ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದ ಅವಘಡದಲ್ಲಿ ಕಾಣೆಯಾದ ಮೂವರನ್ನು ಪತ್ತೆ ಮಾಡುವ ಮತ್ತು ಲಾರಿ ಮೇಲೆತ್ತುವ ಕಾರ್ಯಾಚರಣೆ ಕಷ್ಟಕರವಾಗಿ ಪರಿಣಮಿಸಿದೆ. ಗಂಗಾವಳಿ ನದಿ ರಭಸವಾಗಿ ಹರಿಯುತ್ತಿರುವುದೇ ಇದಕ್ಕೆ ಕಾರಣ.
ಜುಲೈ 16 ರಂದು ಸಂಭವಿಸಿದ ಅವಘಡದಲ್ಲಿ 11 ಮಂದಿ ಕಾಣೆಯಾಗಿದ್ದರು. 8 ಜನರ ಮೃತದೇಹ ಸಿಕ್ಕಿದೆ. ಉಳಿದ ಮೂವರನ್ನು ಪತ್ತೆ ಮಾಡುವ ಕಾರ್ಯಾಚರಣೆ ಪ್ರಾಕೃತಿಕ ವೈಪರೀತ್ಯ ಕಾರಣ ಜುಲೈ 23ರಂದು ಸ್ಥಗಿತಗೊಳಿಸಲಾಗಿತ್ತು.
ಕೇರಳದ ಲಾರಿ ಚಾಲಕ ಅರ್ಜುನ್ ಹುಡುಕಾಟಕ್ಕೆ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ ಪತ್ರ ಬರೆದ ಬೆನ್ನಲ್ಲೇ ಸೋಮವಾರ ಮತ್ತೆ ಕಾರ್ಯಾಚರಣೆಗಾಗಿ ನೌಕಾದಳದ ಮುಳುಗು ತಜ್ಞರ ತಂಡ ನದಿಯ ಹರಿವು ಪರಿಶೀಲಿಸಿತು.
‘ನದಿಯಲ್ಲಿ ನೀರಿನ ಹರಿವು ರಭಸವಾಗಿದ್ದು, ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇವೆ. ನೀರಿನ ಹರಿವು ಪರೀಕ್ಷಿಸಿ, ಮುಂದಿನ ನಾಲ್ಕು ದಿನಗಳಲ್ಲಿ ಕಾರ್ಯಾಚರಣೆ ನಡೆಸುತ್ತೇವೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.