ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ವರ್ಷಗಳಾದರೂ ಸಿಗದ ಸೌಲಭ್ಯ: ವಸತಿ ನಿಲಯಕ್ಕೆ ನೀರೂ ಇಲ್ಲ, ಸ್ವಂತ ಕಟ್ಟಡವೂ ಇಲ್ಲ

Published 5 ಡಿಸೆಂಬರ್ 2023, 0:06 IST
Last Updated 5 ಡಿಸೆಂಬರ್ 2023, 0:06 IST
ಅಕ್ಷರ ಗಾತ್ರ

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಶಾಲಾ ಕೋಣೆಗಳಲ್ಲಿ ವಾಸ್ತವ್ಯ, ಎರಡು ದಿನಕ್ಕೊಮ್ಮೆ ಸ್ನಾನ, ಶೌಚಕ್ಕೆ ಸರದಿ ಸಾಲು, ವಿದ್ಯುತ್ ಪೂರೈಕೆ ಕಡಿತಗೊಂಡರೆ ಸೊಳ್ಳೆ ಕಾಟ...

ಪಟ್ಟಣದ ಎಂ.ಪಿ.ಪ್ರಕಾಶ್ ನಗರದಲ್ಲಿನ ಕರ್ನಾಟಕ ಕಸ್ತೂರ್‌ಬಾ ವಸತಿ ನಿಲಯದ ಕಿರು ಚಿತ್ರಣ ಇದು. ಗುಳೆ ಹೋಗುವ ಕುಟುಂಬಗಳ ಬಾಲಕಿಯರು ಮತ್ತು ಪಾಲಕರಿಲ್ಲದ ವಿದ್ಯಾರ್ಥಿನಿಯರು ಇಲ್ಲಿ ಶಿಕ್ಷಣ ಪಡೆಯುತ್ತಾರೆ.

2011ರಲ್ಲಿ ತಾಲ್ಲೂಕಿನ ಮಾಗಳ ಗ್ರಾಮಕ್ಕೆ ಮಂಜೂರಾದ ಕಸ್ತೂರ್‌ಬಾ ವಸತಿ ನಿಲಯಕ್ಕೆ ಈವರೆಗೆ ಸೂಕ್ತ ನಿವೇಶನ, ಕಟ್ಟಡ ಇಲ್ಲ. ಹೀಗಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೇ ವಿದ್ಯಾರ್ಥಿನಿಯರು ವಾಸ್ತವ್ಯ ಮಾಡಿಕೊಂಡಿದ್ದಾರೆ. 12 ವರ್ಷಗಳಾದರೂ ಅವರ ಪರಿಸ್ಥಿತಿ ಸುಧಾರಿಸಿಲ್ಲ.

6ರಿಂದ 10ನೇ ತರಗತಿವರೆಗಿನ 100 ವಿದ್ಯಾರ್ಥಿನಿಯರ ಪ್ರವೇಶಕ್ಕೆ ಅವಕಾಶವಿದೆ. ಆದರೆ, ಮೂಲಸೌಲಭ್ಯ ಕೊರತೆ ಕಾರಣ 77 ವಿದ್ಯಾರ್ಥಿನಿಯರು ಮಾತ್ರ ಪ್ರವೇಶ ಪಡೆದಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ನಿಲಯವನ್ನು ನಿರ್ವಹಿಸುತ್ತಿದೆ.

6ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿನಿಯರು ಎಂ.ಪಿ.ಪ್ರಕಾಶ್ ನಗರದ ಹಿರಿಯ ಪ್ರಾಥಮಿಕ ಶಾಲೆಗೆ ಹೋದರೆ, 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರು ಎರಡು ಕಿ.ಮೀ. ದೂರದ ಸೊಪ್ಪಿನ ಕಾಳಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾರೆ.

‘ಶಾಲೆಯ ನಾಲ್ಕು ಕೊಠಡಿಗಳ ಪೈಕಿ ಒಂದು ಕೋಣೆಯಲ್ಲಿ ಕಚೇರಿ ಇದೆ. ಮೂರು ಕೋಣೆಗಳನ್ನು ನಮಗೆ ವಾಸಿಸಲು ಕೊಡಲಾಗಿದೆ. ಒಂದೊಂದರಲ್ಲಿ 20 ಮಂದಿ ಇದ್ದೇವೆ. ಮಳೆಗಾಲದಲ್ಲಿ ಚಾವಣಿ ಸೋರುತ್ತದೆ. ನಾಲ್ಕು ಶೌಚಾಲಯ, ನಾಲ್ಕು ಸ್ನಾನಗೃಹಗಳಿವೆ. ಆದರೆ, ಅವು ಸಾಕಾಗುವುದಿಲ್ಲ. ನಿತ್ಯ ಸರದಿಯಲ್ಲಿ ನಿಲ್ಲಬೇಕು’ ಎಂದು ವಿದ್ಯಾರ್ಥಿನಿಯರು ತಿಳಿಸಿದರು.

‘ಪುರಸಭೆಯಿಂದ ಮೂರು ಅಥವಾ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ನೀರಿನ ಅಭಾವವಿದೆ. ಪ್ರತಿದಿನ ಸ್ನಾನ ಮಾಡಲು ಆಗಲ್ಲ. ಬಟ್ಟೆ ತೊಳೆದುಕೊಳ್ಳಲೂ ಆಗಲ್ಲ. ಸೌಲಭ್ಯಗಳೂ ಇಲ್ಲ. ಅನಿವಾರ್ಯ ಕಾರಣದಿಂದ ಸಂಕಷ್ಟದ ಮಧ್ಯೆ ಇಲ್ಲಿ ವಾಸವಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಹೊರಗುತ್ತಿಗೆ ಆಧಾರದಲ್ಲಿ ವಸತಿ ನಿಲಯದಲ್ಲಿ ಕೆಲಸ ಮಾಡುವ ಮೇಲ್ವಿಚಾರಕಿ, ಇಬ್ಬರು ಕಾವಲುಗಾರರು, ಮೂವರು ಅಡುಗೆಯವರಿಗೆ ಕನಿಷ್ಠ ವೇತನ ಸಿಗುತ್ತಿಲ್ಲ. ಜನತಾ ದರ್ಶನ ಕಾರ್ಯಕ್ರಮದಲ್ಲಿ ಈ ಸಮಸ್ಯೆ ಹೇಳಿಕೊಳ್ಳಲಾಗಿದೆ. ಆದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದರು.

ಹೂವಿನಹಡಗಲಿ ಎಂ.ಪಿ.ಪ್ರಕಾಶ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊರ ಆವರಣ
ಹೂವಿನಹಡಗಲಿ ಎಂ.ಪಿ.ಪ್ರಕಾಶ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊರ ಆವರಣ
ಸ್ವಂತ ಕಟ್ಟಡವಿರದ ಕಾರಣ ಶಾಶ್ವತ ಮೂಲಸೌಲಭ್ಯ ಅಭಿವೃದ್ಧಿಗೆ ತೊಡಕಾಗಿದೆ. ಮಾಗಳ ಗ್ರಾಮಸ್ಥರು ಸರ್ಕಾರಿ ಜಮೀನು ಗುರುತಿಸಿದ್ದು ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ
– ಮಹೇಶ ಪೂಜಾರ್ ಕ್ಷೇತ್ರ ಶಿಕ್ಷಣಾಧಿಕಾರಿ ಹೂವಿನಹಡಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT