ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಹೊಸ ಹೈಸ್ಕೂಲ್‌ ಸ್ಥಾಪನೆ

ಸುಳಿವು ನೀಡಿದ ಶಾಸಕ ಗವಿಯಪ್ಪ: ಶಿಥಿಲ ಶಾಲೆಗಳ ದುರಸ್ತಿಯ ಭರವಸೆ
Published 7 ಆಗಸ್ಟ್ 2023, 15:45 IST
Last Updated 7 ಆಗಸ್ಟ್ 2023, 15:45 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸಪೇಟೆ ತಾಲ್ಲೂಕಿನ ನರಸಾಪುರ, ಬಸವನದುರ್ಗ ಮತ್ತು ನಾಗೇನಹಳ್ಳಿಗಳಲ್ಲಿ ಸರ್ಕಾರಿ ಪ್ರೌಢಶಾಲೆಗಳನ್ನು ಸ್ಥಾಪಿಸುವ ಇಂಗಿತವನ್ನು ಶಾಸಕ ಎಚ್.ಆರ್.ಗವಿಯಪ್ಪ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಐದು ಮಂದಿ ಎಸ್‌ಎಸ್ಎಲ್‌ಸಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಶೇ 100ರಷ್ಟು ಫಲಿತಾಂಶ ತಂದುಕೊಟ್ಟ ಹೊಸಪೇಟೆ ಭಾಗದ 9 ಹಾಗೂ ಕಂಪ್ಲಿ ಭಾಗದ 10 ಶಾಲೆಗಳ ಮುಖ್ಯ ಶಿಕ್ಷಕರನ್ನು ಗೌರವಿಸುವ ಹಾಗೂ ಫಲಿತಾಂಶ ಸುಧಾರಣೆಗಾಗಿ ಸೋಮವಾರ ಇಲ್ಲಿ ಹಮ್ಮಿಕೊಂಡ ಚಿಂತನಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಕೊರತೆಯಿಂದ ವಿದ್ಯಾರ್ಥಿಗಳು ಶಾಲೆ ಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ಶಾಲೆ ಬಿಟ್ಟವರ ಸಮೀಕ್ಷೆಯನ್ನು ಶೀಘ್ರ ನಡೆಸಿ ಮಾಹಿತಿ ಪಡೆಯಬೇಕಿದೆ. ಇಲ್ಲಿಂದ ಸುಮಾರು 50 ಸಾವಿರದಿಂದ 70 ಸಾವಿರ ಮಂದಿ ಉದ್ಯೋಗ ಅರಸಿ ಬೇರೆಡೆಗೆ ಹೋಗಿದ್ದಾರೆ. ಇಲ್ಲೇ ಉತ್ತಮ ಶಿಕ್ಷಣ, ಉದ್ಯೋಗ ಅವಕಾಶ ಕಲ್ಪಿಸುವ ಅಗತ್ಯವಿದೆ. ಇದೆಲ್ಲದರ ಬಗ್ಗೆ ಸಲಹೆ ಪಡೆದು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು’ ಎಂದು ಶಾಸಕರು ಹೇಳಿದರು.

‘ಸೋರುತ್ತಿರುವ ಶಾಲೆಗಳ ದುರಸ್ತಿಗೆ ದುಡ್ಡಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಕೆಎಂಇಆರ್‌ಸಿ ನಿಧಿಯನ್ನು ಶೈಕ್ಷಣಿಕ ಸೌಲಭ್ಯಗಳಿಗಾಗಿ ಬಳಸಿಕೊಳ್ಳಲು ಈಗಾಗಲೇ ಸಮಾಲೋಚನೆ ನಡೆದಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಏನೇ ಸಮಸ್ಯೆ ಇದ್ದರೂ ಸಭೆ ಕರೆಯಿರಿ, ನಾನು ಬರುತ್ತೇನೆ. ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ನನ್ನಿಂದ ನೆರವು ಇದ್ದೇ ಇರುತ್ತದೆ’ ಎಂದರು.

ಡಿಡಿಪಿಐ ಯುವರಾಜ್ ನಾಯಕ್‌ ಮಾತನಾಡಿ, ‘ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಬಸಪ್ಪ ಅವರು ಎಸ್ಸೆಸ್ಸೆಲ್ಸಿಯಲ್ಲಿ ಹೊಸಪೇಟೆ ಶೈಕ್ಷಣಿಕ ಜಿಲ್ಲೆ ಕಳೆದ ಬಾರಿ 24ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಜಿಗಿಯಲು ಕಾರಣವಾದ ಅಂಶಗಳನ್ನು ತಿಳಿಸಿ, ನಿರಂತರ ಶ್ರಮ ವಹಿಸುವ ಮೂಲಕ ಮೊದಲ 5 ಸ್ಥಾನದೊಳಗೆ ಜಿಲ್ಲೆಯನ್ನು ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು. ಕಲಬುರಗಿ ವಿಭಾಗ ಮಟ್ಟದಲ್ಲಿ ಹೊಸಪೇಟೆಯೇ ಮೊದಲ ಸ್ಥಾನದಲ್ಲಿದೆ ಎಂದರು.

ಪತ್ತಿಕೊಂಡ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪಿ.ಎಂ.ಶ್ರೀಪಾದ್‌, ಬಿಸಿಯೂಟ ವಿಭಾಗದ ಎ.ಎನ್‌.ಸುಧಾಕರ, ತಾಲ್ಲೂಕು ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ತಿಮ್ಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT