ಗುರುವಾರ , ಡಿಸೆಂಬರ್ 1, 2022
25 °C
ಈಗಲೂ ಹೊಸಪೇಟೆಗೆ ಸಿಹಿ ನೀರು ಗಗನಕುಸುಮ; ಅಣೆಕಟ್ಟೆ ಮೇಲ್ಭಾಗಕ್ಕೆ ಸಿಗದ ನೀರು

ವಿಜಯನಗರ: ನದಿಗೆ ಹರಿದ 350 ಟಿಎಂಸಿ ಅಡಿ ನೀರು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯವಿದ್ದರೂ ನೀರಿಗಾಗಿ ಪರದಾಟ ನಡೆಸುವಂಥ ಪರಿಸ್ಥಿತಿ ಜಿಲ್ಲೆಯಲ್ಲಿದೆ. ಅಣೆಕಟ್ಟೆಯ ನೀರಿನ ಸದ್ಬಳಕೆಯ ವಿಚಾರದಲ್ಲಿ ಸೂಕ್ತ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸದ ಕಾರಣ ಪ್ರತಿವರ್ಷ ಅಪಾರ ಪ್ರಮಾಣದ ನೀರು ನದಿ ಮೂಲಕ ಸಮುದ್ರ ಪಾಲಾಗುತ್ತಿದೆ.

ಪ್ರಸಕ್ತ ವರ್ಷ ಜುಲೈ ಮೊದಲ ವಾರದಲ್ಲಿ ಜಲಾಶಯ ಸಂಪೂರ್ಣ ತುಂಬಿದ್ದು, ಇದುವರೆಗೆ 350 ಟಿಎಂಸಿ ಅಡಿ ನೀರು ನದಿಗೆ ಹರಿಸಲಾಗಿದೆ. ಈಗಲೂ ಬಿಡಲಾಗುತ್ತಿದೆ. ಇಷ್ಟೊಂದು ಪ್ರಮಾಣದ ನೀರು ಕಣ್ಮುಂದೆ ಹರಿದು ಹೋಗುತ್ತಿದ್ದರೂ  ಹೊಸಪೇಟೆ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸಿಹಿ ನೀರಿಗೆ ಪರದಾಟ ನಡೆಸುವಂಥ ಪರಿಸ್ಥಿತಿ ಇದೆ. ಹಣ ಕೊಟ್ಟು ಖಾಸಗಿಯವರ ಬಳಿ ಶುದ್ಧ ಕುಡಿಯುವ ನೀರು ಖರೀದಿಸಬೇಕಾದ ಪರಿಸ್ಥಿತಿ ಇದೆ.

ಜಿಲ್ಲೆಯ ಹೂವಿನಹಡಗಲಿಯಲ್ಲಿ ತುಂಗಭದ್ರಾ ನದಿಯಿಂದ ಯಶಸ್ವಿಯಾಗಿ ಕೆರೆಗಳಿಗೆ ನೀರು ತುಂಬಿಸಿದ ಪರಿಣಾಮ ಅಲ್ಲಿನ ಚಿತ್ರಣ ಸ್ವಲ್ಪಮಟ್ಟಿಗೆ ಬದಲಾಗಿದೆ. ಕೂಡ್ಲಿಗಿ, ಹೊಸಪೇಟೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ, ಈ ಕಾಮಗಾರಿಗಳಿಂದ ಸಮಸ್ಯೆ ನೀಗುವುದೇ? ಈ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ವಿಜಯನಗರ ಜಿಲ್ಲೆಯ ಬಹುತೇಕ ಭಾಗ ಮಳೆಯನ್ನೇ ಆಶ್ರಯಿಸಿದೆ. ಸಮೃದ್ಧವಾಗಿ ಮಳೆಯಾದರಷ್ಟೇ ಕೃಷಿ ಚಟುವಟಿಕೆಗಳು ಬಿರುಸುಗೊಳ್ಳುತ್ತವೆ. ನೀರಿನ ಸಮಸ್ಯೆ ನೀಗುತ್ತದೆ.

ಬೇಸಿಗೆಯಲ್ಲಿ ಜಲಮೂಲಗಳು ಬತ್ತು ಹೋಗುವುದರಿಂದ ಪರಿಸ್ಥಿತಿ ಸಂಪೂರ್ಣವಾಗಿ ಬಿಗಡಾಯಿಸುತ್ತದೆ. ಮೇವು, ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ತಾಲ್ಲೂಕಿನ ಕೆಲವೆಡೆ ಇಂಥದ್ದೇ ಪರಿಸ್ಥಿತಿ ಇದೆ. ಬೇಸಿಗೆಯಲ್ಲಿ ಟ್ಯಾಂಕರ್‌, ಖಾಸಗಿ ಕೊಳವೆಬಾವಿಗಳ ಮೂಲಕ ಜಿಲ್ಲೆಯ ಹೆಚ್ಚಿನ ಕಡೆಗಳಿಗೆ ನೀರು ಪೂರೈಸಲಾಗುತ್ತದೆ. ಮಳೆಗಾಲ ಬಂದ ನಂತರ ಪ್ರಭುತ್ವ ಅದನ್ನು ಮರೆಯುತ್ತದೆ. ಆದರೆ, ಶಾಶ್ವತ ಯೋಜನೆ ಜಾರಿಗೆ ಇಚ್ಛಾಶಕ್ತಿ ತೋರುತ್ತಿಲ್ಲ.

ಆಂಧ್ರದ ಅನಂತಪುರ, ಕಡಪ, ಕರ್ನೂಲ್‌, ಮೆಹಬೂಬ್‌ನಗರದಲ್ಲಿ ತುಂಗಭದ್ರಾ ನೀರನ್ನು ಕೆರೆ, ಕಟ್ಟೆಗಳಲ್ಲಿ ಸಂಗ್ರಹಿಸುತ್ತಿದ್ದಾರೆ. ಬೇಸಿಗೆಯಲ್ಲಿ ಆ ನೀರು ಬಳಸುತ್ತಿದ್ದಾರೆ. ಇದರ ಪರಿಣಾಮ ಕೆಲವು ವರ್ಷಗಳಿಂದ ಅಲ್ಲಿ ಬೇಸಿಗೆಯಲ್ಲಿ ಸಮಸ್ಯೆ ಉದ್ಭವಿಸುತ್ತಿಲ್ಲ. ಅಂಥದ್ದೇ ಯೋಜನೆ ಈ ಭಾಗದಲ್ಲೂ ಜಾರಿಗೆ ತರಬೇಕೆನ್ನುವುದು ರೈತರ ಹಕ್ಕೊತ್ತಾಯವಾಗಿದೆ. 

‘ನಮ್ಮವರಿಗೆ ಇಚ್ಛಾಶಕ್ತಿಯ ಕೊರತೆ ಇದೆ. ಆಂಧ್ರ ಪ್ರದೇಶದವರನ್ನು ನೋಡಿ ಕಲಿಯಬೇಕು. ಜಿಲ್ಲಾ ಖನಿಜ ನಿಧಿ ಯಾವ್ಯಾವುದೋ ಉದ್ದೇಶಕ್ಕೆ ಬಳಸಲಾಗುತ್ತಿದೆ. ಅದನ್ನು ನೀರಾವರಿ ಯೋಜನೆಗಳಿಗೆ ಬಳಸಿದರೆ ಬಿಸಿಲು ನಾಡು ಖ್ಯಾತಿಯ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಚಿತ್ರಣವೇ ಬದಲಿಸಬಹುದು’ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌.

ನದಿ ನೀರು ಏನಾಗುತ್ತದೆ?: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿದರೆ ಅದು ನೇರವಾಗಿ ಕೃಷ್ಣ ನದಿಯೊಂದಿಗೆ ಸೇರುತ್ತದೆ. ಅನಂತರ ಸಮುದ್ರ ಸೇರುತ್ತದೆ. ಹಾಗಂತ ಇಡೀ ನೀರು ಸಮುದ್ರ ಸೇರುವುದಿಲ್ಲ. ಮಾರ್ಗದುದ್ದಕ್ಕೂ ಬರುವ ಸಣ್ಣ ಪುಟ್ಟ ಕೆರೆ, ಕಟ್ಟೆಗಳಿಗೆ ಪ್ರಯೋಜನವಾಗುತ್ತದೆ. ಒಂದುವೇಳೆ ನದಿಯುದ್ದಕ್ಕೂ ಉತ್ತಮ ಮಳೆಯಾದರೆ ಅದರೊಂದಿಗೆ ಸೇರಿ ಸಮುದ್ರ ಸೇರುತ್ತದೆ. ನೀರಾವರಿ ತಜ್ಞರ ಪ್ರಕಾರ, ನದಿಗೆ 100 ಟಿಎಂಸಿ ಅಡಿ ನೀರು ಹರಿಸಿದರೆ ಶೇ 75ರಷ್ಟು ನೀರು ಸಮುದ್ರಾ ಪಾಲಾಗುತ್ತದೆ. ಆ ನೀರು ಬಳಸಿಕೊಂಡು ಯಾವುದೇ ಯೋಜನೆ ರೂಪಿಸಬಹುದು. ನೀರಿಗಾಗಿ ತಂಟೆ, ತಕರಾರೂ ಸೃಷ್ಟಿಯಾಗುವುದಿಲ್ಲ. ಆದರೆ, ಬರಗಾಲದಂಥ ಪರಿಸ್ಥಿತಿ ಸೃಷ್ಟಿಯಾದರೆ ಜಲಾಶಯದಿಂದ ಅಲ್ಪಪ್ರಮಾಣದಲ್ಲಿ ನದಿಗೆ ನೀರು ಹರಿಸಬೇಕು. ಇದರಿಂದ ಅನೇಕ ಜಲಚರಗಳು ಬದುಕುಳಿಸಲು ಸಾಧ್ಯ.

ಯಾವ ವರ್ಷ? ಎಷ್ಟು ನೀರು ನದಿಗೆ?

* 150 ಟಿಎಂಸಿ ಅಡಿ 2018ರಲ್ಲಿ

* 180 ಟಿಎಂಸಿ ಅಡಿ 2019ರಲ್ಲಿ

* 254 ಟಿಎಂಸಿ ಅಡಿ 2020ರಲ್ಲಿ

* 200 ಟಿಎಂಸಿ ಅಡಿ 2021ರಲ್ಲಿ

* 350 ಟಿಎಂಸಿ ಅಡಿ 2022ರಲ್ಲಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು