ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮರೆಡ್ಡಿ ಮಲ್ಲಮ್ಮನಿಂದ ವಚನ ಭಕ್ತಿ ಪರಂಪರೆ ಮುಂದುವರಿಕೆ: ಚಂದ್ರಶೇಖರ ಶಾಸ್ತ್ರಿ

Last Updated 10 ಮೇ 2022, 10:26 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘12ನೇ ಶತಮಾನದಲ್ಲಿ ನಡೆದ ವಚನ ಕ್ರಾಂತಿಯ ಭಕ್ತಿ ಪರಂಪರೆ ಮುಂದುವರೆಸಿಕೊಂಡು ಹೋದ ಕೀರ್ತಿ ಹೇಮರೆಡ್ಡಿ ಮಲ್ಲಮ್ಮ ಅವರಿಗೆ ಸಲ್ಲುತ್ತದೆ’ ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಎಚ್‌.ಎಂ.ಚಂದ್ರಶೇಖರ ಶಾಸ್ತ್ರಿ ತಿಳಿಸಿದರು.

ವೀರಶೈವ ಲಿಂಗಾಯತ ಸಮಾಜದಿಂದ ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಒಬ್ಬ ಮಹಿಳೆಯಾಗಿದ್ದುಕೊಂಡು ಮಲ್ಲಮ್ಮ ಅಪ್ರತಿಮ ಸಾಧನೆ ಮಾಡಿದ್ದಾಳೆ. ಈ ಕಾರಣಕ್ಕಾಗಿಯೇ 12ನೇ ಶತಮಾನದ ಶರಣರ ಸಾಲಿನಲ್ಲಿ ಆಕೆಗೆ ಸ್ಥಾನ ಸಿಕ್ಕಿದೆ. ಮಲ್ಲಮ್ಮ ಭಕ್ತಿ, ಸದ್ಗುಣದಿಂದ ಜನರಲ್ಲಿ ಬದಲಾವಣೆ ತಂದರು ಎಂದು ಹೇಳಿದರು.

ರೆಡ್ಡಿ ಎಂಬ ಪದ ಜಾತಿ ಸೂಚಕವಲ್ಲ, ವೃತ್ತಿ ಸೂಚಕವಾಗಿದೆ. ರಟ್ಟೆ, ರೊಟ್ಟಿ ಎಂಬ ಪದ ಜನಬಳಕೆಯಿಂದ ರೆಡ್ಡಿ ಆಗಿದೆ. ಈ ಸಮಾಜದವರು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಹೇಶ್ ಬಾಬು, ರಾಷ್ಟ್ರಕೂಟ ಮನೆತನಕ್ಕೆ ಆಧ್ಯಾತ್ಮಿಕ ಪರಂಪರೆ ತುಂಬಿದವರು ಮಹಾಸಾಧ್ವಿ ಮಲ್ಲಮ್ಮನವರು. 12ನೇ ಶತಮಾನದ ದಾರ್ಶನಿಕರು ಸ್ತ್ರೀ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. 14ನೇ ಶತಮಾನದಲ್ಲಿ ಹೇಮರೆಡ್ಡಿ ಮಲ್ಲಮ್ಮ ಅದನ್ನು ಮುಂದುವರೆಸಿದರು ಎಂದರು.

ಸಂಡೂರು ಪ್ರಭುದೇವರ ಸಂಸ್ಥಾನ ಮಠದ ಪ್ರಭು ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಕೆ.ವಿ.ಶ್ರೀನಿವಾಸ ರೆಡ್ಡಿ, ಗ್ರಾಮೀಣ ಠಾಣೆಯ ಸಿಪಿಐ ಶ್ರೀನಿವಾಸ ಮೇಟಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಚ್.ವಿ.ಶರಣು ಸ್ವಾಮಿ, ಡಾ.ಮಹಾಬಲೇಶ ರೆಡ್ಡಿ, ಸುಜಾತ ಡಿ.ಎನ್ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಮಾರ್ಗಗಳಲ್ಲಿ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರದ ಮೆರವಣಿಗೆ ಜರುಗಿತು. ಪಾರ್ವತಿ ಮಹಿಳಾ ಘಟಕದ ಸದಸ್ಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು.

ಜಿಲ್ಲಾಡಳಿತ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಹೇಶ್ ಬಾಬು ಅವರು ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರು. ತಾಲ್ಲೂಕು ಕಚೇರಿಯಲ್ಲೂ ಜಯಂತಿ ಆಚರಿಸಲಾಯಿತು. ಶಿರಸ್ತೇದಾರರಾದ ರಮೇಶ್, ಶ್ರೀಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT