ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ವಾಣಿಜ್ಯ ಬಂದರಿನ ಅಲ್ಪ ಭಾಗ ಖಾಸಗಿಗೆ?

ದುಬಾರಿಯಾದ ಟಗ್ ಬೋಟ್ ನಿರ್ವಹಣೆ: ಹಸ್ತಾಂತರಕ್ಕೆ ಮುಂದಾದ ಕೆಎಂಬಿ
Published 4 ಫೆಬ್ರುವರಿ 2024, 5:16 IST
Last Updated 4 ಫೆಬ್ರುವರಿ 2024, 5:16 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ವಾಣಿಜ್ಯ ಬಂದರಿನ ಹಡಗುಕಟ್ಟೆಯ ಅಲ್ಪಭಾಗವನ್ನು ಖಾಸಗಿಯವರಿಗೆ ಹಸ್ತಾಂತರಿಸುವ ಜತೆಗೆ, ದುಬಾರಿ ಬಾಡಿಗೆ ತೆರುತ್ತಿರುವ ಟಗ್ ಬೋಟ್‍ ನಿರ್ವಹಣೆಯನ್ನೂ ಖಾಸಗಿಗೆ ಹಸ್ತಾಂತರಿಸಲು ಕರ್ನಾಟಕ ಜಲಸಾರಿಗೆ ಮಂಡಳಿ (ಕೆ.ಎಂ.ಬಿ) ಮುಂದಾಗಿದೆ.

ವಾರ್ಷಿಕವಾಗಿ ಸರಾಸರಿ ₹20 ಕೋಟಿಗೂ ಹೆಚ್ಚಿನ ವಹಿವಾಟು ನಡೆಸುತ್ತಿರುವ ವಾಣಿಜ್ಯ ಬಂದರಿನಲ್ಲಿ ಆದಾಯಕ್ಕಿಂತ ನಿರ್ವಹಣೆ ವೆಚ್ಚವೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆ.ಎಂ.ಬಿ ಹೊಸ ಪದ್ಧತಿ ಅಳವಡಿಕೆ ಮೂಲಕ ಆದಾಯ ವೃದ್ಧಿಗೆ ಯೋಜನೆ ರೂಪಿಸಿದೆ. ಅದರ ಭಾಗವಾಗಿ ಬಂದರಿನಲ್ಲಿ ವಹಿವಾಟು ಸಲಹಾ ಸೇವೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ.

‘ವಾಣಿಜ್ಯ ಬಂದರನ್ನೂ ಸಂಪೂರ್ಣ ಖಾಸಗಿಗೆ ಒಪ್ಪಿಸುವ ಬದಲು ಹಡಗುಕಟ್ಟೆಯ (ವಾರ್ಫ್) ಒಂದು ಭಾಗವನ್ನು ಖಾಸಗಿ ನಿರ್ವಹಣೆಗೆ ಮೀಸಲಿಡಲು ಯೋಚಿಸಲಾಗಿದೆ. ಒಟ್ಟು 500 ಮೀ. ಉದ್ದವಿರುವ ಹಡಗುಕಟ್ಟೆಯ 150 ಮೀ.ನ್ನು ಭಾರತೀಯ ತಟರಕ್ಷಕ ಪಡೆಗೆ ಬಾಡಿಗೆ ಆಧಾರದಲ್ಲಿ ನೀಡಲಾಗಿದೆ. ಉಳಿದ ಭಾಗದಲ್ಲಿ 150 ಮೀ. ಉದ್ದದ ಭಾಗವನ್ನು ಖಾಸಗಿಯವರಿಗೆ ನಿರ್ವಹಣೆಗೆ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕೆ.ಎಂ.ಬಿ ನಿರ್ದೇಶಕ ಕ್ಯಾಪ್ಟನ್ ಸಿ.ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಡಗುಕಟ್ಟೆಯ ನಿರ್ವಹಣೆ ಜತೆಗೆ ಆಮದು ರಫ್ತು ಚಟುವಟಿಕೆಯನ್ನು ಉತ್ತೇಜಿಸಲು ಗುತ್ತಿಗೆ ಪಡೆದವರು ಕ್ರಮವಹಿಸಬೇಕು. ಬಂದರು ಆದಾಯದಲ್ಲಿ ಕೆ.ಎಂ.ಬಿಗೆ ನಿಗದಿತ ಪ್ರಮಾಣದಷ್ಟು ರಾಯಧನ ಪಾವತಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗುತ್ತದೆ. ಖಾಸಗಿಗೆ ವಹಿಸುವುದರಿಂದ ಮಂಡಳಿಗೆ ನಿರ್ವಹಣೆಯ ಆರ್ಥಿಕ ಹೊರೆ ಕಡಿಮೆಯಾಗುವುದಲ್ಲದೆ, ಬಂದರಿನ ಆದಾಯ ವೃದ್ಧಿಗೂ ಅನುಕೂಲವಾಗಬಹುದು ಎಂಬ ಉದ್ದೇಶಕ್ಕೆ ಇಂತಹ ಯೋಜನೆ ರೂಪಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಬಂದರಿಗೆ ಹಡಗುಗಳನ್ನು ಕರೆತರಲು ಎರಡು ಟಗ್ ಬೋಟ್‍ಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗಿದೆ. ದಿನವೊಂದಕ್ಕೆ ತಲಾ ₹93 ಸಾವಿರ ಮೊತ್ತವನ್ನು ಪಾವತಿಸಲಾಗುತ್ತಿದೆ. ಇವುಗಳ ನಿರ್ವಹಣೆಯೇ ಆರ್ಥಿಕ ಹೊರೆಯಾಗಿದ್ದು ಅವುಗಳ ಬದಲು ಟಗ್ ಬೋಟ್ ನಿರ್ವಹಣೆಯನ್ನೂ ಖಾಸಗಿಗೆ ನೀಡಲು ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದರು.

ಕಾರವಾರ ವಾಣಿಜ್ಯ ಬಂದರಿನಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಿಸುವ ಉದ್ದೇಶದಿಂದ ಹಲವು ಮಹತ್ತರ ಬದಲಾವಣೆ ಕೈಗೊಳ್ಳುವುದು ಅನಿವಾರ್ಯವಿದೆ
– ಮಂಕಾಳ ವೈದ್ಯ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ.
ನಡೆಯದ ರಾತ್ರಿ ಸಂಚಾರ
ಕಾರವಾರ ವಾಣಿಜ್ಯ ಬಂದರಿಗೆ ರಾತ್ರಿ ವೇಳೆಯಲ್ಲೂ ಹಡಗುಗಳು ಸಂಚರಿಸುವಂತೆ (ನೈಟ್ ನೆವಿಗೇಶನ್) ಹಡಗು ಪಥದಲ್ಲಿ ಅತ್ಯಾಧುನಿಕ ಬೋಯ್ ಅಳವಡಿಕೆ ಮಾಡಿ ನಾಲ್ಕು ವರ್ಷ ಕಳೆದಿದೆ. ಆದರೆ ಇನ್ನೂ ನೈಟ್ ನೆವಿಗೇಶನ್ ನಡೆಯುತ್ತಿಲ್ಲ ಎಂಬುದು ರಫ್ತುದಾರರ ದೂರು.

‘ಬೋಯ್ ಅಳವಡಿಕೆಯಷ್ಟೆ ಆಗಿದೆ. ಆದರೆ ರಾತ್ರಿ ವೇಳೆ ಹಡಗುಗಳು ಬಂದರಿಗೆ ಬರಲು ಅಲ್ಲಿನ ಹಡಗುಕಟ್ಟೆಯಲ್ಲಿ ಹಲವು ಸುಧಾರಣೆ ತರಬೇಕಾಗಿದೆ. ಸಿಬ್ಬಂದಿಗೆ ಸುಸಜ್ಜಿತ ವಿಶ್ರಾಂತಿ ಕೊಠಡಿ ಹೆಚ್ಚು ಬೆಳಕಿನ ವ್ಯವಸ್ಥೆ ನುರಿತ ಸಿಬ್ಬಂದಿ ನೇಮಕದಂತಹ ಪ್ರಕ್ರಿಯೆ ನಡೆಯಬೇಕಾಗಿದೆ. ಹಂತ ಹಂತವಾಗಿ ಈ ಸೌಲಭ್ಯಗಳನ್ನು ಒದಗಿಸಿದ ಬಳಿಕವಷ್ಟೆ ನೈಟ್ ನೆವಿಗೇಶನ್ ಸಾಧ್ಯವಾಗಲಿದೆ’ ಎಂದು ಕರ್ನಾಟಕ ಜಲಸಾರಿಗೆ ಮಂಡಳಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT