ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಯಿಡಾ ಬಂದ್‌: ಯೋಜನೆ ಬಿಡದಿದ್ದರೆ ಉಪವಾಸ ಸತ್ಯಾಗ್ರಹ

ಬೇರೆ ಜಿಲ್ಲೆಗಳಿಗೆ ಕಾಳಿ ನದಿ ನೀರು ಹರಿಸುವ ಪ್ರಸ್ತಾವಕ್ಕೆ ವಿರೋಧ
Last Updated 14 ಮಾರ್ಚ್ 2022, 16:33 IST
ಅಕ್ಷರ ಗಾತ್ರ

ಜೊಯಿಡಾ: ಕಾಳಿ ನದಿಯ ನೀರನ್ನು ಬೇರೆ ಜಿಲ್ಲೆಗಳಿಗೆ ಸಾಗಿಸುವ ಸರ್ಕಾರದ ಬಜೆಟ್ ಪ್ರಸ್ತಾವ ಖಂಡಿಸಿ, ಇಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು.

ಶಿವಾಜಿ ವೃತ್ತದಲ್ಲಿ ಕಾಳಿ ಬ್ರಿಗೇಡ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ರಾಜಕೀಯ ಮುಖಂಡರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿ್ದ ಕಾಳಿ ಬ್ರಿಗೇಡ್ ಸಂಚಾಲಕ ರವಿ ರೇಡ್ಕರ್, ‘ಕಾಳಿನದಿಯನ್ನು ನಾವು ತಾಯಿ ಎಂದು ತಿಳಿದುಕೊಂಡಿದ್ದೇವೆ. ಪ್ರಸ್ತಾವಿತ ಯೋಜನೆಯನ್ನು ರದ್ದು ಮಾಡದಿದ್ದರೆ, ನದಿಯ ಉಳಿವಿಗಾಗಿ ಎಂಥ ತ್ಯಾಗಕ್ಕೂ ಸಿದ್ಧರಿದ್ದೇವೆ. ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಜೊಯಿಡಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಫೀಕ್ ಖಾಜಿ ಮಾತನಾಡಿ, ‘ಕಾಳಿ ನದಿಯು ನಮ್ಮದೇ ತಾಲ್ಲೂಕಿನಲ್ಲಿ ಹುಟ್ಟಿ 184 ಕಿ. ಮೀ. ಹರಿಯುತ್ತಿದೆ. ಆದರೆ, ತಾಲ್ಲೂಕಿನ ಜನರಿಗೇ ಕುಡಿಯಲು ನೀರಿಲ್ಲ. ಹಾಗಾಗಿ ನಾವೆಲ್ಲರೂ ನಿರಂತರವಾಗಿ ಹೋರಾಟ ಮಾಡಬೇಕಾಗಿದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ‘ಈ ಹೋರಾಟವು ಇಡೀ ಜಿಲ್ಲೆಯ ಜನರದ್ದಾಗಬೇಕು. ಕೇವಲ ಜೊಯಿಡಾ, ದಾಂಡೇಲಿ, ಹಳಿಯಾಳದವರಿಗೆ ಸೀಮಿತವಾಗಬಾರದು’ ಎಂದು ಹೇಳಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುಮಾರ ಬೋಬಾಟೆ ಮಾತನಾಡಿ, ‘ಕಾಳಿ ನದಿ ಪಾತ್ರದ ಜನರಿಗೆ ನೀರು ಕೊಡದೇ ಬೇರೆ ಜಿಲ್ಲೆಗಳಿಗೆ ಹರಿಸುವುದು ಸರಿಯಲ್ಲ. ರಾಮನಗರ, ಜೊಯಿಡಾಕ್ಕೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಇಲ್ಲಿಯ ಕೃಷಿಕರೂ ಬೆಳೆಗಳಿಗೆ ನೀರು ಹರಿಸಲು ಪರದಾಡುತ್ತಿದ್ದಾರೆ. ಕೃಷಿ ಜಮೀನು ಒಣಗುತ್ತಿದೆ. ಹಾಗಾಗಿ ಸರ್ಕಾರದ ಪ್ರಸ್ತಾವಿತ ಯೋಜನೆಗೆ ನಮ್ಮ ವಿರೋಧವಿದೆ’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್ ಘೋಟ್ನೆಕರ್ ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಜೊಯಿಡಾ ದಾಂಡೇಲಿ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ವಿಷ್ಣುಮೂರ್ತಿ ರಾವ್, ಹುಲಿ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ ಟೆಂಗ್ಸೆ, ನಿವೃತ್ತ ಶಿಕ್ಷಕ ಪಿ.ವಿ.ದೇಸಾಯಿ, ರೈತ ಸಂಘದ ಪ್ರೇಮಾನಂದ ವೇಳಿಪ, ದಾಂಡೇಲಿ ನಗರಸಭಾ ಸದಸ್ಯ ಅನಿಲ ದಂಡಗಲ್, ವಕಿಲರಾದ ಸುನಿಕ್ ದೇಸಾಯಿ, ರಾಘವೇಂದ್ರ ಗಡ್ಡಪ್ಪನವರ್, ವಿಶ್ವನಾಥ ಜಾಧವ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವಾಮನ ಮಿರಾಶಿ, ಕೈತಾನ ಬಾರಬೂಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT