ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ತಾಂತ್ರಿಕ ಅಡಚಣೆ: ಗೊಂದಲದಲ್ಲಿ ‘ಗೃಹಲಕ್ಷ್ಮಿ’

ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಖುಷಿ, ಸೌಲಭ್ಯ ವಂಚಿತರಲ್ಲಿ ಅಸಮಾಧಾನ
Published 9 ಅಕ್ಟೋಬರ್ 2023, 7:11 IST
Last Updated 9 ಅಕ್ಟೋಬರ್ 2023, 7:11 IST
ಅಕ್ಷರ ಗಾತ್ರ

ಕಾರವಾರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಫಲಾನುಭವಿಗಳನ್ನು ಖುಷಿಪಡಿಸಿದರೆ, ಸೌಲಭ್ಯ ವಂಚಿತರಾದವರಲ್ಲಿ ಅಸಮಾಧಾನ ಉಂಟುಮಾಡಿದೆ. ಅರ್ಹರನ್ನು ಯೋಜನೆ ತಲುಪುವಲ್ಲಿ ಎಡವಿದೆ ಎಂಬ ದೂರುಗಳೂ ಹೆಚ್ಚುತ್ತಿವೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡಿರುವ ‘ಶಕ್ತಿ’, 200 ಯುನಿಟ್‍ವರೆಗಿನ ಉಚಿತ ವಿದ್ಯುತ್ ಪೂರೈಸುವ ‘ಗೃಹಜ್ಯೋತಿ’ ಯೋಜನೆಗಳಲ್ಲಿ ಅಷ್ಟೇನೂ ಗೊಂದಲ ಇರದಿದ್ದರೂ ಮಹಿಳೆಯರಿಗೆ ಮಾಸಿಕ ₹2,000 ನೀಡುವ ‘ಗೃಹಲಕ್ಷ್ಮಿ’, ಅಕ್ಕಿಯ ಬದಲಾಗಿ ಹಣ ನೀಡುವ ‘ಅನ್ನಭಾಗ್ಯ’ ಯೋಜನೆಯಲ್ಲಿ ಗೊಂದಲ ಮುಂದುವರಿದಿದೆ.

ಜಿಲ್ಲೆಯಲ್ಲಿ 3,46,835 ಫಲಾನುಭವಿಗಳನ್ನು ಗುರುತಿಸಲಾ ಗಿದ್ದರೂ ಅವರಲ್ಲಿ 3,02,900 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿದಾರರಲ್ಲಿ ಈವರೆಗೆ 2,53,981 ಮಂದಿಯ ಖಾತೆಗೆ ಮಾತ್ರ ಹಣ ಜಮಾವಣೆಯಾಗುತ್ತಿದೆ. ಸುಮಾರು 40 ಸಾವಿರಕ್ಕೂ ಅಧಿಕ ಮಂದಿಯ ಅರ್ಜಿ ಪಡಿತರ ಚೀಟಿಯಲ್ಲಿ ‘ಯಜಮಾನಿ’ ಸ್ಥಾನ ಹೊಂದಿಲ್ಲ ಎಂಬ ಕಾರಣಕ್ಕೆ ತಿರಸ್ಕೃತಗೊಂಡಿವೆ.

‘ಪಡಿತರ ಚೀಟಿಯಲ್ಲಿ ಹೆಸರು ಬದಲಿಸಲು ಹಲವಾರು ಬಾರಿ ಸೇವಾ ಕೇಂದ್ರಕ್ಕೆ, ತಹಶೀಲ್ದಾರ್ ಕಚೇರಿಗೆ ಅಲೆದಿದ್ದೇವೆ. ಆದರೆ ಸರ್ವರ್ ಸಮಸ್ಯೆ, ಇಲಾಖೆಯ ತಾಂತ್ರಿಕ ಕಾರಣ ನೀಡಿ ವಾಪಸ್ ಕಳಿಸಿದ್ದಾರೆ’ ಎಂದು ಉಳಗಾದ ಚಂದಾ ನಾಯ್ಕ ದೂರುತ್ತಾರೆ.

ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆ ಅಡಿ 2.93 ಲಕ್ಷ ಕುಟುಂಬಗಳು ಅರ್ಹತೆ ಪಡೆದಿದ್ದರೂ ಈವರೆಗೆ 2.37 ಲಕ್ಷ ಕುಟುಂಬಕ್ಕೆ ಮಾತ್ರ ನೇರ ನಗದು ಜಮಾವಣೆಯಾಗುತ್ತಿದೆ. ಬಹುತೇಕ ಕುಟುಂಬಗಳ ಖಾತೆಗೆ ಹಣ ಪಾವತಿ ಯಾಗುತ್ತಿಲ್ಲ ಎಂಬ ದೂರುಗಳಿವೆ.

‘ಕೆವೈಸಿ ಪ್ರಕ್ರಿಎಯ ಆಗದ, ಹೆಸರಿನಲ್ಲಿ ಗೊಂದಲ ಇರುವ ಕಾರ್ಡುದಾರರಿಗೆ ನೇರ ನಗದು ಜಮಾ ಆಗುತ್ತಿಲ್ಲ. ಅ.8 ರಿಂದ 10ರ ವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ’ ಎಂದು ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ಹೇಳುತ್ತಾರೆ.

ಶಿರಸಿ ತಾಲ್ಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಹೆಸರು ನೊಂದಾಯಿಸಿ ಕೊಂಡ ಸುಮಾರು 6,600 ಫಲಾನುಭವಿಗಳಿಗೆ ಹಣ ಜಮೆಯಾಗಿಲ್ಲ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಗೆ ತೆರಳಿ ಮಹಿಳೆಯರು ಯೋಜನೆ ಹಣ ಬರದ ಕುರಿತು ನಿತ್ಯ ವಿಚಾರಣೆ ನಡೆಸುತ್ತಿದ್ದಾರೆ.‌

‘ಹಲವರ ದಾಖಲೆಗಳು ಪರಿಶೀಲನೆ ಹಂತದಲ್ಲಿವೆ. ಹೀಗಾಗಿ ಹಣ ಹಾಕಲು ವಿಳಂಬವಾಗುವ ಸಾಧ್ಯತೆಯಿದೆ’ ಎನ್ನುತ್ತಾರೆ ಸಿಡಿಪಿಒ ವೀಣಾ ಶಿರಸಿಕರ್.

ಸಿದ್ದಾಪುರ ತಾಲ್ಲೂಕಿನಿಂದ 18,951 ಮಹಿಳೆಯರು ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದು 16,965 ಅರ್ಜಿಗಳು ಸ್ವೀಕೃತಗೊಂಡರೆ, 1,993 ಅರ್ಜಿಗಳು ತಿರಸ್ಕೃತಗೊಂಡಿವೆ.

‘ದಾಖಲೆಗಳನ್ನು ಸರಿಪಡಿಸಿಕೊಂಡು ಪುನಃ ಅರ್ಜಿ ಸಲ್ಲಿಸಲು ಅವಕಾಶವಿದ್ದು ಪೂರಕ ಮಹಿತಿಯನ್ನು ನೀಡಲಾಗಿದೆ’ ಎಂಬುದು ಶಿಶು ಅಧಿವೃದ್ಧಿ ಯೋಜನಾಧಿಕಾರಿ ಪೂರ್ಣಿಮಾ ಆರ್. ನೀಡುವ ಮಾಹಿತಿ.

ದಾಂಡೇಲಿ ನಗರದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳ ಎದುರು ಮಹಿಳೆಯರ ಸರತಿ ನಿತ್ಯ ಕಾಣಸಿಗುತ್ತಿದೆ. ಗೃಹಲಕ್ಷ್ಮೀ ಯೋಜನೆಯ ಹಣ ಖಾತೆಗೆ ಜಮಾ ಆಗಿದ್ದನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕುಗಳತ್ತ ಮಹಿಳೆಯರು ಬರುತ್ತಿದ್ದಾರೆ.

‘ಗೃಹಲಕ್ಷ್ಮೀ ಯೋಜನೆಯ ಮೊತ್ತ ಬಂದಿದ್ದರ ಖಚಿತತೆಗೆ ಉತ್ತರ ನೀಡಿ ಸುಸ್ತಾಗಿದ್ದೇವೆ’ ಎಂದು ಬ್ಯಾಂಕ್‍ನ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಅಂಕೋಲಾ ತಾಲ್ಲೂಕಿನಲ್ಲಿ ಗ್ರಹಲಕ್ಷ್ಮಿ ಯೋಜನೆಯ ಮೊದಲಿನ ಕಂತಿನ ಹಣ ಹಲವರಿಗೆ ಇನ್ನು ತಲುಪಿಲ್ಲ ಎಂಬ ದೂರುಗಳಿವೆ. ಯಲ್ಲಾಪುರ ತಾಲ್ಲೂಕಿನಲ್ಲಿ ಹೊಸದಾಗಿ ರೇಶನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ನೋಂದಣಿ ಸಾಧ್ಯವಾ ಗುತ್ತಿಲ್ಲ.  ಈ ತೊಂದರೆಯಿಂದ ಸುಮಾರು 450 ರಿಂದ 500 ಜನರು  ಯೋಜನೆಯ ಲಾಭದಿಂದ ವಂಚಿತರಾಗಿದ್ದಾರೆ. ಉಳಿದಂತೆ ನೋಂದಣಿ ಮಾಡಲಾದ ಶೇ.60 ರಷ್ಷು ಜನರಿಗೆ ಹಣ ಸಂದಾಯವಾಗಿದೆ.

ಮುಂಡಗೋಡ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಬ್ಯಾಂಕ್‌ ಖಾತೆಗೆ ಆಧಾರ ಜೋಡಣೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ಸಾರ್ವಜನಿಕರು ಅಲೆದಾಡುವುದು ಇನ್ನೂ ತಪ್ಪಿಲ್ಲ.

ಬ್ಯಾಂಕ್‌ ಖಾತೆಗೆ ಆಧಾರ್, ಮೊಬೈಲ್‌ ನಂಬರ್ ಜೋಡಣೆ, ಇ-ಕೆವೈಸಿ ಸೇರಿದಂತೆ ಇನ್ನಿತರ ಕಾರಣಗಳಿಂದ ಜನರು ಬ್ಯಾಂಕ್‌ಗಳಿಗೆ, ಪಡಿತರ ಅಂಗಡಿಗಳಿಗೆ ಅಲೆದಾಡುತ್ತಿದ್ದಾರೆ. ಕೆಲವು ಜನರಿಗೆ ಸರಿಯಾದ ಮಾಹಿತಿ ಸಿಗದೇ, ಸೇವಾ ಕೇಂದ್ರಗಳಿಂದ, ಪಡಿತರ ಅಂಗಡಿ, ಬ್ಯಾಂಕ್‌ ಹಾಗೂ ಆಹಾರ ಇಲಾಖೆಯ ಕಚೇರಿಗೆ ಅಲೆದಾಡು ವುದನ್ನು ಕಾಣಬಹುದಾಗಿದೆ. ಕೆಲವರ ಬ್ಯಾಂಕ್‌ ಖಾತೆಗೆ ಹಣ ಜಮಾವಣೆ ಆಗದಿರುವುದರಿಂದ, ಪೋಸ್ಟ್‌ ಆಫೀಸ್‌ನಲ್ಲಿ ಮತ್ತೊಂದು ಉಳಿತಾಯ ಖಾತೆ ಸಹ ಮಾಡಿಸಿದ್ದಾರೆ.

‘ಬ್ಯಾಂಕಿನಲ್ಲಿ ಹೋಗಿ ವಿಚಾರಿಸಿದರೆ ಖಾತೆ ಚಾಲ್ತಿಯಲ್ಲಿದೆ. ಆಧಾರ ಜೋಡಣೆ ಆಗಿದೆ ಎನ್ನುತ್ತಾರೆ. ಆದರೆ, ಪಡಿತರ ಅಂಗಡಿಯಲ್ಲಿ ವಿಚಾರಿಸಿದರೆ ಆಧಾರ ಲಿಂಕ್‌ ಆಗದಿರುವುದರಿಂದ ನಿಮ್ಮ ಖಾತೆಗೆ ಹಣ ಜಮಾವಣೆ ಆಗಿಲ್ಲ ಎನ್ನುತ್ತಿದ್ದಾರೆ. ಅಕ್ಕಿಯ ದುಡ್ಡು ಬಂದ ನಂತರ ಗೃಹಲಕ್ಷ್ಮಿಯ ಹಣ ಬರುತ್ತದೆ ಎಂದು ಕೆಲವರು ಹೇಳುತ್ತಾರೆ. ಎಲ್ಲ ಕಡೆ ಅಡ್ಡಾಡಿ ಯಾವಾಗ ಬರುತ್ತದೆ ಬರಲಿ ಎಂದು ಸುಮ್ಮನೆ ಇದ್ದೇನೆ ಎಂದು ಗೃಹಿಣಿ ನೇತ್ರಾವತಿ ದೂರಿದರು.

‘ಆಗಸ್ಟ್ ತಿಂಗಳಲ್ಲಿ ಒಟ್ಟು 23288 ಕುಟುಂಬಗಳು ಪಡಿತರ ಅಕ್ಕಿಯ ಬದಲಿಗೆ ಹಣ ಪಡೆಯಲು ಅರ್ಹರಾ ಗಿದ್ದರು. ಅದರಲ್ಲಿ 19498 ಕುಟುಂಬಗಳ ಖಾತೆಗೆ ಹಣ ಜಮಾವಣೆಯಾಗಿದೆ. ಇನ್ನುಳಿದವರ ಬ್ಯಾಂಕ್‌ ಖಾತೆಯು ಆಧಾರ ಜೋಡಣೆ, ಇಕೆವೈಸಿ ಸೇರಿದಂತೆ ಕೆಲವು ಕಾರಣಗಳಿಂದ ಅಪಡೇಟ್‌ ಆಗಿಲ್ಲ’ ಎಂದು ಆಹಾರ ನಿರೀಕ್ಷಕ ಹನಮಂತ ಹೆಬ್ಬಳ್ಳಿ ಹೇಳಿದರು.

ಕುಮಟಾದಲ್ಲಿ ಹೆಚ್ಚಿನ ಜನರು 200 ಯುನಿಟ್ ವಿದ್ಯುತ್ ಬಳಸದಿದ್ದರೂ ಅಂಥವರಿಗೆ ₹100 ವಿದ್ಯುತ್ ಬಿಲ್ ಬಂದಿರುವುದು ಗೊಂದಲವುಂಟು ಮಾಡಿದೆ.

‘ಗ್ರಾಹಕರು ಕಳೆದ ವರ್ಷವಿಡೀ ಬಳಸಿದ ವಿದ್ಯುತ್ ಪ್ರಮಾಣದ ಒಂದು ತಿಂಗಳ ಸರಾಸರಿಯ ಶೇ.10 ರಷ್ಟನ್ನು ಈಗಿನ ಬಿಲ್‍ಗೆ ಸೇರಿಸಿ ಒಟ್ಟೂ ಬಿಲ್‍ಗೆ ಸೌಲಭ್ಯ ನೀಡಲಾಗುತ್ತದೆ. ತಿಂಗಳ ಬಿಲ್ ಮೊತ್ತ ಶೇ. 10 ರ ಮಿತಿ ದಾಟಿದರೆ ಗ್ರಾಹಕರಿಗೆ ₹10 ರಿಂದ 100ರ ವರೆಗೆ ಹೆಚ್ಚುವರಿ ಮೊತ್ತ ಬರುವಂತೆ ಗೃಹ ಜ್ಯೋತಿ ಯೋಜನೆ ರೂಪಿಸಲಾಗಿದೆ’ ಎಂದು ಹೆಸ್ಕಾಂ ಎಇಇ ರಾಜೇಶ್ ಮಡಿವಾಳ ಹೇಳುತ್ತಾರೆ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ಪ್ರವೀಣಕುಮಾರ ಸುಲಾಖೆ, ಮೋಹನ ನಾಯ್ಕ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ್, ಮೋಹನ ದುರ್ಗೇಕರ್.

ಅರ್ಜಿ ಸಲ್ಲಿಸದ 4 ಸಾವಿರ ಜನ

ಹೊನ್ನಾವರ ತಾಲ್ಲೂಕಿನಲ್ಲಿ 44 ಸಾವಿರದಷ್ಟಿರುವ ವಿದ್ಯುತ್ ಗ್ರಾಹಕರ ಪೈಕಿ ನಾಲ್ಕು ಸಾವಿರದಷ್ಟು ಜನರು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ. 1400 ಗ್ರಾಹಕರ ಅರ್ಜಿಗೆ ಫಲಾನುಭವಿಗಳಾಗಲು ಮನ್ನಣೆ ಸಿಕ್ಕಿಲ್ಲ. ಪಡಿತರ ಚೀಟಿಗೆ ಆಧಾರ್ ಜೋಡಣೆಯಾಗದೆ ಶೇ.20 ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಲು ಸಾಧ್ಯವಾಗಿಲ್ಲ. ‘ಯೋಜನೆ ಅಡಿ ಹೆಸರು ನೊಂದಾಯಿಸಿಕೊಂಡ ಹಲವರಿಗೆ ಮೊತ್ತ ಜಮಾ ಆಗುತ್ತಿಲ್ಲ’ ಎಂದು ಹಡಿನಬಾಳದ ಗ್ರಾಮ ಒನ್ ಕೇಂದ್ರದ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಮರೀಚಿಕೆಯಾದ ಮೊತ್ತ

ಭಟ್ಕಳ ತಾಲ್ಲೂಕಿನಲ್ಲಿ ಬಹುತೇಕ ಮಂದಿಗೆ ಗೃಹಲಕ್ಷ್ಮೀ ಯೋಜನೆ ಇನ್ನೂ‌ ಮರೀಚಿಕೆಯಾಗಿದ್ದು, ಯೋಜನೆಯ ಹಣಕ್ಕಾಗಿ ಮಹಿಳೆಯರಿಗೆ ಬ್ಯಾಂಕ್, ಕಚೇರಿ ಅಲೆದಾಟ ನಡೆಸುತ್ತಿದ್ದಾರೆ. ಅರ್ಜಿ ಸಲ್ಲಿಸಿದ ಹಲವು ಮಂದಿ ಮಹಿಳೆಯರಿಗೆ ಹಣ ಜಮಾವಣೆ ಅಗಲಿದೆ‌ ಎಂದು ಮೊಬೈಲ್‍ಗೆ ಸಂದೇಶ ಬಂದಿದೆ. ಆದರೆ, ಖಾತೆಗೆ ಮಾತ್ರ ಹಣ ಜಮಾವಣೆ ಆಗಿಲ್ಲ.‌ ಇನ್ನೂ ಅನೇಕ‌ ಮಹಿಳೆಯರಿಗೆ ಆಧಾರ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆ ಇರದ ಕಾರಣ ಹಣ ಜಮಾವಣೆ ತಡೆಹಿಡಿಯಲಾಗಿದೆ. ‘ಸೈಬರ್ ಕೇಂದ್ರದಲ್ಲಿ ಪರಿಶೀಲಿಸಿದರೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿಲ್ಲ ಎನ್ನುತ್ತಾರೆ. ಬ್ಯಾಂಕ್‍ಗೆ ತೆರಳಿ ವಿಚಾರಿಸಿದರೆ ಆಧಾರ್ ಜೋಡಣೆಯಾಗಿದೆ ಎಂದು ಬ್ಯಾಂಕ್ ಸಿಬ್ಬಂದಿ ಹೇಳುತ್ತಾರೆ. ಇನ್ನೂ ಗೊಂದಲದಲ್ಲಿದ್ದೇವೆ’ ಎಂದು ಪಟ್ಟಣದ ಮದೀನಾ ಕಾಲೊನಿಯ ಮಹಿಳೆಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT