ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ವಸಂತ ಪೂರೈಸಿದ ತಿಕೋಟಾ ನಾಡದೇವಿ ಉತ್ಸವ

ಬಸವೇಶ್ವರ ವೃತ್ತದಲ್ಲಿ ನೋಡುಗರ ಕಣ್ಮನ ಸೆಳೆಯುವ ದೇವಿಯ ಮೂರ್ತಿ
Last Updated 2 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ತಿಕೋಟಾ: ಬಸವೇಶ್ವರ ನಾಡದೇವಿ ಉತ್ಸವ ಮಂಡಳಿ‌ಯುಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿ ವರ್ಷ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾ ಬರುತ್ತಿದ್ದು, ಇದೀಗ ನವ ವಸಂತ ಪೂರೈಸಿದೆ.

2013ರಲ್ಲಿ ದಿ.ಅಪ್ಪಾಸಾಬ ಜಟ್ಟೆಪ್ಪ ಗೌಡೆನವರ (ಠಕ್ಕೆದ) ಅವರ ನೇತೃತ್ವದಲ್ಲಿ ಯುವಕರೆಲ್ಲರೂ ಸೇರಿ ನಾಡದೇವಿ ಉತ್ಸವ ಪ್ರಾರಂಭಿಸಿದರು.

ಪ್ರತಿ ವರ್ಷ ಪಟ್ಟಣದ 30ಕ್ಕೂ ಹೆಚ್ಚು ಯುವಕರು ತುಳಜಾಪುರದ ಅಂಬಾಭವಾನಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ದೇವಿಯ ದರ್ಶನ ಪಡೆದ, ಪೂಜಾ ಕೈಂಕರ್ಯಗಳನ್ನು ಮಾಡುತ್ತಾರೆ. ಅಂಬಾಭವಾನಿಯ ಸನ್ನಿಧಿಯಲ್ಲಿ ಜ್ಯೋತಿಯನ್ನು ಹೊತ್ತಿಸಿ ಆ ಜ್ಯೋತಿಯನ್ನು ಹಗಲು ರಾತ್ರಿ ಆರಿಸದೇ ಕಾಲ್ನಡಿಗೆಯಲ್ಲಿ ತಿಕೋಟಾ ಪಟ್ಟಣಕ್ಕೆ ತರುತ್ತಾರೆ. ಪಟ್ಟಣಕ್ಕೆ ಬಂದ ಬಳಿಕ ಅದೇ ಜ್ಯೋತಿಯಿಂದ ಜತ್‌ ರಸ್ತೆಯ ಅಂಬಾಭವಾನಿ ದೇವಸ್ಥಾನದಲ್ಲಿರುವ ನಾಡದೇವಿಗೆ ಮೊದಲ ಪೂಜೆ ಮಾಡುವುದರೊಂದಿಗೆ ದೇವಿಗೆ ಜ್ಯೋತಿ ಬೆಳಗುತ್ತಾರೆ.

ಜ್ಯೋತಿ ಬೆಳಗಿದ ನಂತರ ಪಟ್ಟಣದ ಪ್ರಮುಖ ಬೀದಿ, ವೃತ್ತಗಳಲ್ಲಿ ಸಕಲ ವಾದ್ಯ ಮೇಳದೊಂದಿಗೆ ದೇವಿಯ ಉದ್ಘೋಷಣೆ ಮೂಲಕ ಭಕ್ತರೊಂದಿಗೆ ಮೆರವಣಿಗೆ ಮಾಡಿ ಬಸವೇಶ್ವರ ವೃತ್ತದ ಸುಂದರ ಚೌಕಾಕಾರದ ಪೆಂಡಲ್ ಝಗಮಗಿಸುವ ಲೈಟಿಂಗ್ ಹಾಗೂ ಬೃಹತ್ತಾಕರದ ಕಂಬಗಳ ಮಂಟಪದಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡುತ್ತಾರೆ.

ಪ್ರತಿದಿನವು ಬೆಳಿಗ್ಗೆ ಹಾಗೂ ಸಂಜೆ ಭಕ್ತರಿಂದ ಪೂಜಾ ವಿಧಿ ವಿಧಾನ, ನೈವಿಧ್ಯ ಸಮರ್ಪಣೆ ಮಾಡಿ ಮುತ್ತೈದೆಯರಿಗೆ ಉಡಿ ತುಂಬುವರು. ಬೇಡಿಕೊಂಡ ಭಕ್ತರು ಪ್ರತಿದಿನ ಅವರವರ ಪೂಜೆಯ ದಿನ ದೇವಿಗೆ ಹೊಸ ಸೀರೆ ಉಡುಪು ಉಡಿಸುವರು.

ಪ್ರತಿದಿನ ಗ್ರಾಮದ ಮುತ್ತೈದೆಯರು ನಸುಕಿನ ಐದು ಗಂಟೆಯಿಂದ ಬೆಳಿಗ್ಗೆ 8 ಗಂಟೆ ವರೆಗೆ ತಮ್ಮ ಮನೆಯಿಂದ ಹೊರವಲಯದಲ್ಲಿರುವ ಗ್ರಾಮದ ಆರಾಧ್ಯ ದೈವ ಹಾಜಿಮಸ್ತಾನ ದರ್ಗಾ ಹತ್ತಿರ ಇರುವ ಬನ್ನಿ ಮರಕ್ಕೆ ಹೋಗಿ ಭಕ್ತಿಯಿಂದ ಪೂಜಾ ವಿಧಿ ವಿಧಾನ ಪೂರ್ಣಗೊಳಿಸುವರು. ನಂತರ ಅಲ್ಲಿಂದ ನೇರವಾಗಿ ಪಟ್ಟಣದ ನಾಡದೇವಿ ಪ್ರತಿಷ್ಠಾನ ಮಂಟಪಕ್ಕೆ ಬಂದು ದೀಪ ಬೆಳಗಿಸಿ ನೈವಿದ್ಯ ಅರ್ಪಿಸುವರು. ಹೀಗೆ 9 ದಿನ ಈ ಕಾರ್ಯ ಕೈಗೊಳ್ಳುವರು.

ಪ್ರತಿಷ್ಠಾಪಿಸಿದ ಐದನೇ ದಿನ ಗೊಂದಳಿ‌ ಸಮಾಜದ ಕಲಾವಿದರಿಂದ ರಾತ್ರಿ 12ರಿಂದ ಗೊಂದಲ ಹಾಕುವರು. ಈ ಗೊಂದಲ ಕಾರ್ಯದಲ್ಲಿ ದೇವಿಯ ಮಹಿಮೆ, ಭಕ್ತಿ ಹಾಗೂ ಶಕ್ತಿಯ ಕುರಿತು ವರ್ಣನೆಯನ್ನು ಗೊಂದಲಿಗರ ದಾಟಿಯ ಹಾಡಿನ ಮೂಲಕ ಹಾಡುತ್ತಾ ಜಾಗರಣೆ ಮಾಡುವರು.

ಕರ್ನಾಟಕ ಸರ್ಕಾರದ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ ಹಾಗೂ ಪತ್ನಿ ಪ್ರೀತಿ ಅವರ ದಂಪತಿ 501 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಏರ್ಪಡಿಸಿ, ದಂಪತಿಯಿಂದ ದೇವಿಗೆ ವಿಶೇಷ ಪೂಜೆ ಕಾರ್ಯ ನೆರವೇರಿಸುವರು.

ಏಳನೇ ದಿನ ನಾಡದೇವಿ ಕಮಿಟಿ ವತಿಯಿಂದ ಎರಡು ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ಇರುವುದು. ಪಟ್ಟಣಕ್ಕೆ ವ್ಯಾಪಾರ ವಹಿವಾಟು, ಪಾನಿಪುರಿ ಮಾರಾಟ ಮಾಡಲು ಬಂದ ರಾಜಸ್ಥಾನಿ ಮಹಿಳಾ ಕುಟುಂಬದವರಿಂದ ದಾಂಡಿಯಾ ಹಾಗೂ ರಾಜಸ್ಥಾನಿ ನೃತ್ಯ ಮಾಡುವ ಮೂಲಕ ದೇವಿಯ ಸೇವೆ ಮಾಡುವರು.

ಬನ್ನಿ ಮುಡಿಯುವಕೊನೆಯ ದಿನ ಕಮಿಟಿ ವತಿಯಿಂದ ಒಂಬತ್ತು ದಿನಗಳ ಕಾಲ ಪೂಜಾ ಕಾರ್ಯ ನೆರವೇರಿಸಿದ ಹಣ್ಣು ಹಂಪಲ ಹಾಗೂ ದೇವಿಯ ಹಾರ ಇತರೆ ಸಾಮಾನುಗಳನ್ನು ಲಿಲಾವು ಮಾಡುವರು. ಮಹಾಮಂಗಳಾರತಿ ನಂತರ ಅಂದೇ ರಾತ್ರಿ ವಾಹನಗಳ ಮೂಲಕ ಕಮಿಟಿಯವರು ಕೃಷ್ಣಾ ನದಿಗೆ ತೆರಳಿ ದೇವಿಯ ಮೂರ್ತಿಗೆ ಕೊನೆಯ ಬಾರಿ ಪೂಜಿಸಿ ವಿಸರ್ಜಿಸಲಾಗುವುದು ಎನ್ನುತ್ತಾರೆ ಕಮಿಟಿ ಸದಸ್ಯ ಸುರೇಶ ಕೊಣ್ಣೂರ.

****

ಜಾತಿ ಮತ ಬೇಧವಿಲ್ಲದೆ ಒಂಬತ್ತು ವರ್ಷಗಳಿಂದ‌ ಎರಡು ನೂರಕ್ಕೂ ಹೆಚ್ಚು ಯುವಕರು ಸೇರಿಕೊಂಡು ನಾಡದೇವಿ ಉತ್ಸವ ಮಾಡುತ್ತಿದ್ದೇವೆ. ಭಕ್ತರಿಗೆ ಯಾವ ಕಷ್ಟ ಬರದಂತೆ ದೇವಿ ಕಾಪಾಡುತ್ತಿದ್ದಾಳೆ

–ರಾಜು ಹುಲ್ಲೂರ, ಕಮಿಟಿ‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT