ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ: ಹೂವಲ್ಲಿ ಅರಳಿದ ಕಮಲ್ ಮಹಲ್

ಹಂಪಿ ಉತ್ಸವದಲ್ಲಿ ಮೊದಲ ಸಲದ ಸಿರಿಧಾನ್ಯ ಮೇಳ
Published 2 ಫೆಬ್ರುವರಿ 2024, 11:48 IST
Last Updated 2 ಫೆಬ್ರುವರಿ 2024, 11:48 IST
ಅಕ್ಷರ ಗಾತ್ರ

ಹಂಪಿ (ವಿಜಯನಗರ ): ಸಿರಿಧಾನ್ಯಗಳಿಂದ ಅರಳಿದ ಕನ್ನಡಾಂಬೆ, ಬಸವಣ್ಣ, ಲಕ್ಷಾಂತರ ಹೂವುಗಳಿಂದ ತಲೆ ಎತ್ತಿರುವ ವಿಶ್ವಪ್ರಸಿದ್ದ ಕಮಲ್ ಮಹಲ್, ತರಕಾರಿ ಕೆತ್ತನೆಯ ಕಲಾಕೃತಿಗಳು, ತಳಿರು ತೋರಣ ಮಂಟಪದಲ್ಲಿ ಚಿತ್ರಿಸಿದ ಸಿರಿ ಕಣದ ರಾಶಿ, ಆರೋಗ್ಯ ವೃದ್ದಿಸುವ ವಿವಿಧ ಬಗೆಯ ಸಾವಯವ ಸಿರಿಧಾನ್ಯಗಳು, ಇವು ನೋಡುಗರ ಗಮನ ಸೆಳೆಯುತ್ತಿವೆ.

ವಿಜಯನಗರದ ಗತವೈಭವ ಸಾರುವ ವಿಶ್ವವಿಖ್ಯಾತ ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ ಚಾಲನೆ ಸಿಕ್ಕಿರುವ ಫಲಪುಷ್ಪ ಪ್ರದರ್ಶನ, ಇದೇ ಮೊದಲ ಸಲದ ಸಿರಿಧಾನ್ಯ ಮೇಳದಲ್ಲಿ ಅನೇಕ ಆಕೃತಿಗಳು, ಹಲವು ಬಗೆಯ ಸಿರಿಧಾನ್ಯದ ತಿಂಡಿ ತಿನಿಸುಗಳನ್ನು ನೋಡಿ ಜನ ಖುಷಿಗೊಂಡರು.

ಸಿರಿಧಾನ್ಯ ವಸ್ತು ಪ್ರದರ್ಶನದ ಮುಖ್ಯ ದ್ವಾರದಲ್ಲಿ ತಳಿರು ತೋರಣದ ಮಂಟಪದಲ್ಲಿ ನವಣೆ, ಕೊರಲೆ, ಬರಗು, ಊದಲು, ಸಾಮೆಯಿಂದ ತಯಾರಿಸಿದ ಕಣದ ರಾಶಿ, ಪ್ರವಾಸಿಗರನ್ನು ಆಕರ್ಷಿಸಿತು.

ಕೂರಿಗೆ, ಕುಂಟೆ, ಬಾರಿಕೋಲು, ಕುಡಗಳು, ಚಲಕ, ಕಡಗೋಲು, ಮುರಗುಂಟೆ, ಅಳತೆ ಶೇರು, ಕಿರುಕುಂಟೆ, ಹೆಡೆಕುಂಟೆ, ಅಕ್ಕಡಿ ಶೆಡ್ಡಿ, ತಬ್ಬಿ ಮಣೆ, ಕೂರಿಗೆ ಬಟ್ಟಲು ಹೀಗೆ ಹಲವು ದೇಶಿ ಕೃಷಿ ಉಪಕರಣಗಳನ್ನು ಇಲ್ಲಿ ಜೋಡಿಸಲಾಗಿದೆ. ರೋಣದ ಮಲ್ಲಜ್ಜಯ್ಯ ಗುರುಬಸಪ್ಪಜ್ಜನ ಮಠದಿಂದ ಬಂದಿರುವ 500ಕ್ಕೂ ಅಧಿಕ ಕೃಷಿ ಉಪಕರಣ, ಮಕ್ಕಳ ಆಟಿಕೆ ಸಾಮಾನು, ಮನುಷ್ಯರ ಗುಣ ಓದಿಸುವ ಕಟ್ಟಿಗೆಯಿಂದ ತಯಾರಿಸಿದ ಸಂದೂಕ ಪೆಟ್ಟಿಗೆ ಆಕರ್ಷಿಸುತ್ತಿವೆ.

ಜಲಾನಯನ ಅಭಿವೃದ್ದಿ ಮಾದರಿ, ಆಧುನಿಕ ಯಂತ್ರೋಪಕರಣ, ಇವುಗಳ ಜೊತೆಗೆ ಎತ್ತಿನ ಬಂಡಿ, ಮಣ್ಣಿನ ಮಡಕೆ, ಸಿರಿಧಾನ್ಯಗಳಿಂದ ರಚಿಸಿದ ಸಿರಿಧಾನ್ಯಗಳ ರಾಶಿ, ರಾಜ್ಯದ ವಿವಿಧ ಜಿಲ್ಲೆಯ ಸಂಘ ಸಂಸ್ಥೆಗಳಿಂದ ಬಂದಿರುವ 60ಕ್ಕೂ ಅಧಿಕ ಸಾವಯವ ಸಿರಿಧಾನ್ಯ ಮಳಿಗೆಗಳು ಉತ್ಸವದಲ್ಲಿ ಗಮನ ಸೆಳೆಯುತ್ತಿವೆ.

ಮೋಹಕ ಮಹಲ್: ವಿಶ್ವ ಪ್ರಸಿದ್ಧ ಹಂಪಿಯಲ್ಲೀಗ ಮತ್ತೊಂದು ಕಮಲ್ ಮಹಲ್ ಹುಟ್ಟಿಕೊಂಡಿದೆ. ಒಂದು ಕ್ಷಣ ಅಚ್ಚರಿಯಾದರು ಇದು ಸತ್ಯ. ಫಲಪುಷ್ಪ ವಸ್ತು ಪ್ರದರ್ಶನ ಪ್ರಾಂಗಣದಲ್ಲಿ ಸೇವಂತಿ, ಗುಲಾಬಿ, ಚೆಂಡು ಹೂ ಸೇರಿ ಬಗೆ ಬಗೆಯ 10 ಲಕ್ಷಕ್ಕೂ ಅಧಿಕ ಹೂವುಗಳಿಂದ ಮಾಡಿರುವ ಆಕೃತಿ ಥೇಟ್ ಕಮಲ್ ಮಹಲನ್ನೇ ಹೋಲುತ್ಚಿದೆ. ಇದರ ನಿರ್ಮಾಣಕ್ಕೆ ಹತ್ತು ಕ್ವಿಂಟಲ್ ಚೆಂಡು ಹೂ, ಒಂದು ಕ್ವಿಂಟಲ್ ಗುಲಾಬಿ, ಅಲಂಕಾರಿಕ ಹೂವುಗಳಾದ ಪೆಟುನಿಯಾ, ಸಾಲ್ವಯ, ಜೀನಿಯ, ಡ್ರೀಮ ಲ್ಯಾಂಡ್, ಕ್ರೈಸ್ತಂತಮ್, ಕಾರ್ನೆಶಿಯಂ, ಪೆಂಟಾಸ್, ಬ್ಲ್ಯು ಡೈಸ್, ಕಾರ್ನಲ್ ಯೂಸ್ , ಬಟರ್ ಹೂಗಳನ್ನು ಬಳಸಲಾಗಿದೆ. ಕೃಷ್ಣದೇವರಾಯನ ದರ್ಬಾರ್, ಆನೆಹೊತ್ತ ಅಂಬಾರಿಯ ಆಕೃತಿಗಳೂ ಆಕರ್ಷಿಸುತ್ತಿವೆ.

ಸಿರಿಧಾನ್ಯಗಳಿಂದ ರಚಿಸಿದ ಕನ್ನಡಾಂಬೆ, ಬಸವಣ್ಣ, ಎತ್ತಿನ ಬಂಡಿ ಓಡಿಸುವ ರೈತ. ಕೃಷಿ ಮನೆ, ವಾಟರ್ ಪಾಯಿಂಟ್, ವರ್ಟಿಕಲ್ ಗಾರ್ಡನ್, ಕಲ್ಲಂಗಡಿ, ಕುಂಬಳಕಾಯಿಯಲ್ಲಿ ಕೆತ್ತನೆ ಮಾಡಿರುವ ಶರಣರು, ಸಂತರು ಕಲಾಕೃತಿಗಳು, 25 ವರ್ಷ ವಯಸ್ಸಿನ ಕುಬ್ಜ ಗಿಡಗಳು, ಪಾಪಾಸು ಕಳ್ಳಿ ಜಾತಿಯ 150 ಸಸಿಗಳನ್ನು ಕಣ್ತುಂಬಿಕೊಳ್ಳಬಹುದು.

ವಸ್ತು ಪ್ರದರ್ಶನ ನಿರ್ಮಾಣದಲ್ಲಿ ಜಿಲ್ಲಾಡಳಿತ, ತೋಟಗಾರಿಕೆ, ಕೃಷಿ ಇಲಾಖೆಯ 100ಕ್ಕೂ ಅಧಿಕ ಸಿಬ್ಬಂದಿ, ಹಗರಿಬೊಮ್ಮನಹಳ್ಳಿ, ಮಾಲ್ವಿ ತೋಟಗಾರಿಕೆ ತರಬೇತಿ ಕೇಂದ್ರದ 48 ವಿದ್ಯಾರ್ಥಿಗಳು ಶ್ರಮವಹಿಸಿದ್ದಾರೆ.

ಸಿರಿಧಾನ್ಯ ಮೇಳ, ಫಲಪುಷ್ಪ ವಸ್ತು ಪ್ರದರ್ಶನಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಚಾಲನೆ ನೀಡಿದರು. ಶಾಸಕ ಎಚ್‌.ಆರ್‌.ಗವಿಯಪ್ಪ, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ ಮುದುಗಲ್, ಚಿದಾನಂದಪ್ಪ, ನಹೀಂ ಪಾಷಾ, ಸಹದೇವ ಎರಗುಪ್ಪಿ ಅವರಿದ್ದರು.

***

ಹಂಪಿ ಉತ್ಸವದಲ್ಲಿರುವ ಸಿರಿಧಾನ್ಯ ಮೇಳದಿಂದ ಜನರು ಸಿರಿಧಾನ್ಯಗಳ ಬಳಕೆ ಜ್ಙಾನ ಪಡೆದುಕೊಂಡು ದಿನಕ್ಕೆ ಕನಿಷ್ಟ ಒಂದು ಊಟ ಸಿರಿಧಾನ್ಯ ಬಳಸಿದರೆ ಸಾವಯವ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.

ಶರಣಪ್ಪ ಬಿ ಮುದುಗಲ್, ಜಂಟಿ ಕೃಷಿ ನಿರ್ದೇಶಕ, ವಿಜಯನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT