ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾಚಿಯಿಂದ ಎಂಡೋಸಲ್ಫಾನ್‌ ನಾಶ’

Last Updated 12 ಸೆಪ್ಟೆಂಬರ್ 2013, 6:48 IST
ಅಕ್ಷರ ಗಾತ್ರ

ಕಾರವಾರ: 'ಕೇರಳ ಮತ್ತು ಕರ್ನಾಟಕದಲ್ಲಿ ಹರಡಿರುವ ಎಂಡೋಸಲ್ಫಾನ್‌ ಅಂಶವನ್ನು ಪಾಚಿ ಸಸ್ಯದ ಮೂಲಕ ನಿಯಂತ್ರಿಸಬಹುದು’ ಎಂದು ಮಾನವ ಹಕ್ಕುಗಳ ಫೋರಂನ ಅಧ್ಯಕ್ಷ ಡಾ.ರವೀಂದ್ರನಾಥ ಶಾನಭಾಗ ಬುಧವಾರ ಇಲ್ಲಿ ತಿಳಿಸಿದರು.

'ಪಾಚಿ ಮೂಲಕ ಎಂಡೋಸಲ್ಫಾನ್‌ನ್ನು ನಾಶಪಡಿಸುವ ಪದ್ದತಿಯನ್ನು ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಕುರಿತು ಕೆಲ ವಿಜ್ಞಾನಿಗಳನ್ನು ಸಂಪರ್ಕಿಸಿದಾಗ ಅಮೆರಿಕದಲ್ಲಿರುವ ಭಾರತ ಮೂಲದ ಸಂಶೋಧಕರೊಬ್ಬರು ರಾಜ್ಯದಲ್ಲಿ ಈ ಪದ್ದತಿಯನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

'ದೇಶದಲ್ಲಿ 1.50 ಲಕ್ಷ ಟನ್‌ ಎಂಡೋಸಲ್ಫಾನ್‌ ಇದೆ. ಇದನ್ನು ರಾಸಾಯನಿಕವಾಗಿ ನಾಶಪಡಿಸಲು ರೂ 1,300 ಕೋಟಿ ಖರ್ಚಾಗುತ್ತದೆ. ಆದರೆ ಪಾಚಿ ಮೂಲಕ ಕೇವಲ ರೂ 30 ಲಕ್ಷ ದಲ್ಲಿ ನಾಶಪಡಿಸಬಹುದು ಎಂದು ತಿಳಿದುಬಂದಿದೆ’ ಎಂದರು.

'ಉಡುಪಿ ಜಿಲ್ಲೆಯಲ್ಲಿ 1,500 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,700 ಎಂಡೋಸಲ್ಫಾನ್‌ ಪೀಡಿತರನ್ನು ಈಗಾಗಲೇ ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಭಟ್ಕಳ ತಾಲ್ಲೂಕಿನ ಮೂರು ಗ್ರಾಮಗಳಲ್ಲಿ ಮಾತ್ರ ಸಮೀಕ್ಷೆ ನಡೆಸಲಾಗಿದ್ದು, 300 ಎಂಡೋಸಲ್ಫಾನ್‌ ಪೀಡಿತರನ್ನು ಪತ್ತೆ ಮಾಡಲಾಗಿದೆ. ಅಕ್ಟೋಬರ್‌ ಅಂತ್ಯಕ್ಕೆ ಜಿಲ್ಲೆಯಾದ್ಯಂತ ಸಮೀಕ್ಷೆ ಪೂರ್ಣಗೊಳ್ಳಲಿದ್ದು, ಇದಕ್ಕಾಗಿ ಸರ್ಕಾರದಿಂದ ಒಂಬತ್ತು ಕೋಟಿ ರೂಪಾಯಿ ಬಿಡುಗಡೆಯಾಗಿದೆ’ ಎಂದರು.

ಉಚಿತ ಸ್ಕ್ಯಾನಿಂಗ್‌: ’ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ 19 ವಾರದ ಗರ್ಭಿಣಿ ಮಹಿಳೆಯ ಸ್ಕ್ಯಾನಿಂಗ್‌ ಪರೀಕ್ಷೆ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ. ಈ ಕುರಿತು ಬುಧವಾರ ಹಳಿಯಾಳದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಆರ್‌.ವಿ ದೇಶಪಾಂಡೆ ಅವರೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಸಚಿವರು ಇದಕ್ಕೆ ಸಹಮತ ಸೂಚಿಸಿದ್ದಾರೆ’ ಎಂದರು. ಜಿ.ಪಂ. ಸಿಇಒ ಕೆ. ಸುಬ್ರಾಯ ಕಾಮತ ಹಾಜರಿದ್ದರು.

ಅಂತರ್ಜಲ ಸೇರಿದ ಎಂಡೋಸಲ್ಫಾನ್‌
'1968 ರಿಂದ 1998ರ ವರೆಗೆ ಜಿಲ್ಲೆಯ 203 ಹಳ್ಳಿಗಳಲ್ಲಿ 7,990 ಹೆಕ್ಟೇರ್‌ ಪ್ರದೇಶದಲ್ಲಿ ಗೇರು ಗಿಡಗಳಿಗೆ ಎಂಡೋಸಲ್ಫಾನ್‌ ಕೀಟನಾಶಕ ಸಿಂಪಡಿಸಲಾಗಿದೆ. ಇದು ಈಗ ಅಂತರ್ಜಲವನ್ನೂ ಸೇರಿದ್ದು, ಇನ್ನು 30 ವರ್ಷ ಇದರಿಂದ ತೊಂದರೆಗಳು ಉಂಟಾಗಲಿದೆ’ ಎಂದು ಡಾ.ರವೀಂದ್ರನಾಥ ಶಾನಭಾಗ ಆತಂಕ ವ್ಯಕ್ತಪಡಿಸಿದರು.

'ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಎಂಡೋಸಲ್ಫಾನ್‌ ಪೀಡಿತರಿಗೆ ಚಿಕಿತ್ಸೆ ನೀಡಲು ಅಲ್ಲಿಯ ಖಾಸಗಿ ವೈದ್ಯರು ಮುಂದೆ ಬಂದಿದ್ದಾರೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಅದರಂತೆಯೇ ಜಿಲ್ಲೆಯಲ್ಲಿಯೂ ಸಹ ವೈದ್ಯರು, ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದರೆ ಎಂಡೋಸಲ್ಫಾನ್‌ನ್ನು ನಿಯಂತ್ರಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT