ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾ ಬರ್ಡ್‌ ಮ್ಯಾರಾಥಾನ್‌: ಪಕ್ಷಿ ವೀಕ್ಷಣೆ

15 ಹೊಸ ಪಕ್ಷಿಗಳ ಪತ್ತೆ
Last Updated 16 ಜನವರಿ 2017, 8:14 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಕೈಗಾ ಅಣು ವಿದ್ಯುತ್‌ ಸ್ಥಾವರದ ಸುತ್ತಮುತ್ತಲಿನ ಪರಿಸರದಲ್ಲಿ ಎನ್‌ಪಿಸಿಐಎಲ್‌ ಶಶಿಕಾಂತ ರಾಣೆ ಆಯೋಜಿಸಿದ್ದ ‘ಕೈಗಾ ಬರ್ಡ್‌ ಮ್ಯಾರಥಾನ್‌’ನಲ್ಲಿ ಅಮೂರ ಗಿಡುಗ ಸೇರಿದಂತೆ 15 ಹೊಸ ಪಕ್ಷಿಗಳ ಪತ್ತೆಯಾಗಿದ್ದು, ಈ ಮೂಲಕ ಏಳನೇಯ ಆವೃತ್ತಿಯವರೆಗೆ ಗಣತಿಯಲ್ಲಿ ಪತ್ತೆಯಾದ ಪಕ್ಷಿಗಳ ಸಂಖ್ಯೆಯು 279ಕ್ಕೇರಿದೆ.

ಸ್ಥಳೀಯ ಕೈಗಾ ನೌಕರರು, ಶಿರಸಿಯ ಅರಣ್ಯ ಮಹಾವಿದ್ಯಾಲಯ, ಉತ್ತರ ಕರ್ನಾಟಕ ಪಕ್ಷಿ ವೀಕ್ಷಣಾ ತಂಡ, ಗೋವಾ ಬರ್ಡ್‌ ಕನ್ಸರ್‌ವೇಷನ್ ನೆಟವರ್ಕ್‌, ಗೋವಾ ಮಹಾವಿದ್ಯಾಲಯ, ಬೆಂಗಳೂರು ಪಕ್ಷಿ ವೀಕ್ಷಣಾಕಾರರ ಸಂಘ , ವೈಲ್ಡ್‌ಲೈಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಹೀಗೆ ಕರ್ನಾಟಕವಷ್ಟೇ ಅಲ್ಲದೇ ದೇಶದ ನಾನಾ ಭಾಗದಿಂದ ಬಂದ ಸುಮಾರು 125 ಪಕ್ಷಿ ವೀಕ್ಷಣಾಕಾರರು ಈ ಗಣತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉದ್ಘಾಟನೆ: ಭಾನುವಾರ ಬೆಳಿಗ್ಗೆ 5:30ಕ್ಕೆ ಆರಂಭಗೊಂಡ ಈ ಕಾರ್ಯಕ್ರಮವನ್ನು ಕೈಗಾ ವಿದ್ಯುತ್ ಕೇಂದ್ರದ ಕ್ಷೇತ್ರ ನಿರ್ದೇಶಕ ಎಚ್‌.ಎನ್.ಭಟ್‌ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಅಣು ವಿದ್ಯುತ್ ದೇಶದ ಪ್ರಗತಿಗೆ ಅವಶ್ಯವಾಗಿದ್ದು, ಕೈಗಾ ಅಣುವಿದ್ಯುತ್ ಕೇಂದ್ರವು ಅತ್ಯಂತ ಸ್ವಚ್ಛ ರೀತಿಯಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಪರಿಸರಕ್ಕೆ ಪೂರಕವಾಗಿದೆ. ಬರ್ಡ್‌ ಮ್ಯಾರಥಾನ್‌ನಲ್ಲಿ ಪ್ರತಿವರ್ಷ ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಪಕ್ಷಿಗಳು ಇದಕ್ಕೆ ನಿದರ್ಶನವಾಗಿವೆ.

ಕೈಗಾ ಪರಿಸರ ಮುಂದಾಳತ್ವ ಕಾರ್ಯಕ್ರಮದ ಅಧ್ಯಕ್ಷ ಪ್ರೇಮಕುಮಾರ ಮಾತನಾಡಿ, ವರ್ಷದಿಂದ ವರ್ಷಕ್ಕೆ ಈ ಮ್ಯಾರಥಾನ್‌ನಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಗಿರುವುದು ಸಹ ಈ ಕಾರ್ಯಕ್ರಮದ ಜನಪ್ರಿಯತೆಯನ್ನು ಸೂಚಿಸುತ್ತಿದೆ ಎಂದು ಹೇಳಿದರು.

ಕೈಗಾ 1 ಮತ್ತು 2 ಘಟಕದ ಮುಖ್ಯ ಸೂಪರಿಂಟೆಂಡೆಂಟ್‌ ಜಿ.ಪಿ.ರೆಡ್ಡಿ, ಕೈಗಾ 3 ಮತ್ತು 4 ಘಟಕದ ಮುಖ್ಯ ಸೂಪರಿಂಟೆಂಡೆಂಟ್‌ ಡಿ.ಡಿ.ಜೈನ್‌, ಭಾರತೀಯ ಅಣುವಿದ್ಯುತ್ ನಿಗಮದ ಮುಂಬೈ ಶಾಖೆಯ ಸುಶಾಂತ ಕುಮಾರ ಜೇನಾ, ವೈಲ್ಡ್‌ಲೈಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಡಾ.ರುಚಿ ಬಡೋಲಾ ಉಪಸ್ಥಿತರಿದ್ದರು.

ಕಂಡುಬಂದ ಹೊಸ ಪಕ್ಷಿಗಳು
ಗ್ರೀನ್‌ ವಾಬ್ರ್ಲರ್‌, ಮಾಟಲ್ಡ್‌ ವುಡ್‌ ಔಲ್‌, ಇಂಡಿಯನ್ ನೈಟ್‌ ಝಾರ್‌, ಸ್ಟ್ರಿಯೇಟೆಡ್‌ ಹೆರಾನ್, ಪಾಲ್ಲಿಡ್‌ ಹಾರ್ರಿಯರ್, ಇಂಡಿಯನ್‌ ಥಿಕ್‌ ನೀ, ಕಾಮನ್‌ ಟೀಲ್‌, ಯುರೇಸಿಯನ್ ಕೂಟ್‌, ಗಾಡವಾಲ್‌, ಗಾರ್ಗನೀ, ಇಂಡಿಯನ್ ಸ್ಪಾಟ್‌ ಬಿಲ್ಲಡ್‌ ಡಕ್, ವ್ಹಿಸ್ಕರ್ಡ್‌ ಟರ್ನ್‌, ಅಮೂರ ಗಿಡುಗ, ರಡ್ಡಿ ಬ್ರೇಸ್ಟೆಡ್‌ ಕ್ರೇಕ್ ಪ್ರಸಕ್ತ ಮ್ಯಾರಥಾನ್‌ನಲ್ಲಿ ಕಂಡುಬಂದ ಹೊಸ ಪಕ್ಷಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT