ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ: ಮಹಿಳೆಯ ಜತೆಗೆ ಅನುಚಿತ ವರ್ತನೆ

ಅನಧಿಕೃತ ಪ್ರವಾಸಿ ಮಾರ್ಗದರ್ಶಿ ವಿರುದ್ಧ ಮಹಾರಾಷ್ಟ್ರದ ಪ್ರವಾಸಿಯಿಂದ ದೂರು
Published 27 ಅಕ್ಟೋಬರ್ 2023, 16:21 IST
Last Updated 27 ಅಕ್ಟೋಬರ್ 2023, 16:21 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಅನಧಿಕೃತ ಪ್ರವಾಸಿ ಮಾರ್ಗದರ್ಶಿಯೊಬ್ಬ ಮಹಾರಾಷ್ಟ್ರದ ಪ್ರವಾಸಿ ಮಹಿಳೆಯ ಜತೆಗೆ ಅನುಚಿತವಾಗಿ ವರ್ತಿಸಿದ ಕುರಿತಂತೆ ಸಂತ್ರಸ್ತ ಮಹಿಳೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಿಗೆ ಶುಕ್ರವಾರ ಲಿಖಿತ ದೂರು ನೀಡಿದ್ದಾರೆ.

ಮಹಾರಾಷ್ಟ್ರದ ಮೀರಾನಗರದಿಂದ ಬಂದ ರಶ್ಮಿ ಕಕ್ಕರ್ ಅವರು ಮಾರುತಿ ಎಂಬುವವರ ವಿರುದ್ಧ ದೂರು ನೀಡಿದ್ದು, ಆತನೊಂದಿಗೆ ಪ್ರವಾಸೋದ್ಯಮ ಇಲಾಖೆಯ ಕಚೇರಿಗೆ ಬಂದಾಗ, ಅಲ್ಲಿದ್ದ ಸಿಬ್ಬಂದಿ ತಮಗೆ ಬೆಂಬಲ ನೀಡದೆ ಆರೋಪಿಗೇ ನೆರವಾಗುವ ರೀತಿಯಲ್ಲಿ ವರ್ತಿಸಿದರು. ಹೀಗಾಗಿ ಇಲಾಖೆಯ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ವ್ಯಕ್ತಿಯಿಂದ ನನಗೆ ಅನ್ಯಾಯವಾಗಿದೆ ಎಂದು ಹೇಳಲು ನಾನು ಆತನನ್ನು ಇಲಾಖೆಯ ಕಚೇರಿಗೆ ಕರೆತಂದೆ. ಆದರೆ ಅಲ್ಲಿನ ಇಬ್ಬರು ಸಿಬ್ಬಂದಿ ನನಗೆ ನೆರವಾಗುವ ಬದಲಿಗೆ ಆರೋಪಿಗೇ ನೆರವಾದರು. ಆರೋಪಿ ಮದ್ಯ ಸೇವಿಸಿದ್ದ. ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವ ನಾಟಕವಾಡಿ ಆತ ಪಲಾಯನ ಮಾಡುವಂತೆ ಮಾಡಿದರು. ಬೈಕ್‌ ಸಹ ಒದಗಿಸಿಕೊಟ್ಟರು. ಇದರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ನೆರವಾದ ಇಲಾಖೆಯ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು, ಏನು ಕ್ರಮ ಕೈಗೊಂಡಿದ್ದೀರಿ ಎಂಬ ಬಗ್ಗೆ ನನಗೆ ಮಾಹಿತಿ ನೀಡಬೇಕು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಠಾಣೆಗೆ ದೂರು ನೀಡಿದ ಡಿಡಿ: ಮಹಿಳೆ ದೂರು ನೀಡಲು ಬಂದಾಗ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ಅವರು ಕಚೇರಿಯಲ್ಲಿ ಇರಲಿಲ್ಲ. ಕರ್ನಾಟಕ–50 ವೈಭವ ಕುರಿತಂತೆ ಜಿಲ್ಲಾಧಿಕಾರಿ ಅವರು ಕರೆದಿದ್ದ ಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳಲು ಹೊಸಪೇಟೆಗೆ ಹೋಗಿದ್ದರು. ಅವರು ವಾಪಸ್ ಬಂದಾಗ ವಿಷಯ ಗೊತ್ತಾಗಿದ್ದು, ಬಳಿಕ ಹಂಪಿ ಠಾಣೆಗೆ ದೂರು ನೀಡಿದ್ದಾರೆ.

‘ಅನಧಿಕೃತ ಪ್ರವಾಸಿ ಮಾರ್ಗದರ್ಶಕರ ಬಗ್ಗೆ ಪ್ರವಾಸಿಗರು ಎಚ್ಚರದಿಂದ ಇರಬೇಕು. ವೆಬ್‌ಸೈಟ್‌ನಲ್ಲಿ ಅಧಿಕೃತ ಪ್ರವಾಸಿ ಮಾರ್ಗದರ್ಶಕರ ಮಾಹಿತಿ ಇದೆ. ಹೀಗಿದ್ದರೂ ಅನುಚಿತವಾಗಿ ವರ್ತಿಸಿದ ಅನಧಿಕೃತ ಪ್ರವಾಸಿ ಮಾರ್ಗದರ್ಶಿ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಠಾಣೆಗೆ ದೂರು ನೀಡಿದ್ದೇನೆ’ ಎಂದು ಪ್ರಭುಲಿಂಗ ತಳಕೇರಿ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

ಶುಕ್ರವಾರ ರಾತ್ರಿಯವರೆಗೂ ಹಂಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT