎಂದು ಬುಗಡಿಕೊಪ್ಪದ ಶುಂಠಿ ಬೆಳೆಗಾರ ನವೀನ್ ನಾಯ್ಕ.

‘ಮೂರು–ನಾಲ್ಕು ವರ್ಷಗಳಿಂದ ಶುಂಠಿಗೆ ಹಂಗಾಮಿನ ಆರಂಭದ ದಿನಗಳಲ್ಲಿ ಉತ್ತಮ ಬೆಲೆ ಇರಲಿಲ್ಲ. ಕಳೆದ ವರ್ಷ ಕ್ವಿಂಟಲ್ ಶುಂಠಿಗೆ ಗರಿಷ್ಠ ಧಾರಣೆ ₹6 ಸಾವಿರ ಇತ್ತು. ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿದ್ದ ಶುಂಠಿ ಬೆಳೆಯುವ ಪ್ರದೇಶ ಕಳೆದ ಐದು ವರ್ಷಗಳಲ್ಲಿ 2 ಸಾವಿರ ಹೆಕ್ಟೇರ್‌ಗೆ ಕುಸಿದಿತ್ತು’ ಎಂದು ಶುಂಠಿ ಬೆಳೆಗಾರರು ತಿಳಿಸಿದರು.

‘ಮಳೆಯಾಗದ ಕಾರಣ ಭತ್ತ ಬೆಳೆಯಬೇಕಿದ್ದ ಬಹುತೇಕ ರೈತರು ಕಡಿಮೆ ನೀರು ಬೇಡುವ ಶುಂಠಿ ಕೃಷಿಯತ್ತ ಆಸಕ್ತಿ ವಹಿಸಿದರು. ಶುಂಠಿಗೆ ದೆಹಲಿ, ಪುಣೆ ಮಾರುಕಟ್ಟೆಯಿಂದ ಬೇಡಿಕೆ ಬರುತ್ತಿದ್ದು, ಇದರಿಂದ ಭವಿಷ್ಯದಲ್ಲಿ ದರ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.

ಅಸ್ಥಿರ ದರ ಹೊಂದಿರುವ ಶುಂಠಿಗೆ ಈ ಬಾರಿ ಬೇಡಿಕೆ ಬಂದಿದೆ. ಇದು ಬರಗಾಲದ ಸನ್ನಿವೇಶದಲ್ಲಿ ರೈತರಿಗೆ ವರದಾನವಾಗಿದೆ.
-ಸತೀಶ ಹೆಗಡೆ ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ
ಈ ಬಾರಿ ಶುಂಠಿಗೆ ಮಾರಕವಾದ ಕೊಳೆ ರೋಗ ಸೊರಗು ಬರಲಿಲ್ಲ. ಹೀಗಾಗಿ ಇಳುವರಿ ಕೂಡ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಹೆಚ್ಚಾಗಬಹುದು.
–ನವೀನ ನಾಯ್ಕ ಶುಂಠಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT