ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಮೂರಂಕಿ ಗಡಿ ದಾಟದ ಬಾಡಿಗೆ ಮೊತ್ತ

Published 31 ಆಗಸ್ಟ್ 2023, 3:33 IST
Last Updated 31 ಆಗಸ್ಟ್ 2023, 3:33 IST
ಅಕ್ಷರ ಗಾತ್ರ

ರಾಜೇಂದ್ರ ಹೆಗಡೆ

ಶಿರಸಿ: ನಗರದ ಹೃದಯ ಭಾಗದಲ್ಲಿ ವಾಣಿಜ್ಯ ಹಾಗೂ ವಸತಿ ಉದ್ದೇಶಕ್ಕೆ ಬಳಕೆಯಾಗುವ ವಕ್ಫ್ ಮಂಡಳಿಯ ಹತ್ತಾರು ಮಳಿಗೆ ಹಾಗೂ ಮನೆಗಳ ಬಾಡಿಗೆ ಮೊತ್ತ ಮೂರಂಕಿ ಗಡಿ ದಾಟಿಲ್ಲ. ಇದು ಮಂಡಳಿ ಆರ್ಥಿಕ ನಷ್ಟಕ್ಕೆ ಕಾರಣವಾದರೆ, ಇವುಗಳನ್ನು ಬಾಡಿಗೆ ಪಡೆದವರು ಮಾತ್ರ ಲಕ್ಷ ಲಕ್ಷ ಹಣ ಎಣಿಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಮುಸ್ಲಿಂ ಸಮುದಾಯದ ಅಭಿವೃದ್ಧಿ ವಕ್ಫ್ ಮಂಡಳಿಯ ಮೂಲ ಉದ್ದೇಶವಾಗಿದೆ. ಆದರೆ ಶಿರಸಿಯಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧ ಕಾರ್ಯಗಳು ವರ್ಷಗಳಿಂದ ನಡೆಯುತ್ತಿರುವ ಬಗ್ಗೆ ವಕ್ಫ್ ಮಂಡಳಿ ಸದಸ್ಯರಿಂದಲೇ ಆರೋಪ ವ್ಯಕ್ತವಾಗುತ್ತಿದೆ. ಮಂಡಳಿಯಡಿ ಇರುವ ಆಸ್ತಿ ಹಾಗೂ ಬರುವ ಆದಾಯದಲ್ಲಿ ಅಜಗಜಾಂತರ ವ್ಯತ್ಯಾಸ ಆದ ಬಗ್ಗೆ ಆಡಿಟ್ ವರದಿಯಲ್ಲಿ ಕಂಡು ಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರ, ಜಿಲ್ಲಾಧಿಕಾರಿಗಳಿಗೂ ಲಿಖಿತ ದೂರುಗಳು ದಾಖಲಾಗುತ್ತಿವೆ. ಸ್ವತಃ ವಕ್ಫ್ ಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷ ಅನೀಸ್ ತಹಶೀಲ್ದಾರ ಅವ್ಯವಹಾರ ನಡೆದ ಬಗ್ಗೆ ಆರೋಪಿಸುತ್ತಿದ್ದಾರೆ. 

ವಕ್ಫ್‌ ಮಂಡಳಿಯ ಶಿರಸಿ ವ್ಯಾಪ್ತಿಯಲ್ಲಿ ಸುಮಾರು 11 ಎಕರೆಗಿಂತಲೂ ಹೆಚ್ಚು ಜಾಗ ಸೇರಿ ಸುಮಾರು ₹250 ಕೋಟಿ  ಮೌಲ್ಯದ ಆಸ್ತಿಯಿದೆ. ಇದರಲ್ಲಿ 64 ಅಂಗಡಿಗಳು, 26 ಮನೆಗಳು ಹಾಗೂ ಮೂರು ಖಾಲಿ ಜಾಗಗಳು ಸೇರಿಕೊಂಡಿದೆ. ಜೊತೆಗೆ, ನಗರದ ಸುಲ್ತಾನಿಯಾ ಮತ್ತು ಮದೀನಾ ಮಸೀದಿ ಕೂಡಾ ಸೇರಿವೆ. ಆದರೆ ಈ ಮಸೀದಿಗಳಿಗೆ ಮಳಿಗೆಗಳು ಹಾಗೂ ಮನೆಗಳ ಬಾಡಿಗೆಯಿಂದ  ದೊರೆಯಬೇಕಾಗಿದ್ದ ಆದಾಯದಲ್ಲಿ ಶೇ 90ರಷ್ಟು ನಷ್ಟವಾಗುತ್ತಿರುವುದು ಬೆಳಕಿಗೆ ಬಂದಿದೆ. 

ವಕ್ಫ್ ಆಸ್ತಿ ಕಬಳಿಕೆ ಆಗಿರುವ ಕುರಿತು ಅನ್ವರ್ ಮಾನಪ್ಪಾಡಿ ವರದಿಯಲ್ಲಿ ಸ್ಪಷ್ಟವಾಗಿದೆ. ಸರ್ಕಾರ ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು
ಅನೀಸ್ ತಹಶೀಲ್ದಾರ, ವಕ್ಫ್ ಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷ

‘ನಗರದ ಹೃದಯ ಭಾಗದಲ್ಲಿರುವ ಸಿಪಿ ಬಜಾರ್, ಮುಸ್ಲಿಂ ಗಲ್ಲಿ, ಕೋಟೆಕೆರೆ ರಸ್ತೆ ಭಾಗದ ವಕ್ಫ್ ಜಾಗದಲ್ಲಿ ಅಂಗಡಿ, ಹೋಟೆಲ್‌ಗಳನ್ನು ದಶಕಗಳ ಹಿಂದೆ ಕೇವಲ ₹40 ರಿಂದ ₹500ರವರೆಗೆ ಬಾಡಿಗೆಗೆ ನೀಡಲಾಗಿದೆ. ಹೀಗೆ ಕಡಿಮೆ ಬಾಡಿಗೆಗೆ ಪಡೆದ ಕೆಲ ಮಳಿಗೆಗಳ ಮಾಲೀಕರು ₹35,000 ದಿಂದ ₹40,000ದವರೆಗೆ ಸಬ್ ಲೀಸ್‌ಗೆ ನೀಡಿ ಅದರ ಬಾಡಿಗೆಯನ್ನು ತಾವು ಪಡೆಯುತ್ತಿದ್ದಾರೆ. ಇದರಿಂದ ಮಂಡಳಿಗೆ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗಿದೆ. ಈವರೆಗೆ ಬಾಡಿಗೆ ಪರಿಷ್ಕರಣೆ ಮಾಡಲು ಕೊಡದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ‘ ಎಂಬುದು ವಕ್ಫ್ ಮಂಡಳಿ ಪದಾಧಿಕಾರಿಯೊಬ್ಬರ ಮಾಹಿತಿ. 

‘ಶಿರಸಿಯಲ್ಲಿ ವಕ್ಫ್ ಆಸ್ತಿ ಮೇಲೆ ಮರ್ಕಝ್ ಎಂಬ ಸ್ವಯಂ ಘೋಷಿತ ಸಮಿತಿ ಅಧಿಕಾರ ಚಲಾಯಿಸುತ್ತಿರುವ ಬಗ್ಗೆ ಈ ಹಿಂದಿನಿಂದಲೂ ಆರೋಪ ಕೇಳಿ ಬರುತ್ತಿದ್ದು, ಹಾಲಿ ಅಧ್ಯಕ್ಷರು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಮುಸ್ಲಿಂ ಸಮುದಾಯದ ಅಭಿವೃದ್ಧಿಯ ಉದ್ದೇಶ ಹೊಂದಿರುವ ವಕ್ಫ್ ಮಂಡಳಿಯ ಆಸ್ತಿ ದುರ್ಬಳಕೆ ಆಗುತ್ತಿರುವ ಸಂಬಂಧ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ತಕ್ಷಣ ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಬಾಡಿಗೆ ಮೊತ್ತ ಪರಿಷ್ಕರಿಸಿ ವಕ್ಫ್ ಮಂಡಳಿ ಆರ್ಥಿಕ ನಷ್ಟ ತಪ್ಪಿಸಬೇಕು‘ ಎನ್ನುತ್ತಾರೆ ಅವರು. 

ಈ ಕುರಿತ ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಸಂಪರ್ಕಕ್ಕೆ ಲಭ್ಯರಾಗಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT