ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಪ್ರವಾಸಿ ತಾಣದಲ್ಲಿ ವಿದ್ಯುತ್ ಸಮಸ್ಯೆ

ಆರ್‌ಒ ಘಟಕ, ಬ್ಯಾಟರಿ ವಾಹನ ಚಾರ್ಜಿಂಗ್‌ಗೆ ಎದುರಾದ ಸಂಕಷ್ಟ
ಎಂ.ಜಿ.ಬಾಲಕೃಷ್ಣ
Published 25 ಡಿಸೆಂಬರ್ 2023, 7:19 IST
Last Updated 25 ಡಿಸೆಂಬರ್ 2023, 7:19 IST
ಅಕ್ಷರ ಗಾತ್ರ

ಹೊಸಪೇಟೆ : ವಿಶ್ವ ಪಾರಂಪರಿಕ ತಾಣ ಹಂಪಿ ‘ಬಯಲು ಮ್ಯೂಸಿಯಂ’ ಎಂದೇ ಖ್ಯಾತ. ಇದನ್ನು ನೋಡಲು ಬಯಸುವ ಮನಸ್ಸು ಕೋಟ್ಯಂತರ. ಆದರೆ ಇಲ್ಲಿಗೆ ಪ್ರವಾಸ ಬರಲು ಸಾಧ್ಯವಾಗುವುದು ಅದೆಷ್ಟೋ ಲಕ್ಷ ಮಂದಿಗೆ ಮಾತ್ರ. ಹೀಗೆ ಬರುವವರಿಗೆ ಇಲ್ಲಿ ವಿದ್ಯುತ್ ಸಮಸ್ಯೆ ನಾನಾ ರೀತಿಯಲ್ಲಿ ಕಾಡುತ್ತಿದೆ.

ಹಂಪಿಗೆ ಬರುವವರಿಗೆ ಸ್ಮಾರಕಗಳಿಗೆ ಭೇಟಿ ನೀಡಲು ಅವಕಾಶ ಇರುವುದು ಹಗಲು ಹೊತ್ತಲ್ಲಿ ಮಾತ್ರ. ರಾತ್ರಿ ಏನು ಕೆಲಸ? ಹಾಗಿದ್ದರೆ ವಿದ್ಯುತ್‌ನ ಹಂಗೇಕೆ? ಪ್ರಶ್ನೆ ಸಹಜ. ಇಲ್ಲಿನ ಆರ್‌ಒ ನೀರಿನ ಘಟಕಗಳು ಸಮರ್ಪಕವಾಗಿ ಕೆಲಸ ಮಾಡದೆ ಇರುವುದಕ್ಕೆ, ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ಹೋಗಿರುವುದಕ್ಕೆ, ಬ್ಯಾಟರಿ ವಾಹನಗಳು ಸಮರ್ಪಕವಾಗಿ ಚಾರ್ಜ್‌ ಆಗದೆ ಇರುವುದಕ್ಕೆ....ಹೀಗೆ ಹಲವಾರು ಸಮಸ್ಯೆಗಳಿಗೆ ಮುಖ್ಯ ಕಾರಣವೇ ವಿದ್ಯುತ್‌! ಸಮರ್ಪಕ ವಿದ್ಯುತ್ ಪೂರೈಕೆ ಆಗದ ಕಾರಣ ಈ ಎಲ್ಲ ಸಮಸ್ಯೆಗಳು ಎದುರಾಗಿವೆ ಎಂದು ಹಂಪಿಯ ಸ್ಮಾರಕಗಳ ಸಂರಕ್ಷಣೆ ಜವಾಬ್ದಾರಿ ಹೊತ್ತುಕೊಂಡ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಹೇಳುತ್ತಿದೆ.

ಹಂಪಿಯ ಪಾದವನ್ನು ತೊಳೆದುಕೊಂಡೇ ತುಂಗಭದ್ರಾ ನದಿ ಹರಿಯುತ್ತಿದೆ. ಇಲ್ಲಿ ನೀರಿಗೆ ಸಮಸ್ಯೆಯೇ ಇರಕೂಡದು. ಆದರೆ ವಾಸ್ತವ ಅಷ್ಟು ಸರಳವಾಗಿಲ್ಲ. ನೀರು ಹರಿಯುತ್ತಿದ್ದರೆ ಸಾಕೆ? ಅದನ್ನು ಎತ್ತಿ ಮೇಲಕ್ಕೆ ಹಾಕಲು ಪಂಪ್ ಬೇಡವೇ? ಪಂಪ್‌ಗೆ ವಿದ್ಯುತ್ ಬೇಡವೇ ಎಂಬ ಪ್ರಶ್ನೆಯನ್ನು ಎಎಸ್‌ಐ ಕೇಳುತ್ತದೆ. 

‘ಗೆಜ್ಜಲ ಮಂಟಪ ಮತ್ತು ವಿಜಯ ವಿಠ್ಠಲ ದೇವಸ್ಥಾನದ ಬಳಿ ಎರಡು ಟ್ರಾನ್ಸ್‌ಫಾರ್ಮರ್‌ಗಳ ಅಗತ್ಯವಿದೆ. ಜಿ–20 ಸಭೆಯ ವೇಳೆ ಇಲ್ಲಿ ತಾತ್ಕಾಲಿಕವಾಗಿ ವಿದ್ಯುತ್‌ ಪರಿವರ್ತಕ ಹಾಕಿದ್ದರು, ಬಳಿಕ ತೆಗೆದರು. ಟಿ.ಸಿ. ಸಮಸ್ಯೆಯಿಂದಾಗಿಯೇ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ಹೋಗುತ್ತಿವೆ’ ಎಂದು ಎಎಸ್ಐನ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸುಳಿವು ನೀಡದ ಕ್ಯಾಮೆರಾ: ಕಮಲ ಮಹಲ್‌ ಸಮೀಪ ಬೆಳೆದಿದ್ದ ಶ್ರೀಗಂಧದ ಮರವನ್ನು ಕಳೆದ ತಿಂಗಳು ಕಳ್ಳರು ಕದ್ದು ಸಾಗಿಸಿದ್ದರು. ಸಿಸಿಟಿವಿ ಕಣ್ಗಾವಲು ಇರುವಲ್ಲಿ ಇದು ಹೇಗೆ ಸಾಧ್ಯ? ಕಳ್ಳರು ಕ್ಯಾಮೆರಾ ಕಣ್ಣಿಗೆ ಬಿದ್ದಿರಬೇಕಲ್ಲ ಎಂಬ ಪ್ರಶ್ನೆಗೆ ಸಿಗುವ ಉತ್ತರವೇನೆಂದರೆ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ಹೋಗಿದ್ದವು ಎಂಬುದು. ಕ್ಯಾಮೆರಾಗಳು ಕೆಟ್ಟು ಹೋಗಲು ಕಾರಣ ಅಸಮರ್ಪಕ ವಿದ್ಯುತ್ ಪೂರೈಕೆ ಎಂದು ಬೆಟ್ಟು ಮಾಡಿ ತೋರಿಸುತ್ತದೆ ಎಎಸ್‌ಐ.

ವಿರೂಪಾಕ್ಷ ದೇವಸ್ಥಾನದ ಭಾಗದಲ್ಲಿ ವಿದ್ಯುತ್ ಸಮಸ್ಯೆ ಅಷ್ಟಾಗಿ ಇಲ್ಲ. ಉಳಿದ ಕಡೆಗಳಲ್ಲಿ ಏಕೆ ಈ ಸಮಸ್ಯೆ ಎಂದು ಜೆಸ್ಕಾಂ ಬಳಿ ಕೇಳಿದರೆ ಅವರು ನೀಡುವ ಉತ್ತರ ಕುತೂಹಲಕಾರಿ. ‘ಮೀಟರ್‌ ಅಳವಡಿಸದೆ ವಿದ್ಯುತ್‌ ಸಂಪರ್ಕ ಬೇಕು ಎಂದರೆ ಕೊಡಲು ಸಾಧ್ಯವಿಲ್ಲ. ಮೀಟರ್‌ ಅಳವಡಿಸಿ, ವಿದ್ಯುತ್ ಸಂಪರ್ಕದ ಜತೆಗೆ ಟಿ.ಸಿ ಕೇಳಿ, ನಾವು ವ್ಯವಸ್ಥೆ ಮಾಡುತ್ತೇವೆ’ ಎಂದು ಅವರು ಹೇಳುತ್ತಿದ್ದಾರೆ.

‘ಹಂಪಿಯಲ್ಲಿ ಎದುರಾಗಿರುವ ದೊಡ್ಡ ಸಮಸ್ಯೆ ಎಂದರೆ ವಿವಿಧ ಇಲಾಖೆಗಳ ಹಿತಾಸಕ್ತಿ ಸಂಘರ್ಷ, ಇದು ನಿವಾರಣೆಯಾದರೆ ಎಲ್ಲವೂ ಸರಿಹೋಗುತ್ತದೆ’ ಎಂದು ಜವಾಬ್ದಾರಿಯುತ ಅಧಿಕಾರಿಯೊಬ್ಬರು ಹೇಳಿದರು.

ಡೇವಿಡ್ ರಾಜ್‌
ಡೇವಿಡ್ ರಾಜ್‌
ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಬಳಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಾರ್ಯ ಬುಧವಾರ ನಡೆಯಿತು  –ಪ್ರಜಾವಾಣಿ ಚಿತ್ರ
ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಬಳಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕಾರ್ಯ ಬುಧವಾರ ನಡೆಯಿತು  –ಪ್ರಜಾವಾಣಿ ಚಿತ್ರ

ವಿದ್ಯುತ್ ಮತ್ತು ಇತರೇ ಸಮಸ್ಯೆಗಳನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳಬೇಕು– ಪ್ರದೀಪ್ ಕುಮಾರ್ ಚಿತ್ರಕಲಾವಿದ ಕಮಲಾಪುರ

ಸದ್ಯ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಬರುತ್ತಿದ್ದಾರೆ. ವಿದ್ಯುತ್ ವಿಚಾರದಲ್ಲಿ ಸರ್ಕಾರ ಶೀಘ್ರ ಕ್ರಮ ಜರುಗಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು – ಡೇವಿಡ್ ರಾಜ್ ಗುತ್ತಿಗೆದಾರ ಕಮಲಾಪುರ

'ಅರ್ಜಿ ಕೊಡಿ ಟಿ.ಸಿ ಹಾಕಿಸ್ತೇವೆ’ ‘ಮೀಟರ್ ಅಳವಡಿಸಿ ವಿದ್ಯುತ್‌ ಪಡೆಯುವ ಕಾನೂನುಬದ್ಧ ವ್ಯವಸ್ಥೆಗೆ ನಮ್ಮ ಸಂಪೂರ್ಣ ಸಹಕಾರ ಪ್ರೋತ್ಸಾಹ ಇದ್ದೇ ಇದೆ. ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸುವುದು ನಿಶ್ಚಿತ. ವಿಜಯ ವಿಠ್ಠಲ ದೇವಸ್ಥಾನ ಗೆಜ್ಜಲ ಮಂಟಪ ಪ್ರದೇಶಕ್ಕೆ ಟ್ರಾನ್ಸ್‌ಫಾರ್ಮರ್‌ ಬೇಕು ಎಂಬ ನಿಟ್ಟಿನಲ್ಲಿ ನಮಗೆ ಅರ್ಜಿಯನ್ನೇ ಕೊಟ್ಟಿಲ್ಲ. ಕೊಟ್ಟಿದ್ದರೆ ಈಗಾಗಲೇ ಹಾಕಿಸುತ್ತಿದ್ದೆವು. ಜಿ–20 ಸಮ್ಮೇಳನ ಸಮಯದಲ್ಲಿ ತಾತ್ಕಾಲಿಕವಾಗಿ ಟಿ.ಸಿ ಅಳವಡಿಸಿದ್ದು ನಿಜ ಬಳಿಕವಾದರೂ ಅದನ್ನು ಅಲ್ಲೇ ಉಳಿಸಬೇಕೆಂಬ ನಿಟ್ಟಿನಲ್ಲಿ ಮನವಿ ಮಾಡಿದ್ದರೂ ಉಳಿಸುತ್ತಿದ್ದೆವು. ಬಳಸುವ ಒಂದೊಂದು ಯೂನಿಟ್ ವಿದ್ಯುತ್‌ಗೆ ನಾವು ಲೆಕ್ಕ ಕೊಡಬೇಕು. ಹೀಗಾಗಿ ಮೀಟರ್ ಅಳವಡಿಸಿಕೊಂಡು ಟ್ರಾನ್ಸ್‌ಫಾರ್ಮರ್‌ ಕೇಳಿದ್ದೇ ಆದರೆ ಅದಕ್ಕೆ ನಮ್ಮಿಂದ ತಕ್ಷಣ ಸ್ಪಂದನ ಇರುತ್ತದೆ’ ಎಂದು ಜೆಸ್ಕಾಂ ಹೊಸಪೇಟೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಶ್ರೀನಿವಾಸ್ ಜಿ.ಜೆ.‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT