ಸೋಮವಾರ, ಸೆಪ್ಟೆಂಬರ್ 26, 2022
22 °C
ಪೋಕ್ಸೊ ಕಾಯ್ದೆ ಕುರಿತು ಕಾರ್ಯಾಗಾರದಲ್ಲಿ ನ್ಯಾ. ವೆಂಕಣ್ಣ ಹೊಸಮನಿ ಹೇಳಿಕೆ

ಲೈಂಗಿಕ ದೌರ್ಜನ್ಯ ಸಾಬೀತಾದರೆ 20 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕ್ಸೊ ಕಾಯ್ದೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಬಿ. ಹೊಸಮನಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ಪೋಕ್ಸೊ ಮತ್ತು ಜೆ.ಜೆ.ಆ್ಯಕ್ಟ್ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

18 ವರ್ಷ ವಯೋಮಿತಿಯೊಳಗಿನ ಯಾವುದೇ ಮಕ್ಕಳನ್ನು ಅಪ್ರಾಪ್ತ ವಯಸ್ಸಿನವರೆಂದು ಪರಿಗಣಿಸಲಾಗುತ್ತಿದೆ. ಇವರು ಪೋಕ್ಸೊ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ. ಇಂಥ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ಅಕ್ಷಮ್ಯ ಅಪರಾಧ  ಎಂದರು.

ಯಾರನ್ನೋ ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ತಪ್ಪು ಮಾಹಿತಿ ನೀಡಿ, ಸುಳ್ಳು ಕೇಸ್ ದಾಖಲಿಸಿದರೆ ಅಂಥವರಿಗೆ ಪೋಕ್ಸೊ ಕಾನೂನಲ್ಲಿ ಆರು ತಿಂಗಳಿಂದ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದರು.

ಲೈಂಗಿಕ ದೌರ್ಜನ್ಯಗಳಂಥ ಪ್ರಕರಣಗಳು ನಡೆದಾಗ ಮಾಧ್ಯಮದವರು ಬಹಳ ಜಾಗರೂಕತೆಯಿಂದ ವರದಿ ಮಾಡಬೇಕು. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರ ಹೆಸರು ಹಾಗೂ ಭಾವಚಿತ್ರ, ಅವರ ತಂದೆ-ತಾಯಿಗಳ, ಪೋಷಕರ ಹೆಸರು, ವಾಸಿಸುವ ಸ್ಥಳದ ಬಗ್ಗೆ ಮಾಹಿತಿ ಮಾಧ್ಯಮದಲ್ಲಿ ಬರದಂತೆ ಎಚ್ಚರ ವಹಿಸಬೇಕು ಎಂದರು.

ಉಪನ್ಯಾಸ ನೀಡಿದ ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗೀಮಠ, ದೌರ್ಜನ್ಯಕ್ಕೊಳಗಾದ ಮಗುವಿನ ವಿಚಾರಣೆಯನ್ನು ಕೂಡ ಬಹಳ ಸೂಕ್ಷ್ಮವಾಗಿ ಮಾಡಬೇಕು. ಅನಗತ್ಯವಾಗಿ ಆ ಮಗುವನ್ನು ಠಾಣೆಗೆ ಕರೆಸುವಂತಿಲ್ಲ. ಖಾಕಿ ಸಮವಸ್ತ್ರ ಧರಿಸಿ ವಿಚಾರಣೆ ಮಾಡುವಂತಿಲ್ಲ. ಒಂದು ವೇಳೆ ಠಾಣೆಗೆ ಕರೆಸಿ ವಿಚಾರಣೆ ನಡೆಸುವ ಅನಿವಾರ್ಯತೆ ಎದುರಾದರೆ ಅದಕ್ಕೂ ಮುನ್ನ ಕೋರ್ಟ್‌ ಅನುಮತಿ ಪಡೆಯಬೇಕಾಗುತ್ತದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ನ 'ಸಿ' ಗುಡ್ ಯೋಜನೆಯ ಜಿಲ್ಲಾ ಸಂಯೋಜಕಿ ಶಾಂತಾ ಮ.ಬೇಲಾಳ, ಜಿಲ್ಲಾ ಕಾನಿಪ ಸಂಘದ ಸಲಹಾ ಸಮಿತಿ ಸದಸ್ಯ ದೇವೇಂದ್ರ ಹೆಳವರ, ಜಿಲ್ಲಾ ಉಪಾಧ್ಯಕ್ಷ ಫಿರೋಜ್ ರೋಜಿನದಾರ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿ ರಾಹುಲ ಆಪ್ಟೆ, ದೀಪಕ್ ಶಿಂತ್ರೆ, ರಾಜ್ಯ ಕಾರ್ಯಕಾರಿ ಸಮಿತಿ ನಾಮನಿರ್ದೇಶಿತ ಸದಸ್ಯ ಕೆ.ಕೆ.ಕುಲಕರ್ಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು