ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ: ಊರಿನ ಸುತ್ತ ಜೀವ ಜಲ- ಕಮಲಾಪುರಕ್ಕೆ ನೀರಿಲ್ಲ!

ಬೃಹತ್ ಟ್ಯಾಂಕ್‌ ನಿರ್ಮಿಸಿ 2 ವರ್ಷ, ಹನಿ ನೀರು ಬಿದ್ದಿಲ್ಲ
Published 1 ಜೂನ್ 2024, 7:23 IST
Last Updated 1 ಜೂನ್ 2024, 7:23 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿಯ ಮಗ್ಗುಲಲ್ಲೇ ಇರುವ ಕಮಲಾಪುರದ ಸುತ್ತ ಕೆರೆಗಳು, ಕಾಲುವೆಗಳು, ಕಿರು ಜಲಾಶಯಗಳಿವೆ. ಹೀಗಿದ್ದರೂ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು ಇದುವರೆಗೆ ಸಾಧ್ಯವಾಗಿಲ್ಲ.

ತುಂಗಭದ್ರಾ ಜಲಾಶಯದ ಬಲದಂಡೆ ಕೆಳಮಟ್ಟದ ಕಾಲುವೆ (ಎಲ್‌ಎಲ್‌ಸಿ) ಕಮಲಾಪುರವನ್ನು ಬಳಸಿಕೊಂಡೇ ಮುಂದೆ ಕಂಪ್ಲಿ, ಆಂಧ್ರದತ್ತ ಸಾಗುತ್ತದೆ. ಕಮಲಾಪುರ ಪುರಸಭೆಗೆ ಬೇಕಾದ ನೀರು ಲಭಿಸುವುದು ಇದೇ ಕಾಲುವೆಯಿದಲೇ. ಈ ಕಾಲುವೆಯ ಭಾಗವೇ ಆಗಿರುವ ಫೋರ್‌ಬೇ ಕಿರು ಜಲಾಶಯದಂತೆಯೇ ಇದೆ. ಅಲ್ಲಿಂದಲೂ ಅಗತ್ಯ ಬಿದ್ದಾಗ ನೀರೆತ್ತುವ ವ್ಯವಸ್ಥೆ ಇದೆ. ಹೀಗಿದ್ದರೂ  ಕಳೆದ ಮೂರು ದಿನಗಳಿಂದ ಕಮಲಾಪುರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗಿಯೇ ಇಲ್ಲ.

ಕಮಲಾಪುರ ಪಟ್ಟಣದಲ್ಲಿ ಐದು ನೀರಿನ ಟ್ಯಾಂಕ್‌ಗಳಿವೆ. ಜೈಭೀಮ್‌ ನಗರದಲ್ಲಿ 2.5 ಲಕ್ಷ ನೀರು ಸಂಗ್ರಹ ಸಾಮರ್ಥ್ಯದ ಬೃಹತ್ ಟ್ಯಾಂಕ್ ನಿರ್ಮಿಸಿ ಎರಡು ವರ್ಷ ಕಳೆದರೂ ಹನಿ ನೀರು ಅದರೊಳಗೆ ಸೇರಿಲ್ಲ. ಪಂಪ್‌ ಅಳವಡಿಕೆಗೆ ಕ್ರಿಯಾ ಯೋಜನೆಯಲ್ಲಿ ದುಡ್ಡು ತೆಗೆದಿರಿಸದೆ ಇರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಹೀಗಿದ್ದರೂ ಪುರಸಭೆ ಎಲ್‌ಎಲ್‌ಸಿ ಕಾಲುವೆಯಿಂದ ನೀರು ಎತ್ತಿ, ಶುದ್ಧೀಕರಿಸಿ ಸುಮಾರು 30 ಸಾವಿರದಷ್ಟಿರುವ ಜನತೆಗೆ ಪೂರೈಸುತ್ತಿದೆ. ಆದರೆ ಆಗಾಗ ನೀರಿನ ಅಭಾವ ಕಾಣಿಸುತ್ತಲೇ  ಇದೆ. ಪಟ್ಟಣದ ಅಲ್ಲಲ್ಲಿ ಸ್ಥಾಪನೆಗೊಂಡಿರುವ ಶುದ್ಧ ನೀರಿನ ಘಟಕಗಳಿಗೆ ಜನ ಹೆಚ್ಚು ಅವಲಂಬಿತರಾಗಿದ್ದನ್ನು ಕಂಡಾಗಲೂ ಅಚ್ಚರಿ ಅನಿಸಿಬಿಡುತ್ತದೆ.

‘ಟಿ.ಬಿ.ಬೋರ್ಡ್ ಮತ್ತು ಪುರಸಭೆ ಅಧಿಕಾರಿಗಳ ನಿರ್ಲಕ್ಷದಿಂದಲೇ ಈ ನೀರಿನ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು, ಇಲ್ಲವಾದರೆ ಜನರು ಖಾಲಿ ಕೊಡಗಳನ್ನು ತೆಗೆದುಕೊಂಡು ಕಚೇರಿಗೆ ಮುತ್ತಿಗೆ ಹಾಕುವ ಸನ್ಕಿವೇಶ ನಿರ್ಮಾಣವಾಗಬಹುದು’ ಎಂದು ಗೃಹಿಣಿ ಸುನೀತಾ ಶ್ರೀನಿವಾಸ್ ಎಚ್ಚರಿಸಿದರು.

‘ಎರಡು ದಿನದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದು ನಿಜ. ಶನಿವಾರದಿಂದ  ನೀರು ಸರಬರಾಜು ಎಂದಿನಂತೆ ಆಗಲಿದೆ. ಕಾಲುವೆಯಲ್ಲಿ ನೀರು ಬಂದ್ ಮಾಡಲಾಗಿತ್ತು, ಪೋರ್‌ಬೇಯಿಂದ ನೀರೆತ್ತಲು ಮುಂದಾದಾಗ ಪಂಪ್ ಕೈಕೊಟ್ಟಿತು. ಹೀಗಾಗಿ ನೀರಿನ ಅಭಾವ ಕಂಡುಬಂದಿದೆ. ಟ್ಯಾಂಕರ್‌ಗಳಲ್ಲಿ ನೀರು ಒದಗಿಸುವ ಕೆಲಸ ಮಾಡಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

ಅಮೃತ್ 2 ಯೋಜನೆ–ಶೀಘ್ರ ಚಾಲನೆ

ಕಮಲಾಪುರಕ್ಕೆ ಸಮಗ್ರ ನೀರು ಪೂರೈಕೆ ಮಾಡುವ ‘ಅಮೃತ್ 2’ ಯೋಜನೆಯ ಸಮೀಕ್ಷೆ ಇದೀಗ ನಡೆಯುತ್ತಿದ್ದು  ₹74 ಕೋಟಿ ವೆಚ್ಚದ ಈ ಯೋಜನೆ ಶೀಘ್ರ ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ. ತುಂಗಭದ್ರಾದ ಎಲ್‌ಎಲ್‌ಸಿ ಕಾಲುವೆಯಿಂದ ನೀರೆತ್ತುವ  ಯೋಜನೆ ಇದು. 30 ವರ್ಷದ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಯೋಜನೆ ಜಾರಿಗೆ ಬರಲಿದೆ ಎಂದು ಮಹಾಂತೇಶ್‌ ಬೀಳಗಿ ತಿಳಿಸಿದರು.

ನಲ್ಲಾಪುರದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ

ಕಮಲಾಪುರದಿಂದ ಸುಮಾರು 10 ಕಿ.ಮೀ.ದೂರದಲ್ಲಿರುವ ನಲ್ಲಾಪುರದಲ್ಲಿ ಕೆಲವು ತಿಂಗಳ ಹಿಂದೆ ವಾಂತಿಭೇದಿ ಪ್ರಕರಣ ವರದಿಯಾಗಿತ್ತು. ಕಲುಷಿತ ನೀರಿನಿಂದಲೇ ಅದು ಸಂಭವಿಸಿತ್ತು. ತಕ್ಷಣ ಸ್ಪಂದಿಸಿದ್ದ ಶಾಸಕ ಎಚ್‌.ಆರ್‌.ಗವಿಯಪ್ಪ ಅವರು ಅಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರು. ಕಮಲಾಪುರದಲ್ಲೂ ಅವರಿಂದ ಅಂತಹದೇ ಕೆಲಸದ ನಿರೀಕ್ಷೆಯಲ್ಲಿ ಸ್ಥಳೀಯ ಜನರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT