ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೌರ್ಜನ್ಯ ಪ್ರಕರಣ: 'ಆನಂದ್ ಸಿಂಗ್ ತನಿಖೆಗೆ ಸಹಕರಿಸಿ ರಾಜೀನಾಮೆ ಕೊಡಲಿ'

Last Updated 4 ಸೆಪ್ಟೆಂಬರ್ 2022, 13:50 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಪರಿಶಿಷ್ಟ ಜಾತಿಗೆ ಸೇರಿದ ಡಿ. ಪೋಲಯ್ಯ ಎಂಬುವರ ಮನೆಗೆ ಬೆಂಬಲಿಗರೊಂದಿಗೆ ಹೋಗಿ ಅವರ ಮೇಲೆ ದೌರ್ಜನ್ಯವೆಸಗಿರುವುದಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸ್‌ ಠಾಣೆಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರು ತನಿಖೆಗೆ ಸಹಕರಿಸಿ ರಾಜೀನಾಮೆ ಕೊಡಬೇಕು’ ಎಂದು ಜೆ.ಡಿ.ಎಸ್‌. ಮುಖಂಡ ಕೆ. ಕೊಟ್ರೇಶ್‌ ಭಾನುವಾರ ಒತ್ತಾಯಿಸಿದರು.

‘ಸಚಿವರ ವಿರುದ್ಧದ ಪ್ರಕರಣದ ತನಿಖೆ ಯಾವುದೇ ಒತ್ತಡಕ್ಕೆ ಒಳಗಾಗದೆ ಮಾಡಬೇಕು. ತನಿಖೆಗೆ ಸಹಕರಿಸಿ, ಸಾರ್ವಜನಿಕ ಜೀವನದಲ್ಲಿ ನೈತಿಕತೆಯಿಂದ ಸಚಿವರು ನಡೆದುಕೊಳ್ಳಬೇಕು. ಸಚಿವರ ಮೇಲೆ ಸರ್ಕಾರಿ ಭೂಮಿ ಕಬಳಿಸಿದ ಗಂಭೀರ ಆರೋಪವಿದೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ. ಅದಕ್ಕೆ ಪೂರಕವಾಗಿ ಜೆ.ಡಿ.ಎಸ್‌. ಜಿಲ್ಲಾ ಘಟಕದಿಂದ ದಾಖಲೆಗಳನ್ನು ಒದಗಿಸಲಾಗುವುದು’ ಎಂದು ಹೇಳಿದರು.

‘ಆತ್ಮಹತ್ಯೆಯ ನಾಟಕ’
ಹೊಸಪೇಟೆ (ವಿಜಯನಗರ): '
ಡಿ. ಪೋಲಯ್ಯ ಅವರು ಸುಳ್ಳಿನ ರಾಜಕೀಯ ಮಾಡುತ್ತಿದ್ದಾರೆ. ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ನಾಟಕವಾಡಿ, ಸಚಿವ ಆನಂದ್‌ ಸಿಂಗ್‌ ವಿರುದ್ಧ ಜಾತಿ ನಿಂದನೆ ದೂರು ಕೊಟ್ಟು ಅವರ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ಎ.ಬಿ.ಡಿ.ಎಂ. ಸಂಘದ ಅಧ್ಯಕ್ಷ ಎ.ಪಂಪಣ್ಣ ಭಾನುವಾರ ತಿಳಿಸಿದರು.

ಜಮೀನು ತಮ್ಮ ಕೈ ಬಿಟ್ಟು ಹೋಗುವುದೆಂಬ ಹೆದರಿಕೆಯಿಂದ ಪೋಲಯ್ಯ ಅವರು ಆತ್ಮಹತ್ಯೆಯ ನಾಟಕವಾಡಿದ್ದಾರೆ. ಅಟ್ರಾಸಿಟಿ ಕಾಯ್ದೆ ಮೂಲಕ ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳಿನ ರಾಜಕೀಯ ಸರಿಯಲ್ಲ. ಎಸ್‌.ಡಿ.ಪಿ.ಐ. ಮುಖಂಡ ಭಾಸ್ಕರ್‌ ಪ್ರಸಾದ್‌ ಅವರು ವಿಷಯವನ್ನು ಸರಿಯಾಗಿ ತಿಳಿದುಕೊಂಡು ಮುಂದುವರೆಯಬೇಕು. ಸಂಘ ಸಂಸ್ಥೆ ಇರುವುದು ನ್ಯಾಯಯುತ ಹೋರಾಟಕ್ಕೆ ವಿನಃ ಸುಳ್ಳು ಸುದ್ದಿಗಳನ್ನು ಆಧರಿಸಿ ಅಲ್ಲ’ ಎಂದು ಹೇಳಿದರು.

ಗಣಿಬಾಧಿತ ಪ್ರದೇಶಗಳ ಮಾಹಿತಿಗೆ ಸೂಚನೆ
ಹೊಸಪೇಟೆ (ವಿಜಯನಗರ):
ಜಿಲ್ಲೆಯಲ್ಲಿ ಗಣಿಬಾಧಿತ ಪ್ರದೇಶಗಳಿದ್ದಲ್ಲಿ ಅವುಗಳ ಮಾಹಿತಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್ ಪಿ. ತಿಳಿಸಿದರು.

ವಿಜಯನಗರ ಜಿಲ್ಲೆಯ ಮುಖ್ಯ ಖನಿಜ ಗಣಿ ಗುತ್ತಿಗೆಗಳು ಮತ್ತು ಉಪ ಖನಿಜ ಗಣಿ ಗುತ್ತಿಗೆಗಳ ಗಣಿ ಚಟುವಟಿಕೆಗಳಿಂದ ಬಾಧಿತ ಪ್ರದೇಶಗಳನ್ನು ಮತ್ತು ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನೆ ಅನುಷ್ಠಾನಕ್ಕಾಗಿ ಮುಖ್ಯ ಖನಿಜ ಗಣಿ ಗುತ್ತಿಗೆಗಳ ಗಣಿ ಚಟುವಟಿಕೆಗಳಿಂದ ಬಾಧಿತ ಪ್ರದೇಶಗಳನ್ನು ಗುರುತಿಸಲಾಗುತ್ತಿದೆ. ಗಣಿ ಬಾಧಿತ/ಗಣಿ ಅವಲಂಬಿತ ಜನವಸತಿ ನಿಲಯ/ಕ್ಯಾಂಪ್/ಕಾಲೊನಿ/ನಗರ/ಕುಗ್ರಾಮ/ಇತರೆ ಪ್ರದೇಶಗಳ ಕುರಿತು ಮಾಹಿತಿಯನ್ನು ಸಾರ್ವಜನಿಕರು/ಸಂಘ ಸಂಸ್ಥೆಗಳು ನೇರವಾಗಿ ಹೊಸಪೇಟೆ ತಹಶೀಲ್ದಾರ್‌ ಕಚೇರಿಗೆ ಅಥವಾ vijayanagaradc@gmail.comಗೆ ಇ-ಮೇಲ್ ಮೂಲಕ ತಿಳಿಸಬಹುದು.

ಗಣಿ ಬಾಧಿತ ಪ್ರದೇಶದ ಹೆಸರು, ಕುಟುಂಬಗಳ ಸಂಖ್ಯೆ, ಒಟ್ಟು ಜನಸಂಖ್ಯೆ (ಪುರುಷರು, ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಪ್ರತ್ಯೇಕವಾಗಿ), ಮೂಲಭೂತ ಸೌಕರ್ಯಗಳು (ಶಾಲೆ, ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರ, ರಸ್ತೆ, ಕುಡಿಯುವ ನೀರು, ಇತ್ಯಾದಿಗಳ ವಿವರ. ಕಂದಾಯ ಗ್ರಾಮದ ಹೆಸರು ಹಾಗೂ ಗ್ರಾಮ ಪಂಚಾಯಿತಿಯ ಹೆಸರು ಸೇರಿದಂತೆ ಪೂರ್ಣ ಮಾಹಿತಿಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.

ದುಬಾರಿ ಶುಲ್ಕ ವಸೂಲಿಗೆ ದೂರು ಕೊಡಿ
ಹೊಸಪೇಟೆ (ವಿಜಯನಗರ):
ಜಿಲ್ಲೆಯ ಖಾಸಗಿ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪೋಷಕರಿಂದ ವಂತಿಗೆ ವಸೂಲಿ, ದುಬಾರಿ ಶುಲ್ಕ ವಸೂಲಿ ಹಾಗೂ ಭಾಷಾ ನೀತಿ ಉಲ್ಲಂಘಿಸಿದಲ್ಲಿ ದೂರು ಸಲ್ಲಿಸಬಹುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಿಗೆ ದೂರು ಸಲ್ಲಿಸಬಹುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿ.ವಿ.ಎಸ್.ಬಿ.ಸಿ. ಆವರಣ ಒಳಾಂಗಣ ಕ್ರೀಡಾಂಗಣ ಕಚೇರಿ ಸಂಪರ್ಕಿಸಬಹುದು.

ಮಕ್ಕಳ ಕಲ್ಯಾಣ ಪ್ರಶಸ್ತಿಗೆ; ಅರ್ಜಿ ಆಹ್ವಾನ
ಹೊಸಪೇಟೆ (ವಿಜಯನಗರ):
ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ ಐದು ವರ್ಷ ಅತ್ಯುತ್ತಮ ಸೇವೆ ಸಲ್ಲಿಸಿದವರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ ತಿಳಿಸಿದರು.

ವ್ಯಕ್ತಿಗಳಿಗೆ ತಲಾ ₹25 ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ ತಲಾ ₹1ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಮಕ್ಕಳ ದಿನಾಚರಣೆಯಂದು ಪ್ರದಾನ ಮಾಡಲಾಗುತ್ತದೆ. ಅರ್ಹರು ಪ್ರಸಕ್ತ ಸಾಲಿನ ಪ್ರಶಸ್ತಿಗೆ ನಿಗದಿಪಡಿಸಿರುವ ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಸೆ. 30ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ, ದೂ.ಸಂ: 08394-228084 ಗೆ ಸಂಪರ್ಕಿಸಬಹುದು.

‘ದೂರ ದೃಷ್ಟಿಕೋನದ ಚೇತನ ಷೇಕ್ ಅಲಿ’
ಹೊಸಪೇಟೆ (ವಿಜಯನಗರ):
ಇತ್ತೀಚೆಗೆ ನಿಧನರಾದ ಇತಿಹಾಸ ತಜ್ಞ ಪ್ರೊ. ಬಿ. ಷೇಕ್‌ ಅಲಿ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಚರಿತ್ರೆ ವಿಭಾಗದ ಪ್ರಾಧ್ಯಾಪಕ ಮೋಹನ್‌ ಕೃಷ್ಣ ರೈ ಮಾತನಾಡಿ, ‘ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಂಪನ್ಮೂಲ ತಜ್ಞರು, ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಮಹಾನ್ ಚಿಂತಕ ಷೇಕ್‌ ಅಲಿ. 44 ಪುಸ್ತಕ, ಅನೇಕ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ’ ಎಂದು ನೆನೆದರು.

ಕುಲಪತಿ ಪ್ರೊ. ಸ. ಚಿ. ರಮೇಶ, ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ, ವಿವಿಧ ನಿಕಾಯದ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಗ್ರಂಥಪಾಲಕರ ಬೀಳ್ಕೊಡುಗೆ
ಹೊಸಪೇಟೆ (ವಿಜಯನಗರ)
: ಕೆಲಸದಿಂದ ನಿವೃತ್ತರಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಗ್ರಂಥಪಾಲಕರಾದ ಎಸ್‌. ಸುಹಾಸ್‌ ಮತ್ತು ಯು. ಮಲ್ಲಿಕಾರ್ಜುನ ಅವರಿಗೆ ಇತ್ತೀಚೆಗೆ ವಿ.ವಿ. ಅಕ್ಷರ ಗ್ರಂಥಾಲಯದಲ್ಲಿ ಬೀಳ್ಕೊಡಲಾಯಿತು.

ಮುಖ್ಯ ಗ್ರಂಥಪಾಲಕ ಕೆ.ಎಂ. ಮೇತ್ರಿ ಮಾತನಾಡಿ, ಅಕ್ಷರ ಗ್ರಂಥಾಲಯಕ್ಕೆ ಸುಹಾಸ್‌, ಮಲ್ಲಿಕಾರ್ಜುನ ಅವರ ಕೊಡುಗೆ ಅಪಾರ. ಅವರು ನಿರ್ಗಮಿಸುತ್ತಿರುವುದು ದುಃಖ ವಿಷಯ ಎಂದು ಹೇಳಿದರು. ಉಪಗ್ರಂಥಪಾಲಕ ಎಂ.ಸಿ. ಗುಡಿಮನಿ, ಸಿಬ್ಬಂದಿ ವಿದ್ಯಾರ್ಥಿಗಳಿದ್ದರು.

ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಕ್ಕೆ ಅರ್ಜಿ ಆಹ್ವಾನ
ಹೊಸಪೇಟೆ (ವಿಜಯನಗರ):
ಜಿಲ್ಲೆಯ ಕೂಡ್ಲಿಗಿ ಹಾಗೂ ಕೊಟ್ಟೂರು ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಸೆ.12ರೊಳಗೆ ಸಲ್ಲಿಸಬಹುದು.

ಮರಗಾಲು ಕುಣಿತ ಟ್ರಸ್ಟ್‌ ಉದ್ಘಾಟನೆ
ಹೊಸಪೇಟೆ (ವಿಜಯನಗರ):
ಮರಗಾಲು ಕುಣಿತ ಕಲಾ ಸಾಂಸ್ಕೃತಿಕ ಟ್ರಸ್ಟ್‌ ಉದ್ಘಾಟನಾ ಸಮಾರಂಭ ಇಲ್ಲಿನ ಪಟೇಲ್‌ ನಗರದಲ್ಲಿ ಇತ್ತೀಚೆಗೆ ಜರುಗಿತು.

ಹಂಪಿ ಮಾತಂಗ ಮಠದ ಪೂರ್ಣಾನಂದ ಭಾರತಿ ಸ್ವಾಮೀಜಿ, ಯುವ ಮುಖಂಡ ಸಿದ್ದಾರ್ಥ ಸಿಂಗ್‌ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಸುಂಕಮ್ಮ, ಸದಸ್ಯ ಬಿ. ಜೀವರತ್ನಂ, ಅಂಬೇಡ್ಕರ್‌ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ಉಮಾಪತಿ, ಬಿಜೆಪಿ ನಾಯಕಿ ಕವಿತಾ ಈಶ್ವರ್ ಸಿಂಗ್, ಸಮಾಜ ಸೇವಕ ಪಿ.ವೆಂಕಟೇಶ್, ವಕೀಲ ಗಜಾನಂದ ನಾಯಕ, ಬೋಡಾ ರಾಮಪ್ಪ ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT