ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಜನರಿಲ್ಲದ ಕ್ರೀಡಾಂಗಣದಲ್ಲಿ ಸಚಿವರಿಂದ ಧ್ವಜಾರೋಹಣ

ಕಾಟಾಚಾರದ ವಿಮೋಚನಾ ದಿನಾಚರಣೆ
Last Updated 17 ಸೆಪ್ಟೆಂಬರ್ 2021, 12:45 IST
ಅಕ್ಷರ ಗಾತ್ರ

ಹೊಸಪೇಟೆ: ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಕಾಟಾಚಾರಕ್ಕೆ ಶುಕ್ರವಾರ ಇಲ್ಲಿ ಆಚರಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ದಿನ ಕಂಡು ಬರುವ ಸಂಭ್ರಮ ಇರಲಿಲ್ಲ. ಗಣ್ಯರು, ಸಾರ್ವಜನಿಕರಿಗೆ ಹಾಕಿದ್ದ ಆಸನಗಳು ಖಾಲಿ ಇದ್ದವು. ಗ್ಯಾಲರಿಗಳಲ್ಲೂ ಜನರು ಇರಲಿಲ್ಲ. ಶಾಲೆ, ಕಾಲೇಜಿನ ವಿದ್ಯಾರ್ಥಿಗಳು ಸುಳಿಯಲಿಲ್ಲ. ಜನರಿಲ್ಲದೇ ಕ್ರೀಡಾಂಗಣ ಬಿಕೋ ಎನ್ನುತ್ತಿತ್ತು. ಗೃಹರಕ್ಷಕ ಹಾಗೂ ಪೊಲೀಸ್ ಇಲಾಖೆಯ ಒಂದು ತುಕಡಿ ಇತ್ತು. ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ.

ಜನರಿಲ್ಲದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ವಿಜಯನಗರ ಜಿಲ್ಲೆಗೆ ₹425.35 ಕೋಟಿ ಅನುದಾನ ಹಂಚಿಕೆಯಾಗಿದೆ. ಒಟ್ಟು 1,505 ಕಾಮಗಾರಿಗಳನ್ನು ಕೈಗೆತ್ತಿಕೊಂಡು 899 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕೆ ₹178.21 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ. ಬಾಕಿ ಉಳಿದ 606 ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಹೇಳಿದರು.

‘ಈ ಭಾಗದ 40 ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ, ಆರೋಗ್ಯ, ರಸ್ತೆ ಸಂಪರ್ಕ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಮೂಲಸೌಕರ್ಯ ಸೌಕರ್ಯ ಅಭಿವೃದ್ಧಿಗೆ ₹425.35 ಕೋಟಿ ಅನುದಾನವನ್ನು ಕೆಕೆಆರ್‌ಡಿಬಿ ನೀಡಿದೆ’ ಎಂದರು.

‘ಕೋವಿಡ್‌ ಸಮರ್ಥವಾಗಿ ನಿಯಂತ್ರಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ 09 ಡಿ.ಸಿ.ಎಚ್.ಸಿ, 04 ಖಾಸಗಿ ಡಿ.ಸಿ.ಎಚ್., 111 ಸಾಮಾನ್ಯ ಬೆಡ್‍ಗಳು, 318 ಆಮ್ಲಜನಕ ಹಾಸಿಗೆಗಳು, 14 ಐ.ಸಿ.ಯು ಬೆಡ್‍ಗಳು ಹಾಗೂ 44 ಐ.ಸಿ.ಯು ವೆಂಟಿಲೇಟರ್ ಬೆಡ್‍ಗಳು ಹೀಗೆ ಒಟ್ಟು 492 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

‘ವಿಜಯನಗರ ಜಿಲ್ಲೆಯಲ್ಲಿ 13,03,083 ಜನರಿಗೆ ಕೋವಿಡ್ ಲಸಿಕೆ ಹಾಕುವ ಗುರಿಯಿದ್ದು, ಇದರಲ್ಲಿ 6,56,768 ಮೊದಲನೆಯ ಡೋಸ್ ಹಾಗೂ 2,07,682 ಜನರಿಗೆ ಎರಡನೆಯ ಡೋಸ್ ಹೀಗೆ ಒಟ್ಟು 8,64,450 ಡೋಸ್ ಕೋವಿಡ್ ಲಸಿಕೆಯನ್ನು ಈಗಾಗಲೇ ನೀಡಲಾಗಿದೆ’ ಎಂದರು.

‘ಕೋವಿಡ್‌ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲೆಯಾದ್ಯಂತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತೀವ್ರ ಅಪೌಷ್ಟಿಕತೆಯುಳ್ಳ 386 ಮಕ್ಕಳನ್ನು ಆರೈಕೆ ಮಾಡಲಾಗಿದೆ’ ಎಂದು ವಿವರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಆರೋಗ್ಯ ಕಿಟ್‍ಗಳನ್ನು ವಿತರಿಸಿದರು. ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ್ ಪಿ. ಶ್ರವಣ್, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ತಿಮ್ಮಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್‌ ಜೀರೆ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ಲಾವಣ್ಯ, ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ, ತಹಶೀಲ್ದಾರ್ ಎಚ್‌. ವಿಶ್ವನಾಥ್, ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT