ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಪಿ.ಕೆ.ಹಳ್ಳಿಗೆ ನೀರಿಲ್ಲ: ಸಂಕಷ್ಟದಲ್ಲಿ ಜನರು

ಅಂಬೇಡ್ಕರ್‌ ಕಾಲೊನಿ ಹೇಳುತ್ತದೆ ಶೌಚಾಲಯ ಇಲ್ಲದ, ಜೀವಜಲ ಕೊರತೆಯ ಕತೆ
Published 31 ಮೇ 2024, 5:17 IST
Last Updated 31 ಮೇ 2024, 5:17 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸಪೇಟೆ– ಬಳ್ಳಾರಿ ಹೆದ್ದಾರಿಯಲ್ಲೇ ಸಿಗುವ ಪಾಪಿನಾಯಕನಹಳ್ಳಿಗೆ ಆ ಹೆಸರು ಬಂದುದಕ್ಕೆ ಐತಿಹಾಸಿಕ ಮಹತ್ವ ಇದೆ. ಇಲ್ಲಿನ ಜನರಿಗೆ ಮಾತ್ರ ತಾವು ಯಾವ ‘ಪಾಪ’ ಮಾಡಿ ಈ ನೀರಿಲ್ಲದೆ ಕೊರಗುವ ಶಿಕ್ಷೆ ಅನುಭವಿಸಬೇಕಾಗಿದೆಯೋ ಎಂಬ ಚಿಂತೆ ಕಾಡುತ್ತಿದೆ.

₹243 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಯ ಹೆಸರೂ ಪಿ.ಕೆ.ಹಳ್ಳಿ ಎಂದೇ. ಇಲ್ಲಿಗೆ ಸಮೀಪದಲ್ಲೇ ಬೃಹತ್ ಪಂಪ್‌ ಹೌಸ್‌ ನಿರ್ಮಾಣವಾಗಿದೆ. 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪ್ರಚಾರ ಸಿಕ್ಕಿತ್ತು, ಕಾಮಗಾರಿ ಆಯಿತು ಎಂದು ಬಹುತೇಕ ದುಡ್ಡನ್ನೂ ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಹೀಗಿದ್ದರೂ ಒಂದೇ ಒಂದು ಕೆರೆಗೆ ನೀರು ಹರಿದಿಲ್ಲ. ಪಿ.ಕೆ.ಹಳ್ಳಿಗೆ ಕಾಲಿಟ್ಟೊಡನೆ ಜನರಿಗೆ ಈ ವಿಚಾರದಲ್ಲಿ ಇರುವ ವೇದನೆ ಧ್ವನಿಸುತ್ತದೆ. ಅಸಂಬದ್ಧ, ಕಳಪೆ ಕಾಮಗಾರಿಗೆ ಕಾರಣ ಯಾರು? ಅದರ ಫಲ ಉಂಡವರು ಯಾರು ಎಂಬುದನ್ನು ಜನರು ತಿಳಿದುಕೊಂಡಿರುವುದಂತೂ ಸ್ಪಷ್ಟ, ಯಾರೂ ಬಾಯಿ ಬಿಟ್ಟು ಹೇಳುತ್ತಿಲ್ಲ.

‘ಅದೊಂದು ವಿಫಲ ಯೋಜನೆ, ಅದರ ಬಗ್ಗೆ ಏನು ಮಾತನಾಡ್ತೀರಿ, ನಮ್ಮ ಇಲ್ಲಿನ ಸಮಸ್ಯೆ ಕೇಳಿ. ನಮಗೆ ಸರಿಯಾಗಿ ನೀರಿನ ವ್ಯವಸ್ಥೆ ಇಲ್ಲ. 400 ಮನೆಗಳಿಗೆ ದಿನಕ್ಕೆ ಅರ್ಧ ಗಂಟೆಯಷ್ಟೂ ನೀರು ಸಿಗುತ್ತಿಲ್ಲ’ ಎಂದು ಅಂಬೇಡ್ಕರ್ ಕಾಲೊನಿಯ ಶಿವರಾಜ್‌ ದೂರಿದರು.

‘ಇಲ್ಲಿ ಮನೆ ಮನೆಗಳಲ್ಲಿ ಶೌಚಾಲಯ ಇಲ್ಲ, ಸಾಮೂಹಿಕ ಶೌಚಾಲಯವನ್ನೂ ಕಟ್ಟಿಸಿಕೊಟ್ಟಿಲ್ಲ. ಸ್ಮಶಾನವೂ ಇಲ್ಲ. ಯಾವ ಭರವಸೆಗಳೂ ಇಲ್ಲಿ ಈಡೇರಿಲ್ಲ. ಸುಮಾರು 15 ವರ್ಷಗಳ ಹಿಂದೆ ಹಾಕಲಾಗಿದ್ದ ಸಿಮೆಂಟ್ ರಸ್ತೆಗಳೇ ಇಂದು ಕಷ್ಟಕ್ಕೆ ದೂಡುವ ಹಾದಿಗಳಾಗಿವೆ’ ಎಂದು ಅವರು ಅಳಲು ತೋಡಿಕೊಂಡರು.

ಇದುವರೆಗೆ ಇವರಿಗೆ ಸಿಗುತ್ತಿದ್ದುದು ಒಂದು ಕೊಳವೆ ಬಾವಿಯ ಸ್ವಲ್ಪ ನೀರು ಮತ್ತು ಜಿಂದಾಲ್‌ ಕಂಪನಿಯವರ ಪೈಪ್‌ನಿಂದ ಪಡೆದ ನೀರು. ಆದರೆ ಸುಮಾರು ಎಂಟು ಸಾವಿರದಷ್ಟು ಜನಸಂಖ್ಯೆಯ ಗ್ರಾಮಕ್ಕೆ ಅದು ಸಾಕಾಗುತ್ತಿರಲಿಲ್ಲ. ಹೀಗಾಗಿ ಜನರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ಹೊಸ ಭರವಸೆ:

‘ನಮ್ಮ ಕಷ್ಟಕ್ಕೆ ಈಗಿನ ಶಾಸಕರು ಸ್ವಲ್ಪ ಮಟ್ಟಿಗೆ ಸ್ಪಂದಿಸಿದ್ದಾರೆ. ಅಂಬೇಡ್ಕರ್ ಕಾಲೊನಿಯಲ್ಲಿ ಒಂದು ಕೊಳವೆ ಬಾವಿ ಕೊರೆಸಿದ್ದಾರೆ. ಒಂದು ಎಕರೆ ಖಾಸಗಿ ಜಮೀನು ಖರೀದಿಸಿ ಸಾರ್ವಜನಿಕ ಶೌಚಾಲಯ, ಸ್ಮಶಾನಕ್ಕೆ ವ್ಯವಸ್ಥೆ ಮಾಡುವ ಚಿಂತನೆ ನಡೆಸಿದ್ದಾರೆ’ ಎಂದು ಶಿವರಾಜ್ ಹೇಳಿಕೊಂಡರು.

‘ಜಲಜೀವನ್ ಮಿಶನ್‌ ಕಾಮಗಾರಿಗೆ ಇದೀಗ ವೇಗ ಸಿಕ್ಕಿದೆ. ಕೊನೆಗೂ ನಮ್ಮೂರಿಗೂ ತುಂಗಭದ್ರಾ ನದಿ ನೀರು ಸಮರ್ಪಕವಾಗಿ ಸರಬರಾಜಾಗುವ ಲಕ್ಷಣ ಕಾಣಿಸುತ್ತಿದೆ. ಆದರೆ ಏತ ನೀರಿನ ಹೆಸರಿನಲ್ಲಿ ಹಣ ಎತ್ತಿ ಲೂಟಿ ಮಾಡಿದ್ದನ್ನು ಈ ಊರಿನ ಜನತೆ ಮರೆಯಲು ಸಾಧ್ಯವಿಲ್ಲ’ ಎಂದು ಪಿ.ಕೆ.ಹಳ್ಳಿ ಹೆದ್ದಾರಿಯ ಇನ್ನೊಂದು ಬದಿಯ ನಿವಾಸಿ ಅಂಕ್ಲೇಷ್‌ ನಾಯ್ಕ್ ಹೇಳಿದರು.

‘ಯೋಜನೆ ವಿಫಲವಾಗಲು ಬಿಡಲ್ಲ’
‘ಪಿ.ಕೆ.ಹಳ್ಳಿ ಏತ ನೀರಾವರಿ ಯೋಜನೆ ಒಂದು ಅತ್ಯುತ್ತಮ ಯೋಜನೆ. ಅದನ್ನು ವಿಫಲವಾಗಿಸಲು ಬಿಡುವುದಿಲ್ಲ. ನೀತಿ ಸಂಹಿತೆ ಮುಗಿದ ತಕ್ಷಣ ಕೆರೆಗಳಿಗೆ ನೀರು ಹರಿಸುವ ಕುರಿತು ಗಂಭೀರ ಪ್ರಯತ್ನ ನಡೆಯಲಿದೆ. ಈ ಬಾರಿ ಉತ್ತಮವಾಗಿ ಮಳೆ ಸುರಿದು ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಹರಿಯುವ ನಿರೀಕ್ಷೆ ಇರುವ ಕಾರಣ ತಲಘಟ್ಟಪುರದಿಂದ ನೀರು ಪಂಪ್‌ ಮಾಡಿ ಕೆರೆಗಳಿಗೆ ತುಂಬಿಸಲು ಖಂಡಿತ ಪ್ರಯತ್ನ ಮಾಡುತ್ತೇವೆ. ಕೆರೆಗಳ ದುರಸ್ತಿಯತ್ತಲೂ ಗಮನ ಹರಿಸಲಾಗುವುದು’ ಎಂದು ಶಾಸಕ ಎಚ್‌.ಆರ್‌.ಗವಿಯಪ್ಪ ಹೇಳಿದರು.

ಗಣಿಬಾಧಿತ ಪ್ರದೇಶ

ಪಿ.ಕೆ.ಹಳ್ಳಿ ಗ್ರಾಮ ಸಹಿತ ಗಣಿಬಾಧಿತ ಪ್ರದೇಶವೇ. ಇಲ್ಲಿ ದಾಲ್ಮಿಯಾ ಮೈನ್ಸ್‌ ಚೌಗಲೆ ಮೈನ್ಸ್ ಮತ್ತು ಎಂ.ಎಲ್‌.ಸಿ ಮೈನ್ಸ್ ಎಂಬ ಮೂರು ಗಣಿಗಾರಿಕೆ ಕಂಪನಿಗಳು ಕಾರ್ಯಾಚರಿಸುತ್ತಿದ್ದು ದಾಲಿಯಾ ಮೈನ್ಸ್‌ ಸದ್ಯ ಸ್ಥಗಿತಗೊಂಡಿದೆ. ಉಳಿದೆರಡು ಗಣಿ ಕಂಪನಿಗಳು ರಸ್ತೆ ಮೂಲಕ ಸಂಡೂರಿಗೆ ಅದಿರು ಸಾಗಿಸುತ್ತಿವೆ.  ಪಿ.ಕೆ.ಹಳ್ಳಿಯಲ್ಲಿ ವ್ಯಾಗನ್ ಲೋಡಿಂಗ್ ಪಾಯಿಂಟ್ ಇದೆ. ಇದನ್ನೇ ನಂಬಿ 2 ಸಾವಿರ ಮಂದಿ ಜೀವನ ಸಾಗಿಸುತ್ತಿದ್ದಾರೆ. ಗಣಿ ಕಂಪನಿಗಳು ತಮ್ಮ ವ್ಯವಸ್ಥೆ ಮಾಡಿಕೊಂಡಿರುವುದರಿಂದ ಇವರಿಗೆ ಕೆಲಸ ಇಲ್ಲದಂತಾಗಿದೆ. ಕೆಎಂಇಆರ್‌ಸಿ ಸೌಲಭ್ಯ ಇಂತಹ ಊರಿಗೆ ಅಗತ್ಯವಾಗಿ ಸಿಗಲೇಬೇಕು ಹಾಗೂ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಆಸರೆಯಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT