ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಕ್ತರಿಗೆ ಮನೆಯಲ್ಲಿಯೇ ಆಧಾರ್‌ ನೋಂದಣಿ

Last Updated 15 ಅಕ್ಟೋಬರ್ 2017, 8:39 IST
ಅಕ್ಷರ ಗಾತ್ರ

ಕಾರವಾರ: ಆಧಾರ್‌ ಕೇಂದ್ರಕ್ಕೆ ಬರಲಾಗದ ಸ್ಥಿತಿಯಲ್ಲಿರುವ ಅಶಕ್ತ ವೃದ್ಧರು, ಅಂಗವಿಕಲರು ಹಾಗೂ ಮಾನಸಿಕ ಅಸ್ವಸ್ಥರಿಗೆ ಅವರ ಮನೆಗೆ ತೆರಳಿ ಆಧಾರ್‌ ನೋಂದಣಿ ಮಾಡುವ ಪ್ರಕ್ರಿಯೆ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದ್ದು, ಈವರೆಗೆ ಕಾರವಾರದ 19 ಹಾಗೂ ಅಂಕೋಲಾದ 9 ಮಂದಿ ಇದರ ಪ್ರಯೋಜನ ಪಡೆದಿದ್ದಾರೆ.

ಮತದಾರರ ಚೀಟಿ, ಪಡಿತರ ಕಾರ್ಡ್‌, ಪಿಂಚಣಿ ಸೌಲಭ್ಯ, ಗ್ಯಾಸ್‌ ಸಂಪರ್ಕ, ಪ್ಯಾನ್‌ಕಾರ್ಡ್‌, ಪಾಸ್‌ಪೋರ್ಟ್‌, ಬ್ಯಾಂಕ್‌ ಖಾತೆ ತೆರೆಯುವುದು ಸೇರಿದಂತೆ ಸರ್ಕಾರದ ಸವಲತ್ತು ಪಡೆಯಲು ಆಧಾರ್‌ ಸಂಖ್ಯೆ ಅವಶ್ಯಕವಾಗಿದೆ. ಹೀಗಾಗಿ ಈವರೆಗೆ ಆಧಾರ್‌ ಮಾಡಿಸದವರು ನೋಂದಣಿ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ.

ಶೇ 98.10 ರಷ್ಟು ನೋಂದಣಿ:  ಜಿಲ್ಲೆಯಲ್ಲಿ ಒಟ್ಟಾರೆ ಶೇ 98.10 ರಷ್ಟು ಆಧಾರ್‌ ನೋಂದಣಿಯಾಗಿದೆ. 2015ರ ಅಂತ್ಯಕ್ಕೆ ಜಿಲ್ಲೆಯ ಜನಸಂಖ್ಯೆಯ 15.21 ಲಕ್ಷ ಇದ್ದು, ಈ ಪೈಕಿ 14.92 ಲಕ್ಷ ಮಂದಿ ನೋಂದಣಿ ಮಾಡಿಸಿದ್ದಾರೆ. ಆಧಾರ್ ಕಾರ್ಡ್‌ನಲ್ಲಿ ಆಗಿರುವ ದೋಷವನ್ನು ಸರಿಪಡಿಸುವುದು ಹಾಗೂ ವಿವಿಧ ಕಾರಣಗಳಿಂದ ಈವರೆಗೆ ನೋಂದಣಿ ಮಾಡಿಸದಿದ್ದವರಿಗಾಗಿ ಬೆಂಗಳೂರಿನ ಇ–ಆಡಳಿತ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಆಧಾರ್‌ ಅದಾಲತ್‌ ನಡೆಸುತ್ತಿದೆ.

4,410 ಮಂದಿ ಭೇಟಿ: ‘ಕಾರವಾರದಲ್ಲಿ ಇತ್ತೀಚೆಗೆ ನಡೆದ 10 ದಿನಗಳ ಆಧಾರ್‌ ಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟು 4,410 ಮಂದಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ಪೈಕಿ ಮೊಬೈಲ್ ಲಿಂಕ್, ವಿಳಾಸ ಬದಲಾವಣೆ, ಹೆಸರಿನಲ್ಲಿನ ದೋಷಗಳ ತಿದ್ದುಪಡಿ, ವಯಸ್ಸು ಮತ್ತು ಹುಟ್ಟಿದ ದಿನಾಂಕ ತಿದ್ದುಪಡಿ ಸಂಬಧಿಸಿದಂತೆ 2,070 ಕಾರ್ಡ್‌ಗಳನ್ನು ನವೀಕರಣ ಮಾಡಿಕೊಡಲಾಗಿದೆ.

ಹೊಸದಾಗಿ 54 ಮಂದಿ ನೋಂದಣಿ ಮಾಡಿಸಿದ್ದಾರೆ ಹಾಗೂ ಈ ಹಿಂದೆ ನೋಂದಣಿ ಮಾಡಿಸಿ ತಾಂತ್ರಿಕ ಕಾರಣಗಳಿಂದ ಕಾರ್ಡ್‌ ತಲುಪದ 77 ಮಂದಿಯ ಸಮಸ್ಯೆಯನ್ನು ನಿವಾರಿಸಲಾಗಿದೆ’ ಎಂದು ಆಧಾರ್‌ ಕೇಂದ್ರದ ಜಿಲ್ಲಾ ಸಮಾಲೋಚಕ ಮಹಾಭಲೇಶ್ವರ ದೇಸಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂಕೋಲಾ ಹಾಗೂ ಹಳಿಯಾಳದಲ್ಲೂ ಆಧಾರ್‌ ಅದಾಲತ್‌ ನಡೆಸಲಾಗಿದ್ದು, ಮುಂದಿನ ಹಂತದಲ್ಲಿ ಹೊನ್ನಾವರ ಮತ್ತು ಭಟ್ಕಳ ತಾಲ್ಲೂಕಿನಲ್ಲಿ ಅದಾಲತ್‌ ಹಮ್ಮಿಕೊಳ್ಳಲಾಗಿದೆ. ಈವರೆಗೆ ಆಧಾರ್‌ ನೋಂದಣಿ ಮಾಡಿಸದೇ ಇದ್ದವರು ಹಾಗೂ ಕಾರ್ಡ್‌ನಲ್ಲಿ ಏನಾದರೂ ದೋಷ ಇದ್ದರೆ ಅದಲಾತ್‌ನಲ್ಲಿ ಭಾಗವಹಿಸಿ ಸರಿಪಡಿಸಿಕೊಳ್ಳಬಹುದು. ಜಿಲ್ಲೆಯ ಎಲ್ಲರಿಗೂ ಆಧಾರ್ ಸೌಲಭ್ಯ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿರುವ ಅಶಕ್ತರು, ಅಂಗವಿಕಲರು ನೋಂದಣಿ ಕೇಂದ್ರಕ್ಕೆ ಬರುವುದು ಕಷ್ಟಸಾಧ್ಯವಾಗಿತ್ತು. ಇದೀಗ ಅವರಿಗೆ ಆಧಾರ್‌ ಕೊಡಿಸುವ ಸಲುವಾಗಿ ನಮ್ಮ ಸಿಬ್ಬಂದಿಯೇ ಅಗತ್ಯ ಪರಿಕರಗಳೊಂದಿಗೆ ಅವರ ಮನೆಗೆ ತೆರಳಿ ನೋಂದಣಿ ಮಾಡುತ್ತಿದ್ದಾರೆ. ಆಧಾರ್‌ ಇಲ್ಲದೇ ಪಿಂಚಣಿ ಪಡೆಯಲು ಹೆಣಗಾಡುತ್ತಿದ್ದ ವೃದ್ಧರಿಗೆ ಇದರಿಂದ ತುಂಬಾ ಅನುಕೂಲವಾಗಿದೆ’ ಎಂದು ವಿವರಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT